ನಂಬಿಕೆ ನಕ್ಷೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಚಾಲನೆ
ಬೆಂಗಳೂರು: ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ವ್ಯವಸ್ಥೆಗಾಗಿ "ನಂಬಿಕೆ ನಕ್ಷೆ"ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ನಕ್ಷೆ ಮಂಜೂರಾತಿ ಒಂದು ಕ್ರಾಂತಿಕಾರಕ ವ್ಯವಸ್ಥೆಯಾದ ʼನಂಬಿಕೆ ನಕ್ಷೆʼಯನ್ನು ವಿಧಾನಸೌಧದಲ್ಲಿ ಉದ್ಘಾಟಿಸಿ ಮಾತನಾಡಿರುವ ಅವರು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದ್ದು 50x80 ಅಡಿವರೆಗಿನ 4 ಯೂನಿಟ್‌ವರೆಗಿನ ಮನೆಗಳ ನಕ್ಷೆಯನ್ನು ಮನೆ ಬಾಗಿಲಿಗೆ ತಲುಪಿಸುವ ಮಹತ್ತರ ವ್ಯವಸ್ಥೆ ಇದಾಗಿದೆ. ಮನೆ ಕಟ್ಟಲು ಬಯಸುವವರು ಆನ್‌ಲೈನ್ ಮೂಲಕ ತಮ್ಮ ದಾಖಲೆಗಳನ್ನು ಸಲ್ಲಿಸಿ ಸರ್ಕಾರವೇ ನಿಗದಿಪಡಿಸಿರುವ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಿದರೆ, ಎಂ ಪ್ಯಾನಲ್ ಮೂಲಕ ನೋಂದಣಿಯಾದ ಎಂಜಿನಿಯರ್ ದಾಖಲೆಗಳನ್ನು ಪರಿಶೀಲಿಸಿ ನಕ್ಷೆಯನ್ನು ಅರ್ಜಿದಾರರ ಮನೆಬಾಗಿಲಿಗೆ ತಲುಪಿಸಲಿದ್ದಾರೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಇದು ಜಾರಿಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡಿಎ ವ್ಯಾಪ್ತಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದಿದ್ದಾರೆ.