For the best experience, open
https://m.samyuktakarnataka.in
on your mobile browser.

ಮಾಜಿ ಸಿಎಂಗಳ ಮಕ್ಕಳ ಮುಖಾಮುಖಿ

04:46 PM Mar 10, 2024 IST | Samyukta Karnataka
ಮಾಜಿ ಸಿಎಂಗಳ ಮಕ್ಕಳ ಮುಖಾಮುಖಿ

ಶಿವಮೊಗ್ಗ: ಗೀತಾ ಶಿವರಾಜ್‌ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಟಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗೀತಾ ಶಿವರಾಜ್​​ಕುಮಾರ್ ಟಿಕೆಟ್​ ಗಿಟ್ಟಿಸಿಕೊಳ್ಳಲು ಅವರ ಸಹೋದರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪರ ಶ್ರಮ ಕೂಡ ಇದೆ. ಮೊದಲ ಪಟ್ಟಿಯಲ್ಲಿ ಟಿಕೆಟ್​ ಘೋಷಣೆಯಾಗಿರುವುದು ಅಚ್ಚರಿ ಮೂಡಿಸಿದೆ. ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ನೇರ ಹಣಾಹಣಿಗೆ ವೇದಿಕೆಯಾಗಿದೆ.
ಗೀತಾ ಶಿವರಾಜ್​ಕುಮಾರ್ ಎರಡನೇ ಬಾರಿ ಲೋಕಸಭೆಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಜೆಡಿಎಸ್ ದಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು. ಗೀತಾ ಶಿವರಾಜ್​ಕುಮಾರ್ ಅವರು ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಮಗಳು. ಬಿ.ವೈ.ರಾಘವೇಂದ್ರ ಮಾಜಿ ಸಿಎಂ ಎಸ್. ಯಡಿಯೂರಪ್ಪನವರ ಪುತ್ರ. 2009ರಿಂದ 2024ರ ತನಕ ಮಾಜಿ ಸಿಎಂ ಕುಟುಂಬಗಳ ನೇರ ಹಣಾಹಣಿ ನಡೆಸಿವೆ. 2009ರಲ್ಲಿ ದಿವಂಗತ ಮಾಜಿ ಸಿಎಂ ಎಸ್.ಬಂಗಾರಪ್ಪನವರ ವಿರುದ್ಧ ಬಿಜೆಪಿಯಿಂದ ಯಡಿಯೂರಪ್ಪನವರ ಪುತ್ರ ಮೊದಲ ಬಾರಿಗೆ ಕಣಕ್ಕಿಳಿದು ಜಯಗಳಿಸಿದ್ದರು. ಕಳೆದ ನಾಲ್ಕು ಚುನಾವಣೆಯಲ್ಲಿ ಮುಖ್ಯಮಂತ್ರಿ ಕುಟುಂಬಗಳು ನೇರ ಹಣಾಹಣಿ ನಡೆಸಿದ್ದು, ಇದು ಐದನೇ ಚುನಾವಣೆಯಾಗಿದೆ.
2014ರಲ್ಲಿ ಯಡಿಯೂರಪ್ಪನವರ ವಿರುದ್ಧ ಗೀತಾ ಶಿವರಾಜ್​ಕುಮಾರ್ ಸ್ಪರ್ಧಿಸಿ ಸೋತಿದ್ದರು. 2018ರ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ಕಾಂಗ್ರೆಸ್​ - ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್​ ಚಿಹ್ನೆಯಿಂದ ಸ್ಪರ್ಧಿಸಿ ಸೋಲುಂಡಿದ್ದರು.
ಸಹೋದರ ಮಧು ಬಂಗಾರಪ್ಪ ಸದ್ಯ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಹಾಗೂ ಕಳೆದ ಬಾರಿ ಗೀತಾ ಪರವಾಗಿ ಉಪೇಂದ್ರ, ವಿಜಯ ರಾಘವೇಂದ್ರ, ಶ್ರೀಮುರುಳಿ ಮತ್ತು ವಿನೋದ್ ಪ್ರಭಾಕರ್ ಸೇರಿದಂತೆ ಅನೇಕ ನಟ, ನಟಿಯರು ಪ್ರಚಾರಕ್ಕೆ ಆಗಮಿಸಿದ್ದರು. ಈಗಲೂ ಸಹ ಅನೇಕರು ಪ್ರಚಾರಕ್ಕೆ ಬರುವ ಸಾಧ್ಯತೆಗಳಿವೆ. ನನ್ನ ಪತ್ನಿಯನ್ನು ಸಂಸದೆಯನ್ನಾಗಿ ನೋಡುವ ಆಸೆ ಇದೆ. ನಾನು ನನ್ನ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಗೀತಾ ಪರ ಪ್ರಚಾರ ನಡೆಸುತ್ತೇನೆ" ಎಂದು ಶಿವರಾಜ್ ​ಕುಮಾರ್ ಹೇಳಿದ್ದಾರೆ; ಇದರಿಂದ ಕಾಂಗ್ರೆಸ್​ ಅಭ್ಯರ್ಥಿ ಗೀತಾಗೆ ಆನೆ ಬಲ ಬಂದಂತಾಗಿದೆ.