ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಮ್ಮೊಳಗಿನ ನಿರ್ಮಲತೆ ಸೌಖ್ಯವೇ?

04:00 AM Sep 03, 2024 IST | Samyukta Karnataka

ಆರೋಗ್ಯವೇ ಸುಖಕ್ಕೆ ವ್ಯಾಖ್ಯಾನ ಅರಿಯುವುದಾದರೂ ಹೇಗೆ? ಆಹಾರ ಸೇವನೆ ಬದುಕಿಗೆ ಅನಿವಾರ್ಯ! ಹಾಗೆ ಹೇಗೋ ಸೇವಿಸಿದ ಆಹಾರ ಜೀರ್ಣವಾಗಿ, ಸರಾಗವಾಗಿ ಹೀರಲ್ಪಟ್ಟು ದೇಹದ ಅಂಗಾಂಶಗಳಿಗೆ ಪರಿವರ್ತಿಸಿ, ಅನಗತ್ಯ ಅಂಶಗಳು ಮಲದ ರೂಪದಲ್ಲಿ ಜೀರ್ಣಕ್ರಿಯೆ ಉತ್ಪನ್ನವಾಗಿ ವಿಸರ್ಜಿಸಲ್ಪಡುವುದು ಅನಿವಾರ್ಯ. ಬರಿಗಣ್ಣಿಗೆ ಕಾಣದ ಶರೀರದ ನೈಸರ್ಗಿಕ ಕ್ರಿಯೆಗಳು ಜೀರ್ಣಾಂಗವ್ಯೂಹದ ಕಾರ್ಯಗಳು, ಜೀವಕೋಶಗಳ ಒಳಗಿನ ಕ್ರಿಯೆಗಳು ನಡೆಯುತ್ತಿವೆ ಎಂದು ಹಸಿವು, ಬಾಯಾರಿಕೆ, ಮಲ ವಿಸರ್ಜನೆಗಳಂತಹ ಸ್ಪಂದನೆಗಳ ಮೂಲಕ ಅರಿವಾಗುವುದು. ದೇಹವೇ ನೀಡುವ ಈ ಕರೆಗಂಟೆಗಳನ್ನು ಅರಿತರೆ ನಮ್ಮ ಆರೋಗ್ಯವು ನಮ್ಮ ಗಮನಕ್ಕೆ ಬರುತ್ತದೆ. ಹಾಗಾಗಿ ನಿತ್ಯವೂ ಮಲ ವಿಸರ್ಜನೆ ಮಾಡುವ ರೀತಿ ದೇಹದ ಆರೋಗ್ಯ ಮಾಪಕವಾಗಿದೆ ಎನ್ನಬಹುದು. ನಿಯಮಿತವಾಗಿ ಹಾಗೂ ಸುಲಲಿತವಾಗಿ ಮಲ ವಿಸರ್ಜನೆ ಆಗದಿದ್ದಲ್ಲಿ ಉಂಟಾಗುವ ಸಮಸ್ಯೆಯೇ ಮಲಬದ್ಧತೆ ಎಂದು ಕರೆಸಿಕೊಳ್ಳುತ್ತದೆ.
ಮಲಬದ್ಧತೆ ಕಳಪೆ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಉಂಟಾಗುವ ಸಮಸ್ಯೆ. ಇಂದಿನ ದಿನಗಳಲ್ಲಿ ಅನೇಕ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅನೇಕ ದೈಹಿಕ ಸಮಸ್ಯೆಗಳನ್ನು ಹೊಂದಲು ದೇಹದಲ್ಲಿ ನೀರಿನ ಕೊರತೆ, ದೈಹಿಕ ಪರಿಶ್ರಮದ ಕೊರತೆ, ಫೈಬರ್‌ಭರಿತ ಆಹಾರದ ಕೊರತೆ, ಅನಿಯಮಿತ ದಿನಚರಿಗಳು ಮಲಬದ್ಧತೆಗೆ ಹಲವು ಮುಖ್ಯ ಕಾರಣಗಳು. ಕರುಳಿನ ಸ್ನಾಯುಗಳು ಕ್ರಮೇಣ ಸೋಂಕಿಗೆ ಒಳಗಾದಾಗ ಇದು ಸಂಭವಿಸುವುದು. ಹಾಗಾಗಿ ದೇಹದಲ್ಲಿ ನೀರಿನ ಕೊರತೆ ಉಂಟಾಗಿ ಕರುಳಿನಲ್ಲಿ ಶೇಖರಣೆಯಾಗಿರುವ ಮಲವು ಒಣಗಲು ಪ್ರಾರಂಭವಾಗಿ ಮಲಬದ್ಧತೆ ಉಂಟಾಗುತ್ತದೆ.
ಇನ್ನು ಕೆಲವರಲ್ಲಿ ಹುಟ್ಟಿನಿಂದ ಸಮಸ್ಯೆ ಇಲ್ಲದಿದ್ದರೂ ನಂತರ ರೂಢಿಸಿಕೊಂಡ ಆಹಾರ, ನಿದ್ರೆ ಮತ್ತು ಚಟುವಟಿಕೆಗಳ ಪರಿಣಾಮ ಮಲಬದ್ಧತೆಯ ಸಮಸ್ಯೆ ಉಂಟಾಗುವ ಸಂಭವ ಹೆಚ್ಚು. ಮಲಬದ್ಧತೆ ಇದ್ದಾಗ ರೋಗಿಯು ಕಡಿಮೆ ಹಸಿವನ್ನು ಅನುಭವಿಸುತ್ತಾನೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಿಂದೆ ತಿಂದ ಆಹಾರವು ಜೀರ್ಣವಾಗದೇ ಇದ್ದಾಗ ಹೊಟ್ಟೆ ಯಾವಾಗಲೂ ಉಬ್ಬುತ್ತಲೇ ಇರುತ್ತದೆ ಮತ್ತು ಹೊಟ್ಟೆಯಲ್ಲಿ ಭಾರವಿರುತ್ತದೆ. ಇದರ ಹೊರತಾಗಿ ಬಾಯಿಯ ದುರ್ವಾಸನೆ, ತಲೆನೋವು, ಮಾನಸಿಕ ಚಡಪಡಿಕೆ, ದಣಿದ ಅನುಭವಗಳ ಲಕ್ಷಣಗಳು ಕಂಡುಬಂದರೆ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.
ಒಂದು ಅಂದಾಜಿನ ಸಮೀಕ್ಷೆ ಪ್ರಕಾರ ಶಿಶುಗಳಲ್ಲಿ ೦೩% ಮಧ್ಯ ವಯಸ್ಸು ೫೦ ದಾಟಿದ ನಂತರ ಶೇಕಡ ೫೦ ಮತ್ತು ೮೦ರ ಆಸುಪಾಸಿನಲ್ಲಿ ೯೦% ಜನ ಇದರಿಂದ ಬಳಲುವರು. ಇಂಥವರಲ್ಲಿ ತಾತ್ಕಾಲಿಕವಾಗಿ ಅಥವಾ ವಯೋಮಾನಕ್ಕೆ ಅನುಗುಣವಾಗಿ ಜೀರ್ಣಾಂಗವ್ಯೂಹದಲ್ಲಿ ಕ್ರಿಯೆ ಅಥವಾ ಪಚನ ವ್ಯವಸ್ಥೆಯ ರಚನೆಯಲ್ಲಿ ವ್ಯತ್ಯಾಸ ಕಾಣಬಹುದಾಗಿದೆ. ಇಂತಹ ವ್ಯತ್ಯಾಸವನ್ನು ವಾತದೋಶ ಎಂದು ಕರೆಯುತ್ತಾರೆ.
ನಿತ್ಯ ಬೆಳಗ್ಗೆ ಅಥವಾ ದಿನದ ಒಂದು ನಿರ್ದಿಷ್ಟ ಸಮಯದಲ್ಲಿ ಸಲೀಸಾಗಿ ಮಲವಿಸರ್ಜನೆ ಆಗದಿದ್ದರೆ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂದರ್ಥ. ಇಂಥವರಲ್ಲಿ ಮಲ ಗಟ್ಟಿಯಾಗಿದ್ದು ಮಲ ವಿಸರ್ಜನೆಯು ನೋವಿನಿಂದ ಕೂಡಿರುತ್ತದೆ, ಆ ವ್ಯಕ್ತಿಯು ಮಲಬದ್ಧತೆಯಿಂದ ಬಳಲುತ್ತಿದ್ದಾನೆ ಎಂದು ಗುರುತಿಸಬಹುದಾಗಿದೆ.
ಇದನ್ನು ತೀವ್ರ ಸ್ವರೂಪದ ಮಲಬದ್ಧತೆ (ಅಕ್ಯೂಟ್ ಕಾನ್ಸ್ಟಿಟಪೇಶನ್) ದೀರ್ಘಕಾಲದ ಮಲಬದ್ಧತೆ (ಕ್ರಾನಿಕ್ ಕಾನ್ಸ್ಟಿಟ್ಯೂಷನ್)ಎಂಬ ಎರಡು ವಿಧಗಳಲ್ಲಿ ವಿಂಗಡಿಸಿದ್ದಾರೆ.
ಸಾಮಾನ್ಯವಾಗಿ ಅನಿಯಮಿತ ಆಹಾರ ಸೇವನೆ ಅಥವಾ ಆಹಾರವನ್ನೇ ಸೇವಿಸದಿರುವುದು ಅಥವಾ ಹಸಿವನ್ನೇ ತಡೆದು ಮನ ಬಂದಾಗ ಸೇವಿಸುವ ಅಭ್ಯಾಸ. ಮಲ ವಿಸರ್ಜನೆಗೆ ದೇಹವು ಸಿದ್ಧವಾಗಿ ಸೂಚನೆ ನೀಡುತ್ತಿದ್ದರೂ ಕೆಲಸದ ಒತ್ತಡದಿಂದ ತಡೆಹಿಡಿಯುವುದು, ದೂರಸ್ಥಳ ಪ್ರಯಾಣ, ಮಾನಸಿಕ ಒತ್ತಡ ಇತ್ಯಾದಿ ಬಾಹ್ಯ ಕಾರಣಗಳಿಂದಾಗಿ ಹಾಗೂ ಬೇಕರಿ ತಿನಿಸುಗಳು, ಇಡ್ಲಿ, ದೋಸೆಗಳಂತಹ ಆಹಾರಗಳ ನಿತ್ಯ ಸೇವನೆಯಿಂದ, ಫೈಬರ್ ಅಥವಾ ನಾರಿನ ಅಂಶ ಕಡಿಮೆ ಇರುವ ಆಹಾರ ಸೇವನೆ, ತರಕಾರಿ, ಬೇಳೆ, ಸೊಪ್ಪುಗಳನ್ನು ತಿನ್ನದಿರುವುದು, ಅಗತ್ಯ ಜಿಡ್ಡುರಹಿತ ಆಹಾರ ಸೇವನೆ, ಎಣ್ಣೆ, ಮಾಂಸಗಳಂತಹ ಜಿಡ್ಡು ಆಹಾರ ಸೇವನೆಯ ಅಭ್ಯಾಸ, ದೈಹಿಕ ಚಟುವಟಿಕೆಯ ಕೊರತೆ, ಸದಾ ಕುಳಿತೇ ಇರುವ, ವಾಹನ ಚಲಾಯಿಸುವ ಅಥವಾ ಬಸ್, ಲಾರಿಗಳಂತಹ ವಾಹನಗಳಲ್ಲಿ ಚಲಿಸುವ ಜೀವನಶೈಲಿ, ಕೆಲವು ಔಷಧಿಗಳ ಸೇವನೆ ಮಲಬದ್ಧತೆಯನ್ನು ಉಂಟುಮಾಡುತ್ತವೆ.
ಗರ್ಭಿಣಿ, ಬಾಣಂತಿಯರು, ಶಿಶುಗಳಲ್ಲಿ ಮಲಬದ್ಧತೆ ಬಹು ಬೇಗನೆ ಉಂಟಾಗುತ್ತದೆ. ಗರ್ಭಾಶಯ ಹೊಟ್ಟೆ ಕೆಳಭಾಗದಲ್ಲಿ ದೊಡ್ಡ ಮತ್ತು ಸಣ್ಣ ಕರುಳಿನ ನಡುವೆ ಬಿಗಿಯಾಗಿ ಪ್ಯಾಕ್ ಆಗಿರುತ್ತದೆ, ಗರ್ಭಾಶಯದ ತೂಕ ಮತ್ತು ಗಾತ್ರ ಹೆಚ್ಚಿದಂತೆ ಬಾಹ್ಯ ಒತ್ತಡವು ಎಲ್ಲಾ ಕಡೆಯಿಂದಲೂ ಕರುಳು ಮತ್ತು ಹೊಟ್ಟೆಯನ್ನು ಸಂಕುಚಿತಗೊಳಿಸುತ್ತದೆ, ಜೀರ್ಣಕ್ರಿಯೆಯಲ್ಲಿ ಅಸಮತೋಲನ ಉಂಟು ಮಾಡುತ್ತದೆ. ಅಂಗಾಂಗಗಳ ಹಿಗ್ಗುವಿಕೆ-ಕುಗ್ಗುವಿಕೆಗೆ ಸಹಾಯಕವಾದ ಜಿಡ್ಡಿನಂತಹ ಮೃದುತ್ವದ ಅಭಾವ. ತುಪ್ಪ ಹಾಲಿನಂತಹ ಅಗತ್ಯ ಜಿಡ್ಡು ಹಿಂದಿಗಿಂತಲೂ ಹೆಚ್ಚು ದೇಹಕ್ಕೆ ಅಗತ್ಯವಿರುತ್ತದೆ. ಅದು ಸಮರ್ಪಕವಾಗಿ ಪೂರೈಕೆಯಾಗದಿದ್ದಾಗ ಮಲಬದ್ಧತೆ ಸಾಮಾನ್ಯ. ಬಾಣಂತಿಗೆ ದೇಹವನ್ನು ಒಣಗಿಸಲೆಂದು ಹಾಲು, ತುಪ್ಪ, ಎಣ್ಣೆಯಂತಹ ಜಿಡ್ಡು ಸೇರಿಸದೆ ವಿಪರೀತವಾಗಿ ಕಾಳುಮೆಣಸು, ಜೀರಿಗೆ, ಕಾಫಿ, ಬ್ರೆಡ್ ಇಂತಹ ಒಣ ಉಷ್ಣಾಂಶಗಳನ್ನು ನೀಡುವುದರಿಂದ ಮಲಬದ್ಧತೆ ಕಾಣಿಸುತ್ತದೆ. ಶಿಶುವಿಗೆ ಹಾಲುಣಿಸುವ ತಾಯಂದಿರು ಎದೆ ಹಾಲಿನಲ್ಲಿ ಇರಲೇಬೇಕಾದ ಮುಖ್ಯ ಅಂಶ ಲಿಪಿಡ್. ಇದರ ಪೂರೈಕೆ ತಾಯಿ ಸೇವಿಸುವ ಆಹಾರದಿಂದಲೇ ಆಗಬೇಕು, ಆಗದಿದ್ದಲ್ಲಿ ಶಿಶುವಿನ ಕರುಳಿನಕ್ರಿಯೆ ವ್ಯತ್ಯಾಸವಾಗಿ ಮಲಬದ್ಧತೆ ಕಾಡುತ್ತದೆ.
ಅಕಾಲ, ಅನಿಯಮಿತ, ಕಷ್ಟಕರವಾದ ಮಲ ವಿಸರ್ಜನೆ. ಹೊಟ್ಟೆಯುಬ್ಬರ, ತಲೆನೋವು, ವಾಕರಿಕೆ ಮತ್ತು ವಾಂತಿ, ಕಿಬ್ಬೊಟ್ಟೆ ನೋವು ಮತ್ತು ಅಸ್ವಸ್ಥತೆ, ಹಸಿವಾಗದಿರುವುದು, ಕಾಲಿನ ಮೀನಖಂಡಗಳ ಸೆಳೆತ, ಕಣ್ಣಿನ ದೃಷ್ಟಿ ಶಕ್ತಿ ಕುಂದುವುದು, ಸೊಂಟ, ಮಂಡಿ ಸಂಧಿಗಳಲ್ಲಿ ನೋವುಗಳು ಮಲಬದ್ಧತೆ ಲಕ್ಷಣಗಳಾಗಿವೆ.

ಆಹಾರ ಹಾಗೂ ಮನೆಮದ್ದುಗಳು
ಸೇಬು, ಕಿತ್ತಲೆ, ಅಂಜೂರ, ಬಾಳೆಹಣ್ಣು, ಪಪ್ಪಾಯಿ, ಕ್ಯಾರೆಟ್,ಬೀಟ್ರೂಟ್, ಸುವರ್ಣಗಡ್ಡೆ ಮತ್ತು ಬೀನ್ಸ್ ಅಂತ ತರಕಾರಿಗಳು ಹಾಗೂ ಹಣ್ಣುಗಳು ಉತ್ತಮ. ಜವೆಗೋಧಿಯಂತಹ ಏಕದಳಧಾನ್ಯಗಳು ಮಲಬದ್ಧತೆ ಇದ್ದಾಗ ಉಪಯುಕ್ತ. ಹಸಿ ಒಣದ್ರಾಕ್ಷಿ, ಅಂಜೂರ, ದಾಳಿಂಬೆಯನ್ನು ಬೀಜರಹಿತವಾಗಿ ತಿನ್ನುವುದರಿಂದ ಕರುಳಿನ ಕಾರ್ಯವು ಸಲೀಸಾಗುವುದಲ್ಲದೆ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ. ರಾಗಿ-ಅಕ್ಕಿ ಮುದ್ದೆ ತಯಾರಿಸುವ ಸಂದರ್ಭ, ಅನ್ನ ಬೇಯುವಾಗ, ಚಪಾತಿ ಹಿಟ್ಟಿನ ದೋಸೆ ಮಾಡುವಾಗ ಒಂದೆರಡು ಚಮಚ ಹರಳೆಣ್ಣೆ ಸೇರಿಸುವುದು ಸಹ ಸುಲಭದ ಪರಿಹಾರ.

ನೆನಪಿಡಬೇಕಾದ ಅಂಶ
ಬಾಯಾರಿಕೆ ಆದಾಗ ದ್ರವ ಸೇವನೆ ಮಾಡುವುದನ್ನು ಮರೆಯಬಾರದು. ಕನಿಷ್ಠ ಪಕ್ಷ ದಿನಾಲೂ ಮೂರು ಹೊತ್ತಿನ ಆಹಾರ ಸೇವನೆ ಸಂದರ್ಭ ಕಾಯಿಸಿದ ಬೆಚ್ಚಗಿನ ನೀರನ್ನು ಕುಡಿಯುವುದು. ದಿನನಿತ್ಯ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸಿ ಮತ್ತು ಪ್ರತಿನಿತ್ಯ ನಿಯಮಿತ ವ್ಯಾಯಾಮ ಮಾಡುವುದು. ನಾವು ತಿನ್ನುವ ಆಹಾರವನ್ನು ಚೆನ್ನಾಗಿ ಜಗಿದು ನಿಧಾನವಾಗಿ ಸೇವಿಸುವುದು. ಮಲ ವಿಸರ್ಜನೆಯ ದೈಹಿಕ ಕರೆ ಬಂದಾಗ ಕೂಡಲೇ ಮಲವಿಸರ್ಜನೆ ಮಾಡುವುದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಲದಲ್ಲಿ ರಕ್ತ ಕಾಣಿಸಿಕೊಂಡರೆ, ದೇಹ ತೂಕವು ಕಡಿಮೆಯಾಗುತ್ತಿದ್ದರೆ, ಮಲವಿಸರ್ಜನೆ ಮಾಡುವಾಗ ವಿಪರೀತ ನೋವು ಕಂಡುಬಂದಲ್ಲಿ, ವಾರಗಳಾದರೂ ನಿಯಮಿತವಾಗಿ ಮಲವಿಸರ್ಜನೆ ಆಗದಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಮಲಬದ್ಧತೆಯನ್ನು ನಿವಾರಿಸಲು
ಜೇನುತುಪ್ಪವು ಮಲಬದ್ಧತೆಗೆ ಅತ್ಯುತ್ತಮ ಔಷಧವಾಗಿದೆ, ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸುವುದು. ರಾತ್ರಿ ಆರೇಳು ಒಣದ್ರಾಕ್ಷಿಗಳನ್ನು ನೆನೆಸಿ ಮತ್ತು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನುವುದರಿಂದ ಮಲಬದ್ಧತೆ ಗುಣವಾಗುತ್ತದೆ. ಜೀರಿಗೆಯನ್ನು ಹುರಿದು ಪುಡಿ ಮಾಡಿ ಬಿಸಿನೀರಿನಲ್ಲಿ ಹಾಕಿ ಕುಡಿಯುವುದರಿಂದ ಮಲಬದ್ಧತೆ ಕಡಿಮೆಯಾಗುವುದು. ನಾವು ಬಳಸುವ ಆಹಾರದಲ್ಲಿ ಹೆಚ್ಚು ಶುಂಠಿ, ಬೆಳ್ಳುಳ್ಳಿ ಹಾಕುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಿಸುವ ಆಹಾರಗಳಾದ ಸಂಸ್ಕರಿಸಿದ ಧಾನ್ಯಗಳು, ಸಿಹಿ ಮಿಠಾಯಿ, ಕೇಕ್ ಮತ್ತು ಬಿಸ್ಕೆಟ್‌ಗಳ ಸೇವನೆ ಕಡಿಮೆಗೊಳಿಸುವುದು ಒಳಿತು.

Next Article