ನಾನಿದ್ದೇನೆಂಬ ತಿಳಿವಳಿಕೆಯೇ ಅಧ್ಯಾತ್ಮ
ನಾಗರಿಕತೆ ಎಂದರೇನು? ಅದು ಒಂದು ಜನತೆಯ ಸಭ್ಯ ಗುಣಶೀಲಗಳ ವಿಶಿಷ್ಟರೂಪ. ಒಂದು ಜನಾಂಗವು ಪ್ರಕೃತಿಯಿಂದ ತನಗೆ ಬಂದಿರುವ ಗುಣಗಳನ್ನೂ, ಶಕ್ತಿಗಳನ್ನೂ, ಸಂಪತ್ತುಗಳನ್ನೂ, ಕಾರ್ಯಸಂದರ್ಭಗಳನ್ನೂ ಲೋಕಕ್ಕೆ ಬಾಧೆಯಾಗದಂತೆಯೂ, ಲೋಕಕ್ಕೆ ಸಹಾಯಕವಾಗುವಂತೆಯೂ ಬೆಳೆಸಿಕೊಂಡು ತನ್ನ ಜೀವನವನ್ನು ಅದಕ್ಕೆ ತಕ್ಕಂತೆ ತಿದ್ದಿಕೊಂಡರೆ, ಆ ಸುಸಂಸ್ಕೃತ ಜೀವನಸಂಧಾನವೇ 'ನಾಗರಿಕತೆ'ಯೆನಿಸುತ್ತದೆ. ಪ್ರಕೃತಿಯು ನಾನಾ ದೇಶಗಳ ನಾನಾ ಜನಾಂಗಗಳಲ್ಲಿ ನಾನಾವಿಧದ ಗುಣವಿಶೇಷಗಳನ್ನು ಹಂಚಿರುತ್ತದೆ. ಇದರಿಂದ ಜಗತ್ತಿನಲ್ಲಿ ನಾಗರಿಕತೆಗಳ ವಿವಿಧತ್ವ. ಪಾಶ್ಚಾತ್ಯ ನಾಗರಿಕತೆಗೂ ಭಾರತೀಯ ನಾಗರಿಕತೆಗೂ ಇರುವ ಲಕ್ಷಣ ಮತ್ತು ವ್ಯತ್ಯಾಸಗಳು: ಪಾಶ್ಚಾತ್ಯ ನಾಗರಿಕತೆ ಪ್ರತ್ಯಕ್ಷ ಪ್ರಮಾಣಾಶ್ರಯಗಳಾದ ಭೌತವಿಜ್ಞಾನ ಸಿದ್ಧಾಂತಗಳ ಆಧಾರದ ಮೇಲೆ ನಿಂತಿದೆ. ಭಾರತೀಯ ನಾಗರಿಕತೆಯು ಪರೋಕ್ಷ ಸತ್ಯಗಳಾದ ಆತ್ಮತತ್ತ್ವಗಳನ್ನು ಅವಲಂಬಿಸಿದೆ. ಪಾಶ್ಚಾತ್ಯರಿಗೆ ಲೋಕಭೋಗವು ಮುಖ್ಯ ಲಕ್ಷ್ಯ; ಭಗವದುಪಾಸನೆ ಅದಕ್ಕೆ ಸಾಧನರೂಪವಾದ ಒಂದು ಉಪಾಯ. ಭಾರತೀಯನಿಗೆ ಭಗವದುಪಾಸನೆ ಮುಖ್ಯ ಧ್ಯೇಯ; ಲೋಕಭೋಗ ಅದಕ್ಕೆ ಪ್ರಾಸಂಗಿಕವಾಗಿ ಒದಗುವ ತಾತ್ಕಾಲಿಕ ಪ್ರೋತ್ಸಾಹ. ಪಾಶ್ಚಾತ್ಯನು ಇಹದ ದೃಷ್ಟಿಯಿಂದ ಲೋಕಾತೀತಕ್ಕೆ ಬೆಲೆಕಟ್ಟುತ್ತಾನೆ. ಭಾರತೀಯನು ಲೋಕಾತೀತದ ದೃಷ್ಟಿಯಿಂದ ಇಹಲೋಕಕ್ಕೆ ಬೆಲೆಕೊಡುತ್ತಾನೆ - ಇದು ಡಿ.ವಿ.ಜಿ.ಯವರ ವಿವರಣೆ.
ಪಾಶ್ಚಾತ್ಯ ದೇಶಗಳ ವಿಜ್ಞಾನ ಸಾಧನೆಗಳಿಂದ ದೇಹಭೋಗಲಾಲಸೆಗೆ ಹೆಚ್ಚು ಪ್ರೋತ್ಸಾಹ ದೊರೆತಿದೆ. ಅದಕ್ಕೆ ಅನುಕೂಲವಾಗುವಂತೆ ಆ ಜನರ ಸಮಾಜಸಂಸ್ಥೆಗಳೂ ರಾಜ್ಯಸೂತ್ರಗಳೂ ಏರ್ಪಟ್ಟಿವೆ. 'ಜೀವನಶೈಲಿಯ ಮಟ್ಟ' ಎಂದರೆ ದೈಹಿಕಜೀವನದ ಅಂತಸ್ತು ಎಂದೆನಿಸಿದೆ. ಭೋಗೈಕತತ್ಪರತೆಯೇ ಜೀವನದ ಮುಖ್ಯಸೂತ್ರವಾಗಿದೆ. ಅದರ ಸಂಪಾದನೆಗೆ ಯಾವ ದಾರಿ ಸಾಧಕವಾಗುತ್ತದೆಯೋ ಅದೇ ಕರ್ತವ್ಯವೆನಿಸಿದೆ. ಅಧರ್ಮವೇ ಧರ್ಮವೆಂಬ ಭ್ರಾಂತಿಯೆನಿಸಿದೆ. ಕಲಿಯುಗದಲ್ಲಿ ಹಿಂಸೆ, ಕ್ರೌರ್ಯ, ಅನೀತಿಗಳೇ ವಿಜೃಂಭಿಸುವುದೆಂದು ನಮ್ಮ ಪ್ರಾಚೀನ ಋಷಿ-ಮುನಿಗಳು ನುಡಿದಿದ್ದರು. ಈಗ ನಡೆಯುತ್ತಿರುವುದಾದರೂ ಏನು? ಜಗತ್ತಿನ ಅತ್ಯಂತ ಪ್ರಬಲ ವ್ಯಕ್ತಿ, ಗೌರವಾನ್ವಿತನೆಂದು ಪರಿಗಣಿತನಾಗಿದ್ದ ಕೆನಡಿ ಒಂದೇ ಗುಂಡಿನಿಂದ ಅಂತ್ಯ ಕಂಡ! ಈಗ ಎಲ್ಲಿದ್ದಾನೆ? ಪುನರ್ಜನ್ಮ ಎಲ್ಲಿ ಆಗಿದೆ? ಯಾರಿಗೂ ತಿಳಿಯದು. ಅದೇ ಸೃಷ್ಟಿಯ ಮಹಾನ್ ರಹಸ್ಯ. ಭಾರತೀಯ ವೇದಶಾಸ್ತ್ರಾದಿಗಳು ಈ ರಹಸ್ಯವನ್ನು ಬೇಧಿಸಿವೆ. ಮಾನವಜನ್ಮದ ಉದ್ದೇಶವನ್ನು ವಿವರಿಸಿವೆ. ಆತ್ಮದ ಪರಿಚಯ ನೀಡುತ್ತವೆ. ದೇಹದ ಅಶಾಶ್ವತೆಯನ್ಮೂ, ಆತ್ಮದ ಅಮರತ್ವವನ್ನೂ ಪರಿಚಯಿಸಿ ಜನ್ಮಜನ್ಮಾಂತರಗಳ ನಿಗೂಢತೆಯನ್ನು ಭೇದಿಸಿ ಮಾನವರನ್ನು ಸತ್ಯದ ಕಡೆಗೆ ಒಯ್ಯುತ್ತವೆ. ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವ ದಾರಿಯನ್ನು ತೋರಿಸುತ್ತವೆ.
ಭೌತಿಕಸಂಗತಿಗಳಲ್ಲಿ ಎಷ್ಟೇ ಮಟ್ಟದ ಅಭಿವೃದ್ಧಿ ಸಾಧಿಸಿದರೂ ಕೊನೆಗೆ ಮಾನವನ ಆತ್ಮ ಹುಡುಕುವುದು ತನ್ನ ಉದ್ಧಾರದ ಹಾದಿಯನ್ನೇ. ತನ್ನನ್ನು ತಾನು ಉದ್ಧರಿಸಿಕೊಳ್ಳಬೇಕಾದರೆ ಅವನಿಗೆ ಉಳಿಯುವುದು ಅಧ್ಯಾತ್ಮದ ಹಾದಿಯೊಂದೇ. ಎಷ್ಟೇ ಆಸ್ತಿಪಾಸ್ತಿಗಳಿದ್ದರೂ ಮನಃಶಾಂತಿಯೆಂಬುದು ಮರೀಚಿಕೆಯಾಗಿರುವ ಇಂದಿನ ಕಾಲಮಾನದಲ್ಲಿ ಶ್ರೇಯಸ್ಸು ದೊರೆಯುವುದು ನಮ್ಮ ವೇದಕಾಲೀನ ಋಷಿಮುನಿಗಳ ಮೂಲಕ ಮಾನವಕೋಟಿಗೆ ದೊರೆತಿರುವ ಜ್ಞಾನದಲ್ಲೇ.
ಈ ಭೂಮಿಯಲ್ಲಿ ಎಂತೆಂಥ ಚಕ್ರವರ್ತಿಗಳು ಬಂದುಹೋದರು? ರೋಮನ್ನರು, ಗ್ರೀಕರು, ಮೊಘಲರು, ಬ್ರಿಟಿಷರು, ತುರ್ಕಿಗಳು ಎಷ್ಟು ಚಕ್ರವರ್ತಿಗಳು, ಸರ್ವಾಧಿಕಾರಿಗಳು ಬಂದು ಜಗತ್ತನ್ನು ತಮ್ಮ ಬೆರಳತುದಿಯಲ್ಲಿ ಕುಣಿಸಿದರು! ನೆಪೋಲಿಯನ್, ಹಿಟ್ಲರ್, ಮುಸಲೋನಿ…ಆದರೆ ಇವರೆಲ್ಲಾ ಜಗತ್ತಿಗೆ ನೀಡಿದ್ದಾದರೂ ಏನು? ಶಾಂತಿಯೇ? ಸಮಾಧಾನವೇ? ಸಹಬಾಳ್ವೆಯೇ? ಬರೀ ಸರ್ವನಾಶ. ಆದರೆ ನಮ್ಮ ಸಂಸ್ಕೃತಿ ನೀಡಿದ ಸಂದೇಶವಾದರೂ ಏನು? “ಕೃಣ್ವಂತೋ ವಿಶ್ವಮಾರ್ಯಂ” -ಇಡೀ ಮನುಕುಲವನ್ನು ಸುಸಂಸ್ಕೃತವನ್ನಾಗಿ ಮಾಡೋಣ ಎಂದು.
ನಮ್ಮಲ್ಲಿರುವ ನಾಲ್ಕು ವೇದಗಳಲ್ಲಿ ಋಗ್ವೇದ ಮತ್ತು ಯಜುರ್ವೇದಗಳು ಧರ್ಮಾಚರಣೆಯ ಕಟ್ಟುಪಾಡುಗಳನ್ನೂ, ಅನುಸರಿಸಬೇಕಾದ ನೀತಿಗಳನ್ನು ತಿಳಿಸುತ್ತವೆ. ಅಥರ್ವಣವೇದದಲ್ಲಿ ಎಲ್ಲ ಭೌತಿಕಶಾಸ್ತçಗಳ ರಹಸ್ಯವಿದ್ದರೆ; ಸಾಮವೇದವೆಲ್ಲಾ ಸಂಗೀತಮಯ. ಸಂಗೀತದ ಮೂಲಕ ಪರಮಾತ್ಮನನ್ನು ಆರಾಧಿಸಿ ಅವನನ್ನು ಸೇರುವ ದಾರಿತೋರಿಸುವುದೇ ಸಾಮವೇದ. ಇಂದಿಗೂ ಭಾರತದ ದೇವಾಲಯಗಳಲ್ಲಿ ಸಾಮವೇದ ಗಾಯನ ಅನೂಚಾನವಾಗಿ ನಡೆಯುತ್ತಿದೆ. ಕೃಷ್ಣನಂತೂ ಅದ್ಭುತ ಸಂಗೀತಗಾರ. ಮಾನವ ಜೀವನವು ನಿರ್ಮಾಣದ-ನಾಶದ; ಕಟ್ಟುವ-ಕೆಡಹುವ ಹೀಗೆ ಸದಾ ದ್ವಂದ್ವದಲ್ಲಿ ಸಿಕ್ಕಿ ಒದ್ದಾಡುತ್ತಿರುತ್ತದೆ. ಈ ಒದ್ದಾಟವನ್ನು ತಣ್ಣಗಾಗಿಸಿ ಮನಸ್ಸಿಗೆ ಸಂಸ್ಫೂರ್ತಿಯನ್ನು ನೀಡುವ ಕಾರ್ಯವನ್ನು ಅಥರ್ವವೇದ ಮಾಡುತ್ತಿದೆ. ಅದಕ್ಕಾಗಿಯೇ ಅಲ್ಲಿ ಶಾಂತಿಕರ್ಮಗಳು, ಪುಷ್ಟಿಕರ್ಮಗಳು ಪ್ರಧಾನ ಪಾತ್ರವಹಿಸುತ್ತವೆ. ವಾಲ್ಮೀಕಿ ರಾಮಾಯಣದಲ್ಲಿ ರಾಜಾ ದಶರಥ ಅಥರ್ವವೇದದ ಅನುಸಾರವಾಗಿಯೇ ಪುತ್ರೇಷ್ಟಿಯಜ್ಞವನ್ನು ಸಾಂಗಗೊಳಿಸಿದ. ವಿಶ್ವದ ಚರಿತ್ರೆಯನ್ನು ಓದಿನೋಡಿದರೆ ತಿಳಿಯುತ್ತದೆ; ಒಂದು ದೇಶದ ಸಂದಿಗ್ಧ ಕಾಲದಲ್ಲಿ ಒಬ್ಬ ಮಹಾತ್ಮನಾದ ವ್ಯಕ್ತಿ ಅದರ ಜೀವನಾಡಿಯಾಗಿರುತ್ತಾನೆ. ಆತನ ಉದ್ದೇಶಗಳಿಂದ ನೂರಾರು ಜನ ಜಾಗೃತರಾಗಿ ಜಗತ್ತಿಗೆ ಒಳ್ಳೆಯದನ್ನು ಮಾಡಿದ್ದಾರೆ.
ವೇದಜೀವನ ಕೇವಲ ಭರತಖಂಡದಲ್ಲಿ ಹುಟ್ಟಿದವರಿಗೆ ಮಾತ್ರವೇ ಅನಿವಾರ್ಯವಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಒಳಗೊಂಡಿರುವ ಎಲ್ಲಾ ಜೀವನಮೌಲ್ಯಗಳು, ಶಾಸ್ತ್ರಗಳು ಇಡೀ ಮನುಕುಲದ ಆಸ್ತಿ. “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಸದಾಶಯದಿಂದ ಸೃಷ್ಟಿಯಾಗಿರುವ ಜ್ಞಾನಸಂಪತ್ತು ಅದು. ಮೂಲ ವೇದಸಂಸ್ಕೃತಿ ಅಖಂಡವಾಗಿ ಉಳಿದುಕೊಂಡು ಬಂದಿರುವುದು ದಕ್ಷಿಣಭಾರತದಲ್ಲಿ. ಐದಾರು ಸಹಸ್ರ ವರ್ಷಗಳ ಪರಂಪರೆ ಜೀವಂತವಾಗಿ ಉಳಿದಿರುವುದು ಇಲ್ಲಿಯೇ. ಉತ್ತರಭಾರತದಲ್ಲಿ ವಿದೇಶೀ ಆಕ್ರಮಣಗಳಾಗಿ ವೈದಿಕಧರ್ಮ ಅಪಾಯಕ್ಕೊಳಗಾಗಿ ಅದರ ಪರಂಪರೆ ಕಲುಷಿತಗೊಂಡಿತು. ಆದರೆ ಅದನ್ನು ಅವನತಿಗೊಳ್ಳದಂತೆ ಕಾಪಾಡಿಕೊಂಡು ಬಂದಿರುವುದು ದಕ್ಷಿಣಭಾರತದ ವೇದೋಪಾಸಕರು. ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಕಾಲಕಾಲಕ್ಕೆ ಆವಿರ್ಭವಿಸಿ ವೇದೋದ್ಧಾರವನ್ನು ಮಾಡದಿದ್ದ ಪಕ್ಷದಲ್ಲಿ ಇಂದು ವೇದಪರಂಪರೆಯೇ ಹೇಳಹೆಸರಿಲ್ಲದಂತಾಗುತ್ತಿತ್ತು.
ಜಿಡ್ಡು ಕೃಷ್ಣಮೂರ್ತಿ ಹೇಳಿರುವಂತೆ; “ಒಂದು ಸತ್ಯವನ್ನು ಒಪ್ಪಿಕೊಳ್ಳುವುದಕ್ಕಾಗಿ ನೂರಾರು ಸತ್ಯಗಳನ್ನು ಸುಳ್ಳು ಎಂದು ಹೇಳಲೇಬೇಕಾಗುವ ಪರಿಸ್ಥಿತಿಯನ್ನು ಅವು (ಸಂಘಟನೆಗಳು) ನಮಗೆ ತಂದೊಡ್ಡುತ್ತವೆ. ಅದು ನಮ್ಮಲ್ಲಿ ಇತರ ಸತ್ಯಗಳ ಬಗ್ಗೆ ದ್ವೇಷ ಅಸೂಯೆಯನ್ನು ತುಂಬುತ್ತವೆ. ಮನುಷ್ಯನ ಈ ದೌರ್ಬಲ್ಯವನ್ನು ಬಳಸಿಕೊಂಡೇ ಪ್ರಕೃತಿ ಆತನ ಚರಿತ್ರೆಯುದ್ದಕ್ಕೂ ವಿವಿಧತೆಯನ್ನೂ, ಹೋರಾಟವನ್ನೂ ವೃದ್ಧಿಸುತ್ತಾ ಬಂದಿದೆ. ಆತನ ಪರಿಪೂರ್ಣ ಬೆಳವಣಿಗೆಗೆ ಅಡ್ಡಿಯಾಗುತ್ತಲೇ ಬಂದಿದೆ.”
ಯಾವುದೋ ಒಂದು ಕಾಲಘಟ್ಟದಲ್ಲಿ ಆಗಿನ ಪರಿಸ್ಥಿತಿ ಪರಿಸರಕ್ಕನುಗುಣವಾಗಿ ಅನಾವರಣಗೊಂಡ ಸತ್ಯವನ್ನು ಸಾರ್ವಕಾಲಿಕ ಮತವನ್ನಾಗಿಸಿ, ಸಂಘಟನೆಗಳನ್ನು ರೂಪಿಸಿ, ಮನುಷ್ಯನ ಯೋಚಿಸುವ ಹಕ್ಕನ್ನೂ ಕಿತ್ತುಕೊಂಡರು. ಸತ್ಯದ ತುಣುಕನ್ನು ಪೂರ್ಣಮಾಡಲು ಒಂದೊಂದು ಮತವನ್ನಾಗಿ ಮಾರ್ಪಡಿಸಿ ತಮಗೆ ತಾವೇ ಬೇಲಿಹಾಕಿಕೊಂಡರು. ಅವುಗಳನ್ನು ಉಳಿಸಿ, ಬೆಳೆಸಿಕೊಳ್ಳುವುದಕ್ಕಾಗಿ ಸಮರಗಳನ್ನೇ ನಡೆಸಿ ರಕ್ತಪಾತದ ಚರಿತ್ರೆ ನಿರ್ಮಿಸಿದರು. ಅದು ಈಗಲೂ ಮುಂದುವರಿದಿರುವುದು ಕಾಲವೈಚಿತ್ರ್ಯ! “ಜಗತ್ತು ನನಗಾಗಿ ಇದೆ ಎನ್ನುವುದಕ್ಕಿಂತ ನಾನು ಜಗತ್ತಿಗಾಗಿ ಇದ್ದೇನೆ” ಎಂಬ ತಿಳಿವಳಿಕೆಯೇ ಅಧ್ಯಾತ್ಮ. ಅಲ್ಲಿ 'ನಾಸ್ತಿಕ' ಪದಗಳಿಗೆ ಅರ್ಥವೂ ಇಲ್ಲ; ಅಸ್ತಿತ್ವವೂ ಇಲ್ಲ. ಭಾರತದಲ್ಲಿ ಅಧ್ಯಾತ್ಮಿಕ ಪ್ರವೃತ್ತಿ ಇದ್ದಷ್ಟು ಕಾಲವೂ ಅದು ದಾಸ್ಯವನ್ನು ಅನುಭವಿಸಿರಲಿಲ್ಲ. ಅದು ತನ್ನ ಮಣ್ಣಿನ ಗುಣವಾದ ಅಧ್ಯಾತ್ಮವನ್ನು ಕೈಬಿಟ್ಟ ಕೂಡಲೇ ಪತನದ ಹಾದಿಹಿಡಿದು ದಾಸ್ಯಶೃಂಖಲೆಗಳಲ್ಲಿ ಬಂಧಿತವಾಯಿತು!