For the best experience, open
https://m.samyuktakarnataka.in
on your mobile browser.

ನಂಜುಕಾರುವ ದ್ವೇಷದ ಮಾತುಗಳನ್ನು ಒಪ್ಪಲಾರೆವು

11:49 AM Nov 19, 2024 IST | Samyukta Karnataka
ನಂಜುಕಾರುವ ದ್ವೇಷದ ಮಾತುಗಳನ್ನು ಒಪ್ಪಲಾರೆವು

ಸಂವಿಧಾನದ ಆಶಯಕ್ಕೆ ಪೂರಕವಾದ ರಾಷ್ಟ್ರವನ್ನು ಕಟ್ಟಬೇಕೆಂದು ಸಂಕಲ್ಪಿಸಿ ವಿಶ್ವದಲ್ಲಿ ಮುಂಚೂಣಿಯ ಸ್ಥಾನದಲ್ಲಿ ಭಾರತವನ್ನು ತಂದು ನಿಲ್ಲಿಸಿ

ಬೆಂಗಳೂರು: ಯಾವ ಪಕ್ಷ ವಿಷದ ಹಾವು? ಎನ್ನುವುದನ್ನು ಈ ದೇಶದ ಜನತೆ ತೀರ್ಮಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಮಲ್ಲಿಕಾರ್ಜುನ್‌ ಖರ್ಗೆ ಅವರೇ, ನಿಮ್ಮ ಹಿರಿತನದ ಬಗ್ಗೆ ಗೌರವ ಇದ್ದೇ ಇದೆ, ಆದರೆ ನಿಮ್ಮ ಬಾಯಿಂದ ಹೊರಡುವ ನಂಜುಕಾರುವ ದ್ವೇಷದ ಮಾತುಗಳನ್ನು ಒಪ್ಪಲಾರೆವು. ಕೋಟಿ,ಕೋಟಿ ಜನರ ಹೋರಾಟ, ತ್ಯಾಗ- ಬಲಿದಾನದ ಫಲವಾಗಿ ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿಕೊಂಡ ಸ್ವಾತಂತ್ರ್ಯವನ್ನು ನೆಹರೂ ಕುಟುಂಬ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡು ಪ್ರಜಾಪ್ರಭುತ್ವದೊಂದಿಗೆ ಚೆಲ್ಲಾಟವಾಡಿ, ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕಲು ‘ತುರ್ತು ಪರಿಸ್ಥಿತಿ ಎಂಬ ವಿಷಕಾರಿ ಅಣ್ವಸ್ತ್ರ’ವನ್ನು ದೇಶದ ಮೇಲೆ ಬಳಸಿದ್ದು ನಿಮ್ಮ ಕಾಂಗ್ರೆಸ್‌ ಪಕ್ಷ ಎಂಬುದನ್ನು ಇಷ್ಟು ಬೇಗ ನೀವು ಮರೆತಂತಿದೆ. ನೆಹರು ಕುಟುಂಬದ ನೆರಳಿನಲ್ಲಿ ರಾಜಕಾರಣ ಮಾಡುತ್ತಿರುವ ನೀವು ಅವರನ್ನು ಓಲೈಸುವ ಭರದಲ್ಲಿ ‘ಕೊಲ್ಲುವ’ ಮಾತುಗಳನ್ನಾಡಿರುವುದು ನಿಮ್ಮ ಘನತೆಯನ್ನು ಕುಗ್ಗಿಸಿದೆ. ಕಾಂಗ್ರೆಸ್ ನ ಗುಲಾಮಗಿರಿ ರಾಜಕಾರಣವನ್ನು ಮೂಲೋತ್ಪಾಟನೆ ಮಾಡಿ ದೇಶದಲ್ಲಿ ನೈಜ ಭಾರತೀಯತೆಯ ಪರಿಪೂರ್ಣ ಪ್ರಜಾಪ್ರಭುತ್ವವನ್ನು ಅಸ್ತಿತ್ವಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಶತಮಾನದ ಹೋರಾಟ ನಡೆಸಿದ್ದು ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ಪೂರಕವಾದ ರಾಷ್ಟ್ರವನ್ನು ಕಟ್ಟಬೇಕೆಂದು ಸಂಕಲ್ಪಿಸಿ ವಿಶ್ವದಲ್ಲಿ ಮುಂಚೂಣಿಯ ಸ್ಥಾನದಲ್ಲಿ ಭಾರತವನ್ನು ತಂದು ನಿಲ್ಲಿಸಿರುವುದು ಭಾರತೀಯ ಜನತಾ ಪಾರ್ಟಿ. ಯಾವ ಪಕ್ಷ ವಿಷದ ಹಾವು? ಎನ್ನುವುದನ್ನು ಈ ದೇಶದ ಜನತೆ ತೀರ್ಮಾನಿಸಿ ಈಗಾಗಲೇ ಕಾಂಗ್ರೆಸ್ ಎಂಬ ಘಟಸರ್ಪದ ಹಲ್ಲುಗಳನ್ನು ಕಿತ್ತೆಸೆದಿದ್ದಾರೆ. ಅದರ ನೆರಳಿನಲ್ಲಿ ನಿಂತು ಮಾತನಾಡುತ್ತಿರುವ ನಿಮ್ಮಿಂದ ಜನರು ದ್ವೇಷ ಹಾಗೂ ವಿಷದ ಮಾತುಗಳನ್ನಲ್ಲದೇ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದಿದ್ದಾರೆ.