ನರಹರಿ ತೀರ್ಥರ ಆರಾಧನೆಗೆ ಹೋಗುತ್ತಿದ್ದ ಕೊಪ್ಪಳದ ಇಬ್ಬರು ಯುವಕರು ಮೃತ
ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ ಕ್ರೂಷರ್ ವಾಹನ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಯಚೂರುನಿಂದ ಸಿಂಧನೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಈ ಪೈಕಿ ಕೊಪ್ಪಳದ ಇಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಗಂಗಾವತಿಯ ಹಯವದನ ಪ್ರಹ್ಲಾದ್ ಆಚಾರಿ(೧೮) ಮತ್ತು ಕೊಪ್ಪಳದ ಅಭಿಲಾಷ ಓಲಿ(೨೦) ಎಂದು ಗುರುತಿಸಲಾಗಿದೆ. ಇವರು ಮಂತ್ರಾಲಯದ ಗುರು ಸಾರ್ವಭೌಮ ವಿದ್ಯಾಪೀಠದಲ್ಲಿ ಸಂಸ್ಕೃತ ಅಭ್ಯಾಸ ಮಾಡುತ್ತಿದ್ದರು.
ಮಂತ್ರಾಲಯದಿಂದ ವಿಜಯನಗರ ಜಿಲ್ಲೆಯ ಹಂಪಿ ಬಳಿಯ ನರಹರಿತೀರ್ಥರ ೩ ದಿನಗಳ ಕಾಲ ನಡೆಯುತ್ತಿದ್ದ ಆರಾಧನಾ ಕಾರ್ಯಕ್ರಮಕ್ಕೆ ಮಂತ್ರಾಲಯದ ಗುರು ಸಾರ್ವಭೌಮ ವಿದ್ಯಾಪೀಠದ ವಿದ್ಯಾರ್ಥಿಗಳು ೪ ಕ್ರೂಷರ್ ವಾಹನಗಳಲ್ಲಿ ಹೊರಟಿದ್ದರು. ಈ ಪೈಕಿ ಒಂದು ಕ್ರೂಷರ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಇದರಲ್ಲಿ ೧೦ ಜನರಿಗೆ ಗಾಯಗಳಾಗಿವೆ. ನಾಲ್ವರು ಸಾವಿಗೀಡಾಗಿದ್ದು, ಈ ಪೈಕಿ ಇಬ್ಬರು ಕೊಪ್ಪಳದ ಹಯದವನ ಮತ್ತು ಅಭಿಲಾಷ ಕೂಡಾ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.