ನನ್ನ ರಾಜಕೀಯ ಜೀವನ ತೆರೆದ ಪುಸ್ತಕ…
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುತ್ತಿರುವ ಆರೋಪ ಸಂಪೂರ್ಣ ನಿರಾಧಾರವಾಗಿದ್ದು, ಇದು ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷ ಮತ್ತು ನನ್ನನ್ನು ಗುರಿಯಾಗಿಟ್ಟುಕೊಂಡು ನಡೆಯುತ್ತಿರುವ ಯೋಜಿತ ಪಿತೂರಿಯಾಗಿದೆ
ಬೆಂಗಳೂರು: ವಿರೋಧ ಪಕ್ಷಗಳು ಆರೋಪಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ಭೂ ದಾಖಲೆಗಳ ಆಧರಿಸಿದ ನನ್ನ ಹೇಳಿಕೆಯನ್ನು ನಾನು ಇಂದು ರಾಜ್ಯದ ಜನತೆಯ ಮುಂದೆ ಇಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿದ್ದು ಸಿದ್ದರಾಮಯ್ಯನವರು ಮೈಸೂರಿನಲ್ಲಿ ದಲಿತರ ಜಮೀನನ್ನು ಕಬಳಿಸಿದ್ದಾರೆ’’ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುತ್ತಿರುವ ಆರೋಪ ಸಂಪೂರ್ಣ ನಿರಾಧಾರವಾಗಿದ್ದು, ಇದು ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷ ಮತ್ತು ನನ್ನನ್ನು ಗುರಿಯಾಗಿಟ್ಟುಕೊಂಡು ನಡೆಯುತ್ತಿರುವ ಯೋಜಿತ ಪಿತೂರಿಯಾಗಿದೆ. ವ್ಯವಸ್ಥೆಯಲ್ಲಿ ಎಲ್ಲಕ್ಕಿಂತಲೂ ಸರ್ವೋಚ್ಚವಾದುದು ಜನತಾ ನ್ಯಾಯಾಲಯ. ವಿರೋಧ ಪಕ್ಷಗಳು ಆರೋಪಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ಭೂ ದಾಖಲೆಗಳ ಆಧರಿಸಿದ ನನ್ನ ಹೇಳಿಕೆಯನ್ನು ನಾನು ಇಂದು ರಾಜ್ಯದ ಜನತೆಯ ಮುಂದೆ ಇಟ್ಟಿದ್ದೇನೆ. ಮೈಸೂರಿನ ಜವರನ ಮಗ ನಿಂಗ ಎನ್ನುವವರು 2-8-1935 ರಲ್ಲಿ ಮೈಸೂರು ತಾಲ್ಲೂಕು ಕಛೇರಿಗೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆಗಿನ ಕೆಳ ಹಂತದ ಅಧಿಕಾರಿಗಳು 15-8-1935 ರಂದು ನಿಂಗ ಅವರು ಕೇಳಿರುವ ಜಮೀನುಗಳನ್ನು ಹರಾಜಿನ ಮೂಲಕ ವಿಲೇಪಡಿಸಬೇಕೆಂದು ವರದಿ ಸಲ್ಲಿಸಿದ್ದರು. ಅದರ ಪ್ರಕಾರ 26-9-1935 ರಂದು ಹರಾಜು ನೋಟೀಸು ಹೊರಡಿಸಿದ್ದರು. 3-10-1935 ರಂದು ಹರಾಜು ನಡೆಸಲಾಗುವುದೆಂದು ನೋಟೀಸಿನಲ್ಲಿ ತಿಳಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲಾಗಿತ್ತು. ಹರಾಜು ನಡೆಸಿದ ಮೇಲೆ 13-10-1935 ರಂದು ‘ Sale is confirmed” ಎಂದು ನಮೂದಿಸಿದ್ದರು. ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಸ್ವಯಾರ್ಜಿತ ಜಮೀನಾಗುತ್ತದೆಯೆ ಹೊರತು ಈ ಜಮೀನುಗಳ ಮೇಲೆ ಸರ್ಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಹಾಗಾಗಿ ಈ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ಕಾಯ್ದೆಯು ಸ್ಪಷ್ಟವಾಗಿ ಹೇಳುತ್ತದೆ. ಅಸಂಖ್ಯಾತ ತೀರ್ಪುಗಳೂ ಇವೆ. ಪಿಟಿಸಿಎಲ್ ಜಮೀನುಗಳು ಅಲ್ಲದ ಕಾರಣ ಸರ್ಕಾರದ ಅನುಮತಿ ಅಗತ್ಯವೂ ಇಲ್ಲ ಎಂಬುದು ಕಾನೂನಿನ ಜ್ಞಾನವಿರುವ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಆದರೆ ಬಿಜೆಪಿ, ಜೆಡಿಎಸ್ ನವರು ಮಾತ್ರ ಇದನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ. 10-4-1993 ರಲ್ಲಿ ಮಾಡಲಾದ ವಂಶವೃಕ್ಷದ ಪ್ರಕಾರ ನಿಂಗ ಇವರಿಗೆ ಮೂರು ಜನ ಮಕ್ಕಳು. ಮೊದಲನೆಯ ಮಗ ಮಲ್ಲಯ್ಯ, ಎರಡನೆಯವನು ಮೈಲಾರಯ್ಯ ಮತ್ತು ಮೂರನೆಯವನು ಜೆ. ದೇವರಾಜು. ವಂಶವೃಕ್ಷದಲ್ಲಿ ಮಲ್ಲಯ್ಯ, ದೇವರಾಜು, ಮೈಲಾರಯ್ಯನವರ ಪತ್ನಿ ಪುಟ್ಟಗೌರಮ್ಮ ಮತ್ತು ಎಂ ಮಂಜುನಾಥಸ್ವಾಮಿ ಇವರುಗಳು ಸಹಿ ಮಾಡಿದ್ದಾರೆ. ಜೆ ದೇವರಾಜು ಎನ್ನುವವರ ಹೆಸರಿಗೆ ಖಾತೆ ಮಾಡಿಕೊಡಲು ಈ ಮೇಲಿನ ಎಲ್ಲರೂ ಸಹಿ ಮಾಡಿ ಹೇಳಿಕೆ ಕೊಟ್ಟಿದ್ದಾರೆ. ಇದರ ಆಧಾರದ ಮೇಲೆ ಜೆ.ದೇವರಾಜು ಅವರ ಹೆಸರಿಗೆ ಈ ಜಮೀನುಗಳು ವರ್ಗಾವಣೆಯಾಗಿವೆ. ಹಾಗಾಗಿ ಕ್ರಯದಾರರ ವಾಸರಸುದಾರರ ಒಪ್ಪಿಗೆ ಇಲ್ಲದೆ ಖರೀದಿ ನಡೆದಿದೆ ಎಂಬ ಬಿ.ಜೆ.ಪಿ. ಯವರ ಆರೋಪವು ಸುಳ್ಳು. ಈ ಎಲ್ಲ ವ್ಯವಹಾರಗಳು 2010 ಕ್ಕಿಂತ ಮುಂಚೆ ನಡೆದಿವೆ. ಇವು ನನಗೆ ಸಂಬಧಪಟ್ಟಿದ್ದಲ್ಲ. ಆದರೂ ಸಹ ಬಿಜೆಪಿಯವರು ಈ ಸಣ್ಣ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವ ಕಾರಣ ಈ ವಿಚಾರಗಳನ್ನು ಪ್ರಸ್ತಾಪಿಸಬೇಕಾಗಿದೆ. ಬಿ.ಜೆಪಿಯವರು ಗೌರವಾನ್ವಿತ ರಾಜ್ಯಪಾಲರಿಗೆ ನೀಡಿರುವ ಮನವಿ/ ದೂರಿನಲ್ಲಿ ಸದರಿ ಜಮೀನುಗಳನ್ನು ಡಿ-ನೋಟಿಫಿಕೇಶನ್ ಮಾಡಲು ಮುಡಾದಿಂದ ಪ್ರಸ್ತಾವನೆ ಬಂದಿರಲಿಲ್ಲ, ಅರ್ಜಿದಾರರು ಅರ್ಜಿಯೂ ಕೊಟ್ಟಿರಲಿಲ್ಲ, ಆದರೂ ಡಿ.ನೋಟಿಫಿಕೇಶನ್ ನಡೆದಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಸದರಿ ಜಮೀನುಗಳನ್ನು ಭೂಸ್ವಾಧೀನ ಮಾಡಲು 18-09-1992 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾರೆ. ಅದು ಬಹಳ ವರ್ಷಗಳಾದರೂ ಇತ್ಯರ್ಥವಾಗದೆ ಇರುವುದರಿಂದ ಜಿ.ದೇವರಾಜು, (ರೋಡ್ ನಂ.3406, 4ನೇ ಮುಖ್ಯ ರಸ್ತೆ, ಲಷ್ಕರ್ ಮೊಹಲ್ಲಾ ಉರ್ದು ನಗರ, ಮೈಸೂರು ರಸ್ತೆ) ಇವರು 13-08-1996 ರಂದು ತಮ್ಮ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಅರ್ಜಿ ಬರೆದಿದ್ದಾರೆ. ಈ ಜಮೀನುಗಳ ಅಂತಿಮ ಅಧಿಸೂಚನೆಯಾಗಿದ್ದು 20-08-1997 ರಂದು. ಅದಕ್ಕೂ ಮೊದಲೇ ಈ ಅರ್ಜಿ ಬರೆದಿದ್ದರು. ಅರ್ಜಿಯ ಮೇಲೆ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಶ್ರೀ ಬಿ.ಎನ್. ಬಚ್ಚೇಗೌಡ ಇವರು ಮನವಿ ಪರಿಶೀಲಿಸಿ ಸ್ಥಳೀಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅಭಿಪ್ರಾಯದೊಂದಿಗೆ ಮಂಡಿಸಿ ಎಂದು ಕಾರ್ಯದರ್ಶಿಯವರಿಗೆ ಟಿಪ್ಪಣಿ ಬರೆದಿದ್ದರು. ಅದನ್ನು ಆಧರಿಸಿ, ಒಂದು ತಿಂಗಳಾದ ಮೇಲೆ ಪತ್ರ ಮುಡಾ ಆಯುಕ್ತರಿಗೆ ಹೋಗಿದೆ. ಮುಡಾದಲ್ಲಿ 24-07-1997 ರಂದು ಈ ಜಾಗ ಭೂಸ್ವಾಧೀನದಿಂದ ಕೈಬಿಡಲು ನಿರ್ಣಯ ಪಾಸ್ ಮಾಡಿದ್ದಾರೆ. 30-08-1997ರಂದು ಸದರಿ ಜಾಗಗಳನ್ನು ಭೂಸ್ವಾಧೀನದಿಂದ ಕೈಬಿಡಲು ಮುಡಾ ಆಯುಕ್ತರು ಸರ್ಕಾರದ ಕಾರ್ಯದರ್ಶಿಗಳಿಗೆ ಶಿಫಾರಸ್ಸು ಮಾಡಿದ್ದಾರೆ. ಆ ಶಿಫಾರಸ್ಸನ್ನು ಆಧರಿಸಿ, ಭೂ ಸ್ವಾಧೀನ ಮಾಡಿದ ಜಮೀನುಗಳನ್ನು ಡಿ-ನೋಟಿಫೈ ಮಾಡಲು ಆಗ ರೆವಿನ್ಯೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ. ವಿ ಬಾಲಸುಬ್ರಮಣ್ಯನ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇರುವುದು ದಾಖಲೆಗಳಿಂದ ತಿಳಿದು ಬರುತ್ತದೆ. ನಗರಾಭಿವೃದ್ಧಿ ಇಲಾಖೆ ಸೆಕ್ರೆಟರಿ ವಿ.ಗೋವಿಂದರಾಜು ಮತ್ತು ಕಾನೂನು ಇಲಾಖೆಯ ಅಡಿಶನಲ್ ಸೆಕ್ರೆಟರಿಯಾದ ಕೆ. ಎಂ. ತಿಮ್ಮಯ್ಯ ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯು ಪರಿಶೀಲಿಸಿ ಡಿನೋಟಿಫೈ ಮಾಡಿದೆ. ಈ ಸಮಿತಿಯು ಬೆಂಗಳೂರಿನಲ್ಲಿ ಬಿಡಿಎಯ ಯಡಿಯೂರು- ನಾಗಸಂದ್ರ, ಮೈಸೂರಿನ ಮುಡಾದ ಕೆಸರೆ ಸೇರಿದಂತೆ ಸುಮಾರು 19 ಕಡೆ ಡಿನೋಟಿಫೈ ಮಾಡಲು ಅನುಮೋದನೆ ಮಾಡಿದೆ. ತಮ್ಮ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಕೋರಿ ದೇವರಾಜು ಎನ್ನುವವರು 13-8-1996 ರಲ್ಲಿ ಅರ್ಜಿ ಕೊಡುತ್ತಾರೆ. ನಗರಾಭಿವೃದ್ಧಿ ಇಲಾಖೆಯವರು 3-9-1996 ರಂದು ಮೂಡಾ ಆಯುಕ್ತರಿಗೆ ಪತ್ರ ಬರೆದು ವರದಿ ಕೇಳುತ್ತಾರೆ. ಅದಾಗಿ 30-8-1997 ಕ್ಕೆ ಮೂಡಾದವರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಕೇವಲ ವರದಿ ನೀಡುವುದಕ್ಕೆ ಒಂದು ವರ್ಷ ತೆಗೆದುಕೊಂಡಿದ್ದರು. ಅದಾದ ಮೇಲೆ ವಿ.ಬಾಲಸುಬ್ರಮಣ್ಯನ್ ಎಂಬ ದಕ್ಷ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಈ ಜಮೀನುಗಳೂ ಸೇರಿದಂತೆ ರಾಜ್ಯದ ಸುಮಾರು 19 ಕಡೆ ಭೂ ಸ್ವಾಧೀನದಿಂದ ಕೈ ಬಿಡಲು ತೀರ್ಮಾನಿಸಿದ್ದಾರೆ. ಅಂತಿಮವಾಗಿ 18-5-1998 ರಂದು ಭೂ ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ. ಮುಖ್ಯಮಂತ್ರಿಯೊ, ಉಪಮುಖ್ಯಮಂತ್ರಿಯೊ ಅಥವಾ ಮಂತ್ರಿಯೊ, ಎಮ್.ಎಲ್.ಎ ಯೊ ಇದರ ಹಿಂದೆ ಇದ್ದರೆ ಈ ಪ್ರಕ್ರಿಯೆ ಮುಗಿಸಲು ಎರಡು ವರ್ಷ ತೆಗೆದುಕೊಳ್ಳುತ್ತಿದ್ದರೆ? ಯಾವುದೇ ಜಮೀನನ್ನು ಭೂಸ್ವಾಧೀನ ಮಾಡಿ ಭೂಮಿಯ ಪರಿಹಾರ ಪಾವತಿಸಿ ಆ ಭೂಮಿಯ ಸಂಪೂರ್ಣ ಸ್ವಾಧೀನವನ್ನು ತೆಗೆದುಕೊಳ್ಳದ ಹೊರತು ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣವಾಗುವುದಿಲ್ಲ ಎಂಬ ಬಗ್ಗೆ ಅನೇಕ ತೀರ್ಪುಗಳು ಇವೆ ಮತ್ತು ಸರ್ಕಾರದ ಕ್ರಮವೂ ಆಗಿದೆ. ಇಷ್ಟಕ್ಕೂ ಈ ಜಮೀನುಗಳನ್ನು 18-05-1998 ರಲ್ಲಿ ಕೈಬಿಡಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984 ರಿಂದ ಒಟ್ಟು 13 ಬಡಾವಣೆಗಳಲ್ಲಿ 235.30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ. ಹಾಗಾಗಿ ಭುಸ್ವಾಧೀನದಿಂದ ಭೂಮಿಗಳನ್ನು ಕೈಬಿಟ್ಟಾಗ ಈ ಜಮೀನುಗಳನ್ನು ಮುಡಾ ಪೊಸೆಷನ್ ತೆಗೆದುಕೊಳ್ಳದಿರುವುದು ಕಂಡುಬರುತ್ತದೆ. ನಮ್ಮ ಕುಟುಂಬಕ್ಕೆ ಈ ಜಮೀನುಗಳು ಬರುವ ವೇಳೆಗಾಗಲೆ ದಿನಾಂಕ: 15-7-2005 ರಲ್ಲಿ ಭೂಪರಿವರ್ತನೆಯಾಗಿವೆ. ಕೃಷಿ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿತ್ತು. ಇದಾದ ಮೇಲೆ ದಿನಾಂಕ: 23-6-2014 ರಲ್ಲಿ ಮತ್ತು 25-10-2021 ರಲ್ಲಿ ಭೂ ಪರಿಹಾರಕ್ಕೆ ಬದಲಾಗಿ ಪರ್ಯಾಯ ಜಾಗವನ್ನು ಕೊಡಬೇಕೆಂದು ಅರ್ಜಿ ಹಾಕಲಾಗಿದೆ. ನನ್ನ ಪತ್ನಿ ನನ್ನ ಭೂಮಿಯನ್ನು ಮುಡಾ ಬಳಸಿಕೊಂಡಿದೆ, ಅದಕ್ಕೆ ಪರ್ಯಾಯ ಜಾಗ ಕೊಡಿ ಎಂದು ಕೇಳಿದ್ದಾರೆ. ಮುಡಾದವರು ಕೊಟ್ಟಿದ್ದಾರೆ. ಭೂ ಸ್ವಾಧೀನ ಪಡಿಸದೆ ಭೂಮಿಯನ್ನು ಉಪಯೋಗಿಸಿಕೊಂಡ ಪ್ರಕರಣಗಳಲ್ಲಿ ಹಾಗೆ ಉಪಯೋಗಿಸಲಾದ ಭೂಮಿಗೆ ಪರ್ಯಾಯವಾಗಿ ಶೇ. 50:50 ರ ಅನುಪಾತದಲ್ಲಿ ಜಾಗವನ್ನು ಕೊಡಬೇಕೆಂದು 14-9-2020 ರಲ್ಲಿ ನಿರ್ಣಯ ಮಾಡಿದ್ದಾರೆ. ಈ ನಿರ್ಣಯವನ್ನು ಸರ್ಕಾರ ರದ್ದು ಮಾಡಿದೆ. ಅಷ್ಟಕ್ಕೆ ಸುಮ್ಮನಿರದೆ 7-12-2020 ರಂದು ಮತ್ತೆ ಚರ್ಚೆ ಮಾಡಿ ಇನ್ನೊಂದು ನಿರ್ಣಯ ಮಾಡಿದ್ದಾರೆ. ಜಿ. ಟಿ. ದೇವೇಗೌಡ, ಮರಿತಿಬ್ಬೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂದೇಶ್ ನಾಗರಾಜ್ ಮುಂತಾದವರ ಅಭಿಪ್ರಾಯ ಪಡೆದು ಅಂತಿಮವಾಗಿ “ಅಂತಿಮ ಚರ್ಚೆ ನಡೆದು, ಇನ್ನು ಮುಂದೆ ಪ್ರಾಧಿಕಾರ ಭೂ ಸ್ವಾಧೀನಪಡಿಸದೇ ಉಪಯೋಗಿಸಿಕೊಂಡಿರುವಂತಹ ಪ್ರಕರಣಗಳಲ್ಲಿ ಭೂ ಪರಿಹಾರ ರೂಪದಲ್ಲಿ ಪರಿಹಾರವಾಗಿ ಅಭಿವೃದ್ಧಿ ಪಡಿಸಿದ ಒಟ್ಟು ವಿಸ್ತೀರ್ಣದ ಪೈಕಿ ಶೇ.50 ವಿಸ್ತೀರ್ಣದ ಅಭಿವೃದ್ಧಿ ಪಡಿಸಿದ ಜಾಗವನ್ನು ಒಪ್ಪುವ ಪ್ರಕರಣಗಳಲ್ಲಿ ನೀಡಬಹುದೆಂದು” ನಿರ್ಣಯಿಸಲಾಗಿದೆ. ಇಷ್ಟೆಲ್ಲಾ ಆದ ಮೇಲೆ ನನ್ನ ಪತ್ನಿ ದಿನಾಂಕ; 23-10-2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ, “ನನ್ನ ಜಮೀನನ್ನು ಪ್ರಾಧಿಕಾರವು ಉಪಯೋಗಿಸಿಕೊಂಡಿದ್ದು ಇದುವರೆಗೆ ಯಾವುದೇ ಪರಿಹಾರವನ್ನು ನೀಡಿರುವುದಿಲ್ಲ. ಆದ್ದರಿಂದ ನನಗೆ ಮೇಲಿನ ಜಮೀನಿಗೆ ಪರಿಹಾರವಾಗಿ ಪ್ರಸ್ತುತ ಶೇ. 50:50ರ ಅನುಪಾತದಲ್ಲಿ ಕೊಡಿ ಎಂದು ಕೇಳಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಇದನ್ನೆಲ್ಲ ಪರಿಶೀಲಿಸಿ ನನ್ನ ಪತ್ನಿಯಿಂದ ಪರಿತ್ಯಾಜನ ಪತ್ರ ಬರೆಸಿಕೊಂಡು 3-16 ಗುಂಟೆ ಜಮೀನುಗಳ ಹಕ್ಕುಗಳನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಿಕೊಂಡು, ದಿನಾಂಕ 30-12-2021 ರಂದು ಕೆಸರೆ ಗ್ರಾಮದ ಸ.ನಂ. 464 ರ 3-16 ಎಕರೆ ಜಮೀನಿಗೆ ಬದಲಿ ಜಾಗ ನೀಡುವ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಆಯುಕ್ತರು ಅಧಿಕೃತ ಜ್ಞಾಪನ ಆದೇಶ ಹೊರಡಿಸಿ 38,284 ಚದರ ಅಡಿ ಅಳತೆಗೆ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಿರುತ್ತಾರೆ. ಈ ವಿಚಾರಗಳನ್ನೆಲ್ಲಾ ಪರಿಶೀಲಿಸಲು ಜಸ್ಟೀಸ್ ಪಿ.ಎನ್. ದೇಸಾಯಿ ಯವರ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗವನ್ನು ರಚಿಸಲಾಗಿದೆ. ವಿಚಾರಣಾ ಆಯೋಗವು ಈ ಕುರಿತು ತನಿಖೆ ಪ್ರಾರಂಭಿಸಿದೆ. ವರದಿ ಬಂದ ನಂತರ ಯಾರೆಲ್ಲಾ ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿ, ಜೆಡಿಎಸ್ ನವರು ಮುಡಾದ ವಿಚಾರದಲ್ಲೂ, ವಾಲ್ಮೀಕಿ ಹಗರಣದಲ್ಲೂ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ವಿವಾದ ಅಲ್ಲದ್ದನ್ನು ಕೃತಕವಾಗಿ ವಿವಾದವನ್ನಾಗಿಸಲು ಬಿಜೆಪಿ ಹಾಗೂ ಜೆಡಿಎಸ್ ಪಾರ್ಲಿಮೆಂಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ ಬಿಜೆಪಿ - ಜೆಡಿಎಸ್ ಸಂಸದರು ರಾಜ್ಯದ ಏಳೂವರೆ ಕೋಟಿ ಜನರಿಗೆ ಆಗಿರುವ ಅನ್ಯಾಯದ ಬಗ್ಗೆ ನೆಪಕ್ಕೂ ಪಾರ್ಲಿಮೆಂಟಿನಲ್ಲಿ ಪ್ರಶ್ನೆ ಮಾಡಿಲ್ಲ. ಇಲ್ಲಿ ವಿಧಾನಸಭೆಯನ್ನು ಅವರ ರಾಜಕಾರಣಕ್ಕೆ ಬಳಸಿಕೊಂಡರು, ಈಗ ಪಾರ್ಲಿಮೆಂಟನ್ನೂ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರು ಹತಾಶರಾಗಿದ್ದಾರೆ. ನಾವು 135 ಸ್ಥಾನವನ್ನು ಗೆದ್ದ ಬಳಿಕ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಎರಡನೇ ಬಾರಿ ನಾನು ಸಿಎಂ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿವೇಶನದಲ್ಲಿ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ, ಅತಿವೃಷ್ಟಿ, ಬೆಳೆಹಾನಿ ಬಗ್ಗೆ ಆಡಳಿತ ಪಕ್ಷದವರು ಮಾತ್ರ ಚರ್ಚಿಸಿದರು. ವಿರೋಧ ಪಕ್ಷದವರು ನೆಪಕ್ಕೂ ರಾಜ್ಯದ ಜನರ ಸಂಕಷ್ಟಗಳ ಬಗ್ಗೆ ಧ್ವನಿ ಎತ್ತಲಿಲ್ಲ. ಎರಡು ವಾರವೂ ವಾಲ್ಮೀಕಿ ನಿಗಮದ ಒಂದೇ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇದನ್ನೆಲ್ಲಾ ನೋಡಿದಾಗ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅಧಿವೇಶನವನ್ನು ದುರುಪಯೋಗ ಪಡಿಸಿಕೊಳ್ಳುವುದು ಬಿಟ್ಟರೆ ಬೇರೆ ಜನಪರವಾದ ಉದ್ದೇಶ ವಿರೋಧ ಪಕ್ಷಗಳಿಗೆ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ನಾನು ಮಂತ್ರಿಯಾಗಿ 40 ವರ್ಷ ಆಗಿದೆ. ಇವತ್ತಿನವರೆಗೆ ನನ್ನ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಜನರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ಲೋಕಸಭಾ ಚುನಾವಣೆಯಲ್ಲೂ ಹಿಂದಿನ ಬಾರಿಗಿಂತ ಹೆಚ್ಚು ಸೀಟು, ಮತ ಗಳಿಸಲು ಸಾದ್ಯವಾಗಲಿಲ್ಲ. ನಾವು ಕಳೆದ ಲೋಕಸಭಾ ಚುನಾವಣೆಗಿಂತ ಶೇ13 ರಷ್ಟು ಮತಗಳನ್ನು ಈ ಚುನಾವಣೆಯಲ್ಲಿ ಹೆಚ್ಚು ಗಳಿಸಿದೆವು. ಇದರಿಂದ ಹತಾಶರಾಗಿ ಮತ್ತೆ ಜನರ ವಿಶ್ವಾಸ ಗಳಿಸಲು ವಾಮಮಾರ್ಗ ಹಿಡಿದಿದ್ದಾರೆ ಎಂದಿದ್ದಾರೆ.