ನಕಲಿ ದಾಖಲೆ ಸೃಷ್ಟಿಸಿ ಸಾಲ ಆರೋಪ, ಗ್ರಾಹಕರಿಗೆ ಪಂಗನಾಮ
ಕುಳಗೇರಿ ಕ್ರಾಸ್: ಗ್ರಾಹಕರ ಹೆಸರಲ್ಲಿ ಲಕ್ಷ ಲಕ್ಷ ಸಾಲ ಪಡೆದ ನೀಲಗುಂದ ಗ್ರಾಮದ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಕಿರಣ್‌ಕುಮಾರ್ ಸಾಕಷ್ಟು ಗ್ರಾಹಕರ ಖಾತೆಯಲ್ಲಿ ದೊಡ್ಡ ಮೊತ್ತದ ಸಾಲ ಹೇರಿ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎಂಟು ವರ್ಷದ ಹಿಂದೆ ಮೃತರಾದವರ ಹೆಸರಿನಲ್ಲೂ ಈ ಮ್ಯಾನೇಜರ್ ಕಿರಣಕುಮಾರ ನಕಲಿ ದಾಖಲೆಗಳನ್ನ ಸೃಷ್ಟಿಸಿ ಸಾಲ ಪಡೆದು ಹಣ ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಮೃತಳಾದ ಸೋಮನಕೊಪ್ಪ ಗ್ರಾಮದ ವೃದ್ಧೆಯ ಹೆಸರಲ್ಲಿದ್ದ ೮ ಲಕ್ಷ ಹಣ ಹೈದ್ರಾಬಾದಿನ ಓರ್ವ ಮಹಿಳೆಯ ಖಾತೆಗೆ ಜಮೆಯಾಗಿರುವ ಮಾಹಿತಿಯು ಹೊರ ಬಿದ್ದಿದೆ. ಸದ್ಯ ವ್ಯವಸ್ಥಾಪಕನ ಬಣ್ಣ ಬಯಲು ಮಾಡಿದ ಗ್ರಾಹಕರು ಕೈಯಲ್ಲಿ ಕ್ರಿಮಿನಾಶಕದ ಬಾಟಲಿ ಹಿಡಿದು ಬ್ಯಾಂಕ್ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಹೊರ ಹಾಕಿ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ನೀಲಗುಂದ ಹಾಗೂ ಸುತ್ತ ಗ್ರಾಮಸ್ಥರು ಬ್ಯಾಂಕ್ ಮುಖ್ಯಸ್ಥರು ಬರುವವರೆಗೂ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬಾಗಲಕೋಟೆ ಸೀನಿಯರ ಮ್ಯಾನೇಜರ್ ರಾಜು.ಜಿ. ಯವರು ಗ್ರಾಹಕರಲ್ಲಿ ಮತ್ತೆ ಕಾಲಾವಕಾಶ ಕೇಳಿದರು.
ಸ್ವಲ್ಪ ಹೊತ್ತು ಮಾತುಕತೆ ನಡೆಸಿದ ಗ್ರಾಹಕರು ಇನ್ನು ಕಾಲಾವಕಾಶ ಕೊಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದು ಸೀನಿಯರ್ ಮ್ಯಾನೇಜರ್ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಜೊತೆ ಒಳ ಹಾಕಿ ಮತ್ತೆ ಬೀಗ ಜಡಿದು ಬೆಳಗ್ಗೆಯಿಂದ ಸಂಜೆವರೆಗೂ ಪ್ರತಿಭಟನೆ ಆರಂಭಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಾದಾಮಿ ಕ್ರೈಂ ಪಿಎಸ್‌ಐ ವಿಠಲ ನಾಯಕ್ ಪರಿಸ್ಥಿತಿ ತಿಳಿಗೊಳಿಸಿ ಮ್ಯಾನೇಜರ್/ಗ್ರಾಹಕರ ಮಾತುಕತೆ ನಡೆಸಿ ಗ್ರಾಹಕರ ಹಣ ವಾಪಸ್ ನೀಡಲು ಮಾರ್ಚ್ ೩೦ರ ವರೆಗೆ ಗಡುವು ನೀಡಿದರು.
ಕಳೆದ ಒಂದು ವರ್ಷದಿಂದ ಗ್ರಾಹಕರ ಹೆಸರಲ್ಲಿ ಮ್ಯಾನೇಜರ್ ಹಣ ದುರುಪಯೋಗ ಮಾಡಿಕೊಂಡಿದ್ದಾನೆ. ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಈ ಹಿಂದೆ ಲಿಖಿತವಾಗಿ ಮನವಿಯನ್ನು ಕೊಟ್ಟರೂ ಪ್ರಯೋಜನವಾಗಿಲ್ಲ. ಆರೋಪಿ ಮ್ಯಾನೇಜರ ಮೇಲೆ ಈವರೆಗೂ ಯಾವ ಕ್ರಮವನ್ನು ಕೈಗೊಂಡಿಲ್ಲ. ಈ ಅವ್ಯವಹಾರದಲ್ಲಿ ಮೇಲಧಿಕಾರಿಗಳು ಭಾಗಿಯಾಗಿರಬಹುದು ಎಂಬ ಆರೋಪ ಗ್ರಾಹಕರಿಂದ ಕೇಳಿ ಬರುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಭಾಗಿಯಾದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಗ್ರಾಹಕರು ಒತ್ತಾಯಿಸಿದರು.