ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಕರ ಜತೆ ಬಿಜೆಪಿ ನಂಟು
ಬೆಂಗಳೂರು: ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕರಿಗೂ ಬಿಜೆಪಿ ನಾಯಕರಿಗೂ ಅತ್ಯುತ್ತಮ ಒಡನಾಟವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೋಪಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ ಮೊದಲ ವಾರದಲ್ಲಿ ಸಚಿವ ಎಂ.ಬಿ ಪಾಟೀಲ್ ಅವರಿಗೆ ನಕಲಿ ತಯಾರಿಸಲಾಗುತ್ತದೆ ಎಂದು ಅನಾಮಿಕ ಕರೆ ಬರುತ್ತದೆ. ಕೂಡಲೇ ಸಚಿವರು ಕೆಎಸ್‌ಡಿಎಲ್ ಎಂ.ಡಿ. ಪ್ರಶಾಂತ್ ಅವ್ರಿಗೆ ಮಾಹಿತಿ ನೀಡುತ್ತಾರೆ. ನಂತರ ಈ ಜಾಲದ ಹುಡುಕಾಟ ನಡೆಯುತ್ತದೆ. ಇದು ಹೈದರಾಬಾದ್‌ನಲ್ಲಿದೆ ಎಂದು ತಿಳಿಯುತ್ತದೆ. ಇದನ್ನು ತಡೆಗಟ್ಟಲು ಕೆಲವು ಅಧಿಕಾರಿಗಳು ಹೋಗಿ 25 ಲಕ್ಷದ ಆರ್ಡರ್ ನೀಡುತ್ತಾರೆ. ಅವರು ಇದನ್ನು ಪೂರೈಸುವುದಾಗಿ ಒಪ್ಪಿಕೊಳ್ಳುತ್ತಾರೆ. ಇದು ದೊಡ್ಡ ಮಟ್ಟದ ಆರ್ಡರ್ ಆಗಿರುವುದರಿಂದ ನಿಮ್ಮ ಕಾರ್ಖಾನೆಗೆ ಬಂದು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ಅವರು ಒಪ್ಪುತ್ತಾರೆ. ಈ ನಕಲಿ ಉತ್ಪಾದನಾ ಕಾರ್ಖಾನೆ ವಿಳಾಸ ತಿಳಿದ ತಕ್ಷಣ ಅಲ್ಲಿ ದಾಳಿ ಮಾಡಿ ಅದನ್ನು ಜಪ್ತಿ ಮಾಡಲಾಗುತ್ತದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಸೇಲ್ಸ್ ಮ್ಯಾನೇಜರ್ ಈ ವಿಚಾರವಾಗಿ ಪ್ರಕರಣ ದಾಖಲಿಸುತ್ತಾರೆ.
ಈ ಪ್ರಕರಣದ ಎಫ್ಐಆರ್ ಪ್ರಕಾರ ರಾಕೇಶ್ ಜೈನ್ ಹಾಗೂ ಮಹಾವೀರ್ ಜೈನ್ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದ್ದು, ಇವರಿಬ್ಬರೂ ಪೊಲೀಸರ ವಶದಲ್ಲಿದ್ದಾರೆ. ಈ ವಿಚಾರಣೆ ನಡೆಸುವ ಸಂದರ್ಭದಲ್ಲಿ ಹೊರಬಂದ ಅಚ್ಚರಿ ಹಾಗೂ ಮುಖ್ಯ ಸಂಗತಿ ಎಂದರೆ ಈ ಇಬ್ಬರು ವ್ಯಕ್ತಿಗಳು ಬಿಜೆಪಿಯ ಸಕ್ರಿಯ ಕಾರ್ಯಕರ್ತರು. ಇವರು ಯೋಗಿ ಆದಿತ್ಯನಾಥ್, ತೆಲಂಗಾಣ ಶಾಸಕ ರಾಜಾ ಸಿಂಗ್ ಅವರ ಒಡನಾಡಿಗಳಿದ್ದಾರೆ. ಇಷ್ಟೇಲ್ಲಾ ಒಡನಾಟ ಇಟ್ಟುಕೊಂಡಿರುವವರ ಜತೆ ರಾಜ್ಯ ಬಿಜೆಪಿ ನಾಯಕರು ಸಂಪರ್ಕ ಹೊಂದಿರುವುದಿಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.