ನಾಯಿಗೂ ದೀಪಾವಳಿಗೆ ಹೊಸ ಬಟ್ಟೆ!
ಉಡುಪಿ: ದೀಪಾವಳಿ ಸಂದರ್ಭದಲ್ಲಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವುದು ಸಾಮಾನ್ಯ. ಹಬ್ಬದ ಖುಷಿ ಕೇವಲ ಮನುಷ್ಯರಿಗೆ ಮಾತ್ರವಲ್ಲ, ಸಾಕುಪ್ರಾಣಿಗಳಿಗೂ ಬೇಡವೇ? ಅವುಗಳೂ ನಮ್ಮಂತೆ ಸಡಗರ, ಸಂಭ್ರಮಿಸುವುದು ಬೇಡವೇ ಎಂಬ ಪ್ರಾಣಿ ದಯೆ ತೋರಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ನಾಯಿಗೂ ಹೊಸ ಬಟ್ಟೆ ತೊಡಿಸಿದರು!
ಹೊಸ ಟಿಶರ್ಟ್, ಚಡ್ಡಿ ಉಟ್ಟಿರುವ ಬೀದಿ ನಾಯಿಯೊಂದು ಶುಕ್ರವಾರ ಉಡುಪಿ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಸಾರ್ವಜನಿಕರ ಗಮನಸೆಳೆಯಿತು. ಒಂದಷ್ಟು ಮಂದಿ ಫೋಟೋ ಕ್ಲಿಕ್ಕಿಸಿದರು. ಕೆಲವರಂತೂ ಮುಸಿ ಮುಸಿ ನಕ್ಕರು. ನಿಜ ಸಂಗತಿ ತಿಳಿದುಬಂದಾಗ ಎಲ್ಲರೂ ವಿಸ್ಮಿತರಾದರು.
ಪ್ರಾಣಿಪ್ರಿಯ ನಿತ್ಯಾನಂದ ಒಳಕಾಡು ನಾಯಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ಉಡಿಸಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದ್ದರು.
ಈ ಬೀದಿನಾಯಿ ಕಳೆದ ಎರಡು ವರ್ಷದ ಹಿಂದೆ ವಾಹನ ಅಪಘಾತದಿಂದ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿತ್ತು. ಒಳಕಾಡು ಅವರು ಅದನ್ನು ರಕ್ಷಿಸಿ ಚಿಕಿತ್ಸೆಗೊಳಪಡಿಸಿದ್ದರು. ನಾಯಿಗೆ ಆಹಾರ ನೀಡಿ ಉಪಚರಿಸುತ್ತಿದ್ದರು. ನಾಯಿ ಮಾರುತಿ ವೀಥಿಕಾದಲ್ಲಿಯೇ ನೆಲೆ ಕಂಡಿತ್ತು.
ಅದೇ ನಾಯಿ ಇಂದು ಸಿಂಗಾರಗೊಂಡು ಅಲೆಯುತ್ತಿದೆ, ನಿತ್ಯಾನಂದ ಒಳಕಾಡು ಅವರ ಶ್ವಾನಪ್ರೀತಿಯನ್ನು ಮೆರೆಯುತ್ತಿದೆ. ನಾಯಿ ಖುಷಿಪಟ್ಟಿತೋ ಗೊತ್ತಿಲ್ಲ, ನಿತ್ಯಾನಂದ ಒಳಕಾಡು ಅವರಂತೂ ಬಹಳ ಸಂತಸಗೊಂಡರು.