For the best experience, open
https://m.samyuktakarnataka.in
on your mobile browser.

‘ಅಶ್ವಮೇಧ’ ಬಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ: ಮಹಿಳೆಯರಿಗೆ ಉಚಿತ ಪ್ರಯಾಣ

12:20 PM Feb 05, 2024 IST | Samyukta Karnataka
‘ಅಶ್ವಮೇಧ’ ಬಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ  ಮಹಿಳೆಯರಿಗೆ ಉಚಿತ ಪ್ರಯಾಣ

ಬೆಂಗಳೂರು: ಈ ರಾಜ್ಯದ ಜನರಿಗೆ ಸುರಕ್ಷಿತ ಮತ್ತು ಸರಾಗ ಪ್ರಯಾಣ ಮಾಡಲು ಅಗತ್ಯ ಅನುಕೂಲಗಳನ್ನು ಮಾಡಿಕೊಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ 100 ಹೊಸ ವಿನ್ಯಾಸದ ಅಶ್ವಮೇಧ ಬಸ್‌ಗಳನ್ನು ಲೋಕಾರ್ಪಣೆ ಮಾಡಿ, ಮಾತನಾಡಿರುವ ಅವರು ಶಕ್ತಿ ಯೋಜನೆಯಡಿ 146 ಕೋಟಿ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಉಚಿತವಾಗಿ ಪ್ರಯಾಣ ಮಾಡಿದ್ದು, ಮಹಿಳಾ ಸಬಲೀಕರಣಕ್ಕೆ ಶಕ್ತಿ ಯೋಜನೆ ಪೂರಕವಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಈ ವರ್ಷ ಒಂದು ಸಾವಿರ ಬಸ್ಸುಗಳನ್ನು ಸೇರ್ಪಡೆ ಮಾಡುತ್ತಿದ್ದು, ಇಂದು ನೂರು ಬಸ್ಸುಗಳ ಬಿಡುಗಡೆಯಾಗಿದೆ. ರಾಜ್ಯದ ಜನರಿಗೆ 4 ಕಾರ್ಪೋರೇಷನ್‍ಗಳು ಬಸ್ಸುಗಳ ಸೇವೆಯನ್ನು ಒದಗಿಸುತ್ತಿದೆ. ನಾಲ್ಕು ವರ್ಷಗಳಿಂದ ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಕೆಲವು 3,800 ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಸಂಸ್ಥೆಗೆ 5,800 ಬಸ್ಸುಗಳನ್ನು ಸೇರ್ಪಡೆ ಮಾಡುತ್ತಿದ್ದೇವೆ. ಈ ರಾಜ್ಯದ ಜನರಿಗೆ ಸುರಕ್ಷಿತ ಮತ್ತು ಸರಾಗ ಪ್ರಯಾಣ ಮಾಡಲು ಅಗತ್ಯ ಅನುಕೂಲಗಳನ್ನು ಮಾಡಿಕೊಡಲಿದ್ದೇವೆ.

ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯವನ್ನು 1 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಕರ್ತವ್ಯದ ವೇಳೆ ಮೃತಪಟ್ಟ ಸಿಬ್ಬಂದಿಗಳ ಪರಿಹಾರ ಮೊತ್ತವನ್ನು 3 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

ಚುನಾವಣಾ ಪೂರ್ವದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕ.ರಾ.ರ.ಸಾ.ಸಂ ಮತ್ತು ಇತರೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸುತ್ತೇವೆ ಎಂದು ಹೇಳಿದ್ದೆವು. ಬೆಲೆಯೇರಿಕೆ, ಹಣದುಬ್ಬರ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಪರಿಸ್ಥಿತಿಯಲ್ಲಿ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿದ್ದೇವೆ.

ಎಲ್ಲ ಜಾತಿ ಧರ್ಮಗಳ ಬಡವರಿಗೆ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲ ಮಹಿಳೆಯರಿಗೂ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. ಹಿಂದೆ ಯಾವ ಸರ್ಕಾರದವರು ಇಂತಹ ಪ್ರಯತ್ನ ಕೈಗೊಂಡಿರಲಿಲ್ಲ.

ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಪ್ರದಾನಿ ಮೋದಿಯವರೂ ರಾಜ್ಯ ದಿವಾಳಿಯಾಗುತ್ತದೆ ಎಂದರು. ತಾವು 10 ವರ್ಷದಿಂದ ಅಧಿಕಾರದಲ್ಲಿದ್ದರೂ ಇಂತಹ ಗ್ಯಾರಂಟಿಗಳನ್ನು ಜನಗರಿಗೆ ನೀಡಲಿಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದರೆ ಭಾರತದ ಪ್ರತಿ ಕುಟುಂಬಕ್ಕೂ 15 ಲಕ್ಷ ನೀಡುವ, ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ಆದರೆ ಈ ಯಾವುದೇ ಭರವಸೆಗಳನ್ನು ಅವರು ಈಡೇರಿಸದ ಪ್ರಧಾನಿ ಮೋದಿಯವರು ಈಗ ಮೋದಿ ಗ್ಯಾರಂಟಿ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರ ಸುಳ್ಳುಗಳಿಗೆ ಜನರು ಮರುಳಾಗಬಾರದು ಎಂದರು.