"ನಮ್ಮನ್ನು ಕ್ಷಮಿಸಿ" ಎಂದು ಆತ್ಮಹತ್ಯೆಗೆ ಶರಣಾದ ದಂಪತಿ
ಬಾಗಲಕೋಟೆ: ಫೈನಾನ್ಸ್‌ನವರ ಕಿರುಕುಳಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ.
ಮಲ್ಲಪ್ಪ ಲಾಳಿ(56) ಆತನ ಪತ್ನಿ ಮಹಾದೇವಿ(51) ಮೃತ ದಂಪತಿ ಎಂದು ಗುರುತಿಸಲಾಗಿದೆ. ಸಾಲ ಕೊಟ್ಟವರ ವಿಪರೀತ ಕಿರುಕುಳಕ್ಕೆ ಬೇಸತ್ತು ದಂಪತಿ ಮುಧೋಳ ನಗರದಲ್ಲಿರುವ ಯಾದವಾಡ ಬ್ರಿಡ್ಜ್ ಬಳಿ ನೇಣಿಗೆ ಶರಣಾಗಿದ್ದಾರೆ.
ಕಳೆದ 15 ವರ್ಷಗಳಿಂದ ಮೆಟಗುಡ್ಡ ಗ್ರಾಮದಲ್ಲಿ ವಾಸವಾಗಿದ್ದ ದಂಪತಿ ಅದೇ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು, ಫೈನಾನ್ಸ್ಗಳಲ್ಲಿ, ಖಾಸಗಿ ವ್ಯಕ್ತಿಗಳ ಬಳಿಯಲ್ಲಿ ಸಾಕಷ್ಟು ಸಾಲ ಮಾಡಿದ್ದರು. ಜೊತೆಗೆ ಇಬ್ಬರು ಹೆಣ್ಣು ಮಕ್ಕಳ ಮದುವೆಗಾಗಿಯೂ ಸಾಲ ಮಾಡಿದ್ದರು. ಈ ಎಲ್ಲಾ ಸಾಲಗಳಿಂದ ಬೇಸತ್ತಿದ್ದ ದಂಪತಿ, ಸಾಲ ತೀರಿಸಲಾಗದೆ ಪರದಾಡುತ್ತಿದ್ದರು. ಇದೇ ಕಾರಣಕ್ಕೆ ದಂಪತಿ ಬುಧವಾರ ರಾತ್ರಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಗೆ ಹಗ್ಗಕಟ್ಟಿ ನೇಣಿಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ದಂಪತಿ ಡೆತ್‌ನೋಟ್ ಬರೆದಿಟ್ಟಿದ್ದು ಮುಧೋಳ ಪೊಲೀಸರ ಕೈ ಸೇರಿದೆ. ಇದರಲ್ಲಿ ಸಾಲ ಕೊಟ್ಟು ಕಿರುಕುಳ ನೀಡಿದವರ ಹೆಸರುಗಳ ಮಾಹಿತಿ ನೀಡಿದ್ದಾರೆ. ಕೊನೆಗೆ ಮಕ್ಕಳಿಗೆ “ನಮ್ಮನ್ನು ಕ್ಷಮಿಸಿ” ಎಂದು ಬರೆದು ದಂಪತಿ ನೇಣಿಗೆ ಶರಣಾಗಿದ್ದಾರೆ. ಮುಧೋಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.