ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಅಸ್ತು
ಹುಬ್ಬಳ್ಳಿ: ಹು-ಧಾ ಮಹಾನಗರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಸರ್ವ ಸದಸ್ಯರು ಸರ್ವಾನುಮತ ಸೂಚಿಸಿದರು.
ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಶಿವು ಹಿರೇಮಠ, ಮಹಾನಗರ ಪಾಲಿಕೆ ರಚಿಸಲು ವಿಧಿಸಿರುವ ಆರು ಮಾನದಂಡಗಳು ಸರಿಯಾಗಿವೆ. ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಯಿಂದ ತ್ವರಿತಗತಿಯಲ್ಲಿ ಕೆಲಸಗಳು ಆಗಲು ಸಾಧ್ಯವಿದೆ. ಹೀಗಾಗಿ, ಸರ್ಕಾರಕ್ಕೆ ಪ್ರತ್ಯೇಕ ಪಾಲಿಕೆ ರಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಈರೇಶ ಅಂಚಟಗೇರಿ ಮಾತನಾಡಿ, ಈಗಾಗಲೇ ಧಾರವಾಡ ಹೈಕೋರ್ಟ್ ಪೀಠದವರೆಗೂ ಮಲಪ್ರಭಾ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಧಾರವಾಡ ಪ್ರತ್ಯೇಕ ಪಾಲಿಕೆ ಮಾಡುವುದಾದರೆ ನಗರಾಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಬೇಕು. ಅಲ್ಲದೇ ಹೈಕೋರ್ಟ್ ಸಮೀಪ ಇರುವ ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ತೆಗೆದುಕೊಳ್ಳಬೇಕು. ಇನ್ನೂ ಮೂರು ತಿಂಗಳೊಳಗಾಗಿ ಪ್ರತ್ಯೇಕ ಪಾಲಿಕೆ ರಚನೆಗೆ ಕ್ರಮ ವಹಿಸಬೇಕು ಎಂದರು.
ಮೇಯರ್ ರಾಮಪ್ಪ ಬಡಿಗೇರ ಮಾತನಾಡಿ, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡುವಂತೆ ಅನೇಕ ಸಂಘ ಸಂಸ್ಥೆಗಳು ಹೋರಾಟ ಮಾಡಿವೆ. ಆಡಳಿತ ಮತ್ತು ಅಧಿಕಾರ ವಿಕೇಂದ್ರೀಕರಣ ಮಾಡಲು ಸರ್ಕಾರಕ್ಕೆ ದೃಢೀಕರಣ ಆದೇಶ ಸಲ್ಲಿಸುವುದಾಗಿ ತಿಳಿಸಿದರು.
ಮಹಾನಗರ ಪಾಲಿಕೆಯಿಂದ ಕೆಲ ಕಾಮಗಾರಿಗಳ ಟೆಂಡರ್‌ನ್ನು ಡಿಎಂಎಗೆ ನೀಡಲಾಗುತ್ತಿದೆ. ಇದರಿಂದ ಮಹಾನಗರ ಪಾಲಿಕೆಗೆ ನಷ್ಟವಾಗುತ್ತಿದೆ. ಇದನ್ನು ಮಹಾನಗರ ಪಾಲಿಕೆ ವತಿಯಿಂದ ಸ್ಥಳೀಯರಿಗೆ ಟೆಂಡರ್ ನೀಡುವಂತಾಗಬೇಕು. ಮಹಾನಗರ ಪಾಲಿಕೆ ಇಂಜಿನಿಯರ್‌ಗಳೇ ಕಾಮಗಾರಿ ನಿರ್ವಹಣೆ ಮಾಡಬೇಕು ಎಂದು ಪಾಲಿಕೆ ಸದಸ್ಯ ವೀರಣ್ಣ ಸವಡಿ ಸಭೆಗೆ ತಿಳಿಸಿದರು.
ಇದಕ್ಕೆ ಧ್ವನಿಗೂಡಿಸಿದ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಇಂಜಿನಿಯರ್‌ಗಳು ಕೆಲಸ ಮಾಡುವುದಾದರೆ ಮಾಡಲಿ. ಅದನ್ನು ಬಿಟ್ಟು ಡಿಎಂಎ ಅವರಿಗೆ ಟೆಂಡರ್ ನೀಡಿದ್ದಾರೆ. ಅವರ ಇಂಜಿನಿಯರ್‌ಗಳೇ ಮಾಡುತ್ತಾರೆ ಎನ್ನುವುದಾದರೆ ಇಲ್ಲಿನ ಇಂಜಿನಿಯರ್‌ಗಳ ಕೆಲಸ ಏನು ಎಂದು ಪ್ರಶ್ನಿಸಿದರು. ಈ ಬಗ್ಗೆ ರಾಜ್ಯಪಾಲರಿಗೆ ಹಾಗೂ ಸಭಾಪತಿಗಳಿಗೆ ಪತ್ರ ಬರೆಯುತ್ತೇವೆ ಎಂದರು.
ಉಣಕಲ್ ಕೆರೆಗೆ ಚನ್ನಬಸವ ಸಾಗರ ಎಂದು ಹೆಸರು ಇಡುವ ಬದಲು ಉಣಕಲ್ ಚನ್ನಬಸವ ಸಾಗರ ಹೆಸರನ್ನು ಇಡಬೇಕು. `ಉಣಕಲ್' ಹೆಸರು ಇರುವಂತೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಉಪ ಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಉಪ ಆಯುಕ್ತ ವಿಜಯಕುಮಾರ ಆರ್ ಸೇರಿದಂತೆ ಅಧಿಕಾರಿಗಳು ಇದ್ದರು.