ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಂಘಟನಾ ಚತುರ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ನಿಧನ

06:50 PM Mar 04, 2024 IST | Samyukta Karnataka

ಮಂಡ್ಯ: ಅತ್ಯಂತ ಸಂಘಟನಾ ಚತುರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿ.ಕೆ.ರವಿಕುಮಾರ ಚಾಮಲಾಪುರ ಅವರು ಸೋಮವಾರ ಬೆಳಿಗ್ಗೆ ನಿಧನರಾದರು, ಇವರಿಗೆ ಹಲವು ಜನಪ್ರತಿನಿಧಿಗಳು ಹಾಗೂ ಸಾಹಿತಿಗಳು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿಯ ಚಾಮಲಾಪುರ ಗ್ರಾಮದ ಶ್ರೀಮತಿ ಸಣ್ಣಮ್ಮ ಮತ್ತು ಶ್ರೀ ಸಿ.ಕಾಳೇಗೌಡ ದಂಪತಿ ಮಗನಾದ ಇವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೂ, ಪ್ರೌಢ ಶಿಕ್ಷಣವನ್ನು ಹುಲಿವಾನದಲ್ಲಿ ಮುಗಿಸಿ, ಪಿ.ಯು.ಸಿ ಮತ್ತು ಪದವಿ ಶಿಕ್ಷಣವನ್ನು ಮಂಡ್ಯದ ಪಿ.ಇ.ಎಸ್. ವಿಜ್ಞಾನ ಕಾಲೇಜಿನಲ್ಲಿ ಐಚ್ಛಿಕ ಕನ್ನಡ ವಿಷಯದೊಂದಿಗೆ ಪೂರೈಸಿದರು.

ಪಿ.ಯು.ಸಿ. ಮತ್ತು ಪದವಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿಯೇ ವಿದ್ಯಾರ್ಥಿ ನಾಯಕರಾಗಿ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನು ರೂಪಿಸುತ್ತಾ ಸಂಘಟನೆಗೆ ಮುನ್ನುಡಿ ಬರೆದ ಇವರು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟದ ಮುಂಚೂಣಿ ನಾಯಕರೆಂದು ಹೆಸರಾದರು.

1997 ರಲ್ಲಿ ಮೈಸೂರು ವಿ.ವಿ.ಯಿಂದ ಎಂ.ಎ ಪದವಿಯನ್ನು ಕನ್ನಡ ವಿಷಯದಲ್ಲಿ ಪ್ರಥಮ ದರ್ಜೆಯೊಂದಿಗೆ ಪಡೆದಿರುತ್ತಾರೆ. ಮೈಸೂರು ವಿ.ವಿ.ಯ ವಿದ್ಯಾರ್ಥಿ ಸೆನೆಟ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಕೀರ್ತಿ ಇವರದು.

1997 ರಿಂದ 2002 ರವರೆಗೆ ಮಂಡ್ಯದ ಪಿ.ಇ.ಎಸ್. ಸಂಜೆ ಪದವಿ ಕಾಲೇಜಿನಲ್ಲಿ, 2003-2007 ರವರೆಗೆ ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೂ 2007 ರಿಂದ ಮಾಂಡವ್ಯ ವಿದ್ಯಾಸಂಸ್ಥೆ ಹಾಗೂ ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಮನ ಗೆದ್ದಿದ್ದರು.

ಇನ್ನೂ ಸಂಘಟಕರಾಗಿ ಕಾರ್ಯದರ್ಶಿ, ಉನ್ನತಿ ಟ್ರಸ್ಟ್ (ರಿ) ಮಂಡ್ಯ1998, ಕಾರ್ಯದರ್ಶಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ 1998-2000 ಅಧ್ಯಕ್ಷರು, ಮೈಸೂರು ವಿ.ವಿ. ಪದವೀಧರರ ಹಿತರಕ್ಷಣಾ ಸಮಿತಿ(ರಿ) ಮಂಡ್ಯ 2003 ಪ್ರಾಧ್ಯಾಪಕರು, ಕನ್ನಡ ವಿಭಾಗ, ಮಾಂಡವ್ಯ ಶಿಕ್ಷಣ ಸಂಸ್ಥೆ, ಮಂಡ್ಯ. ಅಧ್ಯಕ್ಷರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ 2012-2015 ಅಧ್ಯಕ್ಷರು, ಸಾಹಿತ್ಯ ಲಯನ್ಸ್ ಕ್ಲಬ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇದಕ್ಕೆ ಸಾಕ್ಷಿ ಎಂಬಂತೆ ನಿರಂತರವಾದ ಕನ್ನಡಪರ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಹಲವಾರು ವಿಚಾರ ಸಂಕಿರಣಗಳನ್ನು ಏರ್ಪಡಿಸುವ ಮೂಲಕ ಕನ್ನಡದ ಸೇವೆಯಲ್ಲಿ ನಿರತರಾಗಿದ್ದರು.

ಮಂಡ್ಯ ಸಾಹಿತ್ಯ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ, ಉಚಿತ ಬೃಹತ್ ಆರೋಗ್ಯ ಮತ್ತು ಶಸ್ತ್ರಚಿಕಿತ್ಸಾ ಶಿಬಿರಗಳನ್ನು, ಕೆರಗೋಡು. ಚಾಮಲಾಪುರ, ಮಂಡ್ಯ ಮತ್ತು ಬಸರಾಳುವಿನಲ್ಲಿ ಆಯೋಜಿಸಿ ಸಾವಿರಾರು ಬಡರೋಗಿಗಳಿಗೆ ನೆರವಾಗಿರುವುದು ಇವರ ಸಾಧನೆಯ ಮತ್ತೊಂದು ಗರಿಮೆಯಾಗಿದೆ.

2015 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿ ಹಲವು ಸಮ್ಮೇಳನಗಳನ್ನು ನಡೆಸಿ ಯುವ ಸಾಹಿತಿಗಳಿಗೆ ಹಾಗೂ ಜಲಾವಿದರನ್ನು ಪರಿಚಯಿಸುವ ಕೆಲಸ ಮಾಡಿದ್ದರು, ಮತ್ತೆ 2021 ರಲ್ಲಿ ನಡೆದ ಕಸಾಪ ಚುನಾವಣೆಯಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿ ಒಂದು ವರ್ಷ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿದ್ದರು.

ತದನಂತರ ಅನಾರೋಗ್ಯಕ್ಕೀಡಾಗಿ ಹಲವು ತಿಂಗಳುಗಳ ಕಾಲ ಹಾಸಿಗೆ ಹಿಡಿದರು. ಇವರ ಈ ಅನಾರೋಗ್ಯವು ಇನ್ನಲ್ಲದಂತೆ ಬಾಧಿಸ ತೊಡಗಿತು. ಆದರೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅತ್ಯುತ್ಸಕರಾಗಿ ಸಮ್ಮೇಳನವನ್ನು ಮಂಡ್ಯಕೆ ತರಲು ಯಶಸ್ವಿಯಾಗಿದ್ದ ರವಿಕುಮಾರ ಚಾಮಲಾಪುರ ಅವರು ದುರಂತದ ನಾಯಕರಾಗಿ ಅಗಲಿದ್ದಾರೆ.

Next Article