ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದ. ಕ. ಅಬ್ಬರಿಸಿದ ಮಳೆ: ಪ್ರವಾಹ, ಸಂಚಾರ ಸ್ಥಗಿತ

07:36 PM Jul 30, 2024 IST | Samyukta Karnataka

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿದೆ. ಕಳೆದ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯ ಜತೆಗೆ ಗಾಳಿಯೂ ಇರುವುದರಿಂದ ವ್ಯಾಪಕ ಹಾನಿಯಾಗಿದೆ. ಜೀವನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರವಾಹ ಭೀತಿ ತಲೆದೋರಿದೆ. ಬೆಳ್ತಂಗಡಿ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಭೂ ಕುಸಿತ, ಮರಗಳು ಉರುಳಿ ಸಂಚಾರ ಸಂಪೂರ್ಣ ವ್ಯತ್ಯಯಗೊಂಡಿದೆ.

ಬೆಂಗಳೂರು - ಮಂಗಳೂರು ಸಂಚಾರ ಸ್ಥಗಿತ: ಬೆಂಗಳೂರು- ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಘಾಟಿಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಮತ್ತೆ ಬೃಹತ್ ಭೂಕುಸಿತವಾಗಿದೆ. ಎರಡು ಕಾರುಗಳು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಇದರಡಿ ಸಿಲುಕಿಕೊಂಡಿವೆ. ಮುನ್ನೆಚ್ಚರಿಕೆಯಾಗಿ ಘಾಟಿಯಲ್ಲಿ ವಾಹನ ಸಂಚಾರ ಪೂರ್ತಿ ರದ್ದುಗೊಳಿಸಲಾಗಿದೆ. ಕಾರ್ಯಾಚರಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದು, ಸ್ಥಳದಲ್ಲಿ ಆತಂಕ ಹೆಚ್ಚಿದೆ. ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ನಡೆಯುವ ಭೀತಿಯಿದೆ. ಸಾಗರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನ ನಡೆಯುತ್ತಿದೆ. ಮುಂದಿನ ಆದೇಶವರೆಗೆ ಈ ರಸ್ತೆಯನ್ನು ಬಂದ್ ಮಾಡಿ ಆದೇಶ ನೀಡಲಾಗಿದೆ. ಸಾರ್ವಜನಿಕರು ಈ ರಸ್ತೆಯನ್ನು ಓಡಾಟಕ್ಕೆ ಬಳಸದಂತೆ ಮನವಿ ಮಾಡಲಾಗಿದೆ. ಭೂಕುಸಿತ ಸ್ಥಳದಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಬೆಂಗಳೂರಿಗೆ ಪ್ರಯಾಣಿಸುವವರು ಸಂಪಾಜೆ - ಮಡಿಕೇರಿ ಮಾರ್ಗವನ್ನು ಬಳಸುವಂತೆ ದ. ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಗುಡ್ಡ ಕುಸಿತ: ವಿಟ್ಲ - ಕಲ್ಲಡ್ಕದ ಮುಖ್ಯ ರಸ್ತೆಯಲ್ಲಿ ಮಣ್ಣು ಜರಿದು ವಾಹನ ಸಂಚಾರ ಸ್ಥಗಿತಗೊಂಡಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಶೇಖಮಲೆ ಎಂಬಲ್ಲಿ ಗುಡ್ಡ ಕುಸಿತದಿಂದಾಗಿ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು ರಸ್ತೆ ತಡೆ ಉಂಟಾಗಿದೆ. ಗುಡ್ಡೆ ಕುಸಿತದಿಂದ ಸರಳಿಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಬೆಳ್ತಂಗಡಿ ಬಾರ್ಯ ಗ್ರಾಮದ ಪಂಜುಕ್ಕು ಎಂಬಲ್ಲಿ ಮಣಿಹಳ್ಳ - ಉಪ್ಪಿನಂಗಡಿ ಸಂಪರ್ಕ ಕಲ್ಪಿಸುವ ರಸ್ತೆಗೆ ಗುಡ್ಡೆ ಕುಸಿದು ಬಿದ್ದ ಕಾರಣ ಸಂಚಾರ ಸಂಪೂರ್ಣ ಬಂದ್ ಆಗಿದೆ. ಬಂಟ್ವಾಳ ಸಮೀಪದ ಜಕ್ರಿಬೆಟ್ಟುವಿನ ಕೊಟ್ರಕಣಿ,ಕಂಚಿಕಾರ ಪೇಟೆ, ಬಸ್ತಿಪಡ್ಪುವಿಲ್ಲಿ ರಸ್ತೆಯನ್ನು ನೀರು ಅವರಿಸಿದ ಹಿನ್ನಲೆಯಲ್ಲಿ ಈ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿತ್ತು.

ಪ್ರವಾಹ ಭೀತಿ: ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಅಪಾಯದ ಮಟ್ಟ ತಲುಪಿ ಪ್ರವಾಹ ಭೀತಿ ಎದುರಾಗಿದೆ. ನೀರಿನ ಮಟ್ಟ ೯. ೩ ಮೀ. ಗೆ ತಲುಪಿದೆ (ಅಪಾಯದ ಮಟ್ಟ ೮.೫ ಮೀ.) ಈಗಾಗಲೇ ಕೆಲವೊಂದು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೀರಿನ ಮಟ್ಟ ಇನ್ನೂ ಹೆಚ್ಚಾದರೆ ಪ್ರವಾಹದ ಅಪಾಯದ ಸಾಧ್ಯತೆ ಹೆಚ್ಚಿದೆ. ನದಿ ನೀರು ಏರಿಕೆಯಾಗಿದ್ದು, ನದಿ ನೀರು ರಸ್ತೆಗೆ ಬಂದು ತಲುಪಿದೆ. ನದಿಯ ತಟಗಳಲ್ಲಿರುವ ಗ್ರಾಮಾಂತರ ಪ್ರದೇಶದ ಶಾಲೆಗಳಾದ ಬಾಳ್ತಿಲ, ಪೆರ್ನೆ, ಕಡೆಶ್ವಾಲ್ಯ, ಮತ್ತು ಇನ್ನೂ ನೀರಿನ ಅಪಾಯವುಳ್ಳ ಶಾಲೆಗಳ ಸಿಆರ್ ಪಿ, ಮತ್ತು ಎಸ್.ಡಿ.ಎಂಸಿ ಸಮಿತಿಗಳಿಗೆ ತಮ್ಮ ಹಂತದಲ್ಲೇ ರಜೆ ನೀಡುವಂತೆ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಸೂಚಿಸಿದ್ದಾರೆ. ಪಾಣೆಮಂಗಳೂರಿನ ಆಲಡ್ಕದಲ್ಲಿ ಸುಮಾರು ಹದಿನೈದು ಮನೆಗಳು ಜಲಾವೃತಗೊಂಡಿದೆ. ಕುಮಾರದಾರ ನದಿಗಳ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ೩೧.೦೧ ಮೀಟರ್ ನಷ್ಟು ನದಿ ನೀರಿನ ಹರಿವು ಇದ್ದು ಅಪಾಯದ ಮಟ್ಟ ೩೧.೦೫ ಆಗಿದೆ. ಇಲ್ಲಿನ ಹಳೆಗೇಟು ಎಂಬಲ್ಲಿ ಐತ ಮುಗೇರ ಎಂಬವರ ಮನೆ ಭಾಗಶಃ ನೀರಿನಲ್ಲಿ ಮುಳುಗಡೆಯಾಗಿದ್ದು, ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಪಂಜಳ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿ ದ್ದು ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿದೆ. ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದ್ದು, ಸ್ಥಳೀಯ ಜನರು ಆತಂಕದಲ್ಲಿದ್ದಾರೆ. ಸುಬ್ರಹ್ಮಣ್ಯ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಇಂದು ಬೆಳಗಿನ ೮.೩೦ರ ತನಕ ಕಳೆದ ೨೪ ತಾಸಿನಲ್ಲಿ ಜಿಲ್ಲೆಯಾದ್ಯಂತ ಸರಾಸರಿ ೧೧೧.೪ ಮಿಲಿ ಮೀಟರ್ ಮಳೆಯಾಗಿದೆ.

Next Article