For the best experience, open
https://m.samyuktakarnataka.in
on your mobile browser.

ದ. ಕ. - ಮಳೆ ತಗ್ಗಿದರೂ ತಗ್ಗದ ಹಾನಿ

07:25 PM Jul 31, 2024 IST | Samyukta Karnataka
ದ  ಕ    ಮಳೆ ತಗ್ಗಿದರೂ ತಗ್ಗದ ಹಾನಿ

ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮಂಗಳವಾರ ಅಬ್ಬರಿಸಿದ ಮಳೆ ಬುಧವಾರ ಕೊಂಚ ತಗ್ಗಿದೆ. ಬಂಟ್ವಾಳದಲ್ಲಿ ಪ್ರವಾಹದ ಭೀತಿ ಮೂಡಿಸಿದ್ದ ನೇತ್ರಾವತಿ ನದಿ ನೀರಿನ ಮಟ್ಟ ೫.೩೦ ಮೀಟರ್‌ಗೆ ಇಳಿದಿದೆ. ಕಳೆದ ರಾತ್ರಿ ನಿರಂತರ ಮಳೆಯಾಗಿದ್ದು ಇಂದು ಮಧ್ಯಾಹ್ನದ ತನಕ ವಿರಾಮ ಪಡೆದುಕೊಂಡಿತ್ತು. ಮಧ್ಯಾಹ್ನದ ಬಳಿಕ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ದ. ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿದರು. ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್ ಬಂಟ್ವಾಳದ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ರೆಡ್ ಆಲರ್ಟ್ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ಅಂಗನವಾಡಿಯಿಂದ ಪಿಯುಸಿ ತನಕ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ಅಪಾಯದ ಮಟ್ಟ ಮೀರಿ ಹರಿದು ನೆರೆಯನ್ನು ತಂದೊಡ್ಡಿದ ಜಿಲ್ಲೆಯ ನದಿಗಳಾದ ನೇತ್ರಾವತಿ- ಕುಮಾರಧಾರ ನದಿಗಳು ಬುಧವಾರ ನಸುಕಿನ ಜಾವ ೨ ಗಂಟೆಯ ಬಳಿಕ ಶಾಂತವಾಗಿದ್ದು, ಮುಂಜಾನೆ ೪ರ ವೇಳೆಗೆ ಎರಡೂ ನದಿಗಳ ನೀರು ನದಿಯೊಳಗೆ ಹರಿಯಲು ಆರಂಭಿಸಿವೆ.
ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯವನ್ನು ಸುತ್ತುವರಿದು ಸಂಗಮವಾದ ನದಿಗಳು, ರಥಬೀದಿಯಲ್ಲಿ ಗಣಪತಿ ದೇವಾಲಯದ ಬಳಿಯವರೆಗೆ ಹಾಗೂ ಇಂದ್ರಪ್ರಸ್ಥ ಶಾಲೆ ಬಳಿಯ ರಸ್ತೆಯಲ್ಲಿ ಯೂನಿಯನ್ ಬ್ಯಾಂಕ್ ತನಕ ಹರಿದು ಬಂದಿತ್ತು. ಇದಲ್ಲದೇ, ಮಠ, ಹಳೆಗೇಟು, ಪಂಜಳ, ನಟ್ಟಿಬೈಲು ಮುಂತಾದ ಪ್ರದೇಶದಲ್ಲಿಯೂ ನೆರೆ ಬಂದು ಹಲವು ಮನೆಗಳು ಜಲಾವೃತಗೊಂಡಿದ್ದವು. ಆದರೆ ಮುಂಜಾನೆಯಾಗುವಾಗ ನದಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ದೇವಾಲಯದ ಸ್ನಾನಘಟ್ಟದ ಬಳಿ ನದಿಗಿಳಿಯಲು ಇರುವ ೩೬ ಮೆಟ್ಟಿಲುಗಳಲ್ಲಿ ೧೦ ಮೆಟ್ಟಿಲುಗಳು ಕಾಣುತ್ತಿವೆ. ಈ ನದಿಗಳು ೨೮.೦೫ ಮೀ. ಎತ್ತರದಲ್ಲಿ ಹರಿಯುತ್ತಿವೆ. ಇಲ್ಲಿ ಅಪಾಯದ ಮಟ್ಟ ೩೧.೦೫ ಆಗಿದೆ.
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಆವರಣದಲ್ಲಿ ನೆರೆ ಬಂದು ಇಳಿದ ಬಳಿಕ ಕೆಸರಿನ ರಾಶಿ ತುಂಬಿಕೊಂಡಿದ್ದು, ದೇವಾಲಯದ ವ್ಯವಸ್ಥಾಪನಾ ಸಮಿತಿ, ಸಿಬ್ಬಂದಿ ವರ್ಗ ಹಾಗೂ ಭಕ್ತಾದಿಗಳು ಸ್ವಚ್ಚತಾ ಕಾರ್ಯದಲ್ಲಿ ನಿರತರಾದರು.
ದ್ವೀಪವಾದ ಪೂಜಾರಿ ಮನೆ..
ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಬಂಟ್ವಾಳದ ಮನೆಯ ಸುತ್ತ ನೀರು ಆವರಿಸಿಕೊಂಡು ದ್ವೀಪದಂತಾಯಿತು. ರಾತ್ರಿವರೆಗೂ ಜನಾರ್ದನ ಪೂಜಾರಿ ಹಾಗೂ ಅವರ ಪತ್ನಿ ಮನೆಯಲ್ಲಿಯೇ ಉಳಿದಿದ್ದರು. ತಾಲೂಕಾಡಳಿತದಿಂದ ದೋಣಿಯ ಮೂಲಕ ಅವರನ್ನು ಕರೆ ತರಲು ವ್ಯವಸ್ಥೆ ಮಾಡಲಾಯಿತು. ಗುರುವಾರ ಬೆಳಿಗ್ಗೆಯ ತನಕ ಜಿಲ್ಲೆಗೆ ರೆಡ್ ಆಲರ್ಟ್ ನೀಡಲಾಗಿದೆ.
ಆ.೧ರಿಂದ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಆ.೧ರಿಂದ ೩ರವರೆಗೆ ಹೆಚ್ಚಿನ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ. ಸದ್ಯ ಪ್ರತೀ ಗಂಟೆಗೆ ೪೦-೫೦ ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿರುವ ಹಿನ್ನೆಲೆಯಲ್ಲಿ ಆ.೩ರವರೆಗೆ ಮೀನುಗಾರರು ಸಮದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ನಿರಂತರ ಮಳೆಗೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಗುಡ್ಡ ಕುಸಿತ, ಮರಗಳು ಉರುಳಿ ಸಂಚಾರದಲ್ಲಿ ತೊಡಕಾಗಿದೆ. ಕೊಡಗಿನಲ್ಲಿ ನಿರಂತರ ಮಳೆಯಾಗುವ ಸಂಭವವಿರುವುದರಿಂದ ಜಿಲ್ಲೆಯಿಂದ ಕೊಡಗಿಗೆ ಹೋಗುವವರು ತಮ್ಮ ಪ್ರವಾಸವನ್ನು ಮುಂದೂಡುಂತೆ ವಿನಂತಿಸಲಾಗಿದೆ.
ಚಾರ್ಮಾಡಿ, ಮಾಣಿ ಸಂಪಾಜೆ ಮೂಲಕ ಬೆಂಗಳೂರಿಗೆ ಪ್ರಯಾಣಿಸಲು ಅವಕಾಶ ಇದೆ. ಇಂದು ಬೆಳಗ್ಗಿನ ೮.೩೦ರ ತನಕ ಕಳೆದ ೨೪ ತಾಸಿನಲ್ಲಿ ಜಿಲ್ಲೆಯಾದ್ಯಂತ ಸರಾಸರಿ ೧೨೯.೧ ಮಿಲಿ ಮೀಟರ್ ಮಳೆಯಾಗಿದೆ.
ಅಪಾಯ: ಪುಂಜಾಲಕಟ್ಟೆ- ಚಾರ್ಮಾಡಿವರೆಗಿನ ಹೆದ್ದಾರಿ ಕಾಮಗಾರಿ ಅಪೂರ್ಣಗೊಂಡಿದ್ದು, ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಬಳಿ ಚಂದ್ರಶೇಖರ ಎಂಬುವರ ಮನೆಗೆ ಮಳೆ ನೀರು ಪ್ರವಾಹದಂತೆ ನುಗ್ಗಿದೆ. ಇಲ್ಲಿ ಮೋರಿ ಮತ್ತು ಚರಂಡಿ ಕಾಮಗಾರಿ ಸ್ಥಗಿತಗೊಂಡಿದ್ದು, ಚರಂಡಿಯಲ್ಲಿ ಹರಿಯಬೇಕಿದ್ದ ನೀರು, ಮನೆಯೊಳಗೆ ಬರುವಂತಾಗಿದೆ. ಹೆದ್ದಾರಿ ಕಾಮಗಾರಿಯ ಅವಾಂತರದಿಂದಾಗಿ ಪತ್ನಿ ಮಕ್ಕಳ ಜತೆಗೆ ಚಂದ್ರಶೇಖರ ಅವರು ಕಾಳಜಿ ಕೇಂದ್ರ ಸೇರಬೇಕಾದ ಸ್ಥಿತಿ ಬಂದೊದಗಿದೆ. ಅವರ ಮನೆಯೂ ಅಪಾಯದಲ್ಲಿದೆ.
ಎಚ್ಚರಿಕೆ: ಮಳೆಗಾಲದ ಸಂದರ್ಭ ಎಲ್ಲಿ ಏನಾಗುತ್ತದೆ ಅಂತ ಹೇಳಕ್ಕಾಗಲ್ಲ. ಜಲಪಾತ, ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಎಚ್ಚರಿಕೆ ಫಲಕ ಮೀರಿಯೂ ವಿಡಿಯೋ, ರೀಲ್ಸ್ ಮಾಡಿದರೆ ಅಂಥವರ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಸಿದ್ದಾರೆ.