For the best experience, open
https://m.samyuktakarnataka.in
on your mobile browser.

371(ಜೆ) ದಶಮಾನೋತ್ಸವ

07:35 PM Feb 12, 2024 IST | Samyukta Karnataka
371 ಜೆ  ದಶಮಾನೋತ್ಸವ

ಬೆಂಗಳೂರು: ಫೆ.20ರಂದು ಬೀದರ್ ನಲ್ಲಿ 371 (ಜೆ) ದಶಮಾನೋತ್ಸವ ಮತ್ತು ವಿಶೇಷ ಸ್ಥಾನಮಾನದ ರೂವಾರಿಗಳು ಆದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನಾ ಸಮಾರಂಭವನ್ನು ಫೆ. 20ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ."
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ತಿದ್ದುಪಡಿಯಾಗಿ 10 ವರ್ಷ ಪೂರ್ಣವಾಗಿರುವ ಹಿನ್ನೆಲೆಯಲ್ಲಿ 371 (ಜೆ) ದಶಮಾನೋತ್ಸವ ಮತ್ತು ಇದರ ರೂವಾರಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ.
371 ಜೆ ಅನುಷ್ಠಾನದಿಂದಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ಯುವಜನರಿಗೆ ಉದ್ಯೋಗದಲ್ಲಿ ಮತ್ತು ತಾಂತ್ರಿಕ, ವೈದ್ಯಕೀಯ, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಲಭ್ಯವಾಗಿದೆ.

ಹೈದ್ರಾಬಾದ್ ಕರ್ನಾಟಕಕ್ಕೆ ಸಂವಿಧಾನದ 371 ಜೆ ತಿದ್ದುಪಡಿಯೊಂದಿಗೆ ವಿಶೇಷ ಸ್ಥಾನಮಾನ ದೊರೆತ ಪರಿಣಾಮವಾಗಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಯಿತು. ಈಗ ಇದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆ.ಕೆ.ಆರ್.ಡಿ.ಬಿ.) ಆಗಿದ್ದು, ವಾರ್ಷಿಕ 3000 ಕೋಟಿ ರೂ. ಹೆಚ್ಚುವರಿ ಅನುದಾನ ನಮ್ಮ ಭಾಗಕ್ಕೆ ಲಭ್ಯವಾಗುತ್ತಿದೆ.
ಯು.ಪಿ.ಎ. ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಮತ್ತು ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧೀ ಅವರ ಬಳಿಗೆ ಹಲವು ಬಾರಿ ನಿಯೋಗ ತೆಗೆದುಕೊಂಡು ಹೋಗಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 371 ಜೆ ತಿದ್ದುಪಡಿಗೆ ಅವಿರತ ಶ್ರಮಿಸಿದ ರೂವಾರಿ, ಬೀದರ್ ಸುಪುತ್ರರು ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ದಶಮಾನೋತ್ಸವದ ಸಂದರ್ಭದಲ್ಲಿ ಸನ್ಮಾನಿಸಲು ತೀರ್ಮಾನಿಸಲಾಗಿದೆ.

ಫೆ.20ರ ಮಂಗಳವಾರ ಬೀದರ್ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವದರ ಜೊತೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದು ಪಾಲ್ಗೊಳ್ಳುವಂತೆ ವಿವಿಧ ಸಂಘ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.