For the best experience, open
https://m.samyuktakarnataka.in
on your mobile browser.

ನಂಬಿಕೆಗಿಂತ ಮಿಗಿಲಾದುದಿಲ್ಲ

12:31 PM Dec 26, 2023 IST | Samyukta Karnataka
ನಂಬಿಕೆಗಿಂತ ಮಿಗಿಲಾದುದಿಲ್ಲ

ಬದುಕು ಅನಿಶ್ಚಿತವಾಗಿದೆ ಎಂದಮಾತ್ರಕ್ಕೆ ಮನುಷ್ಯನು ಮಹತ್ಸಾಧನೆ ಮಾಡುವ ತನ್ನ ಹಕ್ಕನ್ನು ಬಳಸಿಕೊಳ್ಳಬಾರದೆಂದು ಅರ್ಥವಲ್ಲ. "ಗುರುಗಳನ್ನು ನಿರ್ಧರಿಸು; ಯೋಜನೆಗಳನ್ನು ಮಾಡು; ಅದನ್ನು ಕಾರ್ಯಗತಗೊಳಿಸು; ನಿನ್ನ ಕನಸುಗಳ ಬೆನ್ನಟ್ಟು; ಅದುವೇ ವೈಯಕ್ತಿಕ ಜವಾಬ್ದಾರಿ; ಆದರೆ ನಿನ್ನಿಂದ ಸಾಧ್ಯವಾದುದೆಲ್ಲವನ್ನೂ ಮಾಡಿದ ನಂತರ ಬಿಟ್ಟುಬಿಡು; ಜೀವನವೇ ಉಳಿದುದನ್ನು ಮಾಡಲಿ" ಎನ್ನುತ್ತದೆ ಸಾಧಕರ ಹಿತನುಡಿ. "ಕೆಲವೇ ಮಂದಿ ಶ್ರೇಷ್ಠ ಕಾದಂಬರಿಗಳನ್ನು ಬರೆಯಬಲ್ಲರು; ಆದರೆ ನಾವೆಲ್ಲರೂ ಅವನ್ನು ಬಾಳಬಹುದು" ಎಂಬ ಮ್ಯಾಕ್ ಲಾಫ್‌ಲೀನ್‌ನ ಈ ಮಾತುಗಳು ಇಲ್ಲಿ ತುಂಬಾನೇ ಪ್ರಸ್ತುತವೆನ್ನಿಸುತ್ತವೆ. ಬದುಕನ್ನು ಒಟ್ಟಾರೆಯಾಗಿ ನೋಡಿದಾಗ, ನಾವು ಚಿರಕಾಲ ಬದುಕಿರಲು ಅಸಾಧ್ಯವೆಂಬ ಪ್ರಜ್ಞೆಯೇ ಸ್ಫೂರ್ತಿದಾಯಕವಾದ, ರಿಸ್ಕ್ ತೆಗೆದುಕೊಳ್ಳುವ ಸಾಹಸಮಯ ಜೀವನಕ್ಕೆ ಪ್ರೇರಣೆಯಾಗಬಹುದು. ಮಾಡಬೇಕಾದ ಅತ್ಯಂತ ಮುಖ್ಯಕಾರ್ಯದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಈ `ಅಂತಿಮಪ್ರಜ್ಞೆ' ನೆರವಾಗಬಲ್ಲದು; ತೀರ ತಡವಾಗುವ ಮುನ್ನ!
ಸನ್ನಿವೇಶಗಳು ಬದಲಾಗುತ್ತಿರುತ್ತವೆ; ಪರಸ್ಪರ ಸ್ಪರ್ಧೆ ಬೆಳೆಯುತ್ತದೆ; ಜೊತೆಗೆ ಅನಿಶ್ಚಿತತೆ ಇಂದಿನ ಜೀವನದ ಲಕ್ಷಣ. ಆದ್ದರಿಂದ ವೇಗವಾಗಿ ಕೆಲಸಮಾಡುತ್ತಾ, ಅವಶ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ, ಸದಾ ಚುರುಕಾಗಿದ್ದುಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿನದು. ಅದರಿಂದ ವ್ಯಕ್ತಿಯ ಬೆಲೆಯೂ ಹೆಚ್ಚುತ್ತದೆ; ವ್ಯಕ್ತಿತ್ವವೂ ಬೆಳೆಯುತ್ತದೆ. ನಿಮ್ಮ ಸ್ಪರ್ಧಿಗಳಿಗಿಂತ ಹೆಚ್ಚು ಅರಿತುಕೊಳ್ಳಿ; ಅವರಿಗಿಂತ ಹೆಚ್ಚು ಪ್ರಗತಿ ಸಾಧಿಸಿ. ತನ್ಮೂಲಕ ಅವರಿಗಿಂತ ಹೆಚ್ಚು ಯಶಸ್ವಿಯಾಗಿ ಎಂಬುದು ಜೀವನದ ಗುರಿಯಾದಾಗ ಅನಿಶ್ಚಿತತೆಯ ಭಯ ನಮ್ಮನ್ನು ಹೆಚ್ಚು ಕಾಡುವುದಿಲ್ಲ.
ಜೀವನದಲ್ಲಿ ಮೂರು ಬಗೆಯ ನಿರ್ಗಮನಗಳು ಎದುರಾಗುತ್ತವೆ: ವೃತ್ತಿಯಲ್ಲಿ ಎಷ್ಟೇ ಯಶಸ್ವೀ ಅಥವಾ ಶಕ್ತಿಶಾಲಿಯಾಗಿದ್ದರೂ ೬೦ನೇ ವಯಸ್ಸಿನಲ್ಲಿ ವೃತ್ತಿಬದುಕಿನಿಂದ ತೆಗೆದು ಹಾಕಲ್ಪಡುವುದು ಅಥವಾ ಕಡಾಯವಾಗಿ ನಿವೃತ್ತರನ್ನಾಗಿಸುವುದು ಒಂದು. ನಿವೃತ್ತಿಯ ಕ್ಷಣದಿಂದಲೇ ಆತ/ಆಕೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಪರಿಗಣಿಸಲ್ಪಡುವುದು ಬದುಕಿನ ಶಾಶ್ವತ ಕಹಿಸತ್ಯಗಳಲ್ಲಿ ಒಂದು. ಆದ್ದರಿಂದ ಹಿಂದಿನ ವೃತ್ತಿಬದುಕಿನ ಶ್ರೇಷ್ಠತೆ ಅಥವಾ ಅಧಿಕಾರದ ಮನಃಸ್ಥಿತಿಯ ಪ್ರಜ್ಞೆಗೆ ಅಂಟಿಕೊಳ್ಳದೆ; ಅಧಿಕಾರಸ್ಥಾನದ ಅಹಂಕಾರವನ್ನು ಹಿಡಿದಿಟ್ಟುಕೊಳ್ಳದೇ ಇದ್ದರೆ ನಿರಾಳತೆಯ ಪ್ರಜ್ಞೆಯನ್ನು ಅನುಭವಿಸಲೇನೂ ಅಡ್ಡಿಯಿರುವುದಿಲ್ಲ. ಇನ್ನು ೭೦ನೇ ವಯಸ್ಸಿನಲ್ಲಿ ಸಮಾಜದಿಂದ ಕ್ರಮೇಣ ದೂರವಾಗುವಿಕೆ ಎರಡನೆಯ ನಿರ್ಗಮನ. ಸದಾ ಭೇಟಿಯಾಗಲು ಮತ್ತು ಬೆರೆಯಲು ಲಭ್ಯರಿರುತ್ತಿದ್ದ ಸ್ನೇಹಿತರು, ಸಹೋದ್ಯೋಗಿಗಳು, ಬಂಧುಮಿತ್ರರು ಸಿಗದೇ ಇರುವ ಸಂದರ್ಭಗಳೇ ಹೆಚ್ಚು. ಅಂಥ ಸನ್ನಿವೇಶಗಳಲ್ಲಿ ಭೂತಕಾಲದ ಸ್ಮರಣೆಗಳಿಗೆ ಜೋತುಬೀಳದೆ ಕಣ್ಣಮುಂದಿರುವ ಪ್ರಸಕ್ತ ಕ್ಷಣಗಳಲ್ಲಿ ಬದುಕು ಹೇಗಿದೆಯೋ ಹಾಗೆಯೇ ಬದುಕುವುದು ಜೀವನಾನುಭವದ ಪರಿಪಕ್ವತೆಯನ್ನು ಪ್ರದರ್ಶಿಸುತ್ತದೆ. ಇನ್ನು ಮೂರನೆಯ ನಿರ್ಗಮನ; ೮೦/೯೦ರಲ್ಲಿ ಕುಟುಂಬದಿಂದಲೇ (ದೈಹಿಕವಾಗಿಯಲ್ಲವಾದರೂ ಮಾನಸಿಕವಾಗಿಯಂತೂ ಹೌದು) ಕ್ರಮೇಣ ದೂರವಾಗುವುದು. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಹೊಂದಿದ್ದರೂ ತನ್ನ ಒಂಟಿಕ್ಷಣದ ಬದುಕಿನಲ್ಲಿ ಅದರದ್ದೇ ಆದ ಕಾರಣಗಳಿಂದಾಗಿ ಇವರಾರೂ ಸಾಮೀಪ್ಯವನ್ನು ನೀಡಲಾರರು ಎಂಬ ಸತ್ಯವನ್ನು ಮನಸ್ಸಿನಲ್ಲಿ ಸದಾ ಜಾಗೃತವಾಗಿರಿಸಿಕೊಳ್ಳಬೇಕು. ಈ ನಿರ್ಗಮನಗಳ ಮುಂದುವರಿಕೆಯೇ ಈ ಭೂಮಿಯೇ ನಮ್ಮನ್ನು ಅಂತಿಮ ನಿರ್ಗಮನದೆಡೆಗೆ ತಳ್ಳುವ ಪರಿಸ್ಥಿತಿ.
ಆದ್ದರಿಂದ ದೇಹ, ಮನಸ್ಸು, ಚೈತನ್ಯಗಳು ಸಮರ್ಥವಾಗಿರುವಾಗ ಜೀವನವನ್ನು ಪೂರ್ಣವಾಗಿ ಅನುಭವಿಸುವುದೇ ನಮ್ಮ ಕೈಯಲ್ಲಿರುವ ಅವಕಾಶ. ಇಷ್ಟಪಟ್ಟು ಮಾಡಿದ ಕೆಲಸಗಳು ಇಷ್ಟಾರ್ಥವನ್ನು ಈಡೇರಿಸುತ್ತವೆ ಎಂಬಂತೆ ಜೀವಿಸಬೇಕು; ಬದುಕನ್ನು ಅನುಭವಿಸಬೇಕು; ಅಂತಿಮ ಪಯಣದೆಡೆಗೆ ಮುಖಮಾಡಬೇಕು. ಅರಿವಿನಿಂದ ಆಯ್ಕೆ; ಆಯ್ಕೆಯಿಂದ ಪರಿಣಾಮ. ಆದ್ದರಿಂದ ಹೆಚ್ಚು ಅರಿವಿದ್ದರೆ ನಮ್ಮ ಆಯ್ಕೆಯೂ ಉತ್ತಮವಾಗುತ್ತದೆ. ಉತ್ತಮ ಆಯ್ಕೆಯಿಂದ ಉತ್ತಮ ಫಲಿತಾಂಶವೂ ಲಭ್ಯವಾಗುತ್ತದೆ. ಮನುಷ್ಯನ ಹೃದಯದ ಅತ್ಯಂತ ಗಾಢವಾದ ಬಯಕೆಯೆಂದರೆ, ತನ್ನ ಸ್ವಾರ್ಥವನ್ನು ಮೀರಿದ ಯಾವುದೋ ಒಂದು ಮೌಲ್ಯಕ್ಕಾಗಿ ಜೀವಿಸುವುದು. ಇರುವುದು ಎಷ್ಟೇ ಚೆನ್ನಾಗಿದ್ದರೂ ಅದರಲ್ಲಿ ತೀವ್ರ ಅತೃಪ್ತಿಯಿರುವವರಿಗೇ ಶ್ರೇಷ್ಠತೆ ಒಲಿದುಬರುತ್ತದೆ.
ಸರಾಗವಾಗಿ ಉಸಿರಾಡುತ್ತಿರುವಾಗ; ಬೇಕಾದುದನ್ನು ಬೇಕಾದಲಾಗಲೆಲ್ಲಾ ಅನುಭವಿಸಲು ಸಾಧ್ಯವಿರುವಾಗ ಅವನ್ನು ಮಾಡದೆ ಕೋಪ, ಹತಾಶೆ, ಭಯ, ದುಃಖ, ಒಂಟಿತನದ ಭಾವನೆಗಳಲ್ಲಿ ಮುಳುಗೇಳುತ್ತಿದ್ದರೆ ಯಾವುದೇ ಬ್ಯಾಕ್ಟೀರಿಯಾ, ವೈರಸ್ ಅಥವಾ ಅಸಮರ್ಪಕ ಜೈವಿಕಪ್ರಕ್ರಿಯೆಗಿಂತ ಇವೇ ಹೆಚ್ಚಿನ ರೋಗಮೂಲಗಳಾಗಿ ಪರಿಣಮಿಸುತ್ತವೆ. "ಮೇಲೆ ಹೇಗೆಯೋ ಹಾಗೆಯೇ ಕೆಳಗೆ" ಎಂಬ ಮಾತಿದೆ. ಅಂದರೆ; ತಲೆ ಹೇಗೆಯೋ ಹಾಗೆಯೇ ದೇಹ. ಮಾನಸಿಕ ಸ್ತರದಲ್ಲಿ ಮೂಡುವ ಭಾವನೆಗಳು ನಮ್ಮ ಕ್ರಿಯೆಗಳ ಭಾವನಾತ್ಮಕ ಗ್ರಹಿಕೆಯಾಗಿದ್ದು ದೈಹಿಕವಾಗಿ ನೋವನ್ನು ಅನುಭವಿಸಲು ನಿರ್ದೇಶಿಸುವ ಅರಿವಿಲ್ಲದ ಭಾವನಾತ್ಮಕ ಶಿಕ್ಷೆಯೇ ಆಗಿರುತ್ತದೆ ಎಂದರ್ಥ. ನಾವು ನಮ್ಮ ಕೋಪವನ್ನು ಇತರರಿಗಾಗಿ ನುಂಗಿಕೊಳ್ಳಬೇಕಾದ ಸಂದರ್ಭಗಳೆಲ್ಲಾ ಕೋಪವನ್ನು ಸ್ವತಃ ನಮ್ಮ ಮೇಲೆಯೇ ತಿರುಗಿಸಿಕೊಳ್ಳುವ ಪ್ರಕ್ರಿಯೆಯಾಗಿರುತ್ತದೆ. ದಿನಕಳೆದಂತೆ ಕೋಪವನ್ನು ಮರೆಯಬಹುದು, ಆದರೆ ಅದರಿಂದ ಉಂಟಾದ ಅಪರಾಧೀಪ್ರಜ್ಞೆ (ಗಿಲ್ಟ್) ಮನಸ್ಸಿನ ಆಳದಲ್ಲಿ ಹುದುಗಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಪ್ರಕ್ರಿಯೆ ಪದೇಪದೇ ಪುನರಾವರ್ತನೆಯಾಗುತ್ತಾ ಹೋದಂತೆ ನುಂಗುವ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಅಂಗಾಂಗಗಳು ಕ್ಯಾನ್ಸರಿಗೆ ತುತ್ತಾಗುತ್ತವೆ ಎಂಬುದು ಸಾಬೀತಾಗುತ್ತಿದೆ.
ದೇಹದ ಮೇಲೆ ಅದರಲ್ಲೂ ವಿಶೇಷವಾಗಿ ಅನಾರೋಗ್ಯದ ಸಂದರ್ಭದಲ್ಲಿ ಮನಸ್ಸಿನ ಪ್ರಭಾವ ಹೇಗಿರುತ್ತದೆ ಎಂಬುದನ್ನು ಈ ಕೆಲವು ಉದಾಹರಣೆಗಳಿಂದ ಅರಿಯಬಹುದು. ತಾಯಂದಿರು ಒತ್ತಡಕ್ಕೆ ಒಳಗಾದ ಹೆಚ್ಚಿನ ಸಂದರ್ಭಗಳಲ್ಲಿ ಅವರ ಮಕ್ಕಳು ಶೀತ, ಕೆಮ್ಮು, ಕಿವಿನೋವು ಮುಂತಾದ ಅನಾರೋಗ್ಯಕ್ಕೆ ಈಡಾಗುವುದೇ ಹೆಚ್ಚು. ತಾಯಂದಿರು ಸಹಜಸ್ಥಿತಿಗೆ ಮರಳಿದಾಕ್ಷಣವೇ ಮಕ್ಕಳ ಆರೋಗ್ಯ ಸಮಸ್ಯೆಗಳೂ ಶಮನವಾಗುವುದನ್ನು ಕಾಣಬಹುದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರುವ ತಾಯಿ-ಮಗುವಿನ ನಡುವಿನ ಭಾವನಾತ್ಮಕ ಸಂಬಂಧದ ಪುರಾವೆ. ಸ್ವಯಂ-ಸಮ್ಮೋಹನ ಮತ್ತು ಆರೋಗ್ಯವಂತ ಸ್ಥಿತಿಯ ಮಾನಸಿಕ ದೃಶ್ಯೀಕರಣ ಬಹಳಷ್ಟು ಕಾಯಿಲೆಗಳನ್ನು ಶೀಘ್ರವಾಗಿ ಗುಣಪಡಿಸಿದ ಸಾವಿರಾರು ದೃಷ್ಟಾಂತಗಳಿವೆ. ಲ್ಯುಕೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಅವರ ದೇಹದಲ್ಲಿರುವ ಕ್ಯಾನ್ಸರ್‌ಕೋಶಗಳನ್ನು ಮೀನುಗಳು ತಿನ್ನುತ್ತಿರುವಂತೆ ದೃಶ್ಯವನ್ನು ನಿರಂತರವಾಗಿ ಕಲ್ಪಿಸಿಕೊಳ್ಳುವಂತೆ ತಿಳಿಸಿದಾಗ ಆ ಮಕ್ಕಳು ಬದುಕುಳಿದ ನಿದರ್ಶನಗಳಿವೆ. ಕೆಮೋಥೆರಪಿಯಿಂದ ಉಂಟಾಗುವ ತೀವ್ರವಾದ ವಾಂತಿಯನ್ನು ಸ್ವಯಂ-ಸಮ್ಮೋಹನ ವಿಧಾನದಿಂದ ನಿಯಂತ್ರಿಸಲು ಸಾಧ್ಯ. ವಿಶೇಷವಾಗಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಸ್ವಯಂ-ಸಮ್ಮೋಹನವು ಪರಿಣಾಮಕಾರಿಯಾಗಿ ಪ್ರಭಾವಬೀರುತ್ತದೆ. ಶ್ರೇಷ್ಠವೈದ್ಯ ಸರ್ ವಿಲಿಯಂ ಓಸಿಯರ್ ಹೇಳುವಂತೆ; "ಜೀವನದಲ್ಲಿ ನಂಬಿಕೆಗಿಂತ ಅದ್ಭುತವಾದದ್ದು ಯಾವುದೂ ಇಲ್ಲ. ನಂಬಿಕೆ ಎಂಬುದು ನಾವು ಎಂದಿಗೂ ತಕ್ಕಡಿಯಲ್ಲಿ ತೂಗಲಾಗದ ಅಥವಾ ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಸಾಧ್ಯವಿಲ್ಲದ ಒಂದು ಬೃಹತ್ ಚಲಿಸುವ ಶಕ್ತಿ."
ಧರ್ಮಜ್ಞರಾದ ಪಾಂಡವರು ಕೊಲ್ಲಬಾರದವರನ್ನೂ ಕೊಂದು ಹೇಗೆ ಎಲ್ಲರ ಹೊಗಳಿಕೆಗೆ ಪಾತ್ರರಾದರು? ಸಮರ್ಥರಾಗಿದ್ದರೂ, ತಮಗೆ ದುರಾತ್ಮರು ಕೊಟ್ಟ ಕಾಟವನ್ನು ಅವರು ಏಕೆ ತಾಳ್ಮೆಯಿಂದ ಸಹಿಸಿಕೊಂಡಿದ್ದರು? ಹತ್ತುಸಾವಿರ ಆನೆಯ ಬಲವಿದ್ದ ಭೀಮನು ಹೇಗೆ ಕೋಪವನ್ನು ತಡೆದುಕೊಂಡಿದ್ದ? ದುರಾತ್ಮರಾದ ಕೌರವರು ದ್ರೌಪದಿಯನ್ನು ಅದೆಷ್ಟು ಹಿಂಸೆಗೊಳಿಸಿದರೂ ಅವಳು ಅವರನ್ನೇಕೆ ತನ್ನ ಘೋರದೃಷ್ಟಿಯಿಂದ ಸುಟ್ಟುಬಿಡಲಿಲ್ಲ? ಈ ಮುಂತಾದ ಘಟನೆಗಳನ್ನು ಮೆಲುಕುಹಾಕುತ್ತಿದ್ದರೆ ಮೂಡಿಬರುವ ಉತ್ತರಗಳು ನಮ್ಮ ಪ್ರಸ್ತುತ ಬದುಕಿನ ಎಷ್ಟೋ ಸಮಸ್ಯೆಗಳಿಗೆ ಸಮಾಧಾನಕರ ಪರಿಹಾರಗಳನ್ನು ನೀಡಬಹುದಲ್ಲವೇ?