ನನ್ನ ಮೇಲೆ ಕಣ್ಣಾಕಿದರೆ ಡಿಕೆಶಿ ಸರ್ವನಾಶ
ಮೈಸೂರು: ನನ್ನ ಮೇಲೆ ಕಣ್ಣುಹಾಕಿದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಸರ್ವನಾಶವಾಗುತ್ತಾರೆಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶದಿಂದ ಹೇಳಿದರು.
ಮೈಸೂರಿನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಶಿವಕುಮಾರ್ ರಾಜಕೀಯವಾಗಿ ಹೇಗೆ ಬೆಳೆದು ಬಂದಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ನಂತರ, ತಮ್ಮ ವಿರುದ್ಧದ ಹಗರಣಗಳ ಆರೋಪ ಮಾಡಿ, ಎಲ್ಲವನ್ನೂ ಬಯಲಿಗೆಳೆಯುವುದಾಗಿ ಸಮಾವೇಶದಲ್ಲಿ ಹೇಳಿದ್ದಾರೆ. ಈ ಸವಾಲು ತಾವು ಸ್ವೀಕರಿಸಲು ಸಿದ್ಧ ಎಂದರು.
ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ, ಅರಸರ ನಂತರ ಎರಡನೇ ಬಾರಿ ಸಿಎಂ ಆಗಿರುವುದರಿಂದ ಹಲವರಿಗೆ ಉರಿ ಎಂದು ಹೇಳಿದ್ದಾರೆ. ಒಂದು ವೇಳೆ ಅವರು ಒಳ್ಳೆಯ ಕೆಲಸ ಮಾಡಿದ್ದರೆ ನಾವು ಶಹಬ್ಬಾಸ್‌ಗಿರಿ ಕೊಡುತ್ತಿದ್ದೆವು. ಹಿಂದುಳಿದ ವರ್ಗಕ್ಕೆ ಸೀಮಿತರಾಗದೇ ಇಡೀ ರಾಜ್ಯದ ಸಿಎಂ ಎಂಬುದನ್ನು ಅವರು ನೆನಪಿನಲ್ಲಿರಿಸಿಕೊಳ್ಳಬೇಕು.
ತಮಗೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎನ್ನುತ್ತಾರೆ. ಆದರೆ ಅವರ ಚಡ್ಡಿ ಪೂರ್ಣ ಕಪ್ಪಾಗಿದೆ. ಇವರು ೧೪ ಇಲ್ಲವೇ ೨೪ ನಿವೇಶನ ಪಡೆಯಲಿ, ಅದಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ ಪಡೆದುಕೊಂಡಿರುವ ಭೂಮಿಯ ಮಾಲೀಕ ನಿಂಗ ಅಥವಾ ದೇವರಾಜ್ ಅಲ್ಲ, ಅದು ಸರ್ಕಾರದ ಆಸ್ತಿ, ಆ ವೇಳೆಗಾಗಲೇ ಅಲ್ಲಿ ನಿವೇಶನ ಮಾಡಿ ಹಂಚಿದ್ದನ್ನು ಹೇಗೆ ತಾನೆ ಖರೀದಿಸಲು ಸಾಧ್ಯ. ಈಗ ನಿವೇಶನ ವಾಪಸು ಕೊಡುವುದಾಗಿ ಹೇಳುತ್ತಿದ್ದಾರೆ. ಆದರೆ ಕಳವು ಮಾಡಿದ ವಸ್ತು ವಾಪಸು ನೀಡಿದ ಬಳಿಕ ಕಳ್ಳನನ್ನು ಬಿಟ್ಟುಬಿಡಲು ಸಾಧ್ಯವೇ ಎಂದು ಕೇಳಿದರು.
ಇನ್ನು, ತಮ್ಮ ಪುತ್ರನನ್ನು ಮೇಲಕ್ಕೆ ತರಲು ಅಣ್ಣನ ಮಗನನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಜನಾಂದೋಲನ ಸಮಾವೇಶದಲ್ಲಿ ಆರೋಪ ಮಾಡಿದ್ದಾರೆ. ರೇವಣ್ಣನ ಇಬ್ಬರು ಮಕ್ಕಳನ್ನು ಜೈಲಿಗಟ್ಟಿ, ಕುಟುಂಬದ ಓರ್ವ ಹೆಣ್ಣು ಮಗಳನ್ನೂ ಕಳುಹಿಸಲು ಯತ್ನ ನಡೆಸಿದವರಿಗೆ ಈ ರೀತಿ ಕೇಳಲು ನೈತಿಕತೆ ಇಲ್ಲ. ಇಂತಹ ಕುತಂತ್ರಿಗಳನ್ನು ನಾಡಿನ ಜನತೆ ನಂಬುವುದಿಲ್ಲ ಎಂದು ಹೇಳಿದರು.