ದ್ವೇಷ ಬಿತ್ತುತ್ತಿರುವ ಬಿಜೆಪಿ: ರಾಹುಲ್ ಗಾಂಧಿ ಟೀಕೆ
ಶ್ರೀನಗರ: ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದಾದ್ಯಂತ ದ್ವೇಷ ಮತ್ತು ಹಿಂಸೆಯನ್ನು ಪೋಷಿಸುತ್ತಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಟೀಕಿಸಿದರು. ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದ ಪೂಂಚ್ ಜಿಲ್ಲೆಯ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಎಲ್ಲೆಲ್ಲಿ ತೆರಳುತ್ತಾರೆಯೋ ಆ ಸ್ಥಳದಲ್ಲಿ ಅವರು ಜಾತಿ, ಧರ್ಮ, ರಾಜ್ಯ ಮತ್ತು ಭಾಷೆಯನ್ನು ವಿಭಜಿಸುತ್ತಾರೆ ಮತ್ತು ಸಂಘರ್ಷವನ್ನು ಪ್ರಚೋದಿಸುತ್ತಾರೆ ಎಂದು ದೂರಿದರು. ದೇಶದಲ್ಲಿ ಹಿಂದೆ ಕೇಂದ್ರಾಡಳಿತ ಪ್ರದೇಶವನ್ನು ರಾಜ್ಯವಾಗಿ ಮೇಲ್ದರ್ಜೆಗೇರಿಸಿದ ಮತ್ತು ರಾಜ್ಯವನ್ನು ವಿಭಜಿಸಿ ಹೊಸ ರಾಜ್ಯವನ್ನು ರಚಿಸಿದ ನಿದರ್ಶನಗಳಿದ್ದವು. ಆದರೆ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿದೆ. ಈ ಮೂಲಕ ಇಲ್ಲಿನ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಹೀಗಾಗಿ ನಮ್ಮ ಮೊದಲ ಬೇಡಿಕೆ, ಜಮ್ಮು ಮತ್ತು ಕಾಶ್ಮೀರಕ್ಕೆ ಪುನಃ ರಾಜ್ಯ ಸ್ಥಾನಮಾನ ತರುವುದಾಗಿದೆ ಎಂದರು. ವಿಧಾನಸಭಾ ಚುನಾವಣೆ ಮುಗಿದ ಬಳಿಕ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು. ಒಂದು ವೇಳೆ ಈ ನಿಟ್ಟಿನಲ್ಲಿ ಕೇಂದ್ರ ವಿಫಲವಾದರೆ, ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ನಾವು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.