For the best experience, open
https://m.samyuktakarnataka.in
on your mobile browser.

ನಾಡುನುಡಿಯ ವಿಷಯದಲ್ಲಿ ಒಮ್ಮತದ ನಿಲುವು ಅಭಿನಂದನಾರ್ಹ

12:45 PM Dec 15, 2023 IST | Samyukta Karnataka
ನಾಡುನುಡಿಯ ವಿಷಯದಲ್ಲಿ ಒಮ್ಮತದ ನಿಲುವು ಅಭಿನಂದನಾರ್ಹ

ಬೆಂಗಳೂರು: ಕನ್ನಡಿಗರ ಬೇಡಿಕೆ ಈಡೇರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ನಾಡುನುಡಿಯ ವಿಷಯದಲ್ಲಿ ಒಮ್ಮತದ ನಿಲುವು ಅಭಿನಂದನಾರ್ಹ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ್ರು .ಟಿ.ಎ ಹೇಳಿದ್ದಾರೆ. ವಿಮಾನ ನಿಲ್ದಾಣಗಳಿಗೆ ನಾಮಕರಣ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು "ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ ಮತ್ತು ವಿಜಯಪುರ ವಿಮಾನ ನಿಲ್ದಾಣಗಳಿಗೆ ಕರ್ನಾಟಕದ ನಾಲ್ವರು ಮಹಾಸಾಧಕರ ಹೆಸರನ್ನು ಇಡುವ ಪ್ರಸ್ತಾಪವನ್ನು ಕರ್ನಾಟಕ ವಿಧಾನಸಭೆ ಸರ್ವಾನುಮತದಿಂದ ಅನುಮೋದಿಸಿರುವುದು ಅತ್ಯಂತ ಸಂತಸದ ವಿಷಯ. ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹತ್ತು ವರ್ಷಗಳಿಂದ ಈ ಬೇಡಿಕೆ ಇಟ್ಟು ಹೋರಾಟ ನಡೆಸಿತ್ತು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯುಗದ ಕವಿ, ಜಗದ ಕವಿ ಕುವೆಂಪು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ವಿಜಯಪುರ ವಿಮಾನ ನಿಲ್ದಾಣಕ್ಕೆ ಕ್ರಾಂತಿಯೋಗಿ ಬಸವಣ್ಣನವರ ಹೆಸರು ಇಡುವ ಪ್ರಸ್ತಾಪವನ್ನು ಅಂಗೀಕರಿಸಿರುವುದು ಹೆಮ್ಮೆ ತಂದಿದೆ. ಭಾರತ ಒಕ್ಕೂಟ ಸರ್ಕಾರವು ಆದಷ್ಟು ಶೀಘ್ರದಲ್ಲೇ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿ ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ‌. ಈ ವಿಷಯದಲ್ಲಿ ಪಕ್ಷಬೇಧ ಮರೆತು ಒಂದಾಗಿ ಸರ್ವಾನುಮತದಿಂದ ಪ್ರಸ್ತಾಪ ಅನುಮೋದಿಸಿದ ಎಲ್ಲ ಜನಪ್ರತಿನಿಧಿಗಳನ್ನು ಅಭಿನಂದಿಸುತ್ತೇನೆ. ಈ ಐತಿಹಾಸಿಕ ನಿರ್ಣಯಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲ ಶಾಸಕರನ್ನು ಅಭಿನಂದಿಸುತ್ತೇನೆ. ಕನ್ನಡಿಗರ ಬೇಡಿಕೆ ಈಡೇರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ನಾಡುನುಡಿಯ ವಿಷಯದಲ್ಲಿ ಒಮ್ಮತದ ನಿಲುವು ಅಭಿನಂದನಾರ್ಹ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕೆಂದು ನಾವು ಹೋರಾಟ ನಡೆಸಿ ಯಶಸ್ವಿಯಾಗಿದ್ದೆವು. ಅದೇ ರೀತಿ ಈಗ ನಾಲ್ಕು ವಿಮಾನ ನಿಲ್ದಾಣಗಳಿಗೆ ಕರ್ನಾಟಕದ ನಾಲ್ವರು ಮೇರುಸಾಧಕರ ಹೆಸರು ಇಡಬೇಕೆಂಬ ನಮ್ಮ ಹೋರಾಟದ ಬೇಡಿಕೆಯೂ ಈಗ ಈಡೇರಿದಂತಾಗಿದೆ ಎಂದು ಬರೆದುಕೊಂಡಿದ್ದಾರೆ.