ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಾಡಗೀತೆ ವಿವಾದದ ಪೂರ್ವಾಪರ

12:45 AM Feb 22, 2024 IST | Samyukta Karnataka

ಸರ್ಕಾರದ ಆಡಳಿತವನ್ನು ಗಾರ್ದಭಕ್ಕೆ ಹೋಲಿಸುವುದು ಒಂದು ವಾಡಿಕೆ. ಇದರ ಅರ್ಥ ಸರ್ಕಾರದ ಆಡಳಿತ ವಿಧಾನದಲ್ಲಿರುವ ಕಡತಗಳ ವಿಲೇವಾರಿ ಸಂಸ್ಕೃತಿ. ಮೇಜಿನಿಂದ ಮೇಜಿಗೆ ಕಡತವೊಂದು ಪ್ರದಕ್ಷಿಣೆ ಹಾಕುತ್ತಾ ಸಕ್ಷಮ ಅಧಿಕಾರಿಯ ಸಹಿ ಪಡೆದ ನಂತರ ಮತ್ತೆ ಬಂದ ದಾರಿಯಲ್ಲಿಯೇ ಹಿಂತಿರುಗಿ ಆದೇಶದ ರೂಪವನ್ನು ಪಡೆದುಕೊಳ್ಳುವ ಹಂತದವರೆಗೆ ಅದಕ್ಕೆ ಆಗುವ ಸಂಸ್ಕಾರಗಳ ಸ್ವರೂಪ ಯಾರೊಬ್ಬರಿಗೂ ತಿಳಿದಿರುವುದಿಲ್ಲ. ಹಾಗೊಮ್ಮೆ, ಕಣ್ತಪ್ಪಿನಿಂದಲೋ ಇಲ್ಲವೇ ತತ್ಸಂಬಂಧಿತ ಅಧೀನ ಅಧಿಕಾರಿಯ ಉದಾಸೀನದಿಂದಲೋ ಕಡತದಲ್ಲಿ ದಾಖಲಾಗುವ ಟಿಪ್ಪಣಿಯನ್ನು ಉಳಿದ ಹಂತಗಳಲ್ಲಿ ತಿದ್ದುಪಡಿ ಮಾಡದೆ ಆದೇಶ ಹೊರಬಿದ್ದಿರುವ ಪ್ರಸಂಗಗಳು ಅದೆಷ್ಟೋ ಏನೋ ಎಂಬುದಕ್ಕೆ ನಾಡಗೀತೆ ಕಡ್ಡಾಯಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶವೇ ಒಂದು ತಾಜಾ ನಿದರ್ಶನ.
ನಾಡಗೀತೆ ಹಾಡಿಕೆಯನ್ನು ಶಾಲೆಗಳಲ್ಲಿ ದಿನನಿತ್ಯ ಕಡ್ಡಾಯಗೊಳಿಸುವುದು ಸರ್ಕಾರ ಇದುವರೆಗೆ ಪಾಲಿಸಿಕೊಂಡು ಬಂದಿರುವ ನೀತಿ. ಆದರೆ, ನಾಡಗೀತೆಯಲ್ಲಿ ಅಳವಡಿಸಲಾಗಿರುವ ಮಟ್ಟಿಗೆ ಸಂಬಂಧಿಸಿದಂತೆ ಕೆಲವು ತಜ್ಞರು ಹೈಕೋರ್ಟ್ನ ಮೊರೆ ಹೊಕ್ಕ ನಂತರ ಈ ಬಗ್ಗೆ ವಿವಾದ ಆರಂಭವಾಯಿತು. ಮೈಸೂರು ಅನಂತಸ್ವಾಮಿ ಅವರು ಬಳಸಿರುವ ಮಟ್ಟು ಸೂಕ್ತವಾಗಿದೆಯೋ ಇಲ್ಲವೇ ಸಿ. ಅಶ್ವತ್ಥ್ ಅವರು ರಚಿಸಿರುವ ಮಟ್ಟು ಅರ್ಹವಾಗಿದೆಯೋ ಎಂಬುದು ಈ ವಿವಾದದ ಮೂಲ. ಹೈಕೋರ್ಟಿನಲ್ಲಿ ಈ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿರುವಾಗ ಆತುರಾತುರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮುಚ್ಚಳಿಕೆಯ ಮೂಲಕ ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡ ಸಂಗತಿ ಎಂದರೆ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನಾಡಗೀತೆ ಹಾಡಿಕೆ ಕಡ್ಡಾಯ ಎಂಬುದಾಗಿತ್ತು. ಆಗಲೇ ಈ ವಿಚಾರವನ್ನು ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮೊದಲಾದವರು ಆಕ್ಷೇಪಿಸಿ ಇದರ ಅರ್ಥ ನಾಡಗೀತೆ ಹಾಡುವುದು ಎಲ್ಲ ಶಾಲೆಗಳಿಗೂ ಕಡ್ಡಾಯವಲ್ಲ ಎಂದಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದರು. ಆದರೂ ಸರ್ಕಾರ ಈ ಬಗ್ಗೆ ಕಿವಿಗೊಡದೆ ಫೆಬ್ರವರಿ ೧೬ರಂದು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನಾಡಗೀತೆ ಹಾಡಿಕೆ ಕಡ್ಡಾಯ ಎಂಬ ಆದೇಶವನ್ನು ಹೊರಡಿಸಿದ್ದು ನಿಜಕ್ಕೂ ಅರ್ಥವಾಗದ ಸಂಗತಿ ಅಷ್ಟೆ ಅಲ್ಲ ಸರ್ಕಾರವೊಂದು ಯಾವ ರೀತಿಯಲ್ಲಿ ಪರಿಣಾಮವನ್ನು ಲೆಕ್ಕಿಸದೆ ನಿರ್ಧಾರ ಹಾಗೂ ಆದೇಶಗಳನ್ನು ಹೊರಡಿಸಿ ಅತಿರೇಕ ಪ್ರದರ್ಶನ ಮಾಡಬಹುದು ಎಂಬುದರ ಸಾಕ್ಷಾತ್ ದರ್ಶನ ಆಗುವಂತೆ ಮಾಡಿದೆ.
ಈ ವಿವಾದ ಮಾಧ್ಯಮಗಳ ಮೂಲಕ ಶಾಸನಸಭೆಯೂ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದಾಗ ಎಚ್ಚರಗೊಂಡ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ `ಇದೊಂದು ಮುದ್ರಣದ ಪ್ರಮಾದ. ಈ ಪ್ರಮಾದವನ್ನು ಸರಿಪಡಿಸಿ ನಾಡಗೀತೆ ಎಲ್ಲರಿಗೂ ಕಡ್ಡಾಯ ಎಂಬ ಒಕ್ಕಣೆಯಿರುವ ಆದೇಶವನ್ನು ಹೊರಡಿಸಲಾಗುವುದು' ಎಂದು ಹೇಳಿ ಬಿಕ್ಕಟ್ಟಿಗೆ ತೆರೆ ಎಳೆದರು ಎಂಬುದೇನೋ ನಿಜ. ಆದರೆ, ಈ ಬೆಳವಣಿಗೆಯಲ್ಲಿ ಮುಖ್ಯವಾಗಿ ಪರಿಗಣಿಸಬೇಕಾದದ್ದು ಸರ್ಕಾರದ ಆಡಳಿತ ನೆಲ, ಜಲ, ಭಾಷೆ, ಧರ್ಮ ಮುಂತಾದ ಸೂಕ್ಷ್ಮ ವಿಷಯಗಳ ಕಡತಗಳನ್ನು ಪರಿಗಣಿಸುವಾಗ ವಹಿಸಬೇಕಾದ ಎಚ್ಚರವನ್ನು ಕೈಬಿಟ್ಟು ಲೋಕಾಭಿರಾಮದ ದಾಟಿಯಲ್ಲಿ ಕಡತವನ್ನು ವಿಲೇವಾರಿ ಮಾಡಿರುವ ಸಂಸ್ಕೃತಿಗೆ ಹೊಣೆ ಯಾರು ಎಂಬುದನ್ನು ಗುರುತಿಸಿ ಸೂಕ್ತ ಕ್ರಮ ಜರುಗಿಸುವುದು ಆದ್ಯತೆಯ ಮೇಲೆ ಆಗಬೇಕಾದ ಕೆಲಸ. ಹಾಗಾಗದಿದ್ದರೆ ಸರ್ಕಾರದ ಸದಾಶಯಗಳ ನಿರ್ಧಾರಗಳು ತದ್ವಿರುದ್ಧ ರೀತಿಯಲ್ಲಿ ಜಾರಿ ಪ್ರಕ್ರಿಯೆಗೆ ಬಂದಾಗ ಆಗುವ ಪರಿಣಾಮ ಏನೆಂಬುದರ ಪರಿಜ್ಞಾನ ಆಡಳಿತಗಾರರಿಗೆ ಇರಬೇಕು. ಇಂತಹ ಎಡವಟ್ಟುಗಳು ಕಡತ ವಿಲೇವಾರಿ ಸಂಸ್ಕೃತಿಯ ಪಳೆಯುಳಿಕೆಗಳಾಗಿ ಇರುವುದೇ ಸರ್ಕಾರದ ಆಡಳಿತ ಗಾರ್ದಭ ಎಂಬ ಗೇಲಿಗೆ ಗುರಿಯಾಗಿದೆ ಎಂಬುದು ಯಾವತ್ತಿಗೂ ಎಚ್ಚರಿಕೆಯ ಗಂಟೆಯಾಗಬೇಕು.
ನಾಡಿನ ಭಾಷೆ ಹಾಗೂ ಪರಂಪರೆಯ ಮೂಲಕ ಕನ್ನಡದ ವೈಶಿಷ್ಟ್ಯದ ಹೆಗ್ಗುರುತುಗಳ ಕಾವಲುಗಾರನಂತಿರುವ ಕನ್ನಡ ಸಂಸ್ಕೃತಿ ಇಲಾಖೆ ಅದೇಕೋ ಏನೋ ಇಂತಹ ಎಡವಟ್ಟಿನಲ್ಲಿ ಸಿಕ್ಕಿಬಿದ್ದಿದ್ದು ಬೇಸರದ ಸಂಗತಿ. ಮಂತ್ರಿಗಳ ಹೊಣೆಗಾರಿಕೆ ಸಾಮಾನ್ಯವಾಗಿ ಇಂತಹ ವಿಚಾರದಲ್ಲಿ ಇರುವುದಿಲ್ಲ ನಿಜ. ಆದರೆ, ಅಧಿಕಾರಿಗಳ ತಪ್ಪಿಗೆ ಮಂತ್ರಿಗಳು ವಿವರಣೆ ಕೊಡಬೇಕಾದ ವಿಚಿತ್ರ ಪ್ರಸಂಗ ಇದು.

Next Article