ನನ್ನ ಪಾತ್ರವೇ ಇಲ್ಲ, ಇನ್ನೂ ಅವರದು…
ಸಂಚು ರೂಪಿಸಿ ನನ್ನ ಬಂಧನ ಮಾಡಿದ್ದರು. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಹೆಸರು ಹೇಳುವಂತೆ ಕಿರುಕುಳ ನೀಡಿದ್ದಾರೆ.
ಬೆಂಗಳೂರು: ದೇಶದಲ್ಲಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ ನಡೆಸಿದೆ ಎಂದು ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.
ಜಾಮೀನಿನ ಷರತ್ತು ಪೂರೈಸಿ ಜೈಲಿನಿಂದ ಬಿಡುಗಡೆಯ ನಂತರ ಮಾಧ್ಯಮಗಳ ಜೋತೆ ಮಾತನಾಡಿ ಇಡಿ ಅಧಿಕಾರಿಗಳು ಸಂಚು ರೂಪಿಸಿ ನನ್ನ ಬಂಧನ ಮಾಡಿದ್ದರು. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಹೆಸರು ಹೇಳುವಂತೆ ಕಿರುಕುಳ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಒತ್ತಡದಿಂದ ಹೀಗೆ ಮಾಡಿದ್ದಾರೆ. ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ ಇನ್ನು ಸಿದ್ದರಾಮಯ್ಯನವರ ಪಾತ್ರ ಹೇಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ಕಾನೂನು ಹೋರಾಟ ಮಾಡುತ್ತೇನೆ. ನ್ಯಾಯಾಲಯಕ್ಕೆ ನಾನು ಧನ್ಯವಾದ ಹೇಳುತ್ತೇನೆ. ನನಗೆ ಜಾಮೀನು ಮಂಜೂರು ಮಾಡಿದೆ. ಮತ್ತೆ ಸಚಿವ ಸ್ಥಾನ ಕೊಡುವುದು, ಬಿಡುವುದು ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟದ್ದು ಎಂದು ಹೇಳಿದ್ದಾರೆ. ಇದು ಬ್ಯಾಂಕ್ ಮತ್ತು ಬ್ಯಾಂಕ್ ಅಧಿಕಾರಿಗಳಿಂದ ಆಗಿರುವ ಹಗರಣ. ವಿನಾಕಾರಣ ನಮ್ಮ ಸರ್ಕಾರವನ್ನು ಸಿಲುಕಿಸುವ ಕೆಲಸ ಮಾಡಲಾಗಿದೆ. ಕೇಂದ್ರ ಹಾಗೂ ಬಿಜೆಪಿಯಿಂದ ನಮ್ಮ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಕೇಂದ್ರದ ಯಾವುದೇ ಬೆದರಿಕೆಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿಯನ್ನು ಕಿತ್ತೊಗೆದಿದ್ದೇವೆ. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲೂ ಬಿಜೆಪಿಯನ್ನ ಸೋಲಿಸುತ್ತೇವೆ. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ. ಬಳ್ಳಾರಿ ಜಿಲ್ಲೆಯಿಂದಲೂ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ ಎಂದರು.