For the best experience, open
https://m.samyuktakarnataka.in
on your mobile browser.

ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಭಾಷೆ ಕಡ್ಡಾಯ

03:08 PM Feb 16, 2024 IST | Samyukta Karnataka
ನಾಮಫಲಕಗಳಲ್ಲಿ ಶೇ  60ರಷ್ಟು ಕನ್ನಡ ಭಾಷೆ ಕಡ್ಡಾಯ

ಬೆಂಗಳೂರು: ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಭಾಷೆ ಪ್ರದರ್ಶಿಸಲು ವಿಫಲವಾದರೆ ದಂಡ ವಿಧಿಸಲಾಗುವುದು ಮತ್ತು ಟ್ರೇಡ್ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ(ತಿದ್ದುಪಡಿ) ವಿಧೇಯಕ-2024 ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲಿ ಶೇ 60ರಷ್ಟು ಪ್ರದರ್ಶಿಸುವುದು ಕಡ್ಡಾಯ ಮಾಡಲಾಗಿದೆ. ನಿಯಮ ರೂಪಿಸಲು ಒಂದು ಸಮಿತಿ ರಚನೆ ಮಾಡಿ, ಹಲವು ಸುತ್ತಿನ ಚರ್ಚೆಗಳನ್ನು ಮಾಡಿದ್ದೇವೆ ಎಂದ ಅವರು, ಪೊಲೀಸ್​ ಅಧಿಕಾರಿಗಳನ್ನೂ ಒಳಗೊಂಡಂತೆ ಒಂದು ಎನ್ಫೋರ್ಸ್ಮೆಂಟ್​ ವಿಂಗ್(ಜಾರಿ ಘಟಕ) ಮಾಡಲಾಗುತ್ತದೆ. ಕಾನೂನು ಮತ್ತು ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲ ಎಂಟು ವಲಯ ಆಯುಕ್ತರಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಅಲ್ಲದೇ ಕನ್ನಡ ಕಣ್ಗಾವಲು ಎಂಬ ಆಪ್‌ ರೂಪಿಸಲಾಗುತ್ತಿದ್ದು, ಇಲ್ಲಿ ಕನ್ನಡ ಭಾಷೆಯ ಬಳಕೆ ಕುರಿತು ಯಾವುದೇ ವ್ಯಕ್ತಿ ದೂರು ನೀಡಬಹುದು. ಆ ದೂರುಗಳ ಬಗ್ಗೆ ಕ್ರಮವಹಿಸುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ಸಚಿವರು ಸದನಕ್ಕೆ ವಿವರಿಸಿದರು.