ಮಹಿಳೆಯರನ್ನು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳದಿದ್ದರೆ ದೇಶಕ್ಕೆ ನಷ್ಟ
ಬೆಂಗಳೂರು: ನಮ್ಮ ಜನಸಂಖ್ಯೆಯ ಶೇ 50ರಷ್ಟು ಇರುವ ಮಹಿಳೆಯರನ್ನು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳದಿದ್ದರೆ ದೇಶಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಅವರು ಇಂದು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ಬಿಎಂವಿ ಕಲಾಟ್ರಸ್ಟ್ ಹಾಗೂ ಬಸವ ಪರಿಷತ್ ಜಂಟಿಯಾಗಿ ಏರ್ಪಡಿಸಿದ್ದ ನಾರಿ ಸಮ್ಮಾನ್ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠ ವಾಗಿರುವ ಸ್ಥಾನ ತಾಯಿಯದ್ದು, ತಾಯಿಗೆ ಹೆಣ್ಣು, ಸ್ತ್ರೀ ಅಂತ ಹೇಳಬೇಕಿಲ್ಲ. ಜನ್ಮ ಪೂರ್ವ ಸಂಬಂಧ ತಾಯಿಗೆ ಮಾತ್ರ ಇದೆ. ತಂದೆ, ಅಣ್ಣ ತಮ್ಮ ಎಲ್ಲ ಸಂಬಂಧ ಆ ಮೇಲೆ ಬರುತ್ತವೆ. ಪ್ರತಿಯೊಬ್ಬ ವ್ಯಕ್ತಿ ಈ ಭೂಮಂಡಲದ ಎಲ್ಲ ವ್ಯವಸ್ಥೆಗೆ ಹೊಂದಿಕೊಳ್ಳಲು ತಯಾರಿ ನಡೆಯುವುದೇ ತಾಯಿ ಗರ್ಭ. ಅಂತರಿಕ್ಷದಲ್ಲಿ ರಾಕೆಟ್ ಉಡಾವಣೆಯಾಗಲು ಯಾವ ರೀತಿಯ ವಾತಾವರಣ ಇರುತ್ತದೆ ಎನ್ನುವುದನ್ನು ಮೊದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತದೆಯೋ ಅದೇ ರೀತಿ ತಾಯಿ. ನಮ್ಮೆಲ್ಲರ ಅಸ್ತಿತ್ವಕ್ಕೆ ಮೂಲ ಕಾರಣ. ಆ ತಾಯಿಗೆ ಯಾವ ಸ್ಥಾನ ಸಿಕ್ಕಿದೆಯೋ ಇಲ್ಲವೋ ಎನ್ನುವುದನ್ನು ಈಗಲೂ ಚರ್ಚೆ ಮಾಡುತ್ತೇವೆ. ಬಸವಣ್ಣ ಈಗಲೂ ಪ್ರಸ್ತುತ ಎಂದು ನಾವು ಹೇಳುತ್ತೇವೆ ಎಂದರೆ, ಅಸಮಾನತೆ, ಅಸ್ಪಶ್ಯತೆ ಜೀವಂತವಾಗಿದೆ ಎನ್ನುವುದು ಅಷ್ಟೇ ಸತ್ಯ. ಈಗ ಮಹಿಳೆಯರು ಎಲ್ಲ ಸವಾಲುಗಳನ್ನು ಎದುರಿಸಿ ಹೆಣ್ಣು ಮೇಲೆ ಬಂದಿದ್ದಾಳೆ ಎಂದು ಹೇಳಿದರು.
ನಾನು ಒಂದು ಜೆಟ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಹವಾಮಾನ ವ್ಯತ್ಯಾಸ ಆಯಿತು. ಮಹಿಳಾ ಪೈಲೆಟ್ ಇದ್ದರು. ನಾನು ಆತಂಕದಿಂದ ನಾವು ಸುರಕ್ಷಿತವಾಗಿ ತಲುಪುತ್ತೇವೆ ಇಲ್ಲವೋ ಎಂದು ಪೈಲೆಟನ್ನು ಕೇಳಿದೆ. ಅವಳು ಹೆಣ್ಣು ಮಗಳಿದ್ದಳು, ಭಯ ಪಡಬೇಡಿ ಸುರಕ್ಷಿತವಾಗಿ ತಲುಪಿಸುತ್ತೇನೆ ಎಂದು ಹೇಳಿ ನಮ್ಮನ್ನು ಸುರಕ್ಷಿತವಾಗಿ ತಲುಪಿಸಿದಳು.
ನಮ್ಮನ್ನು ಸುರಕ್ಷಿತವಾಗಿ ನ್ಯಾವಿಗೇಟ್ ಮಾಡಿರುವುದು ತಾಯಂದಿರು ಎಂದು ಹೇಳಿದರು.
ನಮ್ಮ ಸಂಸ್ಕೃತಿಯ ರಕ್ಷಕರು ತಾಯಂದಿರು. ಅವರು ಲೆಕ್ಕದಲ್ಲಿ ಬಹಳ ಮುಂದಿರುತ್ತಾರೆ. ತಾಯಂದಿರು ನಮಗೆ ಉಳಿತಾಯ ಮಾಡುವ ಸಂಸ್ಕೃತಿ ಕಲಿಸಿದ್ದಾರೆ. ಇದರಿಂದ ನಮ್ಮ ಆರ್ಥಿಕತೆ ಮತ್ತು ಸಂಸ್ಕೃತಿ ಉಳಿದಿದೆ. ನಾನು ವಿಶ್ವ ವಿದ್ಯಾಲಯದಲ್ಲಿ ನಮ್ಮ ಸಾಸಿವೆ ಡಬ್ಬಿ ಮತ್ತು ಅಮೇರಿಕ ಬ್ಯಾಂಕ್ ಎಂಬ ವಿಷಯದ ಮೇಲೆ ಚರ್ಚೆಗೆ ಇಟ್ಟುಕೊಂಡಿದ್ದೆ. ನಮ್ಮ ತಾಯಂದಿರು ಸಾಸಿವೆ ಡಬ್ಬಿಯಲ್ಲಿ ಹಣ ಕೂಡಿಡುವ ಮೂಲಕ ನಮ್ಮ ಆರ್ಥಿಕತೆಯನ್ನು ಉಳಿಸುತ್ತಿದ್ದಾರೆ. ನಮ್ಮ ಜನಸಂಖ್ಯೆಯ ಶೇ 50ರಷ್ಟು ಮಹಿಳೆಯರಿದ್ದಾರೆ. ಅವರನ್ನು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳದಿದ್ದರೆ ದೇಶಕ್ಕೆ ದೊಡ್ಡ ನಷ್ಟವಾಗಲಿದೆ. ಅವರನ್ನು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡರೆ ನಮ್ಮ ಪ್ರಧಾನಿ ಹೇಳುತ್ತಿರುವ ವಿಕಸಿತ ಭಾರತ 2040ರ ಬದಲು, 2030ಕ್ಕೆ ಆಗಲಿದೆ ಎಂದು ಹೇಳಿದರು.
ನಮ್ಮ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25 ಸಾವಿರ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡುವ ಕೆಲಸ ಮಾಡಲಾಗುತ್ತಿದೆ. ಅವರು ಈಗ ಆತ್ಮವಿಶ್ವಾಸದಿಂದ ತಮ್ಮ ಕುಟುಂಬವನ್ನು ನಿರ್ವಹಿಸುವುದಾಗಿ ಹೇಳುತ್ತಾರೆ.
ಬಿಎಂವಿ ಟ್ರಸ್ಟ್ ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಸಂತಸದ ವಿಚಾರ, ಈ ರೀತಿಯ ಕಾರ್ಯಗಳಿಗೆ ಹೆಚ್ಚು ಪ್ರಚಾರ ದೊರೆತು ದೊಡ್ಡ ಮಟ್ಟದಲ್ಲಿ ನಡೆಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಚಲನಚಿತ್ರ ನಟ ಸುಚೇಂದ್ರ ಪ್ತಸಾದ್, ಇಸ್ರೋ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್, ಬಿಎಂವಿ ಕಲಾ ಟ್ರಸ್ಟ್‌ನ ಅರುಣಾ ಎಂ.ಪಿ., ವೀಣಾ ಮಹಾಂತೇಶ ಹಾಜರಿದ್ದರು.