ಕನ್ನಡ ನಾಡಿಗೆ ಶ್ರೀ ವ್ಯಾಸರಾಜರ ಕೊಡುಗೆ ಅನನ್ಯ
ಮೈಸೂರು: ವಿಜಯನಗರ ಸಾಮ್ರಾಜ್ಯವನನ್ನು ಸಮರ್ಥವಾಗಿ ಆಳುವುದರೊಂದಿಗೆ ಆರು ನೂರು ವರ್ಷಗಳ ಹಿಂದೆ ಹಿಂದು ಸಮಾಜವನ್ನು ಒಗ್ಗೂಡಿಸಿ ಮುನ್ನಡೆಸುವಲ್ಲಿ ಶ್ರೀ ವ್ಯಾಸರಾಜ ಸ್ವಾಮಿಗಳ ಪಾತ್ರ ಅನನ್ಯವಾಗಿದೆ ಎಂದು ಶ್ರೀ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಹೇಳಿದರು.
ಜೆ.ಪಿ.ನಗರದ ಶ್ರೀ ವಿಠಲಧಾಮದ ಆವರಣದಲ್ಲಿ ಸೋಸಲೆ ಶ್ರೀ ವ್ಯಾಸರಾಜಮಠ, ಶ್ರೀವ್ಯಾಸತೀರ್ಥ ವಿದ್ಯಾ ಪೀಠದ ವತಿಯಿಂದ ಹಮ್ಮಿಕೊಂಡಿರುವ ಶ್ರೀಮನ್ ನ್ಯಾಯಸುಧಾಮಂಗಳ ಮಹೋತ್ಸವ, ಯತಿ ಸಮಾವೇಶ ಮತ್ತು ಶ್ರೀ ವಿದ್ಯಾಶ್ರೀಶ ತೀರ್ಥರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ವಿವಿಧ ನದಿಗಳ ಪವಿತ್ರ ಜಲಗಳ ಅಭಿಷೇಕ ಮತ್ತು ಮುತ್ತು ರತ್ನಗಳ ಅಭಿಷೇಕ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ವಿಜಯನಗರದ ಮಹಾ ಸಾಮ್ರಾಟ ಕೃಷ್ಣದೇವರಾಜನಿಗೆ ಕುಜಯೋಗ ಬಂದಾಗ ತಾವೇ ಸಿಂಹಾಸನದಲ್ಲಿ ಕುಳಿತು ರಾಜ್ಯಭಾರ ಮಾಡಿದ ಏಕೈಕ ಯತಿ ಶ್ರೀ ವ್ಯಾಸರಾಜರು ಧಾರ್ಮಿಕ ರಂಗದೊಂದಿಗೆ ನಾಡಿಗೂ ಅಪಾರವಾದ ಸೇವೆಯನ್ನೂ ಮಾಡಿದ್ದಾರೆ. ಹಾಗಾಗಿ ಪ್ರತಿಯೊಬ್ಬ ಕನ್ನಡಿಗರೂ ವ್ಯಾಸರಾಜರ ಸ್ಮರಣೆ ಮಾಡಲೇಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅದನ್ನು ಪಾಲಿಸಬೇಕು. ವ್ಯಾಸರಾಜರ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸೋದೆ ಶ್ರೀಗಳು ಸಲಹೆ ನೀಡಿದರು.
ಭ್ರಮೆಯಲ್ಲಿ ಬದುಕಬೇಡಿ:
ಆಧುನಿಕ ಕಾಲದಲ್ಲಿ ಬುದ್ಧಿವಂತಿಕೆಯ ಭ್ರಮೆಯನ್ನು ಹೊಂದಿದ್ದೇವೆ. ಧರ್ಮದ ಶ್ರದ್ಧೆ ಕೊರತೆ ಕಾಣುತ್ತಿದ್ದೇವೆ. ನಾನು, ನನ್ನದು ಎನ್ನುವ ಮೂಲಕ ಧರ್ಮದ ಹಾದಿಯಲ್ಲಿ ಸಾಗದೆ ಅವನತಿ ಹೊಂದುತ್ತಿದ್ದೇವೆ. ಅತಿ ಬುದ್ಧಿವಂತಿಕೆ ದೊಡ್ಡ ಅಪಾಯ ಎಂದು ಅವರು ಕಿವಿಮಾತು ಹೇಳಿದರು.
ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಭಾರತೀಯರ ಕಣ ಕಣ ದಲ್ಲೂ ದೇವರು ಇದ್ದಾನೆ. ಭಗವಂತ ಮತ್ತು ಜನರ ನಡುವೆ ದೊಡ್ಡ ನಂಬಿಕೆ ಇದೆ. ಎಲ್ಲರೂ ನಮ್ಮವರೇ ಎಂದು ಭಾವಿಸಿದರೆ ದೇಶ ಪ್ರಗತಿಯತ್ತ ಸಾಗುತ್ತದೆ. ನಂಬಿಕೆ ಇದ್ದರೆ ದೇವರು ಒಲಿಯುತ್ತಾನೆ ಎಂದರು. ಹಂಪಿಯ (ವಿಜಯನಗರ ಸಾಮ್ರಾಜ್ಯದ) ಸುವರ್ಣ ಯುಗವನ್ನು ಜ್ಞಾಪಿಸುವ ರೀತಿಯಲ್ಲಿ ವ್ಯಾಸರಾಜ ಮಠ ಸೇವಾ, ಸಾಧನೆ ಮಾಡುತ್ತಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ವಿವಿಧ ಮಠಾಧೀಶರು ಸಾಕ್ಷಿ:
ಸೋಸಲೆ ಶ್ರೀಗಳ ಸಹಸ್ರ ಚಂದ್ರದರ್ಶನ ಶಾಂತಿ ಕಾರ್ಯಕ್ರಮ ಮತ್ತು ಮುತ್ತು ರತ್ನಗಳ ಅಭಿಷೇಕಕ್ಕೆ ಮಂತ್ರಾಲಯ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರತೀರ್ಥರು, ಮುಳಬಾಗಿಲು ಮಠದ ಶ್ರೀ ಸುಜಯನಿಧಿ ತೀರ್ಥರು, ಬಾಳಗಾರು ಕಿರಿಯ ಶ್ರೀ ರಾಮಪ್ರಿಯ ತೀರ್ಥರು, ಕಣ್ವಮಠದ ಶ್ರೀ ವಿದ್ಯಾಕಣ್ವವಿರಾಜ ತೀರ್ಥರು, ಶ್ರೀ ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥರು, ಶ್ರೀಕಾಗಿನೆಲೆ ನಿರಂಜನಾಪುರಿ ಸ್ವಾಮೀಜಿ, ಪರಕಾಲಮಠದ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿ, ಅವಧೂತ ದತ್ತಪೀಠದ ಶ್ರೀದತ್ತ ವಿಜಯಾನಂದತೀರ್ಥರು, ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ, ತಿರುಪತಿ ತಿರುಮಲ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಧರ್ಮಾರೆಡ್ಡಿ, ಶ್ರೀ ವ್ಯಾಸರಾಜಮಠ ಸಲಹಾ ಸಮಿತಿ ಅಧ್ಯಕ್ಷ ಕೆ.ಜಯರಾಜ್, ಆಡಳಿತಾಧಿಕಾರಿ ಸಿ.ಎಸ್. ಸುರಂಜನ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಇತರರು ಇದ್ದರು.
ಪ್ರಸಾದ ಪ್ರದಾನ:
ಇದೇ ಸಂದರ್ಭ ದೇಶದ ವಿವಿಧ ಪುಣ್ಯ ಕ್ಷೇತ್ರದ ಪ್ರಸಾದ ಮತ್ತು ದೇವರ ವಸ್ತ್ರಗಳನ್ನು ಸೋಸಲೆ ಶ್ರೀಗಳಿಗೆ ಸಮರ್ಪಿಸಲಾಯಿತು. ತಿರುಮಲ ತಿರುಪತಿ, ಕಂಚಿ, ಪಂಢರಾಪುರ, ಶ್ರೀಮುಷ್ಣಂನಿಂದ ಆಗಮಿಸಿದ್ದ ಪ್ರಧಾನ ಅರ್ಚಕರು ಆಯಾ ಸನ್ನಿಧಿಗಳ ಪ್ರಸಾದ ನೀಡಿ ಧನ್ಯತೆ ಮೆರೆದರು.
ಸಾಂಪ್ರದಾಯಿಕ ದರ್ಬಾರ್: ಭವ್ಯ ರಜತ ಸಿಂಹಾಸನದಲ್ಲಿ ಶ್ರೀ ವ್ಯಾಸರಾಜರಿಗೆ ಭಾನುವಾರ ಸಂಜೆ ಸಾಂಪ್ರದಾಯಿಕ ದರ್ಬಾರ್ ನಡೆಸಲಾ ಯಿತು. ಆಕರ್ಷಕ ಸಿಂಹಾಸನದಲ್ಲಿ ಪ್ರತಿಷ್ಠಾಪಿಸಿದ್ದ ಶ್ರಿವ್ಯಾಸರಾಜರ ಮೂರ್ತಿಗೆ ವಿಶೇಷ ಅಲಂಕಾರ ವಾಡಿ ದರ್ಬಾರ್ ನಡೆಸಿದ್ದು ಗಮನ ಸೆಳೆಯಿತು. ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿ ಆದರು.
ಪ್ರಶಸ್ತಿ ಪ್ರದಾನ : ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಡಾ.ಶ್ರೀನಿವಾಸ ವರಖೇಡಿ, ಪೇಜಾವರ ಶ್ರೀಧಾಮದ ನಿರ್ವಾಹಕ ಎಚ್.ಎಂ.ಗುರುನಾಥ್, ದಾಸ ಸಾಹಿತ್ಯ ಸಂಶೋಧಕಿ ಟಿ.ಎಸ್. ನಾಗರತ್ನ ಅವರಿಗೆ ಸೋಸಲೆ ಮಠದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.