ನನ್ನ ಮಾತು ಬೆದರಿಕೆಯಂತೆ ಕಂಡರೆ ನಾವೇನು ಮಾಡಲಾಗುತ್ತೆ?
ಚಿತ್ರದುರ್ಗ: ಬಿಜೆಪಿಯವರು ತಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಮುಚ್ಚಿಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ತಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಮುಚ್ಚಿಹಾಕಿದ್ದಾರೆ. ನಮ್ಮ ಸರ್ಕಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಚ್ಚಿಹೋದ ಹಗರಣಗಳನ್ನು ಬೆಳಕಿಗೆ ತಂದು, ಜನರ ತೆರಿಗೆ ಹಣಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಕಾಲದಲ್ಲಿ ಹತ್ತಾರು ಹಗರಣಗಳು ನಡೆದರೂ ಜಾರಿ ನಿರ್ದೇಶನಾಲಯ ಮಧ್ಯ ಪ್ರವೇಶ ಮಾಡಲಿಲ್ಲ. ಭೋವಿ ಅಭಿವೃದ್ಧಿ ನಿಗಮದಲ್ಲಿ 60 ಕೋಟಿ ರೂ.ಗಳನ್ನು ನುಂಗಿಹಾಕಿದ್ದಾರೆ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಲ್ಲಿ 47 ಕೋಟಿ ರೂ.ಗಳಿಗೂ ಹೆಚ್ಚು ಹಣ ತಿಂದು ಜೈಲಿಗೆ ಹೋದವರು ಯಾವ ಪಕ್ಷದವರು? ಇದನ್ನೆಲ್ಲಾ ಹೇಳಬಾರದೆ? ಈ ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗುತ್ತದೆ. ಕರ್ನಾಟಕ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ನನ್ನ ಮಾತು ಬೆದರಿಕೆಯಂತೆ ಕಂಡರೆ ನಾವೇನು ಮಾಡಲಾಗುತ್ತೆ? ರಾಜ್ಯದ ಮುಖ್ಯಮಂತ್ರಿಯಾಗಿ ವಸ್ತುಸ್ಥಿತಿಯನ್ನು ಜನರ ಮುಂದಿಟ್ಟಿದ್ದೇನೆ. ದೇವರಾಜ ಟ್ರಕ್ ಟರ್ಮಿನಲ್ ಅಧ್ಯಕ್ಷರಾಗಿದ್ದ ಡಿ.ಎಸ್.ವೀರಯ್ಯ ಹಾಗೂ ಎಂ.ಡಿ ಶಂಕರಪ್ಪ ಜೈಲಿಗೆ ಹೋಗಿದ್ದಾರೆ. ಅದನ್ನು ಯಾಕೆ ಬಿಜೆಪಿಯವರು ಸದನದಲ್ಲಿ ಪ್ರಸ್ತಾಪಿಸಿಲ್ಲ? ಅದು ಕೂಡ ತೆರಿಗೆ ಹಣವಲ್ಲವೇ? ವಿರೋಧ ಪಕ್ಷವಾಗಿ ಅದನ್ನು ಯಾಕೆ ಪ್ರಶ್ನಿಸಲಿಲ್ಲ? ತಮ್ಮವರು ಮಾಡಿದ ಹಗರಣ ಅವರಿಗೆ ಹಿತ ನೀಡುತ್ತಾ? ಎಂದು ಪ್ರಶ್ನಿಸಿದ್ದಾರೆ.