ನಾನು ತುಳುನಾಡಿನವ 'ತುಳುವ' ಎನ್ನುವುದೇ ಹೆಮ್ಮೆ!
ಮಂಗಳೂರು: ”ನಾನು ತುಳುನಾಡಿನವ, ಮೂಲ್ಕಿ ಬಳಿಯ ಬಪ್ಪನಾಡು ನನ್ನ ಹುಟ್ಟೂರು. ನಾನು ವರ್ಷಕ್ಕೆ ನಾಲ್ಕು ಬಾರಿ ಇಲ್ಲಿಗೆ ಭೇಟಿ ಕೊಡುತ್ತೇನೆ. ನಾನು ತುಳುವ ಎನ್ನುವುದೇ ನನಗೆ ಹೆಮ್ಮೆ. ತುಳು ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನುವ ಆಸೆ ಹಿಂದಿನಿಂದಲೂ ಇತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಈಗ ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಬರುತ್ತಿರುವ ಜೈ ಸಿನಿಮಾ ಕಥೆ ಕೇಳಿ ಇಷ್ಟಪಟ್ಟು ನಟಿಸುತ್ತಿದ್ದೇನೆ“ ಎಂದು ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
”ಕಾಮಿಡಿ ಸಿನಿಮಾಗಳಲ್ಲಿ ಅಭಿನಯ ಮಾಡಬೇಕು ಅನ್ನುವ ಆಸೆ ಇದೆ. ನನಗೆ ತುಳು ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಮಿಡಿಯನ್ ಆಗಿ ಅಭಿನಯಿಸಬೇಕು. ಆದರೆ ಈಗ ಜೈ ಸಿನಿಮಾದಲ್ಲಿ ಅತಿಥಿ ಪಾತ್ರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನೋಡೋಣ“ ಎಂದರು.
ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದಲ್ಲಿ ಜೈ ತುಳು ಸಿನಿಮಾದಲ್ಲಿ, ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸುತ್ತಿದ್ದಾರೆ. ಸದ್ಯ ಮಂಗಳೂರಿನಾದ್ಯಂತ ಶೂಟಿಂಗ್ ನಡೆಯುತ್ತಿದ್ದು ಇನ್ನು ಕೆಲವು ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ. ಜೈ ಸಿನಿಮಾಕ್ಕೆ ಮೂರನೆ ಹಂತದ ಚಿತ್ರೀಕರಣ ನಡೆಯುತ್ತಿದ್ದು ಹಾಡಿನ ಚಿತ್ರೀಕರಣ ಇನ್ನು ನಡೆಯಲಿದೆ.
ಜೈ ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ ನ ಸಿನಿಮಾ ಆಗಿದ್ದು ಸಿನಿಮಾಕ್ಕೆ ಕರಾವಳಿಯನ್ನು ಕೇಂದ್ರೀಕರಿಸಿ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ಉಡುಪಿ, ಕುಂದಾಪುರ ಮಂಗಳೂನಲ್ಲಿ ಚಿತ್ರೀಕರಣ ನಡೆದಿದೆ. ಜಿಲ್ಲೆಯ ಖ್ಯಾತನಾಮ ಕಲಾವಿದರು
ಸಿನಿಮಾದಲ್ಲಿದ್ದಾರೆ.
ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಬಿಗ್ ಬಜೆಟ್ ನ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಜೈ ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತಿದ್ದು, ಅನಿಲ್ ಶೆಟ್ಟಿ,
ಸುಧಾಕರ್ ಶೆಟ್ಟಿ ಹಾಗೂ ಮಂಜುನಾಥ್ ಅತ್ತಾವರ ನಿರ್ಮಾಪಕರಾಗಿದ್ದು ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು ಕಥೆ ಹಾಗೂ ಸಂಭಾಷಣೆಯನ್ನು ಪ್ರಸನ್ನ
ಶೆಟ್ಟಿ, ಬೈಲೂರು ಬರೆದಿದ್ದಾರೆ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ಮಾನ, ಸಂಕಲನ ರಾಹುಲ್ ವಸಿಷ್ಠ, ನಿರ್ಮಾಪಕರು ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮುಗ್ರೋಡಿ, ಮಂಜುನಾಥ ಅತ್ತಾವರ, ಸಹ ನಿರ್ಮಾಪಕರು ದೀಕ್ಷಿತ್ ಆಳ್ವ, ನೃತ್ಯ ಹಾಗೂ ಎಕ್ಸಿಕ್ಯೂಟಿವ್
ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್. ಜೈ ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ರಾಜ್ ದೀಪಕ್ ಶೆಟ್ಟಿ, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಮಾಣಿಬೆಟ್ಟು, ಉಮೇಶ್ ಮಿಜಾರ್, ಮೊದಲಾದವರು ಅಭಿನಯಿಸಲಿದ್ದಾರೆ.
ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಜೈ ತುಳು ಚಿತ್ರ ಆದಷ್ಟು ಬೇಗ ತೆರೆಕಾಣಲಿದೆ.
ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಮಂಜುನಾಥ್ ಅತ್ತಾವರ, ರೂಪೇಶ್ ಶೆಟ್ಟಿ ಉಪಸ್ಥಿತರಿದ್ದರು.