For the best experience, open
https://m.samyuktakarnataka.in
on your mobile browser.

ಬಾಗಲಕೋಟೆಯಲ್ಲಿ ನಾಳೆ ಹಿಂದೂ ಜಾಗರಣ ವೇದಿಕೆ ಬೃಹತ್ ಪ್ರತಿಭಟನೆ

11:33 AM Feb 09, 2024 IST | Samyukta Karnataka
ಬಾಗಲಕೋಟೆಯಲ್ಲಿ ನಾಳೆ ಹಿಂದೂ ಜಾಗರಣ ವೇದಿಕೆ ಬೃಹತ್ ಪ್ರತಿಭಟನೆ

ಬಾಗಲಕೋಟೆ: ಸರ್ಕಾರಿ ಜಾಗೆಯನ್ನು ಮೈದಾನವಾಗಿಸಿಕೊಂಡು ಮತೀಯ ಸಮಾವೇಶಕ್ಕೆ ಬಳಸುತ್ತಿರುವ ಬಗ್ಗೆ ಆಕ್ಷೇಪಿಸಿರುವ ಹಿಂದೂ ಜಾಗರಣ ವೇದಿಕೆ ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ನವನಗರದ ೧೧೨ನೇ ಸೆಕ್ಟರ್ ನ್ನು ಸಮಾವೇಶಕ್ಕಾಗಿ ಸಂಪೂರ್ಣ ಮೈದಾನವಾಗಿಸಲಾಗಿದ್ದು, ಅನುಮತಿ ನೀಡಿರುವ ಬಿಟಿಡಿಎ ಹಾಗೂ ಯುಕೆಪಿ ಆರ್&ಆರ್ ನ ಕ್ರಮವೇ ಕಾನೂನು ಬಾಹಿರ ಎಂದು ದೂರಿ ಸಂಘಟನೆ ಈಗಾಗಲೇ ಮನವಿ ಸಲ್ಲಿಸಿದೆ.
ಈಗ ಹೋರಾಟವನ್ನು ಮ‌ತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧಿರಿಸಿರುವ ಸಂಘಟನೆ ಕಾರ್ಯಕರ್ತರ ಸಭೆ ನಡೆಸಿದ್ದು, ಶನಿವಾರ ಬೆಳಗ್ಗೆ ೧೦ಕ್ಕೆ ಬೃಹತ್ ಪ್ರತಿಭಟನೆಗೆ ತೀರ್ಮಾನಿಸಿದೆ.
ಪ್ರತಿಭಟನೆಯಲ್ಲಿ ಸರ್ಕಾರಿ ಜಾಗೆಯಲ್ಲಿ ಸಮ್ಮೇಳನ ನಡೆಸಲು ನೀಡಿರುವ ಅನುಮತಿ ವಾಪಸ್ ಪಡೆಯುವುದು, ಇತ್ತೀಚೆಗೆ ಹಿಂದೂ ಅಪ್ರಾಪ್ತ ಬಾಲಕಿ ಜತೆಗೆ ಅನುಚಿತವಾಗಿ ವರ್ತಿಸುತ್ತಿದ್ದ ಯುವಕನ ಪ್ರಕರಣಗದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನೇ ಬಂಧಿಸಿರುವ ಘಟನೆ ಖಂಡಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಇನ್ನು ಸಮಾವೇಶಕ್ಕೆ ವಕ್ತಾರರಾಗಿ ಯಾರು ಆಗಮಿಸಲಿದ್ದಾರೆ ಎಂಬ ಸಂಗತಿಯನ್ನು ಸಂಘಟನೆ ಬಿಟ್ಟು ಕೊಟ್ಟಿಲ್ಲ.
ಈ ನಡುವೆ ಅನುಮತಿ ನೀಡಿರುವುದನ್ನು ಆಕ್ಷೇಪಿಸಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಪ್ರಕಟಣೆ ನೀಡಿ ಬಾಗಲಕೋಟೆಯನ್ನು ಕೋಮುಸೂಕ್ಷ್ಮ ಪ್ರದೇಶ ಎಂದು ಕರೆಯುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂಥದೊಂದು ಸಮಾವೇಶಕ್ಕೆ ಇಷ್ಟು ಸರಳವಾಗಿ ಅನುಮತಿ ನೀಡಿದ್ದು ಹೇಗೆ, ಬಾಗಲಕೋಟೆಯನ್ನು ಏನು ಮಾಡಲು ಹೊರಟಿದ್ದೀರಿ ಎಂದು ಅಸಮಾಧಾನ ಹೊರಹಾಕಿದ್ದರು.
ರಾತ್ರಿ ಘಟನೆಗಳ ಮೂಲಕವೇ ವಿಖ್ಯಾತಿಗಳಿಸಿದ್ದ ನವನಗರ ಶಾಂತವಾಗಿತ್ತು. ಇದೀಗ ಮತ್ತೊಂದು ಧರ್ಮ ದಂಗಲ್ ಗೆ ಆಡಳಿತವೇ ಅವಕಾಶ ಮಾಡಿಕೊಡಲಾಗುತ್ತಿದೆ ಎಂಬ ಮಾತುಗಳಿದ್ದು, ಸೌಹಾರ್ದಯುತವಾಗಿ ಈ ಸ್ಥಿತಿಯನ್ನು ನಿರ್ವಹಿಸುವ ಜಾಣ ನಡೆಯನ್ನು ಇನ್ನು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನಿರ್ವಹಿಸಬೇಕಿದೆ.