ನನ್ನ ಮೇಲಿನ ಕೇಸ್ ವಾಪಸ್ ಪಡೆದ ಬಗ್ಗೆ ದಾಖಲೆ ತೋರಿಸಿದ್ರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುವೆ
ಕಲಬುರಗಿ: ನನ್ನ ಮೇಲಿನ ಯಾವ ಕೇಸ್ ವಾಪಸ್ ಪಡೆದಿದ್ದಾರೆ? ಅದರ ಬಗ್ಗೆ ದಾಖಲೆ ತೋರಿಸಿದರೆ ನಾನು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ' ಎಂದು ವಿಧಾನ ಪರಿಷತ್ತಿನ ಸದಸ್ಯ, ಬಿಜೆಪಿ ಮುಖಂಡ ಸಿ.ಟಿ. ರವಿ ಸವಾಲು ಹಾಕಿದ್ದಾರೆ. ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ನನ್ನ ಮೇಲೆ ಯಾವ ಕೇಸ್ ಇಲ್ಲ. ಕ್ಯಾಬಿನೆಟ್‌ನಲ್ಲಿ ನನ್ನ ಮೇಲಿನ ಯಾವ ಕೇಸ್‌ನ್ನು ಕೂಡ ವಾಪಸ್ ಪಡೆದಿಲ್ಲ. ನಾನು ಚಾಲೆಂಜ್ ಮಾಡುತ್ತೇನೆ. ನನ್ನ ಮೇಲೆ ಯಾವ ಕೇಸ್ ಇದೆ? ಯಾವುದು ವಾಪಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಿ. ಇವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆ, ಎಚ್.ಕೆ. ಪಾಟೀಲ್ ನನ್ನ ಚಾಲೆಂಜ್ ಸ್ವೀಕರಿಸಲಿ' ಎಂದು ಸವಾಲು ಹಾಕಿದರು.
ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ ಟ್ರಸ್ಟ್ ಜಮೀನು ವಾಪಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸದ್ಯ ರಾಜ್ಯದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಕದ್ದ ಮಾಲನ್ನು ವಾಪಸ್ ಕೊಡ್ತಾ ಇದ್ದಾರೆ. ಕದ್ದ ಮಾಲನ್ನು ವಾಪಸ್ ಕೊಟ್ಟರೆ ಅದನ್ನು ಸಾಕ್ಷಿಯಾಗಿ ಪರಿಗಣಿಸುತ್ತಾರೆ. ಆತ್ಮಸಾಕ್ಷಿ ಬಗ್ಗೆ ಮಾತಾಡುವ ಇವರು ಒಂದು ಕೇಸ್ ವಾಪಸ್ ಪಡೆಯಲು ಒಬ್ಬ ವ್ಯಕ್ತಿಗೆ ಎಷ್ಟು ಕೊಟ್ಟಿದ್ದಾರೆ ಎಂದು ನನಗೆ ಗೊತ್ತಿದೆ. ಸಮಯ ಬಂದಾಗ ಅದನ್ನು ಸಹ ಬಹಿರಂಗಪಡಿಸುತ್ತೇನೆ ಎಂದರು.
ವಸತಿ ಸಚಿವ ಜಮೀರ್ ಅಹ್ಮದ್ ಕಂಡ ಜಮೀನೆಲ್ಲ ವಕ್ಫ್ ಬೋರ್ಡ್‌ಗೆ ಸೇರಿದ್ದು ಎನ್ನುತ್ತಿದ್ದಾರೆ. ಅವರ ಮಾತಿಗೆ ಜನ ಕಾಲಲ್ಲಿರೋದನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ. ಅನುದಾನದ ರೂಪದಲ್ಲಿ ಸಿಕ್ಕಿದ್ದು, ದಾನವಾಗಿ ಸಿಕ್ಕಿದ್ದು ಮತ್ತು ಖರೀದಿ ಮಾಡಿದ್ದ ಜಮೀನನ್ನು ಮಾತ್ರ ಸ್ವಂತದ್ದು ಎಂದು ಹೇಳಲು ಸಾಧ್ಯ ಎಂದು ನ್ಯಾಯಾಲಯವೇ ಹೇಳಿದೆ ಎಂದು ರವಿ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ಇದೆ, ಅದರ ವಿರುದ್ಧ ತಿರುಗಿಬಿದ್ದವರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಎಂದರು.
ಬುರ್ಖಾ ಧರಿಸಿ ಓಡಾಡಲಿ
ಹಿಜಾಬ್ ಪರ ಹೋರಾಟಗಾರರ ಬಗ್ಗೆ ಅಷ್ಟೊಂದು ಒಲವು ಹೊಂದಿರುವ ಕಾಂಗ್ರೆಸ್ ನಾಯಕರು ಬುರ್ಖಾ ಧರಿಸಿಕೊಂಡು ಓಡಾಡುವುದಾದರೆ ತಾವೇ ಸ್ವತಃ ಬುರ್ಖಾ ಖರೀದಿಸಿ ಕೊಡುವುದಾಗಿ ಸಿ.ಟಿ. ರವಿ ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ ಎಂಬುದರಿಂದ ಹಿಡಿದು ವಾಲ್ಮೀಕಿ ಹಗರಣದ ಕೋಟ್ಯಂತರ ರೂ. ಅಕ್ರಮವಾಗಿ ಚುನಾವಣೆಗೆ ಬಳಕೆ ಆಗಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಈ ಬಗ್ಗೆ ರಾಜ್ಯದ ಜನರ ಚಿತ್ತ ಬೇರೆಡೆ ಸೆಳೆಯಲು ಹುಬ್ಬಳ್ಳಿ ಗಲಭೆಕೋರರು ಹಾಗೂ ಹಿಜಾಬ್ ಪರ ಹೋರಾಟಗಾರರ ವಿರುದ್ಧ ಹಾಕಲಾಗಿದ್ದ ಎಲ್ಲ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.