ಧರ್ಮ ಮತ್ತು ಆಧ್ಯಾತ್ಮಿಕತೆ ನಡುವಿನ ವ್ಯತ್ಯಾಸ
ಕಾರ್ಯ ಮತ್ತು ಕಾರಣ ಎಂಬ ವಾದಗಳಿಂದಾಗಲೀ, ವಿಚಾರಗಳಿಂದಾಗಲೀ ಸಿದ್ಧಾಂತಗಳು ನಮ್ಮ ಕೈಗೆ ಎಟಕುವುದಿಲ್ಲ. ಆದರೆ ತಿಳಿಮನಸ್ಸಿನಿಂದ ನೋಡಿದವರಿಗೆ ಅವರ ಸೂಕ್ಷ್ಮ ಅನುಭವಗಳಲ್ಲಿ ಅದು ಆಗೀಗ ಕಾಣಸಿಗುತ್ತದೆ. ಪರಮಾತ್ಮನ ಇರುವಿಕೆಯನ್ನು ಮತ್ತು ಮಹಿಮೆಯನ್ನು ನಮ್ಮ ಮನಸ್ಸಿಗೆ ಆಗಾಗ ಆಗುವ ಅನುಭವಗಳಿಂದ ತಿಳಿಯಬೇಕು. ಕೆಲವರಲ್ಲಿ ಆಗಾಗ ಕಾಣಬರುವ ದೊಡ್ಡ ಗುಣಗಳು ದೇವರ ಇರುವಿಕೆಯನ್ನು ಸ್ಪಷ್ಟಪಡಿಸುತ್ತವೆ. ವಸ್ತುವಿನ ಸಾಕ್ಷಾತ್ಕಾರವಾಗುವುದು ಒಳನೋಟದಿಂದಲೇ ಹೊರತು ಪಾಂಡಿತ್ಯದಿಂದಲ್ಲ. ಮಂಕುತಿಮ್ಮನ ಕಗ್ಗದಲ್ಲಿ ಡಿ.ವಿ.ಜಿ.ಯವರು; ಭಗವಂತನ ಕೃಪೆಯನ್ನು ನಮಗೆ ಹೆಸರು ತಿಳಿಯದಿರುವ ಎಳೆಯ ಗಿಡಗಳಲ್ಲಿರುವ ರಸ ಮತ್ತು ಸುವಾಸನೆಯಲ್ಲಿ; ಆ ಸುಗಂಧವನ್ನು ಎಲ್ಲಾ ದಿಕ್ಕುಗಳಲ್ಲೂ ಹರಡುವ ಗಾಳಿಯಲ್ಲಿ ಮತ್ತು ಅದನ್ನೇ ನಾವು ಉಸಿರಾಡುವುದರಲ್ಲಿ ಕಾಣಬೇಕೆಂದು ಬೆಳಕುಚೆಲ್ಲುತ್ತಾರೆ. ನೊರೆಯಲ್ಲಿ ಮರೆಯಾಗುವ ಹಾಲಿನಲ್ಲಿ ಪರಬ್ರಹ್ಮನ ಇರವನ್ನು ಕಾಣುವಂತೆ ಪ್ರೇರೇಪಿಸುತ್ತಾರೆ.
ಸೂರ್ಯ, ಚಂದ್ರ, ಭೂಮಿಗಳ ನಡೆ, ರೀತಿ, ವೇಗಗಳನ್ನು ಅಳೆದು ಅವುಗಳ ಶಕ್ತಿಗಳನ್ನು ಒಬ್ಬ ಭೌತವಿಜ್ಞಾನಿ ಲೆಕ್ಕಾಚಾರ ಹಾಕಬಲ್ಲ. ಆದರೆ ಮಾನವನ ಸಂಬಂಧಗಳಲ್ಲಿರುವ ಪ್ರೀತಿ ಮತ್ತು ರೋಷಗಳನ್ನಳೆದು ಅಸ್ಪಷ್ಟವಾಗಿರುವ ಮನಸ್ಸನ್ನು ತಿಳಿದುಕೊಳ್ಳಲು ವಿಜ್ಞಾನಿಗೆ ಸಾಧ್ಯವೇ? ಒಂದು ಪ್ರಮುಖ ಸತ್ಯವೆಂದರೆ; ಪ್ರೀತಿಯೇ ವಿಶ್ವದಲ್ಲಿ ಅತ್ಯಂತ ಪ್ರಮುಖ ಗುಣವಾಗಿದೆ. ಈ ಸತ್ಯವನ್ನು ನಮ್ಮ ಅಸ್ತಿತ್ವದಿಂದಲೇ ಅರಿತುಕೊಳ್ಳಬೇಕೇ ವಿನಃ ಬಾಹ್ಯ, ಭೌತಿಕ ಅಥವಾ ಭ್ರಮೆಯ ಆಯಾಮದಿಂದಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಪೂರ್ಣಗೊಂಡ ಮತ್ತು ಸ್ವತಂತ್ರ ಜೀವಿಯಾಗಿದ್ದು, ಅವರವರ ಗುರುತು ಬಹುಆಯಾಮದ ಬ್ರಹ್ಮಾಂಡದಲ್ಲಿ ಅನನ್ಯವಾಗಿ ಬೆಸೆದುಕೊಂಡಿದೆ. ನಾವು ತಿನ್ನುವ ಅನ್ನ, ಕುಡಿಯುವ ನೀರು, ಉಸಿರಾಡುವ ಗಾಳಿ, ಉಡುತ್ತಿರುವ ಬಟ್ಟೆ ಇವುಗಳೆಲ್ಲವೂ ಭೂಮಿ ಮತ್ತು ಆಕಾಶಗಳೆರಡಕ್ಕೂ ಸೇರಿರುವ ಕಾರ್ಖಾನೆಯಲ್ಲಿ ತಯಾರಿಸಿದ ಉತ್ಪನ್ನಗಳು. ಜೀವವು ಇವೆರಡರ ಸಂತತಿ. ಭೂಮಿ ಮೇಲೆ ಒಬ್ಬ ಜೀವಿಯ ಹುಟ್ಟಿನಲ್ಲಿ ತಂದೆ-ತಾಯಿ; ಅಜ್ಜ-ಅಜ್ಜಿ; ಮುತ್ತಜ್ಜ-ಮುತ್ತಜ್ಜಿಯವರುಗಳನ್ನು ಒಳಗೊಂಡಂತೆ ೪೦೦ ವರ್ಷಗಳ ಕಾಲಾವಧಿಯಲ್ಲಿ ಹಿಂದಿನ ೧೨ ತಲೆಮಾರುಗಳಿಗೆ ಸೇರಿದ ೪೦೯೪ ಪೋಷಕರುಗಳ ಪಾಲುದಾರಿಕೆ ಇರುತ್ತದೆ ಎಂಬುದನ್ನು ಪುರಾತನ ಗಣಿತಶಾಸ್ತ್ರ ಖಚಿತಪಡಿಸುತ್ತದೆ! ಅಂದರೆ; ಮನುಷ್ಯನೊಬ್ಬ ಭೂಮಿ ಮೇಲೆ ಹುಟ್ಟಿಬಂದ ಎಂದರೆ ಆ ವ್ಯಕ್ತಿಯ ಜನ್ಮದ ಹಿಂದಿನ ಉದ್ದೇಶ ಮತ್ತು ಹುಟ್ಟಿನ ಮಹತ್ವವನ್ನು ಅರಿಯಬೇಕು! ಈ ಅರಿವಿನ ಹುಡುಕಾಟವೇ 'ಜೀವನ'. ಕಲ್ಲಾಗಿ ನಿದ್ರಿಸುತ್ತಿದ್ದ ಅಹಲ್ಯೆ ಶ್ರೀರಾಮನ ಪಾದಸ್ಪರ್ಶದಿಂದ ಜೀವಪಡೆದಂತೆ; ಜಡವಾಗಿ ಮಲಗಿದ ಜೀವಕ್ಕೆ ಗಾಳಿಯ ಸೋಂಕು ಚೈತನ್ಯವೀಯುತ್ತದೆ. ಆ ಚೈತನ್ಯವೇ 'ಜೀವನಾನುಭವ'. ಹುಲ್ಲಿನ ಹಸಿರಿನ ಹುಟ್ಟು ಮತ್ತು ನಕ್ಷತ್ರಗಳ ಮಿನುಗುವಿಕೆಯ ಗುಟ್ಟು ಇವೆರಡನ್ನು ಅದು ಸಿಗುವವರೆಗೆ ಹುಡುಕಬೇಕು. ಸಿಗುವವರೆಗೆ ಆಯಾಸ; ಸಿಕ್ಕನಂತರ ಸುಖ! ಮನುಷ್ಯನೆಂಬುದು ಹೀಗೆಯೇ ಇರುವುದೆಂದು ನಿರ್ಣಯಿಸಬಹುದಾದ ಶರೀರ ಮತ್ತು ಹೀಗೇ ಎಂದು ನಿರ್ಧರಿಸಲಾಗದ ಮನಸ್ಸು-ಇವೆರಡರ ಮಿಶ್ರಣ. ದೇಹ ಮತ್ತು ಮನಸ್ಸುಗಳು ಅತಿಸೂಕ್ಷ್ಮ ಕಣಗಳಿಂದ ಮಾಡಿರುವ ಹೊಂದಾಣಿಕೆಗಳು.
ಯಾಂತ್ರಿಕ ನಡವಳಿಕೆಯನ್ನು ತೊಡೆದುಹಾಕಲು ಮತ್ತು ನಮ್ಮ ಕ್ರಿಯೆಗಳು ಹಾಗೂ ನಾವು ವಾಸಿಸುವ ಪ್ರಪಂಚದ ಬಗೆಗಿನ ಉನ್ನತಮಟ್ಟದ ಅರಿವನ್ನು ಕಾಪಾಡಿಕೊಳ್ಳಲು ನಾವು ಹೊಂದಿರುವ ಸಾಮರ್ಥ್ಯವನ್ನು 'ಸಾವಧಾನತೆ' (ಮೈಂಡ್‌ಫುಲ್‌ನೆಸ್) ಎಂದು ಕರೆಯಲಾಗುತ್ತದೆ. ಸಾವಧಾನತೆಯ ಸ್ಥಿತಿಯನ್ನು ಸಾಧಿಸಲು ನಮ್ಮ ಏಕತಾನತೆಯ ಗ್ರಹಿಕೆಯನ್ನು ಕೊನೆಗೊಳಿಸಬೇಕು. ನಮ್ಮ ಪ್ರಪಂಚದಲ್ಲಿನ ವ್ಯತ್ಯಾಸಗಳನ್ನು ನಿರ್ಲಕ್ಷಿಸುವುದು ಮತ್ತು ಎಲ್ಲವೂ ಯಾವಾಗಲೂ ಇದ್ದಂತೆ ಎಂದು ಊಹಿಸುವುದು ತುಂಬಾ ಸ್ವಾಭಾವಿಕವಾಗಿದೆ. ಸಾವಧಾನತೆ ಎಂಬುದು ನಮ್ಮ ಜೀವನದಲ್ಲಿ ನಡೆಯುವ ಪ್ರತಿ ಘಟನೆಯನ್ನು 'ಮೊದಲ ಬಾರಿಗೆ ಸಂಭವಿಸುತ್ತಿದೆ' ಎಂಬ ಎಚ್ಚರಿಕೆಯಿಂದ ಗಮನಿಸುವ ಸ್ವಭಾವವನ್ನು ಒಳಗೊಂಡಿರುತ್ತದೆ. ನಮ್ಮ ಮನಸ್ಸು ಪ್ರತಿಕ್ರಿಯಾತ್ಮಕವಾಗಿರದೆ ಗ್ರಹಿಸುವಂತಿರುವಾಗ ಘಟನೆಯ ಪ್ರತಿಯೊಂದು ಹಂತಕ್ಕೂ ನಮ್ಮ ಗಮನಹರಿಸುವುದರ ಮೂಲಕ ಇದನ್ನು ಮಾಡಲಾಗುತ್ತದೆ.
ವಿಜ್ಞಾನಿಗಳು ನಡೆಸುವ ಸಂಶೋಧನಾತ್ಮಕ ಪ್ರಯೋಗದಂತೆ ನೀವು ಗಮನಿಸಿದ ಎಲ್ಲವನ್ನೂ ಸರಳವಾಗಿ ದಾಖಲಿಸುವ ಮೂಲಕ ವಸ್ತುನಿಷ್ಠತೆಯ ಒಂದು ರೂಪವನ್ನು ಪ್ರದರ್ಶಿಸಲಾಗುತ್ತದೆ. ಸಾವಧಾನತೆಯಲ್ಲಿ ಮೂರು ವಿಧಗಳು: ಮೊದಲ ವಿಧಾನ; ದೇಹದ ಸಾವಧಾನತೆ. ನಮ್ಮ ದೈಹಿಕ ಚಟುವಟಿಕೆಯ ಪ್ರತಿ ಕ್ಷಣವನ್ನು ಗುರುತಿಸುವುದು. ಇಲ್ಲಿ ಗಮನವು ಕ್ರಿಯೆಗಳ ಹಿಂದಿನ ಉದ್ದೇಶಗಳ ಮೇಲಿರದೆ ದೇಹದ ಮೇಲಿರುತ್ತದೆ. ಎರಡನೆಯ ವಿಧಾನ; ಭಾವನೆಯ ಸಾವಧಾನತೆ. ಇಲ್ಲಿ ಗಮನವು ಆಂತರಿಕ ಸಂವೇದನೆಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ ಮತ್ತು ಅವು ಅರಿವಿನ ಭಾಗವಾಗುತ್ತವೆ. ಮೂರನೆಯ ವಿಧಾನ; ಮಾನಸಿಕ ಸ್ಥಿತಿಗಳ ಸಾವಧಾನತೆ. ಇಲ್ಲಿ ಮಾನಸಿಕ ಸ್ಥಿತಿ ಅಥವಾ ಆಲೋಚನಾ ವಿಧಾನದ ಮೇಲೆ ಕೇಂದ್ರೀಕೃತಗೊಂಡಿರುತ್ತದೆ. ಸಾವಧಾನ ಸ್ಥಿತಿಯಲ್ಲಿ ನಾವು ಪಡೆಯುವ ಜ್ಞಾನವು ಕೇವಲ ಮೌಖಿಕವಾಗಿ ವ್ಯಕ್ತವಾಗಿರದೆ ನೇರ ಅನುಭವದಿಂದ ಪಡೆದುದಾಗಿರುತ್ತದೆ. ಸಾವಧಾನತೆ ನಮಗೆ ಅರಿವಿನ ಪ್ರತ್ಯೇಕ ಸ್ವಭಾವ ಮತ್ತು ಅದರ ವಸ್ತುಗಳ ತಿಳುವಳಿಕೆ ಹಾಗೂ ಜ್ಞಾನೋದಯವನ್ನು ನೀಡುತ್ತದೆ. ಅರಿವಿನ ಪ್ರತಿಯೊಂದು ಕ್ಷಣವೂ ಇತರರ ಇಚ್ಛೆಯಂತೆ ನಡೆಯದೆ ತನ್ನದೇ ಆದ ಸ್ವಭಾವದ ಪ್ರಕಾರ ಸಾಗುತ್ತದೆ. ಇದು ನಮಗೆ ಜೀವನದ ವಿಶಾಲವಾದ ಚಿತ್ರಣವನ್ನು ನೋಡಲು ಮತ್ತು ಜಾಗೃತಿಯ ಶಾಶ್ವತವಾದ ಹರಿವಿನ ಸ್ಥಿತಿಯಲ್ಲಿ ಇರಿಸುತ್ತದೆ. ಮನಸ್ಸಿನ ಪ್ರತಿ ಕ್ಷಣವನ್ನು ನವೀಕರಿಸುತ್ತದೆ. ಇದು ನಮ್ಮ ಅಸ್ತಿತ್ವದ ಆಳದಲ್ಲಿನ ಅಶಾಶ್ವತೆಯ ಸತ್ಯವನ್ನು ತಿಳಿದುಕೊಳ್ಳಲು ಸಹಕರಿಸುತ್ತದೆ. ನಮ್ಮೊಳಗಿನ ಅಧ್ಯಾತ್ಮಿಕ ಅನಾವರಣಕ್ಕೆ ಸಹಾಯಮಾಡುತ್ತದೆ.
ಹೆಬ್ಬಾತುಗಳು ಹಿಂಡಿನಲ್ಲಿ ಹಾರುವಾಗ ಇಂಗ್ಲೀಷ್ ಅಕ್ಷರ 'ವಿ' ಆಕೃತಿಯಲ್ಲಿ ಹಾರುವುದನ್ನು ಗಮನಿಸಿರಬಹುದು. ಈ ವಿನ್ಯಾಸದಲ್ಲಿ ಹಾರುವಾಗ ಪ್ರತಿ ಹೆಬ್ಬಾತು ತನ್ನ ರೆಕ್ಕೆಗಳನ್ನು ನಿರಂತರವಾಗಿ ಬಡಿಯುವಾಗ ಉಂಟಾಗುವ ವಾಯುಬಲವು ಅದನ್ನು ಇನ್ನೂ ಎತ್ತರಕ್ಕೆ ಹಾರಲು ಸಹಕರಿಸುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಲ್ಲದೆ ಈ ರಚನೆಯಲ್ಲಿ ಹಾರುವಾಗ ಇಡೀ ಹಿಂಡಿನ ಹಾರುವಿಕೆಯ ವ್ಯಾಪ್ತಿಗೆ ಪ್ರತೀ ಹಕ್ಕಿಯೂ ಸ್ವತಂತ್ರವಾಗಿ ಮಾಡುವ ಹಾರಾಟಕ್ಕಿಂತ ಶೇ.೭೧ರಷ್ಟು ಹೆಚ್ಚಿನ ವ್ಯಾಪ್ತಿಯನ್ನು ಸೇರಿಸುತ್ತದೆಯಂತೆ. ಒಂದುವೇಳೆ ಈ ಹಿಂಡಿನಿಂದ ಹಕ್ಕಿಯೊಂದು ಹೊರಬಂದರೆ ಕೆಲವೇ ಕ್ಷಣಗಳಲ್ಲಿ ಅದು ದಣಿವನ್ನು ಅನುಭವಿಸುತ್ತದೆಯಂತೆ. ಗುಂಪಿನಲ್ಲಿ ಹಾರುತ್ತಿರುವ ಸಂದರ್ಭದಲ್ಲಿ ಹೆಬ್ಬಾತೊಂದು ಅನಾರೋಗ್ಯಕ್ಕೆ ಒಳಗಾದರೆ ತಕ್ಷಣವೇ ಎರಡು ಹೆಬ್ಬಾತುಗಳು ಅದರ ರಕ್ಷಣೆಗೆ ಧಾವಿಸುತ್ತವೆಯಂತೆ. ಮಾತ್ರವಲ್ಲ; ಅದು ಮರಳಿ ಹಾರಲು ಶಕ್ತವಾಗುವವರೆಗೆ ಅಥವಾ ಸಾಯುವವರೆಗೆ ಅದರ ಜೊತೆಯೇ ಇರುತ್ತವಂತೆ. ಈ ವಿಚಾರದಲ್ಲಿ ಮನುಷ್ಯರಾಗಿ ನಾವು ಕಲಿಯಬೇಕಾದುದು ಬಹಳಷ್ಟಿದೆ. ಸಿದ್ಧಾಂತವನ್ನು ಆಧರಿಸಿದ ಧರ್ಮ ಹಾಗೂ ಸಾರ್ವತ್ರಿಕ ಸತ್ಯವನ್ನು ಆಧರಿಸಿದ ಅಧ್ಯಾತ್ಮಿಕತೆ ನಡುವೆ ಬಹುದೊಡ್ಡ ವ್ಯತ್ಯಾಸವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಧರ್ಮವೆಂದರೆ ಧರಿಸಿರುವುದು; ಎತ್ತಿ ನಿಲ್ಲಿಸಿರುವುದು; ನಾಶವಾಗದಂತೆ ಹಿಡಿದಿರುವುದು; ಕಾಪಾಡುತ್ತಿರುವುದು. ಪ್ರಪಂಚದ ಸುಖಶಾಂತಿಗಳಿಗೆ ಅದೇ ಅವಲಂಬನ.