ಕಾಂಗ್ರೆಸ್ ಆಡಳಿತ ಹಿಟ್ಲರ್‌ನನ್ನು ಮೀರಿಸುತ್ತಿದೆ; ಸಚಿವ ಜೋಶಿ ವಾಗ್ದಾಳಿ
ಹುಬ್ಬಳ್ಳಿ: ಸಂಸದ ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾತ್ರದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ಕಾರಣ ವಕೀಲ ದೇವರಾಜೇಗೌಡನ ಬಂಧನವಾಗಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ಸ್ವಾರ್ಥ ರಾಜಕಾರಣ, ಹಿಟ್ಲರ್‌ನನ್ನು ಮೀರಿಸೋ ಆಡಳಿತವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜೇಗೌಡ ಬಂಧನ ಮಾಡಿರುವುದನ್ನು ನೋಡಿದರೆ ರಾಜಕಾರಣ ಮಾಡಿರುವುದು ಎದ್ದು ಕಾಣುತ್ತದೆ ಎಂದರು.
ಸ್ವಾರ್ಥ ರಾಜಕಾರಣ, ಪಕ್ಷ ರಾಜಕಾರಣ ಇದರಲ್ಲಿ ಸ್ಪಷ್ಟವಾಗಿದೆ. ಈ ಮೂಲಕ ವಿರೋಧಿಗಳನ್ನು ಮುಗಿಸುವ ಉದ್ದೇಶವೂ ಸ್ಪಷ್ಟವಾಗಿದೆ. ಸನ್ನಿವೇಶ ಸೃಷ್ಟಿ ಮಾಡಿ ಬಂಧಿಸುತ್ತಿರುವುದು ಎದ್ದು ಕಾಣುತ್ತದೆ ಎಂದರು.
ಕಿಡ್ನಾö್ಯಪ್ ಪ್ರಕರಣ ವಿಷಯದಲ್ಲೂ ಪ್ರಶ್ನಾರ್ಥಕ ಚಿಹ್ನೆಯಿದೆ. ಯಾಕೆ ಎಚ್.ಡಿ ರೇವಣ್ಣ ಅವರನ್ನು ಅರೆಸ್ಟ್ ಮಾಡಿದ್ದಾರೆ? ಪ್ರಜ್ವಲ್ ರೇವಣ್ಣ ಅವರನ್ನು ಏಕೆ ಬಿಟ್ಟಿದ್ದಾರೆ ? ಎಂಬುದು ಪ್ರಶ್ನೆಯಾಗಿದೆ. ಇದೀಗ ದೇವರಾಜೇಗೌಡ ತಮಗಿರೋ ಮಾಹಿತಿಯನ್ನು ಎಲ್ಲಿ ಹೇಳಿ ಬಿಡಬಹುದು ಎಂಬ ಕಾರಣಕ್ಕೆ ಬಂಧನವಾಗಿದೆ. ಡಿ.ಕೆ. ಶಿವಕುಮಾರ್ ವಿರುದ್ದ ಮಾತಾನಾಡಿದರೆ ಒಂದು ರೀತಿ ಹಲೆ,್ಲ ಆಕ್ರಮಣ ನಡೆಯುತ್ತಿದೆ ಎಂದು ಆರೋಪಿಸಿದರು.
ಎಸ್‌ಐಟಿ ಕಾಂಗ್ರೆಸ್ ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಪಕ್ಷದ ಸಭೆ ಇದೆ. ದೇವರಾಜೇಗೌಡ ಬಂಧನ ವಿಚಾರದ ಬಗ್ಗೆ ಮುಂದೆ ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ಮಾಡತ್ತೇವೆ ಎಂದರು.
ಇದೀಗ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆಯುತ್ತಿದೆ. ಯಾರನ್ನೋ ರಕ್ಷಣೆ ಮಾಡೋದು, ಒಂದು ಪಕ್ಷ ಅಥವಾ ಒಂದು ಕುಟುಂಬ ಮುಗಿಸೋ ಹುನ್ನಾರ ನಡೆಯುತ್ತಿದೆ. ಇದಕ್ಕೆ ಉತ್ತರವನ್ನು ಸಿಎಂ, ಡಿಸಿಎಂ ಕೊಡುವುದಿಲ್ಲ ಎಂದು ಟೀಕಿಸಿದರು.
ಮೈತ್ರಿ ವಿಚಾರವಾಗಿ ನನಗೆ ಯಾವ ಮಾಹಿತಿಯೂ ಇಲ್ಲ. ಸಭೆಯಲ್ಲಿ ತಿರ್ಮಾನ ಆಗಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.