For the best experience, open
https://m.samyuktakarnataka.in
on your mobile browser.

ಪೋಸ್ಟ್ ಆಫೀಸ್ ಸಿಬ್ಬಂದಿ ಹೈರಾಣ

04:14 AM May 30, 2024 IST | Samyukta Karnataka
ಪೋಸ್ಟ್ ಆಫೀಸ್ ಸಿಬ್ಬಂದಿ ಹೈರಾಣ

ಬೆಂಗಳೂರು: ನಗರದ ರಾಜಭವನದದ ಬಳಿ ಇರುವ ಕೇಂದ್ರ ಕಚೇರಿಯಲ್ಲಿ ಮೇ ೬ ರಿಂದ ಪ್ರಾರಂಭಗೊಂಡಿರುವ ಹೊಸ ಖಾತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳಗ್ಗೆ ೫ ಗಂಟೆಗೆ ಅಂಚೆ ಕಛೇರಿಗೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದಾರೆ.
ಪ್ರಾರಂಭದಲ್ಲಿ ದಿನವೊಂದಕ್ಕೆ ೫೦೦ ರಿಂದ ೬೦೦ ಇಂಡಿಯನ್ ಪೋಸ್ಟ್ ಪೇಮೆಂಟ್' (ಐಪಿಪಿಬಿ) ಖಾತೆಗಳನ್ನು ತೆರೆಯಲಾಗುತ್ತಿತ್ತು. ಈಗ ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಅಂಚೆ ಸಿಬ್ಬಂದಿಗಳು ತೆರೆಯುತ್ತಿದ್ದಾರೆ. ಕಚೇ ರಿಯ ಉಳಿದ ಕೆಲಸ ಕಾರ್ಯಗಳನ್ನು ಬಿಟ್ಟು ಹೊಸ ಖಾತೆ ತೆರೆಯಲು ಮುಂದಾಗಿದ್ದಾರೆ. ಆರ್.ಟಿ. ನಗರ, ಶಿವಾಜಿನಗರ, ಅರೇಬಿಕ್ ಕಾಲೇಜು ಏರಿಯಾ, ಸಂಜಯ ನಗರ, ಎಸ್‌ಆರ್‌ಕೆ ನಗರ ಸೇರಿದಂತೆ ವಿವಿಧ ಕಡೆಗಳಿಂದ ಕೇಂದ್ರ ಕಚೇರಿ ಗುಂಪು ಗುಂಪಾಗಿ ಮಹಿಳೆಯರು ಆಗಮಿಸುತ್ತಿದ್ದಾರೆ. ಖಾತೆದಾರರ ನಿಯಂತ್ರಣಕ್ಕೆ ಸಿಬ್ಬಂದಿಗಳು ಹೈರಾಣಾಗುತ್ತಿದ್ದಾರೆ. ಕಾಂಗ್ರೆಸ್ ಘೋಷಣೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರ ಖಾತೆಗೆ ಒಂದು ಲಕ್ಷ ರೂ. ಜಮೆ ಮಾಡುವುದಾಗಿ ಘೋಷಣೆ ಮಾಡಿದೆ. ಇದನ್ನು ನಂಬಿರುವ ಮಹಿಳೆಯರು ಅಂಚೆ ಕಛೇರಿಯ ಕೇಂದ್ರ ಕಚೇರಿಯಲ್ಲೆ ಖಾತೆಗೆ ತೆರೆಯಲು ಮುಂದಾಗಿದ್ದಾರೆ. ಉಳಿತಾಯ ಖಾತೆಯಲ್ಲಿ ೮,೫೦೦ ಠೇವಣಿಯೊಂದಿಗೆ ಒಂದೊಂದು ಕುಟುಂಬದಲ್ಲಿ ನಾಲ್ಕೈದು ಜನ ಮಹಿಳೆಯರು ಖಾತೆ ತೆರೆಯಲು ಮುಂದಾಗಿದ್ದಾರೆ. ಜನ್‌ಧನ್ ಖಾತೆ ಮಾದರಿ ಕಳೆದ ೨೦೧೪ರಲ್ಲಿ ನಡೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜನ್‌ಧನ್ ಖಾತೆ ಹೊಂದಿದ ಮಹಿಳೆಯರ ಖಾತೆಗೆ ೧೫ ಲಕ್ಷ ರೂ.ವರ್ಗಾವಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆ ಸಂದರ್ಭದಲ್ಲಿ ಕೂಡ ರಾಜ್ಯದ ಎಲ್ಲ ಬ್ಯಾಂಕ್‌ಗಳಲ್ಲಿಜನ್‌ಧನ್' ಖಾತೆ ತೆರೆಯಲು ಮಹಿಳೆಯರು ಮುಂದಾಗಿದ್ದರು. ಈಗ ಅದೇ ಮಾದರಿಯಲ್ಲಿ ಅಂಚೆ ಕಛೇರಿಯಲ್ಲಿ ಖಾತೆ ತೆರೆದರೆ ಕಾಂಗ್ರೆಸ್ ಸರ್ಕಾರ ಲಕ್ಷ ರೂ. ನೀಡುತ್ತದೆ ಎಂದುಕೊಂಡಿರುವ ಮಹಿಳೆಯರು ಕೆಲಸ ಕಾರ್ಯಗಳನ್ನು ಬಿಟ್ಟು ಅಂಚೆ ಖಾತೆ ತೆರೆಯಲು ಹರಸಾಹಸ ಪಡುತ್ತಿದ್ದಾರೆ.
ಪೊಲೀಸರ ಮೊರೆ
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಖಾತೆ ತೆರೆಯಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗಲಾಟೆ, ತಳ್ಳಾಟ ನಡೆಯುತ್ತಿದೆ. ಕಛೇರಿ ಒಳಗೆ ಮತ್ತು ಹೊರಗೆ ಸಾಲುಗಟ್ಟಿ ನಿಂತ ಮಹಿಳೆಯರನ್ನು ನಿಯಂತ್ರಣ ಮಾಡಲು ಪೊಲೀಸರ ಸಹಾಯವನ್ನು ಅಂಚೆ ಕಛೇರಿ ಅಧಿಕಾರಿಗಳು ಸಹ ಕೇಳಲು ಮುಂದಾಗಿದ್ದಾರೆ.
ಟೋಕನ್ ವಿತರಣೆ ಮಾಡಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದಾರೆ. ಪ್ರಧಾನ ಅಂಚೆ ಕಛೇರಿಯಲ್ಲಿ ೭ ಜನ ಸಿಬ್ಬಂದಿಗಳನ್ನು ಇದಕ್ಕಾಗಿಯೇ ನಿಯೋಜನೆ ಮಾಡಲಾಗಿದೆ. ಕಛೇರಿ ಅವಧಿ ಮುಗಿದ ಬಳಿಕವೂ ಕೆಲವು ಗಂಟೆಗಳ ಕಾಲ ಸಿಬ್ಬಂದಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಖಾತೆ ವರ್ಗಾವಣೆ
ಕೆಲವರ ಖಾತೆಗಳು ಬೇರೆ ಬೇರೆ ಬ್ಯಾಂಕ್‌ಗಳಲ್ಲಿವೆ. ಆ ಖಾತೆಗಳನ್ನು ಅಂಚೆ ಕಛೇರಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಸುಮಾರು ವರ್ಷಗಳಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಖಾತೆಗಳು ಈಗ ಅಂಚೆ ಕಚೇರಿಗೆ ವರ್ಗಾವಣೆಯಾಗುತ್ತಿದೆ. ಬೆಂಗಳೂರು ನಗರದಲ್ಲಿರುವ ಎಲ್ಲಾ ಅಂಚೆ ಕಛೇರಿಗಳಲ್ಲೂ ಜನರು ಐಪಿಪಿಬಿ ಖಾತೆಗಳನ್ನು ತೆರೆಯುವ ಸೌಲಭ್ಯವಿದೆ. ಆದರೆ ಮಹಿಳೆಯರು ಏಕೆ ಪ್ರಧಾನ ಅಂಚೆ ಕಛೇರಿಗೆ ಆಗಮಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.4

೨೩ ಸಾವಿರ ಖಾತೆ
ಮೇ ೬ ರಿಂದ ಇಲ್ಲಿಯವರೆಗೆ ಪ್ರಧಾನ ಅಂಚೆ ಕಛೇರಿಯಲ್ಲಿ ೨೩ ಸಾವಿರಕ್ಕೂ ಹೆಚ್ಚು ಹೊಸ ಖಾತೆಗಳನ್ನು ತೆರೆಯಲಾಗಿದೆ. ನಗರದ ವಿವಿಧ ಕಡೆಗಳಲ್ಲಿರುವ ಅಂಚೆ ಕಛೇರಿ ಶಾಖೆಯಲ್ಲಿ ಖಾತೆ ತೆರೆಯಬಹುದು ಎಂದರೂ ಮಾತು ಕೇಳದ ಮಹಿಳೆಯರು, ಕೇಂದ್ರ ಕಚೇರಿಯಲ್ಲೇ ಖಾತೆ ತೆರೆಯಲು ಹೇಳಿದ್ದಾರೆ ಎನ್ನುತ್ತಿದ್ದಾರೆ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಒಂದು ಲಕ್ಷ ರೂ. ಹಾವಳಿ ನಗರದಲ್ಲಿ ಜೋರಾಗಿದೆ. ಹೊಸ ಖಾತೆದಾರರಿಗಾಗಿ ಪ್ರತ್ಯೇಕ ಕೌಂಟರ್‌ಗಳನ್ನು ಆರಂಭಿಸಲಾಗಿದೆ. ದಿನಕ್ಕೆ ಸಾವಿರ ಟೋಕನ್ ವಿತರಣೆ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೂ ಗೇಟ್ ಹೊರಗಡೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಜಮಾಯಿಸುತ್ತಿದ್ದಾರೆ.