ಹಾಸನಾಂಬೆ ದರ್ಶನ ಪಡೆದ ಹೊರಟ್ಟಿ
ಹುಬ್ಬಳ್ಳಿ: ಹಾಸನದ ಹಾಸನಾಂಬೆ ದೇಗುಲ ಪುರಾಣದ ಜೊತೆಗೆ ಅನೇಕ ವೈಶಿಷ್ಟಗಳನ್ನ ಹೊಂದಿರುವ ದೇಗುಲದಲ್ಲಿ ಹಾಸನಾಂಬೆ ದರ್ಶನ ಪಡೆದಿದ್ದು ನನ್ನ ಸೌಭಾಗ್ಯ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹಾಸನಾಂಬೆ ದರ್ಶನ ಪಡೆದ ನಂತರ ಮಾತನಾಡಿದ ಅವರು, ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಸಂದರ್ಭದಲ್ಲಿ ಹೊತ್ತಿಸಿದ ದೀಪ ಇಡೀ ವರ್ಷ ಆರುವುದಿಲ್ಲ. ವರ್ಷದಿಂದ ಇಟ್ಟ ಪ್ರಸಾದ ಹಾಳಾಗುವುದಿಲ್ಲ. ಹೂಗಳು ಬಾಡುವುದಿಲ್ಲ. ಇಂತಹ ಸಂಗತಿಗಳು ಈ ದೇಗುಲದಲ್ಲಿ ನಡೆಯುತ್ತಿರುವುದನ್ನ ಕೇಳಿ ಆಶ್ಚರ್ಯವಾಗಿದೆ. ಇಂತಹ ಪವಿತ್ರ ಸ್ಥಳಕ್ಕೆ ಬಂದು ಹಲವಾರು ಮಾಹಿತಿಯನ್ನು ತಿಳಿದು ಅರಿತು ಪುನೀತನಾಗಿದ್ದೇನೆ. ಲೋಕ ಕಲ್ಯಾಣಕ್ಕೆ ಒಳ್ಳೆಯದಾಗಲಿ ಎಂದು ಹಾಸನಾಂಬೆಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ಉತ್ತಮ ಮಳೆ, ಬೆಳೆ ಬರುವ ಮೂಲಕ ನಾಡಿನ ಜನತೆಗೆ ಒಳ್ಳೆಯದನ್ನು ಆ ತಾಯಿ ದಯಪಾಲಿಸಲಿ ಎಂದು ಕೋರಿದ್ದೇನೆ. ಈ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರ ಕಿರಿಯ ಪುತ್ರ ಭರತ್ ಹೊರಟ್ಟಿ ದಂಪತಿ, ಡಾ. ನರಸಿಂಹಮೂರ್ತಿ, ನವೀನ್ ಗೌಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.