ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಿಮ್ಮ ಬದುಕಿನ ಪರವಾಗಿ ಇರುವವರನ್ನು ಬೆಂಬಲಿಸಿ

08:37 AM Mar 06, 2024 IST | Samyukta Karnataka

ಬನವಾಸಿ: ನಿಮ್ಮ ಭಾವನೆಗಳನ್ನು ಕೆರಳಿಸಿ ನಿಮ್ಮ ನಂಬಿಕೆಗಳ ಜತೆ ಚೆಲ್ಲಾಟ ಆಡುವವರನ್ನು ತಿರಸ್ಕರಿಸಿ, ನಿಮ್ಮ ಬದುಕಿನ ಪರವಾಗಿ ಇರುವವರನ್ನು ಬೆಂಬಲಿಸಿ ರಾಜಕೀಯ ಪ್ರಜ್ಞಾವಂತಿಕೆ ಪಾಲಿಸಬೇಕು ಎಂದು ಕರೆ ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಬನವಾಸಿಯ ಐತಿಹಾಸಿಕ ಕದಂಬೋತ್ಸವವನ್ನು ಉದ್ಘಾಟಿಸಿ ಮಾತನಾಡಿರುವ ಅವರು ದ್ವೇಷದ ಬೀಜ ಬಿತ್ತಿ ಮನುಷ್ಯರ ನಡುವೆ ವೈಷಮ್ಯ ಹರಡಿ ಸಮಾಜವನ್ನು ಛಿದ್ರಗೊಳಿಸುವವರ ಬಗ್ಗೆ ಎಚ್ಚರದಿಂದಿರಿ. ನಮ್ಮದು ಬಸವಾದಿ ಶರಣರ, ಸೂಫಿ-ಸಂತರ, ಬುದ್ಧ, ಗಾಂಧಿಯ ನಾಡು. ಆದಿಕವಿ ಪಂಪ "ಮನುಷ್ಯ ಜಾತಿ ತಾನೊಂದೆ ವಲಂ" ಎಂಬ ಮೌಲ್ಯವನ್ನು ಜಗತ್ತಿಗೆ ಸಾರಿದ್ದಾರೆ. ಇದು ನಮ್ಮ ನಾಡಿನ ಸಂಸ್ಕೃತಿ, ಕನ್ನಡ ಸಂಸ್ಕೃತಿಯ ಚಾಲಕ ಶಕ್ತಿ.
ಜಾತಿ, ಧರ್ಮದ ಭಾವನೆಗಳನ್ನು ಕೆಣಕಿ ರಾಜಕಾರಣ ಮಾಡಿದರೆ ನಿಮ್ಮ ಬದುಕು ಸುಧಾರಿಸುತ್ತದಾ? ನಾವು ನಿಮ್ಮ ನಂಬಿಕೆ ಮತ್ತು ಭಾವನೆಗಳನ್ನು ಕೆಣಕುವುದಿಲ್ಲ - ಆದರೆ ಜನರ ಬದುಕು ರೂಪಿಸಲು ಕಾರ್ಯಕ್ರಮಗಳನ್ನು ರೂಪಿಸುತ್ತೇವೆ.
ಇವನಾರವ ಎನ್ನದೆ, ಇವ ನಮ್ಮವ ಎನ್ನುವ ಮೌಲ್ಯದಲ್ಲಿ ಸರ್ಕಾರದ ಕಾರ್ಯಕ್ರಮ ರೂಪಿಸುತ್ತೇವೆ.
ಇವತ್ತಿನ ಸಂಸತ್ತು ಮತ್ತು ವಿಧಾನಸಭೆಯ ಮಾದರಿಯನ್ನು 12ನೇ ಶತಮಾನದಲ್ಲೇ ಅನುಭವ ಮಂಟಪ ದ ಮೂಲಕ ವಿಶ್ವಕ್ಕೆ ಬಸವಾದಿ ಶರಣರು ನೀಡಿದ್ದಾರೆ.
ನಾಡಿನ ಇಂದಿನ ಯುವ ಪೀಳಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸ ಮತ್ತು ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಕನ್ನಡ ಸಂಸ್ಕೃತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಜತೆಗೆ ನಮ್ಮ ಚಾರಿತ್ರಿಕ ಜನ ಜೀವನ ಮತ್ತು ಸಮ ಸಮಾಜದ ಸಾಮಾಜಿಕ ವ್ಯವಸ್ಥೆಯನ್ನು ಅರಿತುಕೊಳ್ಳಲು ಸಾಧ್ಯ.
ನಾವು ನುಡಿದಂತೆ ನಡೆದಿದ್ದೇವೆ. ಆ ಮೂಲಕ ಜನರ ಆಯ್ಕೆಗೆ, ಜನರ ಮತಕ್ಕೆ ಗೌರವ ಕೊಟ್ಟಿದ್ದೇವೆ. ನಮ್ಮ ಸರ್ಕಾರಕ್ಕೆ ನುಡಿದಂತೆ ನಡೆದ ಬಸವಾದಿ ಶರಣರು ಮತ್ತು ಅಂಬೇಡ್ಕರ್, ಬುದ್ಧ ಮತ್ತು ಮಹಾತ್ಮ ಗಾಂಧಿ ಮಾರ್ಗದರ್ಶಕರು. ಹೀಗಾಗಿ ಮೊದಲ ಬಾರಿ ಮುಖ್ಯಮಂತ್ರಿಯಾಗಿ ನಾವು ಕೊಟ್ಟ ಭರವಸೆಗಳಲ್ಲಿ ಶೇ 99 ರಷ್ಟನ್ನು ಜಾರಿ ಮಾಡಿದ್ದೆ. 2023 ರಲ್ಲಿ ಗೆದ್ದ ಬಳಿಕವೂ ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಈಡೇರಿಸಿ ಎಂಟೇ ತಿಂಗಳಲ್ಲಿ ಐದೂ ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸಿದ್ದೇವೆ.
ಅಧಿಕಾರ ಮತ್ತು ಸಮಾಜದ ಸಂಪತ್ತು ಕೆಲವರ ಕೈಯಲ್ಲೇ ಕೇಂದ್ರೀಕೃತ ಆಗಬಾರದು ಎನ್ನುವ ಎಲ್ಲಾ ಸಮಾಜ ಸುಧಾರಕರ ಆಶಯದಂತೆ ನಾವು ಗ್ಯಾರಂಟಿ ಕಾರ್ಯಕ್ರಮಗಳನ್ನು ರೂಪಿಸಿ ಅತ್ಯಂತ ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಇದಕ್ಕಾಗಿ 59,000 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಗ್ಯಾರಂಟಿ ಹೊರತಾದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 1,20,000 ಕೋಟಿ ಖರ್ಚು ಮಾಡುತ್ತಿದ್ದೇವೆ.
ಶಕ್ತಿ ಯೋಜನೆಯಿಂದ ರೂ.94.57 ಕೋಟಿ, ಗೃಹ ಲಕ್ಷ್ಮಿ ಯೋಜನೆಯಿಂದಾಗಿ 394.4 ಕೋಟಿ ರೂಪಾಯಿ, ಅನ್ನಭಾಗ್ಯ ಯೋಜನೆಯಡಿ 112.04 ಕೋಟಿ ರೂಪಾಯಿ, ಗೃಹ ಜ್ಯೋತಿ ಯೋಜನೆಯಡಿ 100.30 ಕೋಟಿ ರೂಪಾಯಿಯನ್ನು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ನೇರವಾಗಿ ನೀಡಲಾಗಿದೆ.
ನಮ್ಮ ಈ ಗ್ಯಾರಂಟಿಗಳನ್ನು ಅವಹೇಳನ ಮಾಡುತ್ತಿದ್ದ ಬಿಜೆಪಿಯವರೇ ಒಂದು ಕಡೆ ನಾಲ್ಕೂವರೆ ಕೋಟಿ ಕನ್ನಡ ನಾಡಿನ ಫಲಾನುಭವಿಗಳನ್ನು ಅವಮಾನಿಸುತ್ತಿದ್ದಾರೆ. ಮತ್ತೊಂದು ಕಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ, ಮೋದಿ ಗ್ಯಾರಂಟಿ ಎಂದು ಹೆಸರಿಟ್ಟು ಪ್ರಚಾರ ಪಡೆಯುತ್ತಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ, ರಾಜ್ಯದ ಜನರ ತೆರಿಗೆ ಹಣಕ್ಕೆ ಮಾಡುತ್ತಿರುವ ಅನ್ಯಾಯ, ವಂಚನೆಯನ್ನು ಪ್ರಶ್ನಿಸದ ಸಂಸದರು ಮತ್ತು ಬಿಜೆಪಿ ನಾಯಕರು 7 ಕೋಟಿ ಕನ್ನಡಿಗರ ವಿರೋಧಿಗಳು.
ಐದು ವರ್ಷದಿಂದ ಬಿಲ ಸೇರಿದ್ದ ಅನಂತ್ ಕುಮಾರ್ ಹೆಗ್ಡೆ ಈಗ ಬಿಲದಿಂದ ಹೊರಗೆ ಬಂದು ವಿಕೃತವಾಗಿ ಮಾತನಾಡುತ್ತಾ ಅವರ ಸಂಸ್ಕೃತಿ ತೋರಿಸುತ್ತಿದ್ದಾರೆ. ಇವತ್ತಿನವರೆಗೂ ಸಂಸತ್ತಿನಲ್ಲಿ ಉತ್ತರ ಕನ್ನಡ ಜನತೆಯ ಪರವಾಗಿ, ರಾಜ್ಯದ ಪರವಾಗಿ ಒಂದೇ ಒಂದಿನ ಮಾತನಾಡಿಲ್ಲ.
ಆದ್ದರಿಂದ ನಿಮ್ಮ ಭಾವನೆಗಳನ್ನು ಕೆರಳಿಸಿ ನಿಮ್ಮ ನಂಬಿಕೆಗಳ ಜತೆ ಚೆಲ್ಲಾಟ ಆಡುವವರನ್ನು ತಿರಸ್ಕರಿಸಿ, ನಿಮ್ಮ ಬದುಕಿನ ಪರವಾಗಿ ಇರುವವರನ್ನು ಬೆಂಬಲಿಸಿ ರಾಜಕೀಯ ಪ್ರಜ್ಞಾವಂತಿಕೆ ಪಾಲಿಸಬೇಕು ಎಂದು ಕರೆ ನೀಡುತ್ತಿದ್ದೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ, ಮಾಜಿ ಸಚಿವರಾದ ಆರ್.ವಿ ದೇಶಪಾಂಡೆ, ಶಿವರಾಂ ಹೆಬ್ಬಾರ್, ಶಾಸಕರಾದ ಭೀಮಣ್ಣ ನಾಯಕ್, ಸತೀಶ್ ಸೈಲ್, ಮಾಜಿ ಶಾಸಕಿ ಹಾಗೂ ಯುವ ನಾಯಕಿ ಅಂಜಲಿ ನಿಂಬಾಳ್ಕರ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

ಇತಿಹಾಸ ಪ್ರಸಿದ್ಧ ಮಧುಕೇಶ್ವರ ದೇವಸ್ಥಾನಕ್ಕೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿ ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸಿದರು

Next Article