For the best experience, open
https://m.samyuktakarnataka.in
on your mobile browser.

ನಮಗೆ ಎಂತಹ ಶಿಕ್ಷಕರು ಬೇಕು

02:49 AM Sep 09, 2024 IST | Samyukta Karnataka
ನಮಗೆ ಎಂತಹ ಶಿಕ್ಷಕರು ಬೇಕು

ಬರೀ ಅಕ್ಷರಭ್ಯಾಸ ಮಾಡಿಸುವುದು, ಪರೀಕ್ಷೆ ನಡೆಸಿ ಫಲಿತಾಂಶ ಕೊಡುವುದಷ್ಟೇ ಶಿಕ್ಷಕರ ಕೆಲಸವಲ್ಲ. ಏಕೆಂದರೆ ಅವರು ಅರಿವಿನ ಸಂಕೇತ, ಬೆಳಕಿನ ಕಿರಣ, ಸಾಧನೆಗೆ ಸ್ಫೂರ್ತಿ, ಕೈ ಹಿಡಿದು ನಡೆಸುವ ಮಾರ್ಗದರ್ಶಿ, ವ್ಯಕ್ತಿ ಮತ್ತು ದೇಶ ನಿರ್ಮಾಪಕ. ಜೀವನ ಕಲೆಯನ್ನು ಕರುಣಿಸಿ ಜೀವನ ಲಕ್ಷ್ಯವನ್ನು ದಿಗ್ದರ್ದಿಸುವ ಮಹಾ ಚೇತನ. ಶಿಕ್ಷಕ ವೃತ್ತಿಯು ಹೊಟ್ಟೆಪಾಡಿಗಾಗಿ ೮ ತಾಸು ಮಾಡುವ ನೌಕರಿ ಅಲ್ಲ. ತನ್ನೆಲ್ಲ ಜ್ಞಾನವನ್ನು ಧಾರೆಯೆರೆದು ಶಿಷ್ಯನ ಅಭ್ಯುದಯದಲ್ಲಿ ಖುಷಿ ಪಡೆಯುವ ನಿಸ್ವಾರ್ಥ ಸೇವೆಯದು. ಅಂತಹ ಗುರುಗಳ ಒಂದು ದೊಡ್ಡ ಪರಂಪರೆಯೇ ಭಾರತದಲ್ಲಿದೆ. ತ್ರಿಕಾಲ ಸತ್ಯವಾದ ಭಗವತ್ ಗೀತೆಯನ್ನು ಬೋಧಿಸಿದ ಶ್ರೀ ಕೃಷ್ಣನಿಂದ ಹಿಡಿದು ಭಾರತದ ವಿಜ್ಞಾನಿ, ರಾಷ್ಟ್ರಧ್ಯಕ್ಷರಾಗಿದ್ದ ಎಪಿಜೆ ಅಬ್ದುಲ್ ಕಲಾಂವರೆಗೆ ಗುರುಸರಣಿಯೇ ಇದೆ.
ಗುರುವಿನ ಕಾರ್ಯವು ಬರೀ ಪಾಠ ಪ್ರವಚನಗಳಿಗೆ ಮಾತ್ರ ಸೀಮಿತವಾಗಿರಬಾರದು. ತಾನು ಮಾಡುವ ವಿದ್ಯಾದಾನದೊಂದಿಗೆ ಪ್ರಪಂಚವನ್ನು ಎದುರಿಸುವ ಶಕ್ತಿಯನ್ನು ಅವರು ಕೊಡಬೇಕು. ಸಮಾಜವು ನಿತ್ಯ ಎದುರಿಸುವ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ವಿವೇಚನಾ ಶಕ್ತಿಯನ್ನು ಮೂಡಿಸಬೇಕು. ಕಲಿತ ವಿದ್ಯೆಯ ಅನ್ವಯಿಕ ರೂಪದ ಅರಿವು ಕಲಿತವನಿಗಾಗಬೇಕು. ಪ್ರಸಕ್ತ ಕಾಲದಲ್ಲಿ ಅದು ಸಮಾಜದೊಳತಿಗೆ, ಮಾನವತೆಯ ಸಾಕಾರಕ್ಕೆ ಕಾರಣವಾಗಬೇಕು. ತಥಾಕತಿಥ, ರೂಢಿಗತ, ಪ್ರಚಲಿತ ವಿಚಾರ-ಆಚಾರಗಳನ್ನು ಮೀರಿ ಹೊಸ ದಿಕ್ಕು ದೆಶೆಯನ್ನು ತೋರಬೇಕು. ಇದೇ ಕಾರಣಕ್ಕಾಗಿ ರಾಮಕೃಷ್ಣ ಪರಮಹಂಸರು ಮೋಕ್ಷಕ್ಕೆ ಹೊಸ ಅರ್ಥವನ್ನು ಕೊಟ್ಟರು. ಪಂಚಾಕ್ಷರ ಗವಾಯಿಗಳು ಸಂಗೀತದಲ್ಲಿ ಸುಖ ಕರುಣಿಸಿದರು. ಗುರುರಮಾನಂದಸ್ವಾಮಿ, ಗುರುಗೋವಿಂದ ಭಟ್ಟರು ಜಾತಿ ಧರ್ಮಗಳ ಆಚೆ ನಿಂತು ಆಧ್ಯಾತ್ಮವನ್ನು ಆಚರಿಸಿದರು. ಸಮರ್ಥ ರಾಮದಾಸರು ಮತ್ತು ವಿದ್ಯಾರಣ್ಯರು ವಿದ್ಯೆಗೆ ಕ್ಷಾತ್ರತೇಜಸ್ಸನ್ನು ತುಂಬಿದರು. ಡಾ. ಎಸ್. ರಾಧಾಕೃಷ್ಣನ್ನರು ಸ್ಟ್ಯಾಲಿನ್‌ನಂತಹ ಕಟ್ಟ ಕಮ್ಯುನಿಷ್ಟನನ್ನು ಕರಗುವಂತೆ ಮಾಡಿದರು. ಲೋಕಾನುಕೂಲಕ್ಕೆ ತಕ್ಕಂತೆ ವಿದ್ಯೆಯನ್ನು ಸದುದ್ದೇಶಕ್ಕೆ ಬಳಸುವುದು, ಕಾಲದ ಕರೆಗೆ ಒಗೊಟ್ಟು ಕಾಲಾನುಕೂಲಕ್ಕೆ ತಕ್ಕಂತೆ ವಿದ್ಯೆಯನ್ನು ವಿನಿಯೋಗಿಸುವುದನ್ನು ಗುರುಗಳಾದವರು ಕಲಿಸಬೇಕು.
ಅವನಿಗೆ ಆಗ ಹದಿಹರೆಯ. ಸಹಜವಾಗಿಯೇ ಪ್ರೇಮ-ಪ್ರೀತಿಯ ಮೋಹಕ ಜಾಲದಲ್ಲಿ ಸಿಲುಕಿದ್ದ. ಕಣ್ಣುಕಾಣದ ಯುವಕನಿಗೆ ಮದುವೆಯ ಹುಚ್ಚು ಹಿಡಿದಿತ್ತು. ಹುಚ್ಚು ಹಿಡಿಯದೇ ಮದುವೆ ಆಗುವುದಿಲ್ಲ. ಮದುವೆ ಆಗದೇ ಹುಚ್ಚು ಬಿಡುವುದಿಲ್ಲ'' ಎನ್ನುವಂತಿತ್ತು ಪರಿಸ್ಥಿತಿ! ಆದರೆ ಗದಗಿನ ಪಂಚಾಕ್ಷರಿ ಗವಾಯಿಗಳ ಬಳಿ ಸಂಗೀತಭ್ಯಾಸ ಮಾಡುತ್ತಿದ್ದ ಈ ಶಿಷ್ಯ ಪುಟ್ಟರಾಜನಿಗೆ ಗುರುಗಳ ಒಪ್ಪಿಗೆಯನ್ನು ಪಡೆಯುವುದೇ ಒಂದು ದೊಡ್ಡ ಸವಾಲಾಗಿತ್ತು! ಗುರುಗಳಿಗೋ ಶಿಷ್ಯನ ಮದುವೆ ವಿಚಾರ ಕೇಳಿ ಸಿಟ್ಟು ಬಂದಿತ್ತು. ಅದು ಸಾತ್ವಿಕವಾದ ಸಿಟ್ಟಾಗಿತ್ತು.ಮದುವೆ, ಸಂಸಾರ, ಮಕ್ಕಳು-ಮರಿ ಜಂಜಾಟದಲ್ಲಿ ಸಿಲುಕಬೇಡ. ನಿನ್ನಲ್ಲಿ ಅಪಾರವಾದ ಸಂಗೀತ ಸಿದ್ಧಿ ಅಡಗಿದೆ. ಮದುವೆಯ ಹುಚ್ಚು ಬಿಡು ಸಂಗೀತದ ಹುಚ್ಚು ಹಿಡಿಸಿಕೋ. ಸಂಗೀತ ಲೋಕದ ಸುರಸಾಮ್ರಾಜ್ಞನಾಗುತ್ತಿ'' ಎಂದರು. ಶಿಷ್ಯನಿಗೆ ಮೊದಮೊದಲು ಗುರುವಿನ ಮಾತು ರುಚಿಸಲಿಲ್ಲ. ಆದರೆ ಗುರುವಿನ ಮಾತನ್ನು ಹಾಗೇ ತೆಗೆದು ಹಾಕಲೂ ಆಗುತ್ತಿರಲಿಲ್ಲ. ಏನು ಮಾಡುವುದು? ಮದುವೆ-ಬೇಕು-ಬೇಡಗಳ ತಾಕಲಾಟದಲ್ಲಿ ರಾತ್ರಿ ಇಡೀ ಯೋಚಿಸಿದ. ನಿದ್ರೆ ಇಲ್ಲದೇ ಹೊರಳಾಡಿದ. ಬೆಳಗ್ಗೆಯಷ್ಟೊತ್ತಿಗೆ ಒಂದು ನಿರ್ಧಾರಕ್ಕೆ ಬಂದ. ಗುರು ಹೇಳಿದಂತೆ ಮಾಡುವುದು. ಮದುವೆಯಾಗಲಿಲ್ಲ, ಸಂಗೀತವನ್ನು ಬಿಡಲಿಲ್ಲ. ಕರ್ನಾಟಕಿ ಮತ್ತು ಹಿಂದುಸ್ತಾನೀ ಎರಡೂ ಸಂಗೀತ ವಿಧಗಳಲ್ಲೂ ಪಳಗಿದ. ಸಂಗೀತ ಸುರ ಸಾಮ್ರಾಟನಾದ. ಗುರುವಿನ ಆಸೆ ಪೂರೈಸಿ ಜಗದ್ ವಿಖ್ಯಾತನಾದ.
ದೇವರನ್ನು ನೋಡುವುದು, ಮೋಕ್ಷವನ್ನು ಹೊಂದುವುದು ನರೇಂದ್ರನಾಥ ದತ್ತನ ಜೀವನದ ಗುರಿಯಾಗಿತ್ತು. ಅದಕ್ಕಾಗಿ ಒಬ್ಬ ಸಮರ್ಥ ಗುರುವಿನ ಹುಡುಕಾಟದಲ್ಲಿ ತೊಡಗಿದ್ದ. ಕಲ್ಕತ್ತದ ಗಂಗಾ ತಟದಲ್ಲಿದ್ದ ಕಾಳಿಕಾ ಗುಡಿಯ ಪೂಜಾರಿ ಶ್ರೀ ರಾಮಕೃಷ್ಣ ಪರಮಹಂಸರು ಅಂತಹ ಗುರುವಾಗಬಹುದು ಎಂದುಕೊಂಡ. ನೀನೇಕೆ ದೇವರನ್ನು ನೋಡಬೇಕು?'' ಗುರುವಿನ ಪ್ರಶ್ನೆಗೆಜೀವನದಿಂದ ಮೋಕ್ಷ ಹೊಂದಲು'' ಶಿಷ್ಯನ ಉತ್ತರ, ನೀನು ತುಂಬ ಸ್ವಾರ್ಥಿಯಾಗಿದ್ದೀಯಾ, ಬರೀ ಸ್ವಂತದ ಮುಕ್ತಿಗಾಗಿ ಹಲಬುತ್ತಿದ್ದಿಯಾ. ಸ್ವಂತಕ್ಕಾಗಿ ಮುಕ್ತಿ ಪಡೆಯುವುದು ಸ್ವಾರ್ಥ. ಪರರ ಮುಕ್ತಿಗಾಗಿ ಬದುಕುವುದು ಪಾರಮಾರ್ತಿಕ. ಸಾವಿರಾರು ವರ್ಷಗಳಿಂದ ವಿದೇಶೀ ಆಕ್ರಮಣಕಾರರ ಕೈಗೆ ಸಿಲುಕಿ ನಲುಗಿರುವ, ಭಾರತಮಾತೆಯ ಕೈಗೆ ತೊಡಿಸಿರುವ ಸಂಕೋಲೆಗಳಿಂದ ಆಕೆಯನ್ನು ಮುಕ್ತಗೊಳಿಸುವ ಬಗ್ಗೆ ಯೋಚಿಸು'' ಎಂದರು. ವಿವೇಕಾನಂದರು ಸ್ವಂತದ ಮೋಕ್ಷದ ಬಗ್ಗೆ ಯೋಚಿಸುವುದನ್ನು ಬಿಟ್ಟರು. ತಾಯಿ ಭಾರತೀಯನ್ನೇ ತನು-ಮನ-ಹೃದಯಗಳಲ್ಲಿ ತುಂಬಿಕೊಂಡರು.ತಾಯಿಯ ದಾಸ್ಯ ಕಳೆಯುವ, ಆಕೆಯ ಕೀರ್ತಿ ಹೆಚ್ಚಿಸುವ ಕೆಲಸವೆಂದಾದರೆ ನನಗೆ ಮೋಕ್ಷವೇ ಬೇಡ. ಸಾವಿರ ಸಾವಿರ ಜನ್ಮವಾದರೂ ಸರಿ, ಪುನಃ ಪುನಃ ಜನ್ಮ ತಳೆದು ಬರುತ್ತೇನೆ'' ಎಂದರು. ದೀನ, ದರಿದ್ರ, ದಲಿತರಲ್ಲಿ ದೇವರನ್ನು ಕಂಡರು.
ಮಹಮದೀಯವಾದರೂ ಕಬೀರರಿಗೆ ಹಿಂದೂ ಆಧ್ಯಾತ್ಮಿಕತೆ ಶ್ರೀ ರಾಮನ ಬಗ್ಗೆ ಎಲ್ಲಿಲ್ಲದ ಭಕ್ತಿ, ಆಧ್ಯಾತ್ಮಿಕ ಸೆಳೆತ. ಅದಕ್ಕೆ ಅವರ ಜಾತಿ ಅಡ್ಡ ಬರಲಿಲ್ಲ. ನೈಜ ಆಧ್ಯಾತ್ಮ ಅಂದರೆ ಇದುವೆ ತಾನೆ? ಎಲ್ಲ ಮೇರೆಗಳನ್ನು ಮೀರಿನಿಂತ ಭಾವನೆ ಅದು. ಆದರೆ ರಮಾನಂದ ಸ್ವಾಮಿಯನ್ನು ಗುರು ಎಂದುಕೊAಡ ಕಬೀರನಿಗೆ ಗುರು ಕೃಪೆ ಅಷ್ಟು ಸುಲಭವಾಗಿರಲಿಲ್ಲ. ಆ ಕಾಲದ ಧಾರ್ಮಿಕ ಕಟ್ಟಳೆಗಳು, ಆಚರಣೆ, ನಂಬಿಗೆಗಳು ಹಾಗಿದ್ದವು. ಆದರೆ ಕಬೀರನ ತುಡಿತ ತಣ್ಣಗಾಗಲಿಲ್ಲ. ಪ್ರತಿದಿನ ಬ್ರಾಹ್ಮೀ ಸಮಯದ ಮಂಜುಗತ್ತಲೆಯಲ್ಲಿ ಗುರುಗಳು ನದಿಗೆ ಸ್ನಾನಕ್ಕೆ ಬರುವುದನ್ನು ತಿಳಿದಿದ್ದ. ಅವರು ನದಿಗೆ ನೀರಿಗಿಳಿಯುವ ಜಾಗದಲ್ಲಿ ರಾತ್ರಿಯೇ ಹೋಗಿ, ಮಲಗಿ ಮೆಟ್ಟಲಾದರು. ಆಗ ನೀರಿಗಿಳಿಯುತ್ತಿದ್ದ ಗುರುವಿನ ಪಾದಸ್ಪರ್ಶವಾಯಿತು. ಗುರುಗಳು ಕಬೀರನನ್ನು ತುಳಿದು ಬಿಟ್ಟೆನಲ್ಲ ಎಂದು ತಿಳಿದಾಗ ಅವರ ಬಾಯಿಯಿಂದ ಹೇ! ರಾಮ'' ಉದ್ಗಾರ ಹೊರಟಿತು. ಅದನ್ನೇ ಕಬೀರರು ಬೀಜ ಮಂತ್ರವನ್ನಾಗಿ ಸ್ವೀಕರಿಸಿದರು. ಜೀವನವಿಡೀ ಶ್ರೀರಾಮ ಮಂತ್ರ ಪ್ರಚಾರ, ಪ್ರಸರಣದಲ್ಲಿ ತೊಡಗಿದರು. ಭಕ್ತಿಪೂರಿತ ದೋಹಾಗಳನ್ನು ಬರೆದರು, ಹಾಡಿದರು. ರಾಮಭಜನೆಯನ್ನು ಜನಜನಿತ ಮಾಡಿದರು. ಅಸಹಾಯಕ ದೊರೆ. ರಾಜ್ಯಾಡಳಿತದಲ್ಲಿ ವಿದೇಶಿ ರಾಣಿಯ ಹಸ್ತಕ್ಷೇಪ. ತುಂಬಿ ತುಳುಕಿದ ಭ್ರಷ್ಟತೆ ಮತ್ತು ದುರಾಡಳಿತದಿಂದ ಬೇಸತ್ತ ಪ್ರಜೆಗಳು. ಆಳುವ ರಾಜನ ವಿರುದ್ಧವಾಗಿ ಪಟ್ಟಭದ್ರರನ್ನು ಎದುರಿಸಿ ಅನಿವಾರ್ಯವಾಗಿ ಬಂಡೇಳಬೇಕಾದ ಸಂದರ್ಭ. ತಮ್ಮ ಪಾಠವನ್ನು ಕೇಳುತ್ತಿದ್ದ ಶಿಷ್ಯರಿಗೆ ಕೌಟಿಲ್ಯರು ಪತನದಂಚಿಗೆ ಬಂದ ರಾಜ್ಯವನ್ನು ಉಳಿಸುವ ಹೊಣೆಯನ್ನು ತಾವೇ ಹೊತ್ತುಕೊಂಡರು. ಒಬ್ಬ ಜಾಗೃತ ಗುರುವಿಗೆ ಅದು ಕಾಲದ ಕರೆಯಾಗಿತ್ತು ಕೂಡ. ಚಂದ್ರಗುಪ್ತನ ರೂಪದಲ್ಲಿ ಚಾಣಕ್ಯನ ವಿಚಾರಗಳು ಕೆಲಸ ಮಾಡಿದವು. ಗುಪ್ತರ ಸುವರ್ಣಕಾಲಕ್ಕೆ ಅದುವೇ ಮುನ್ನುಡಿಯಾಯಿತು. ಸರ್ವಕಾಲಕ್ಕೂ ಅನ್ವಯಿಸುವಂತಹ ರಾಜನೀತಿ ಶಾಸ್ತç, ಅರ್ಥಶಾಸ್ತ್ರಗಳನ್ನು ಬರೆದ. ಉತ್ತರದಲ್ಲಿ ಮೊಗಲರು, ಬಲಬದಿಯಲ್ಲಿ ಬಿಜಾಪುರದ ಬಾದಶಹ ಎಡಬದಿಯಲ್ಲಿ ನಿಜಾಮರು ಸುತ್ತಲೆಲ್ಲ ಯುವನರು ಧರ್ಮದುಳುವಿಗೆ ವಿದ್ಯಾರಣ್ಯರು ಪಣವನ್ನು ತೊಟ್ಟರು ಹಕ್ಕ-ಬುಕ್ಕರಲ್ಲಿ ಕ್ಷಾತ್ರ ತೇಜಸ್ಸನ್ನು ಹೊರಹೊಮ್ಮಿಸಿದರು. ಪಾಠ ಪ್ರವಚನಕ್ಕಿಂತ ರಣರಂಗದ ಚಾಕಚಕ್ಯತೆ, ಶಾಸ್ತ್ರದ ಜೊತೆಗೆ ಶಸ್ತ್ರದ ಅವಶ್ಯಕತೆಯನ್ನು ಮನಗಾಣಿಸಿದರು. ಹಿಂದಿವೀ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವಿಜಯನಗರ ಸಾಮ್ರಾಜ್ಯವು ೪೦೦ ವರ್ಷ ವಿಜೃಂಭಿಸಿತು. ಇಂತಹುದೇ ಇತಿಹಾಸ ಶಿವಾಜಿಯ ಕಾಲದಲ್ಲಿ ಮರುಕಳಿಸಿತು. ಚಿಕ್ಕಂದಿನಿಂದ ತಾಯಿ ಜೀಜಾಬಾಯಿಯು ಗುರುವಿನಂತೆ ಹೇಳಿದ ಸ್ವಾಭಿಮಾನ ಮತ್ತು ಧರ್ಮ ರಕ್ಷಣೆಯ ಪಾಠ, ಸಮರ್ಥ ರಾಮದಾಸರು ಮಾಡಿದ ಆಶೀರ್ವಾದದ ಕಾರಣದಿಂದ ಶಿವಾಜಿಯ ಮೂಲಕ ಮತ್ತೇ ಹಿಂದವೀ ಸಾಮ್ರಾಜ್ಯ ತಲೆಯೆತ್ತಿ ನಿಂತಿತ್ತು. ರಾಜಮಾತೆ ಮತ್ತು ಗುರು ಸಮರ್ಥ ರಾಮದಾಸರು ಕಾಲದ ಅಗತ್ಯತೆಯನ್ನು ಅರಿತವರಾಗಿದ್ದರು. ಒಂದೆಡೆ ಭೀಷ್ಮ, ದ್ರೋಣ, ಕರ್ಣ, ಕೌರವರೊಳಗಂಡ ಏಳು ಆಕ್ಷೋಹಣಿ ಸೈನ್ಯ. ಇನ್ನೊಂದೆಡೆ ಶ್ರೀಕೃಷ್ಣ, ದ್ರುಪದ, ಪಾಂಡವರ ನಾಲ್ಕು ಅಕ್ಷೋಹಿಣಿ ಸೈನ್ಯ. ಎರಡೂ ಕಡೆ ಅತಿರಥ ಮಹಾರಥರು ಕೈಗಳಲ್ಲಿ ಶಸ್ತಾçಸ್ತçಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ. ಎಲ್ಲ ರಾಜ, ಮಹಾರಾಜ, ಸಾವಂತರು ಒಂದೋ ಧರ್ಮದ ಜೊತೆಗೆ ಇಲ್ಲವೋ ಅಧರ್ಮದ ಜೊತೆಗೆ ಹೀಗೆ ಎರಡು ಭಾಗವಾಗಿ ಬಿಟ್ಟಿದ್ದಾರೆ. ಇನ್ನೇನು ಶಂಖನಾದವಾಗಬೇಕು ಕುರುಕ್ಷೇತ್ರ ಯುದ್ಧ ಪ್ರಾರಂಭವಾಗಬೇಕು. ಎರಡೂ ಪಡೆಯ ಮಧ್ಯದಲ್ಲಿ ರಥವನ್ನೋಡಿಸಿದ ಶ್ರೀ ಕೃಷ್ಣ ಸಾರಥಿ. ಆಗ ಅರ್ಜುನನಿಗೆ ದ್ವಂದ್ವ ಪ್ರಾರಂಭವಾಯಿತು. ನೂರೆಂಟು ಪ್ರಶ್ನೆಗಳು ಭುಗಿಲೆದ್ದವು. ವೈರಿ ಪಡೆಯಲ್ಲಿಯೂ ದಾಯಾದಿಗಳು, ಗುರು-ಹಿರಿಯರು, ಸ್ನೇಹಿತರಿದ್ದಾರೆ. ಇವರೆಲ್ಲರನ್ನೂ ಸಂಹರಿಸಿ ಸಿಗುವ ಜಯ, ಸಿಂಹಾಸನವೆಂತಹುದು? ನೋಡಿ ಆನಂದಿಸಲು, ಹಾರೈಸಲು ಇವರ್ಯಾರು ಇರದಿರುವಾಗ ಯಾವ ಪುರುಷಾರ್ಥಕ್ಕಾಗಿ ಈ ಗೆಲವು, ವೈಭವ? ಶ್ರೀ ಕೃಷ್ಣ ನಸುನಗುತ್ತಾನೆಹೇ ಪಾರ್ಥ'', ನೀನು ತಪುö್ಪ ತಿಳಿದಿದ್ದೀಯಾ. ಎಲ್ಲವನ್ನೂ ನೀನೇ ಮಾಡುತ್ತಿದ್ದಿಯಾ ಎಂದು ಅಂದು ಕೊಂಡಿದ್ದೀಯಾ. ಅದಕ್ಕಾಗಿ ಈ ಎಲ್ಲ ದ್ವಂದ್ವ. ನೀನು ನೆಪ ಮಾತ್ರ. ಮಾಡಿಸುವವನು, ಆಡಿಸುವವನು ಎಲ್ಲವೂ ಭಗವಂತನೇ! ನೀನು ನಿನ್ನ ಕರ್ಮ ಮಾಡು, ಫಲವನ್ನು ಅವನಿಗೆ ಬಿಡು! ಇತ್ಯಾದಿ ಬೋಧನೆ ಮಾಡುತ್ತಾನೆ. ಇಂತಹ ಸಂದರ್ಭ ಜಗತ್ತಿನ ಯಾವುದೇ ದೇಶದ ಇತಿಹಾಸದಲ್ಲಿ ದೊರೆಯುವುದಿಲ್ಲ. ಅಲ್ಲಿಯವರೆಗೂ ಆತ್ಮೀಯ ಸಖನಾಗಿದ್ದ ಶ್ರೀ ಕೃಷ್ಣ ಈಗ ಅರ್ಜುನಿಗೆ ಗುರುವಾಗುತ್ತಾನೆ. ರಣರಂಗದ ಮಧ್ಯದಲ್ಲಿ ನಿಂತು ಭಗವಂತನು ಗೀತಾ ಬೋಧನೆ ಮಾಡುತ್ತಾನೆ. ತನ್ನ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಜೀವನ ದಿಗ್ದರ್ಶನ ಮಾಡಿಸುತ್ತಾನೆ. ಇದು ಗುರುವಿನ ಪಾತ್ರ. ಸಂಕಟ ಸಮಯದಲ್ಲಿ ಸ್ವಲ್ಪವೂ ವಿಚಲಿತನಾಗದೇ ಶಿಷ್ಯನ ದ್ವಂದ್ವಗಳನ್ನು, ಸಂಶಯ, ಪ್ರಶ್ನೆಗಳನ್ನು ಪರಿಹರಿಸಿ ಸ್ಥಿತ ಪ್ರಜ್ಞನಾಗಿ ಧರ್ಮಪಾಲನೆಗೆ ಪ್ರೇರಣೆಯನ್ನು ಕೊಡುವವನೇ ನೈಜ ಗುರು. ನಮಗಿಂದು ಇಂತಹ ಗುರುಗಳ ಅವಶ್ಯಕತೆ ಇದೆ.
ಮೌಲ್ಯಗಳನ್ನು ಮರೆತು ಸಂಬಂಧಗಳನ್ನು ಧಿಕ್ಕರಿಸಿ, ಸ್ವಾರ್ಥದ ತಾಂಡವ ನೃತ್ಯ ನಡೆಯುತ್ತಿರುವ ಇವತ್ತಿನ ದಿನಗಳಲ್ಲಿ ಗುರು-ಶಿಷ್ಯ ಸಂಬಂಧ, ಪರಂಪರೆ, ಸಂಸ್ಕೃತಿಗಳು ತೀರ ಅತ್ಯವಶ್ಯವಾಗಿದೆ. ಮಾನವೀಯ ಮೌಲ್ಯಗಳು ಅಧಃಪತನವಾದರೆ ಅದೆಷ್ಟೇ ಆರ್ಥಿಕ ಭದ್ರತೆಯಿದ್ದರೂ ಜಗಕ್ಕೆ ಉಳಿಗಾಲವಿಲ್ಲ. ಪರಸ್ಪರ ಬಡಿದಾಡಿಕೊಂಡು ತಮ್ಮ ನಾಶವನ್ನು ತಾವೇ ಮಾಡಿಕೊಳ್ಳುವ ಪರಿಸ್ಥಿತಿ ಅದು. ಕಾಲವಿನ್ನೂ ಮಿಂಚಿಲ್ಲ. ಸಮಾಜ ಜಾಗೃತವಾಗಬೇಕು. ಮೌಲ್ಯಗಳ ಪುನರ್ ಪ್ರತಿಷ್ಠಾಪನೆ ಆಗಬೇಕು. ಅದಕ್ಕಾಗಿ ಗುರುಗಳಾದವರು ಆದರ್ಶವಾಗಿ, ಅನುಕರಣೀಯವಾಗಿ ನಿಲ್ಲಬೇಕು. ಸಾಮಾಜಿಕ ವ್ಯವಸ್ಥೆ ಅದಕ್ಕೆ ಪೂರಕವಾಗಿ ನಿಲ್ಲಬೇಕು. ಗುರು ಕಲಿಸುವುದೆಲ್ಲವನ್ನೂ ಶ್ರದ್ಧೆ-ಭಕ್ತಿಗಳಿಂದ ಬಾಚಿಕೊಳ್ಳುವ ಪ್ರವೃತ್ತಿ ಶಿಷ್ಯರಲ್ಲಿರಬೇಕು. ಹೀಗೆ ಆದಾಗಲೆಲ್ಲ ಜಗತ್ತಿನಲ್ಲಿ ಪರಿವರ್ತನೆ ಆಗಿದೆ, ಆಗುತ್ತದೆ.