For the best experience, open
https://m.samyuktakarnataka.in
on your mobile browser.

ಧರ್ಮಾತೀತವಾಗಿ ಪ್ರತಿಯೊಬ್ಬರೂ ಬಾಳಬೇಕು

03:20 PM Jan 02, 2024 IST | Samyukta Karnataka
ಧರ್ಮಾತೀತವಾಗಿ ಪ್ರತಿಯೊಬ್ಬರೂ ಬಾಳಬೇಕು

ವಿಜಯಪುರ: ಶ್ರೀಗಳು ಸಮಾಜದ ಜಾತಿ ಮೈಲಿಗೆಯನ್ನು ಸೋಕಿಸಿಕೊಳ್ಳದೆ ದೂರ ಉಳಿದಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಮಹಾ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಿದ್ದೇಶ್ವರ ಸ್ವಾಮೀಜಿಗಳ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ. ನಾನು ಇವತ್ತಿಗೂ-ಯಾವತ್ತಿಗೂ ಬಸವಾದಿ ಶರಣರ ಅನುಯಾಯಿ. ಸಿದ್ದೇಶ್ವರ ಸ್ವಾಮೀಜಿ ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗ ರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು.
ಸಿದ್ದೇಶ್ವರ ಸ್ವಾಮಿಗಳು ಜ್ಞಾನ ಸಂಪಾದಿಸಿದರು. ಆ ಜ್ಞಾನವನ್ನು ಜನಮಾನಸಕ್ಕೆ ಹಂಚಿದರು. ದ್ವೇಷ, ಅಹಂಕಾರದಿಂದ ಬಿಡುಗಡೆ ಹೊಂದಿದ ಅತ್ಯುನ್ನತ ಮನುಷ್ಯತ್ವದ ಸೃಷ್ಟಿಗೆ ಶ್ರಮಿಸಿದವರು. ಇವರ ಬದುಕು ಮತ್ತು ಸಾಧನೆಯನ್ನು ವರ್ಣಿಸಲು ಪದಗಳೇ ಇಲ್ಲ. ಅಷ್ಟು ಸರಳತೆ ಅವರ ಬದುಕು ಮತ್ತು ವ್ಯಕ್ತಿತ್ವದಲ್ಲಿ ಬೆರೆತಿತ್ತು.
ಧರ್ಮಾತೀತವಾಗಿ ಪ್ರತಿಯೊಬ್ಬರೂ ಬಾಳಬೇಕು ಎನ್ನುವುದು ಸಿದ್ದೇಶ್ವರ ಸ್ವಾಮಿಗಳ ಆಶಯವಾಗಿತ್ತು. ಶ್ರೀಗಳು ಸಮಾಜದ ಜಾತಿ ಮೈಲಿಗೆಯನ್ನು ಸೋಕಿಸಿಕೊಳ್ಳದೆ ದೂರ ಉಳಿದಿದ್ದರು. ಸಮಾಜದಲ್ಲಿ ದೂರದರ್ಶಿತ್ವ ಇಟ್ಟುಕೊಂಡು ಮನುಷ್ಯ ಸಮಾಜವನ್ನು ತಿದ್ದುವ ಗುರಿ ಹೊಂದಿದ್ದ ಕಾರಣಕ್ಕೇ ಅವರು ದಾರ್ಶನಿಕರಾಗಿದ್ದರು. ಕಾರ್ಯಕ್ರಮದಲ್ಲಿರುವ ಹಲವು ಸಂತರು ಹೇಳಿದ ರೀತಿಯಲ್ಲಿ ಸಿದ್ದೇಶ್ವರ ಶ್ರೀಗಳ ಬದುಕಿನ ಸಂದೇಶ ಮತ್ತು ಆದರ್ಶಗಳನ್ನು ಕಾಪಾಡುವ ಸ್ಮರಣಾರ್ಥ ಕಾರ್ಯ ಮಾಡಲು ಸರ್ಕಾರ ಸಿದ್ಧವಿದೆ. ಸಿದ್ದೇಶ್ವರ ಸ್ವಾಮಿಗಳಿಗೆ ಗುರುನಮನ ಸಲ್ಲಿಸುವುದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಸಿದ್ದೇಶ್ವರ ಸ್ವಾಮಿಗಳ ಬಗ್ಗೆ ನನಗೆ ವಿಶೇಷ ಗೌರವ ಮತ್ತು ಪ್ರೀತಿ ಇದೆ ಎಂದರು.