ನಗರ ಪ್ರದೇಶಕ್ಕೂ ಬಂತು ವಕ್ಫ್ ಗುಮ್ಮ
ಹರ್ಷ ಕುಲಕರ್ಣಿ
ಹುಬ್ಬಳ್ಳಿ: ವಕ್ಫ್ ಆಸ್ತಿ ವಿಚಾರವಾಗಿ ಒಂದೆಡೆ ರೈತರಿಗೆ ನೋಟಿಸ್ ನೀಡಲಾಗಿದೆ. ಪ್ರತಿಭಟನೆ, ಆಕ್ರೋಶ ಹೆಚ್ಚಾದಂತೆ ರೈತರ ಉತಾರದಲ್ಲಿನ ವಕ್ಫ್ ಹೆಸರನ್ನು ತೆಗೆಯಲು ಸೂಚಿಸಿರುವ ರಾಜ್ಯ ಸರ್ಕಾರ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು ನಗರದಲ್ಲಿ ವಕ್ಫ್ ಆಸ್ತಿಗಳ ಸರ್ವೆ ಕಾರ್ಯ ಆರಂಭಿಸಿದೆ.
ಮೇಲ್ನೋಟಕ್ಕೆ ರೈತರಿಗೆ ನೀಡಿರುವ ನೋಟಿಸ್ ಅನ್ನು ಹಿಂಪಡೆದು, ರೈತರ ಜಮೀನಿನ ಉತಾರದ ಮಾಲೀಕತ್ವ ಕಾಲಂನಲ್ಲಿ ದಾಖಲಾಗಿದ್ದ ವಕ್ಫ್' ಎಂಬ ಹೆಸರನ್ನು ತೆಗೆದು ಹಾಕಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರ ಸೂಚಿಸಿದೆ. ಆದರೆ, ಹುಬ್ಬಳ್ಳಿ-ಧಾರವಾಡ ನಗರ ಪ್ರದೇಶ ವ್ಯಾಪ್ತಿಯಲ್ಲಿ ಪಾಲಿಕೆಯ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರದ ಸೂಚನೆಯಂತೆ ಟೌನ್ ಪ್ಲಾನಿಂಗ್, ಹಾಥ್ ನಕಾಶೆ ಹಾಗೂ ಕೆಲ ದಾಖಲಾತಿಗಳ ಸಮೇತ ವಿವಿಧ ಸ್ಥಳಗಳಲ್ಲಿ ವಕ್ಫ್ ಆಸ್ತಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಪ್ರಕರಣ ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ ರಾಜ್ಯದ್ಯಂತ ಇದೇ ಮಾದರಿಯಲ್ಲಿ ಗೌಪ್ಯ ಸರ್ವೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಬುಧವಾರದಿಂದಲೇ ವಕ್ಫ್ ಭೂಮಿ ಶೋಧ ಹಾಗೂ ಸರ್ವೆ ಕಾರ್ಯ ಆರಂಭ ಮಾಡಿರುವ ಕಂದಾಯ ಹಾಗೂ ಭೂದಾಖಲೆಗಳ ಇಲಾಖೆಯ ಅಧಿಕಾರಿಗಳು, ಬುಧವಾರ ಆನಂದ ನಗರ, ಟಿಪ್ಪು ನಗರ ಸೇರಿದಂತೆ ಹಳೇ ಹುಬ್ಬಳ್ಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ತಿರುಗಾಡಿದ್ದಾರೆ. ಗುರುವಾರ ಬೆಳಗ್ಗೆಯಿಂದಲೇ ಸರ್ವೆ ಕಾರ್ಯ ಆರಂಭಿಸಿ, ಘಂಟಿಕೇರಿ, ಬೆಂಡಿಗೇರಿ, ಗಣೇಶ ಪೇಟ್, ದುರ್ಗದ ಬಯಲು ಹಾಗೂ ಸಿಬಿಟಿ ಸುತ್ತಮುತ್ತಲೂ ವಕ್ಫ್ ಆಸ್ತಿಯ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು
ಸಂಯುಕ್ತ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
ಒಂದೆಡೆ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯುವ ನಾಟಕ. ಮತ್ತೊಂದೆಡೆ ನಗರ ಪ್ರದೇಶದಲ್ಲಿ ವಕ್ಫ್ ಆಸ್ತಿಯನ್ನು ಗುರುತಿಸುವ ಕಾರ್ಯ ಮಾಡುತ್ತಿರುವ ರಾಜ್ಯ ಸರ್ಕಾರದ ದ್ವಂಧ್ವ ನಿಲುವಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಈಗ ನಡೆಸುತ್ತಿರುವ ಗೌಪ್ಯ ಸರ್ವೆಯಲ್ಲಿ ಬೇರೆಯವರ ಕಬ್ಜಾದಲ್ಲಿರುವ ಆಸ್ತಿಗಳು, ವಕ್ಫ್‌ಗೆ ಸೇರಿದ್ದು ಎಂದು ನೋಂದಣಿಯಾದರೆ ದೊಡ್ಡ ಮಟ್ಟದ ಹೋರಾಟ ಆಗುವುದರಲ್ಲಿ ಸಂಶಯವೇ ಇಲ್ಲ.
ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ ತರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯ ಸಂಸದೀಯ ಜಂಟಿ ಸಮಿತಿ ಅಧ್ಯ ಕ್ಷರೂ ಹುಬ್ಬಳ್ಳಿಗೆ ಆಗಮಿಸಿ ರೈತರಿಂದ ಅಹವಾಲು ಪಡೆದಿದ್ದಾರೆ. ಪ್ರಗತಿಪರ ರೈತರು ಮತ್ತು ಚಿಂತಕರೊಂದಿಗೆ ಸಭೆ ನಡೆಸಿದ್ದಾರೆ. ಅದೇ ಸಮಯದಲ್ಲಿ ಪಾಲಿಕೆಯ ಅಧಿಕಾರಿಗಳು ಸರ್ಕಾರದ ಆದೇಶದಂತೆ ಬಡಾವಣೆಗಳಲ್ಲಿ ಸರ್ವೆ ನಡೆಸುತ್ತಿದ್ದಾರೆ.
ಸ್ಮಾರ್ಟ್ ಸಿಟಿ ಸರ್ವೆ ಎಂದು ಸುಳ್ಳು
ವಕ್ಫ್ ಆಸ್ತಿಯ ವಿಚಾರವಾಗಿ ಹುಬ್ಬಳ್ಳಿಯನ್ನು ಪ್ರದಕ್ಷಿಣೆ ಹಾಕುತ್ತಿರುವ ಕಂದಾಯ ಇಲಾಖೆ ಮತ್ತು ಭೂದಾಖಲೆಗಳ ಇಲಾಖೆಯ ಅಧಿಕಾರಿಗಳು ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳ ಓಡಾಟ ನೋಡಿ ಏಕೆ ಎಂದು ಜನ ಸಹಜವಾಗಿಯೇ ಪ್ರಶ್ನಿಸುತ್ತಿದ್ದಾರೆ. ಆದರೆ, ಇದ್ದ ವಿಚಾರವನ್ನು ಇದ್ದಂಗೇ ಹೇಳಿದರೆ ಅಲ್ಲಿಂದ ವಾಪಸ್ ಬರುವುದು ಕಷ್ಟವಾಗಬಹುದು ಎಂದರಿತ ಅಧಿಕಾರಿಗಳು ಸ್ಮಾರ್ಟ್ ಸಿಟಿ ಸರ್ವೆ ಮಾಡುತ್ತಿದ್ದೇವೆ ಎಂದು ಸಬೂಬು ಹೇಳುತ್ತಿದ್ದಾರೆ.