ನಮ್ಮ ಮೆಟ್ರೋ: ಹೊರಬಂದ ಭದ್ರ
07:13 PM Oct 30, 2024 IST | Samyukta Karnataka
ಬೆಂಗಳೂರು: ಸುರಂಗ ಕೊರೆಯುವ ಯಂತ್ರ - ಭದ್ರ (ಟಿಬಿಎಂ) ಸೌತ್ ಬೌಂಡ್ ಸುರಂಗದಲ್ಲಿ ನಾಗವಾರ ನಿಲ್ದಾಣದಲ್ಲಿ ಇಂದು ಹೊರಬಂದಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿದ್ದು ಭದ್ರ ಕೊನೆಯ ಸುರಂಗ ಕೊರೆಯುವ ಯಂತ್ರ (ಟಿ ಬಿ ಎಂ) ಇಂದು ನಾಗವಾರದಲ್ಲಿ 937 ಮೀ ಸುರಂಗ ಕೊರೆಯುವ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಗತಿ ಸಾಧಿಸಿದೆ. ಈ ಟಿ.ಬಿಎಂ ದಿನಾಂಕ 02.04.2024 ರಂದು ಕೆ.ಜಿ. ಹಳ್ಳಿ ನಿಲ್ದಾಣದಲ್ಲಿ ಸುರಂಗ ಕೊರೆಯಲು ನಿಯೋಜಿಸಲಾಗಿತ್ತು. ಈ ಪ್ರಗತಿಯೊಂದಿಗೆ, ಹಂತ-2ರ ಯೋಜನೆಯ ರೀಚ್-6ರ ಭೂಗತ ಸುರಂಗ ಮಾರ್ಗದಲ್ಲಿ ಟಿ.ಬಿ.ಎಂ ಕಾಮಗಾರಿಯು ಅಂತಿಮವಾಗಿದ್ದು, ಇದರೊಂದಿಗೆ ಒಟ್ಟು 20992 ಮೀ ಅಂದರೆ ಶೇ 100 ರಷ್ಟು ಭೂಗತ ಸುರಂಗಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ರೀಚ್-6ರ ಸುರಂಗ ಮಾರ್ಗಕ್ಕಾಗಿ ಒಟ್ಟಾರೆ ನಿಯೋಜಿಸಲಾದ ಎಲ್ಲಾ 9 ಟಿಬಿಎಂಗಳು ಸೌತ್ ರಾಂಪ್ (ಡೈರಿ ಸರ್ಕಲ್) ನಿಂದ ನಾಗವಾರದ ನಡುವೆ ಭೂಗತ ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿವೆ ಎಂದು ತಿಳಿಸಿದ್ದಾರೆ.