ಧರ್ಮಸ್ಥಳದ ಸಂಪತ್ತು ಲೆಕ್ಕ ಹಾಕಲು ಸಾಧ್ಯವಿಲ್ಲ
ದಾವಣಗೆರೆ: ಧರ್ಮಸ್ಥಳದ ಸಂಪತ್ತನ್ನು ಯಾರೂ ಕೂಡ ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ರಾಜ್ಯಸಭಾ ಸದಸ್ಯರು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ನಗರದ ಕೆ.ಬಿ. ಬಡಾವಣೆಯ ಕೆನರಾ ಬ್ಯಾಂಕ್ ಹಿಂಭಾಗದಲ್ಲಿರುವ ಅಣಬೇರು ಮಂಜಣ್ಣ ಮನೆಯ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇತ್ರಕ್ಕೆ ೨೫ನೇ ವರ್ಷದ ಅಕ್ಕಿ ಸಮರ್ಪಣೆ ಮತ್ತು ಶ್ರೀಮಂಜುನಾಥಸ್ವಾಮಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ದಾನಕ್ಕಿಂತಲೂ ಶ್ರೇಷ್ಠವಾದದ್ದು ಅನ್ನದಾನ. ಹಾಗಾಗಿಯೇ ನಮ್ಮ ದೇಶದಲ್ಲಿ ಅನ್ನದಾನಕ್ಕೆ ಬಹಳ ಮಹತ್ವವಿದೆ. ಹಲವಾರು ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ಅನ್ನದಾನವನ್ನು ನಡೆಸಲಾಗುತ್ತದೆ. ಅದರಲ್ಲೂ ಧರ್ಮಸ್ಥಳದಲ್ಲಿ ಸಿಗುವ ಅನ್ನಪ್ರಸಾದದ ರುಚಿಯನ್ನು ಸವಿದವರೇ ಬಲ್ಲರು ಎಂದರು.
ಯಾರೇ ಆಗಲಿ ಧರ್ಮಸ್ಥಳಕ್ಕೆ ಬಂದರೆ ಅಲ್ಲಿ ಪ್ರಸಾದ ಸ್ವೀಕರಿಸದೇ ಹಿಂತಿರುಗಿ ಬರುವ ಮಾತೇ ಇಲ್ಲ. ಸಾಕ್ಷಾತ್ ಮಾತೆ ಅನ್ನಪೂರ್ಣೇಶ್ವರಿಯೇ ನೆಲೆಸಿರುವ ಧರ್ಮದ ಕ್ಷೇತ್ರವಾದ ಧರ್ಮಸ್ಥಳ, ಸತ್ಯ, ನಿಷ್ಠೆಗೆ ಮೊದಲ ಪ್ರಾಶಸ್ತ್ಯ ಕೊಡುತ್ತೇವೆ ಎಂದು ತಿಳಿಸಿದರು.
ಅನ್ನದಾನಕ್ಕೆ ತೃಪ್ತಿಪಡಿಸುವ ಶಕ್ತಿ ಇದೆ. ಹಣ ಮತ್ತೇನೂ ಕೊಟ್ಟರೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಅನ್ನದಾನದಲ್ಲಿ ವಿಶೇಷ ಮಹತ್ವವಿರುವುದರಿಂದಲೇ ದಿಗಂಬರರಿಗೆ ಬಟ್ಟೆ ಏನು ಬೇಡ. ಆದರೆ ಆಹಾರ ಬೇಕು. ಇದಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ ಎಂದು ತಿಳಿಸಿದರು.
ಧರ್ಮಸ್ಥಳಕ್ಕೆ ಬಂದಂತಹ ಭಕ್ತರು ಹಸಿವಿನಿಂದ ಮರಳಿ ಹೋಗಬಾರದು ಎಂಬ ಉದ್ದೇಶದಿಂದ ಅನ್ನದಾನಕ್ಕೆ ಬಹಳ ವಿಶೇಷ ಮಹತ್ವ ಕೊಟ್ಟಿದ್ದೇವೆ. ಭಕ್ತರು ಊಟ ಮಾಡಿದ ಮೇಲೆ ತೇಗಬೇಕು. ಆ ರೀತಿ ತೃಪ್ತಿಪಡಿಸಿ ನಾವು ಕಳುಹಿಸುತ್ತೇವೆ ಎಂದರು.
ಅನ್ನದಾನ ಮಾಡುವುದಕ್ಕೆ ನಾವು ಯೋಚನೆ ಮಾಡುವ ಅವಶ್ಯಕತೆ ಇಲ್ಲ. ದಾವಣಗೆರೆ, ತಮಿಳುನಾಡು, ಊಟಿ ಸೇರಿದಂತೆ ಹೊರ ರಾಜ್ಯ ಮತ್ತು ಕರ್ನಾಟಕದ ಎಲ್ಲಾ ಭಾಗಗಳಿಂದ ನೂರಾರು ಲೋಡು ಅಕ್ಕಿ ಬರುತ್ತದೆ. ಹೀಗಾಗಿ ನಾವು ಯಾವೋತ್ತು ಅಕ್ಕಿ, ತರಕಾರಿ ಇಲ್ಲ ಎಂದು ಚಿಂತೆ ಮಾಡುವುದಿಲ್ಲ ಎಂದು ತಿಳಿಸಿದರು.
ದಾನ ಮಾಡುವ ಕುಟುಂಬಗಳಿಗೆ ಸ್ವಾಮಿಯ ಅನುಗ್ರಹ ಇರುತ್ತದೆ. ಪವಾಡಗಳು ಅನೇಕ ರೀತಿಯಲ್ಲಿ ನಡೆಯುತ್ತವೆ. ಪ್ರೀತಿಯಿಂದ ಮಾಡುವ ದಾನ ಸಂತೃಪ್ತಿ ನೀಡುತ್ತದೆ. ಎಲ್ಲರೂ ದಾನ ಮಾಡಿ. ದಾನ ದೊಡ್ಡದಾಗೆ ಮಾಡಬೇಕು ಎಂದೇನು ಇಲ್ಲ. ಸಣ್ಣ ದಾನವೂ ದಾನವೇ. ದಾನ ಮಾಡುವಾಗ ನಿಶ್ಚಿಂತೆಯಿಂದ ದಾನ ಮಾಡಬೇಕು. ದಾನದ ಫಲ, ಎಲ್ಲಿ, ಯಾವ ರೂಪದಲ್ಲಿ ಬೇಕಾದರೂ ಸಿಗಬಹುದು ಎಂದು ಹೇಳಿದರು.
ಜನರು ಎರಡು ವಿಷಯದಲ್ಲಿ ಸೋಲುತ್ತಾರೆ. ಒಂದು ದೇವಸ್ಥಾನ ಮುಂದೆ ಎಲ್ಲಿ ಚಪ್ಪಲಿ ಬಿಡೋದು, ಬಿಟ್ಟ ಮೇಲೆ ಏನಾಯ್ತು, ಏನಾಯ್ತು ಎಂಬ ಚಿಂತೆ, ಅದೇ ರೀತಿ ಊಟದ ವಿಷಯಕ್ಕೆ ಬಂದಾಗ ಹಸಿವಾಗುತ್ತಿದೆ ಎಲ್ಲಿ ಊಟ ಮಾಡೋದು, ಯಾವ ಹೋಟೆಲ್‌ಗೆ ಹೋಗೋದು ಎಂಬ ಚಿಂತೆಯ ತರ್ಕದಲ್ಲಿ ಸಿಲುಕುತ್ತಾರೆ. ಹೀಗಾಗಿ ಧರ್ಮಸ್ಥಳಕ್ಕೆ ಬಂದರೆ ನೇರವಾಗಿ ದೇವರ ದರ್ಶನ ಮಾಡಿದ ಬಳಿಕ ಛತ್ರಕ್ಕೆ ಹೋದರೆ ಊಟ ಸಿಗುತ್ತದೆ. ಭಕ್ತರು ಇದ್ದರೆ ರಾತ್ರಿ ೧೨ ಗಂಟೆಯಾದರೂ ಊಟ ನಿಲ್ಲಿಸಬೇಡಿ ಎಂದು ಹೇಳುತ್ತೇವೆ. ಇಂತಹ ಕಾರಣಗಳಿಂದ ಅನ್ನದಾನ ಬಹಳ ಶ್ರೇಷ್ಠವಾಗುತ್ತದೆ. ಯಾವ ಕಾರಣಕ್ಕೂ ಅನ್ನದಾನ ನಿಲ್ಲಿಸಬಾರದೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಅಣಬೇರು ಮಂಜಣ್ಣ, ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಅನಿಲ್‌ಕುಮಾರ್, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಬಾಬಣ್ಣ ಸೇರಿದಂತೆ ಇನ್ನಿತರರಿದ್ದರು.