For the best experience, open
https://m.samyuktakarnataka.in
on your mobile browser.

ಧಮ್ಕಿ ಹಾಕುವ ಸಂಸ್ಕೃತಿ ನಮ್ಮದಲ್ಲ

10:55 PM Feb 20, 2024 IST | Samyukta Karnataka
ಧಮ್ಕಿ ಹಾಕುವ ಸಂಸ್ಕೃತಿ ನಮ್ಮದಲ್ಲ

ಬೆಂಗಳೂರು: ಧಮ್ಕಿ ಹಾಕುವ, ಸೆಟ್ಲಮೆಂಟ್ ಮಾಡುವ ಸಂಸ್ಕೃತಿ ನಮ್ಮದಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಮ್ಕಿ ಹಾಕಿ ಸಿಕ್ಕ ಸಿಕ್ಕ ಜಾಗದಲ್ಲಿ ಬೇಲಿ ಹಾಕುವುದು ನಮ್ಮ ಜಾಯಮಾನವಲ್ಲ. ನಾನು ಯಾರಿಗೂ ಧಮ್ಕಿ ಹಾಕಿಲ್ಲ. ಧಮ್ಕಿ ಹಾಕುವವರು ಯಾರು ಎಂಬುದು ಜನಕ್ಕೆ ಗೊತ್ತಿದೆ ಎಂದರು. ರಾಜ್ಯಸಭೆ ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತ ಹಾಕುವಂತೆ ಕೇಳುವುದಾಗಿ ಹೇಳಿದ್ದೇವೆ. ಜೆಡಿಎಸ್‌ಗೆ ೨ ಮತ ಬರಲಿದೆ ಎಂದು ಹೇಳಿರುವುದು ತಪ್ಪಲ್ಲವೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು. ಆನೆಯಿಂದ ಮೃತಪಟ್ಟ ಕೇರಳದ ವ್ಯಕ್ತಿಗೆ ೧೫ ಲಕ್ಷ ರೂ. ಪರಿಹಾರ ನೀಡುತ್ತಾರೆ. ನಮ್ಮ ರೈತರಿಗೆ ೨ ಸಾವಿರ ರೂ. ಬರ ಪರಿಹಾರ ಕೊಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ನಾಯಕರು. ಅವರ ಸಲಹೆ ಮೇರೆಗೆ ೧೫ ಲಕ್ಷ ರೂ. ಪರಿಹಾರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದಿಂದ ಪರಿಹಾರವೇ ಬಂದಿಲ್ಲ ಎಂದು ಹೇಳುತ್ತಾರೆ. ಕನ್ನಡಿಗರಿಗೆ ಅನ್ಯಾಯವಾಗಿದೆ ಎನ್ನುತ್ತಾರೆ. ಸಾವಿರ ಸಾರಿ ಸುಳ್ಳು ಹೇಳಿ ನಿಜ ಮಾಡಲು ಹೊರಟಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು. ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟರೆ ೧೫ ಲಕ್ಷ ರೂ. ಕೊಡುತ್ತಾರೆ. ಆದರೆ ರಾಜ್ಯದಲ್ಲಿ ಆನೆದಾಳಿಯಿಂದ ಮೃತಪಟ್ಟರೆ ೫ ಲಕ್ಷ ರೂ. ಕೊಡುತ್ತಾರೆ. ಆ ಹಣಕ್ಕೂ ಕಚೇರಿಗಳಿಗೆ ಅಲೆದಾಡಬೇಕು. ಕನ್ನಡಿಗರಿಗೆ ಅನ್ಯಾಯವಾಗಿದೆ ಎನ್ನುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆಯವರು ಅನ್ಯಾಯದ ವಿರುದ್ಧ ಆಕ್ಷೇಪ ಮಾಡಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.