ನಬಾರ್ಡ್ ಸಾಲ ಕಡಿತ: ದೆಹಲಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಭೇಟಿಯಾದ ಸಿಎಂ
ನಬಾರ್ಡ್‌ನ ಕೃಷಿ ಸಾಲವನ್ನು ಶೇ.58 ಕಡಿತ ಮಾಡಿರುವುದರಿಂದ ರಾಜ್ಯದ ರೈತರಿಗೆ ಬಹುದೊಡ್ಡ ಸಂಕಷ್ಟ ಎದುರಾಗಿದೆ, ಹಾಗಾಗಿ ಈ ಸಾಲದ ಮಿತಿಯನ್ನು ಹೆಚ್ಚಿಸಿ ರೈತರ ಹಿತಕಾಯುವಂತೆ ಮನವಿ
ನವದೆಹಲಿ: ನಬಾರ್ಡ್‌ನ ಕೃಷಿ ಸಾಲವನ್ನು ಶೇ.58 ಕಡಿತ ಮಾಡಿರುವುದರಿಂದ ರಾಜ್ಯದ ರೈತರಿಗೆ ಬಹುದೊಡ್ಡ ಸಂಕಷ್ಟ ಎದುರಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ನಬಾರ್ಡ್‌ನ ಕೃಷಿ ಸಾಲವನ್ನು ಶೇ.58 ಕಡಿತ ಮಾಡಿರುವುದರಿಂದ ರಾಜ್ಯದ ರೈತರಿಗೆ ಬಹುದೊಡ್ಡ ಸಂಕಷ್ಟ ಎದುರಾಗಿದೆ, ಹಾಗಾಗಿ ಈ ಸಾಲದ ಮಿತಿಯನ್ನು ಹೆಚ್ಚಿಸಿ ರೈತರ ಹಿತಕಾಯುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಬೈರತಿ ಸುರೇಶ್, ಚಲುವರಾಯಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.
2024-25 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ 35ಲಕ್ಷ ರೈತರಿಗೆ ರೂ.25ಸಾವಿರ ಕೋಟಿ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿಯನ್ನು ಹೊಂದಿದೆ. 2023-24ನೇ ಹಣಕಾಸು ವರ್ಷದಲ್ಲಿ ಅಲ್ಪಾವಧಿ ಸಹಕಾರಿ ಸಾಲ ವ್ಯವಸ್ಥೆಯಡಿ ಕರ್ನಾಟಕದಲ್ಲಿ ರೂ. 22,902 ಕೋಟಿ ಅಲ್ಪಾವಧಿ ಕೃಷಿ ಸಾಲವನ್ನು ವಿತರಿಸಲಾಗಿದೆ. 2024-25ನೇ ಸಾಲಿನಲ್ಲಿ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಲ್ಪಾವಧಿ ಸಹಕಾರಿ ಸಾಲ ವ್ಯವಸ್ಥೆಯಡಿ ರೂ.9,162ಕೋಟಿ ಕೃಷಿ ಸಾಲ ಮಿತಿಗೆ ಅನುಮೋದನೆ ನೀಡುವಂತೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ನಬಾರ್ಡ್‌ಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಕಳೆದ ಐದು ವರ್ಷಗಳ ಅವಧಿಯಲ್ಲಿ ನಬಾರ್ಡ್ ಕರ್ನಾಟಕ ರಾಜ್ಯಕ್ಕೆ ಅನುಮೋದಿಸಿರುವ ಕೃಷಿ ಸಾಲದ ಮಿತಿ ವಿವರಿಸಿದ್ದು, 2023-24ನೇ ಸಾಲಿನಲ್ಲಿ ನಬಾರ್ಡ್ ಕೃಷಿ ಚಟುವಟಿಕೆಗಳಿಗೆ ರೂ.5600 ಕೋಟಿ ಮೊತ್ತದ ರಿಯಾಯಿತಿ ದರದ ಸಾಲದ ಮಿತಿಗೆ ಅನುಮೋದನೆ ನೀಡಿತ್ತು. 2024-25ನೇ ಸಾಲಿನಲ್ಲಿ ರೂ.9,162 ಕೋಟಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ, ನಬಾರ್ಡ್ ಕೃಷಿ ಚಟುವಟಿಕೆಗಳಿಗೆ ಕೇವಲ ರೂ.2340 ಕೋಟಿ ರಿಯಾಯಿತಿ ದರದ ಸಾಲವನ್ನು ಅನುಮೋದಿಸಿದೆ. ಇದು ಕಳೆದ ವರ್ಷಕ್ಕಿಂತ ಶೇ.58ರಷ್ಟು ಕಡಿಮೆಯಾಗಿದೆ. ಆರ್‌ಬಿಐ ಸಾಮಾನ್ಯ ಸಾಲದ ಮಿತಿ (ಎಲ್‌ಒಸಿ)ಯನ್ನು ಕಡಿಮೆಗೊಳಿಸಿರುವುದೇ ಪ್ರಸ್ತುತ ವರ್ಷ ರಿಯಾಯಿತಿ ದರದ ಸಾಲದ ಮಿತಿಯನ್ನು ಕಡಿಮೆಗೊಳಿಸಲು ಕಾರಣ ಎಂದು ನಬಾರ್ಡ್ ಮಾಹಿತಿ ನೀಡಿದೆ..
ಕರ್ನಾಟಕದಲ್ಲಿ ಈ ಬಾರಿ ಉತ್ತಮ ಮಾನ್ಸೂನ್ ಮಳೆಯಾಗಿದ್ದು, ರೈತರು ಕೃಷಿ ಸಹಕಾರಿ ಚಟುವಟಿಕೆಗಳಿಗೆ ರಿಯಾಯಿತಿ ದರದ ಸಾಲದ ಮಿತಿಯನ್ನು ಹೆಚ್ಚಿಸುವಂತೆ ಬೇಡಿಕೆ ಇರಿಸಿದ್ದಾರೆ. ಆದರೆ ಕರ್ನಾಟಕಕ್ಕೆ 2024-25ನೇ ಸಾಲಿಗೆ ರಿಯಾಯಿತಿ ದರದ ಸಾಲದ ಮಿತಿಯನ್ನು ಕಡಿತಗೊಳಿಸಿರುವುದು ಅಲ್ಪಾವಧಿ ಕೃಷಿ ಸಹಕಾರಿ ಸಾಲದ ವಿತರಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ, ಕರ್ನಾಟಕದ ರೈತರ ಹಿತದೃಷ್ಟಿಯಿಂದ ಅವರು ಉತ್ತಮ ಬೆಳೆಯನ್ನು ಬೆಳೆಯಲು ಅನುಕೂಲವಾಗುವಂತೆ 2024-25 ನೇ ಸಾಲಿನಲ್ಲಿ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸುವಂತೆ ನಬಾರ್ಡ್ ಹಾಗೂ ಆರ್‌ಬಿಐಗೆ ದಯವಿಟ್ಟು ನಿರ್ದೇಶನ ನೀಡಲು ಕೋರಿದ್ದಾರೆ.