ನಾರಿಶಕ್ತಿ ವಿರೋಧಿಗಳ ಮನಃಪರಿವರ್ತನೆ ಆಗಿದೆಯಾ?
ನಾರಿ ಶಕ್ತಿ ವಂದನಾ… ಭಾರತೀಯ ನಾರಿಯರು ಹೊಸ ಕನಸು ಕಾಣುತ್ತಿದ್ದಾರೆ. ಈ ದೇಶದ ಆಡಳಿತದಲ್ಲಿ, ನೀತಿ ನಿರೂಪಣೆಯಲ್ಲಿ ತಮಗೆ ದೊರೆಯಲಿರುವ ಪ್ರಾತಿನಿಧ್ಯದ ಮತ್ತು ಸ್ತ್ರೀಪರ ನಿಲುವುಗಳ ಮನಸ್ಸನ್ನು ಚುಕ್ಕಾಣಿ ಹಿಡಿದು ಬದಲಿಸುವ ಹಕ್ಕು ದೊರೆಯಲಿದೆ ಎನ್ನುವ ವಿಶ್ವಾಸ ಮೂಡಿದೆ.
ನೂತನ ಸಂಸತ್ತಿನಲ್ಲಿ ಮಂಗಳವಾರ ಮಂಡನೆಯಾಗಿರುವ ನಾರಿ ಶಕ್ತಿ ವಂದನಾ ಅಧಿನಿಯಮ, ಸರಿ ಸುಮಾರು ಐವತ್ತು ವರ್ಷಗಳ ಸ್ತ್ರೀ ಧ್ವನಿಗೆ ಮನ್ನಣೆ ದೊರೆಯುವ ಕಾಲವನ್ನು ಸನ್ನಿಹಿತವಾಗಿಸಿದೆ. ಶೇಕಡಾ ೩೩ರಷ್ಟು ಮೀಸಲಾತಿಯನ್ನು ಶಾಸನ ಸಭೆಗಳು ಮತ್ತು ಸಂಸತ್ತಿಗೆ ನಿರ್ಧರಿಸುವ ವಿಧೇಯಕ ಮತ್ತೆ ಮಂಡನೆಯಾಗಿದೆ. ಇನ್ನು ಹತ್ತು ತಿಂಗಳಿಗೆ ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಸಮಯ ಚಾಲೂ ಆಗುವಾಗ ಈ ವಿಧೇಯಕ ಮಂಡನೆಯಾಗಿರುವುದರ ಹಿಂದೆ ರಾಜಕೀಯ ಗಿಮಿಕ್ ಇದೆ ಎನ್ನುವ ಆರೋಪ ಸತ್ಯವಾದರೂ, ೨೦೨೯ರವರೆಗೆ ಇದರ ಅನುಷ್ಠಾನ ಅಸಾಧ್ಯ ಎನ್ನುವುದು ಈಗಲೇ ಗೊತ್ತಾಗಿದೆ.
ಇದಕ್ಕಾಗಿ ಕ್ರೆಡಿಟ್ ತೆಗೆದುಕೊಳ್ಳಲು ಈಗ ಎಲ್ಲ ಪ್ರಮುಖ ನಾಯಕರು ಪೈಪೋಟಿಗೆ ಇಳಿದಿದ್ದಾರೆ.
ಈ ಸಂದರ್ಭದಲ್ಲೇ ವಾಸ್ತವವಾಗಿ ಅರಿವಾಗುವುದು ಈ ಮಸೂದೆ ಮಂಡನೆ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ. ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಈಗ ಪೂರಕ ವಾತಾವರಣ ನಿರ್ಮಾಣವಾಗಲು ಬದಲಾದ ಪುರುಷ ಪ್ರಧಾನ ಮನಸ್ಸುಗಳಲ್ಲಿ ಉಂಟಾಗಿರುವ ಪರಿವರ್ತನೆಯೇ ಕಾರಣ ಎಂಬುದನ್ನು ಗಮನಿಸಬಹುದು.
ಕನ್ನಡದ ಮಣ್ಣಿನ ಮಗ ದೇವೇಗೌಡರು ಪ್ರಧಾನಿಯಾಗಿ ಪ್ರಥಮ ಬಾರಿಗೆ ಶೇಕಡಾ ೩೩ರಷ್ಟು ಮೀಸಲಾತಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಉಂಟಾದ ಪ್ರತಿರೋಧ, ಆಕ್ರೋಶ, ಅಬ್ಬಾ ! ಇಂದಿಗೂ ಇದು ಗಾಬರಿ ಹುಟ್ಟಿಸುವಂಥದ್ದು. ಅದೇ ನೆಪವಾಗಿಸಿ ಅವರ ಸರ್ಕಾರವೂ ಹೋಯಿತು.
ಆ ನಂತರದ ವಾಜಪೇಯಿ, ಮನಮೋಹನಸಿಂಗ್ ಈ ಎಲ್ಲರ ಸರ್ಕಾರಗಳೂ ಮಸೂದೆ ತಂದಾಗ, ಹಲವು ರಾಜಕೀಯ ನಾಯಕರು ಏನೆಲ್ಲ ಆಕ್ರೋಶ ಭರಿತ ಅಸಮಾಧಾನದ ಮಾತುಗಳನ್ನಾಡಿದೆನ್ನುವುದನ್ನು ಅವಲೋಕಿಸುವುದು ಮುಖ್ಯ.
ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸಿದಾಗ ಅಂದಿನ ಸಂಸತ್ ಸದಸ್ಯರು ಈಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿಯೂ ಆದ ಯೋಗಿ ಆದಿತ್ಯನಾಥರ ಟೀಕೆ ಹೀಗಿತ್ತು: ಪುರುಷರು ಸ್ತ್ರೀ ಲಕ್ಷಣಗಳನ್ನು ಅಭಿವೃದ್ಧಿ ಪಡಿಸಿಕೊಂಡರೆ ಅವರು ದೇವರಾಗುತ್ತಾರೆ; ಆದರೆ ಮಹಿಳೆಯರು ಪುರುಷ ಲಕ್ಷಣಗಳನ್ನು ಅಳವಡಿಸಿಕೊಂಡರೆ ರಾಕ್ಷಸರಾಗುತ್ತಾರೆ; ಮಹಿಳಾ ವಿಮೋಚನೆಯ ಪಾಶ್ಚಾತ್ಯ ವಿಚಾರಗಳು ಭಾರತೀಯ ಹಿನ್ನೆಲೆಯಲ್ಲಿ ಸರಿಯಾದವುಗಳಲ್ಲ ಎಂದು ಯೋಗಿ ೨೦೧೦, ಏಪ್ರಿಲ್ ೧೨ರಂದು ಬೆಂಕಿಯುಂಡೆ ಉಗುಳುವಂತಹ ವಿರೋಧವನ್ನು ವ್ಯಕ್ತಪಡಿಸಿದ್ದರು. ಸಂಸತ್ತಿನಲ್ಲಿ ಮಸೂದೆ ಮಂಡಿಸಿದಾಗ ವಿಧೇಯಕದ ಪರವಾಗಿ ಮತ ಚಲಾಯಿಸಲು ವಿಪ್ ನೀಡುವ ಪ್ರಶ್ನೆಯೇ ಇಲ್ಲ. ನಾವು ಸಾರ್ವಜನಿಕ ಪ್ರತಿನಿಧಿಗಳು. ಬಂಧಿತ ಕಾರ್ಮಿಕರಲ್ಲ. ಮಕ್ಕಳ ಆರೈಕೆಯಂತಹ ಅವರ ಮನೆ ಜವಾಬ್ದಾರಿಗಳ ಮೇಲೆ ಈ ಮಸೂದೆ ಪರಿಣಾಮ ಬೀರುವುದಿಲ್ಲವೇ? ಮಹಿಳೆಯರ ಪಾತ್ರಗಳ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ಗೋರಖಪುರ ಸಂಸದ ಆದಿತ್ಯನಾಥ ಪ್ರಶ್ನಿಸಿದ್ದರು!
ಮತ್ತೋರ್ವ ಸಂಸದರು, ಹಿರಿಯ ಜೆಡಿಯು ನಾಯಕರಾಗಿದ್ದ ಶರದ್ ಯಾದವ್, ಪರ್ ಕಟಿ ಮಹಿಳಾ' ಅಂದರೆ ಸಣ್ಣ ಕೂದಲಿನ ಬಾಬ್‌ಕಟ್ ಹೆಂಗಸರ ಬೇಡಿಕೆಯಿದು ಎಂದಿದ್ದರು. ಈ ಬಾಬ್‌ಕಟ್ ಮಹಿಳೆಯರು ಹಾಗೂ ನಗರ ಪ್ರದೇಶದ ಮಹಿಳಾ ರಾಜಕಾರಣಿಗಳು ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಹೇಗೆ ಪ್ರತಿನಿಧಿಸುತ್ತಾರೆ? ಮಹಿಳೆಯರ ಅಸಮಾನತೆ ಸ್ಥಿತಿಯನ್ನು ಇದು ಇನ್ನಷ್ಟು ಶಾಶ್ವತಗೊಳಿಸುತ್ತದೆ. ರಾಜಕೀಯದ ಅಪರಾಧೀಕರಣ, ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಮತ್ತು ಚುನಾವಣೆ ಸುಧಾರಣೆಯಂತಹ ದೊಡ್ಡ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳಿ ಎಂದು ಗುಡುಗಿದ್ದರು. ಹಾಗಾಗಿ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವುದಕ್ಕೇ ಸಾಧ್ಯವಾಗಿರಲಿಲ್ಲ. ೧೯೯೮ರಲ್ಲಿ ವಾಜಪೇಯಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದಾಗ ಆರ್‌ಜೆಡಿ ಸಂಸದ ಸುರೇಂದ್ರ ಯಾದವ ಮತ್ತು ಅಜಿತ್ ಕುಮಾರ್ ಮೆಹತಾ ಅವರು ಮಸೂದೆಯ ಪ್ರತಿಯನ್ನು ಹರಿದುಹಾಕಿದ್ದರು. ಅವರಿಗೆ ಮುಲಾಯಂ, ಲಾಲುಪ್ರಸಾದ ಯಾದವ ಬೆಂಬಲ. ವಾಜಪೇಯಿ ಸರ್ಕಾರದಲ್ಲಿ ಬಿಜೆಪಿ ಕೆಲವು ಸಂಸದರೂ ವಿರೋಧಿಸಿ ವಿಪ್ ಜಾರಿಗೊಳಿಸದಂತೆ ನೋಡಿಕೊಂಡಿದ್ದರು...! ಅಂದು ಆಕ್ರೋಶ ವ್ಯಕ್ತಪಡಿಸಿದವರಲ್ಲಿ ಬಹುತೇಕ ಮಂದಿ ಇಲ್ಲ... ಅವರ ಉತ್ತರಾಧಿಕಾರಿಗಳಿದ್ದಾರೆ... ಪಕ್ಷವಿದೆ.. ಯೋಗಿ, ಯಾದವ್ ಅವರ, ಅವರ ಪಕ್ಷಗಳು ಮನಃಪರಿವರ್ತನೆಯಾಗಿದೆಯಾ? ಆಗಿದ್ದರೆ ಗ್ರೇಟ್ ಹಿಂದುಳಿದ, ಅಲ್ಪಸಂಖ್ಯಾತ ಮಹಿಳೆಯರಿಗೆ ಮೀಸಲಾತಿ ಬೇಕೆಂಬ ಬಲವಾದ ಆಗ್ರಹ ತಣ್ಣಗಾಯಿತಾ? ಸಾಮಾಜಿಕ ನ್ಯಾಯ ಒತ್ತಾಸೆ ಹಾಗೇ ಉಳಿಯಿತಲ್ಲ? ಏಕೆಂದರೆ ಪ್ರಸ್ತುತ ಮಂಡನೆಯಾದ ನಾರಿ ಶಕ್ತಿ ವಂದನಾ ಮಸೂದೆಯಲ್ಲಿ ಅದೇ ಇಲ್ಲ. ೨೦೧೪ರ ಎನ್‌ಡಿಎ ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿ ಘೋಷಿಸುವ ಭರವಸೆಯೇನೋ ಇತ್ತು. ಆ ಐದು ವರ್ಷಗಳಲ್ಲಿ ಸಾಧ್ಯವಾಗಲಿಲ್ಲ. ೨೦೧೯ರಲ್ಲೂ ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಈ ಅಂಶವಿತ್ತು. ಈಗ ಚುನಾವಣೆ ಸಮೀಪ ಇರುವಾಗ ಈ ವಿಧೇಯಕ ಮಂಡಿಸಿ ಜಾಣ್ಮೆ ತೋರಿಸಲಾಗಿದೆ. ಏನಿದ್ದರೂ ಮಹಿಳಾ ಮೀಸಲಾತಿ ವಿರೋಧಿಸುವ ರಾಜಕಾರಣಿಗಳ, ಸಂಸತ್ ಸದಸ್ಯರ, ನೇತಾರರ ಮನಸ್ಸಿನಲ್ಲಾದ ಪರಿವರ್ತನೆ, ಜೊತೆಗೆ ಅವರ ಧ್ವನಿ ಅಡಗಿರುವುದರ ಪ್ರಯೋಜನ ಈಗ ಎನ್‌ಡಿಎ ಸರ್ಕಾರಕ್ಕೆ ಲಭಿಸಿರುವುದು ಸ್ಪಷ್ಟ. ವಾಸ್ತವವಾಗಿ ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಒಂದು ಬೃಹತ್ ಸಮೂಹ ಈ ದೇಶದ ಎಲ್ಲ ಚಟುವಟಿಕೆಗಳನ್ನು, ನೀತಿ ನಿರೂಪಣೆಯನ್ನು ಮತ್ತು ಆಳ್ವಿಕೆಯನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ವ್ಯವಸ್ಥೆಯಲ್ಲೂ ಅರ್ಧದಷ್ಟು ಪ್ರಾತಿನಿಧ್ಯ ಹೊಂದಿರಬೇಕು. ಇದು ಸಹಜ ನ್ಯಾಯ ಪರಿಕಲ್ಪನೆ. ಈ ಮನಸ್ಥಿತಿಯನ್ನು ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಮಹಿಳಾ ಸಂಕುಲ ತನ್ನ ಪ್ರಾತಿನಿಧ್ಯಕ್ಕಾಗಿ ಸಾಂವಿಧಾನಿಕ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೊರೆ ಹೋಗಬೇಕಾದದ್ದು ವಿಷಾದನೀಯವೇ ಸರಿ. ಯಾವ ರಾಜಕೀಯ ಪಕ್ಷಗಳೂ ಗೆಲ್ಲಲಾರದ ಅಥವಾ ಶಕ್ತಿ ಇಲ್ಲದ ಮಹಿಳೆಯರಿಗೆ ಟಿಕೆಟ್ ನೀಡಿದ ಉದಾಹರಣೆ ನೋಡಿದ್ದೀರಾ? ಸ್ವ ಇಚ್ಛೆಯಿಂದ ಟಿಕೆಟ್ ನೀಡಿದ್ದೇ ಇಲ್ಲ. ಇದು ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದ ಎಲ್ಲ ಶಾಸನಸಭೆಗಳ ಸ್ಥಿತಿ. ಟಿಕೆಟ್ ಘೋಷಿಸುವಾಗ ಇರುವ ಮಾನದಂಡವೆಂದರೆ, ಒಂದು ಸ್ಥಳೀಯ ಮತಗಳಿಕೆ ಪ್ರಭಾವ ಮತ್ತು ಬಂಡವಾಳ. ಮಹಿಳಾ ಸದಸ್ಯರಿದ್ದರೂ ಕೂಡ ಅವರಿಗೆ ಮತ ಚಲಾಯಿಸುವುದು ಅಸಾಧ್ಯ ಎನ್ನುವ ಧೋರಣೆ. ಎರಡನೆಯದ್ದು ಮಹಿಳೆಯರು ಮನೆ ಹೊರಗೆ ಕಾಲಿಡಬಾರದು ಎನ್ನುವ ಮನಸ್ಥಿತಿ!! ಮಹಾನ್ ಮಹಿಳಾ ನೇತಾರರು, ವಿದ್ವಾಂಸರು, ಹೋರಾಟಗಾರರು ಬೆಳೆದ ನೆಲದಲ್ಲಿ,
ಯತ್ರ ನರ‍್ಯಸ್ತು ಪೂಜ್ಯಂತೆ' ಎನ್ನುವ ಮನೋಭಾವ ಹೊಂದಿದ ದೇಶದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕೆಂದಾಗ ನೂರಾರು ತಕರಾರು ನೋವಿನ ವಿಷಯ.
ಶ್ರೀಮತಿ ಇಂದಿರಾಗಾಂಧಿ ಅವರ ರಾಜಕೀಯ ಆಳ್ವಿಕೆ, ಧೈರ್ಯಕ್ಕೆ ಇಡೀ ಜಗತ್ತೇ ಆ ಕಾಲದಲ್ಲಿ ತಲೆದೂಗಿದೆ. ಮಾಯಾವತಿ, ಮಮತಾ, ಜಯಲಲಿತಾ ಸ್ವತಂತ್ರವಾಗಿ ಒಂದು ರಾಜಕೀಯ ಪಕ್ಷವನ್ನು ಕಟ್ಟಿ ಬೆಳೆಸಿ, ಅಧಿಕಾರಕ್ಕೆ ತಂದು ಪುರುಷ ಪ್ರಾತಿನಿಧ್ಯವನ್ನು ಸಮರ್ಥವಾಗಿ ಪಕ್ಕಕ್ಕೆ ಸರಿಸಿದವರು.
ಮಹಿಳಾ ಮೀಸಲಾತಿ ಕಾಯ್ದೆಗಿಂತಲೂ ರಾಜಕೀಯ ಬದ್ಧತೆಯನ್ನು ಈ ಮೊದಲೇ ವ್ಯಕ್ತಪಡಿಸಿದ್ದರೆ ಎಷ್ಟೋ ಪ್ರಶಂಸನೀಯ ಕಾರ್ಯವಾಗುತ್ತಿತ್ತು.
ಈ ಮಟ್ಟಿಗೆ ಕರ್ನಾಟಕ ಮಾದರಿಯೇ. ಮಹಿಳಾ ಮೀಸಲಾತಿಯನ್ನು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ, ನಗರಸಭೆಗಳಿಗೆ, ಪುರಸಭೆ, ಸ್ಥಳೀಯ ಸಂಸ್ಥೆಗಳಿಗೆ ಜಾರಿಗೊಳಿಸಿದ ಪ್ರಥಮ ರಾಜ್ಯ ನಮ್ಮದು. ಅದೂ ಒಳಮೀಸಲಾತಿಯನ್ನೂ ಸಹ. ಸ್ಥಳೀಯ ಸಂಸ್ಥೆಗಳಿಗೆ ಶೇ. ೩೩ರಷ್ಟು ಮೀಸಲು ವಿಧೇಯಕವನ್ನು ಅಂಗೀಕರಿಸುವುದಕ್ಕೆ ಪೂರ್ವದಲ್ಲಿಯೇ ಕರ್ನಾಟಕ ಮಾದರಿಯಾಗಿತ್ತು.
ನಿಜ. ಸಾಮಾನ್ಯವಾಗಿ ಮಾಡುವ ಆರೋಪವೆಂದರೆ ಮಹಿಳೆಯರು ಕುರ್ಚಿಯಲ್ಲಿ ಕೂತಿದ್ದರೂ ಅಧಿಕಾರ ನಡೆಸುವವರು ಗಂಡ, ಮಗ, ಸೋದರ ಇತ್ಯಾದಿ ಎನ್ನುವುದು. ಆದರೆ ಕಾಯ್ದೆ- ಕಾನೂನು, ನೀತಿ ನಿರೂಪಣೆಗಳಲ್ಲಿ ಎಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳುವುದರಿಂದ, ಜೊತೆಗೆ ಅವನ್ನು ಅಲ್ಲಗಳೆದು ಕಾನೂನು ಕಟ್ಟಲೆಯಲ್ಲಿ ಒದ್ದಾಡುವುದನ್ನು ಯಾವ ಮಹಿಳೆಯೂ ಬಯಸುವುದಿಲ್ಲ. ಮಹಿಳಾ ಮೀಸಲಾತಿ ಕೊಟ್ಟ ನಂತರವೇ ಅಲ್ಲವೇ, ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದು, ಸಭೆಗಳಲ್ಲಿ ಘನತೆ- ಗಾಂಭರ‍್ಯ ಎಲ್ಲವೂ ಉಂಟಾದದ್ದು.
ದೋಷ ಇಲ್ಲವೆಂದಲ್ಲ. ಆದರೂ ಮನಸ್ಥಿತಿ ಬದಲಾಯಿಸಿಕೊಂಡು ಒಪ್ಪಿಕೊಳ್ಳುವ ಮತ್ತು ಗೌರವಿಸುವ ಗುಣ ಮುಖ್ಯ. ಸಂಸತ್ತು, ಶಾಸನ ಸಭೆಯ ಚರ್ಚೆ- ಘನತೆ ಹಾಳಾಗುತ್ತಿದೆ ಎನ್ನುವ
ಧೋರಣೆ ಹೊಂದಿದ್ದ ಯೋಗಿ ಆದಿತ್ಯನಾಥ, ಜನತಾದಳ, ಸಮಾಜವಾದಿ ಪಕ್ಷ, ಆರ್‌ಜೆಡಿ ಎಲ್ಲವೂ ಈಗ ನಿಜವಾಗಿ ಪರಿವರ್ತನೆಯಾಗಿದ್ದಕ್ಕೇ ಅಲ್ಲವೇ ಬೆಂಬಲಿಸುವುದು? ಸ್ತ್ರೀ ಶಕ್ತಿಯೇ ಅವರ ಮನೋಬಲದ ಸ್ಥೈರ್ಯ- ಧೈರ್ಯ.
ಇಷ್ಟಕ್ಕೂ ಈಗ ಅಂಗೀಕಾರಗೊಳ್ಳಲಿರುವ ಶೇ. ೩೩ರ ಮೀಸಲಾತಿ ಓಬಿಸಿಗೂ ದೊರೆಯಬೇಕಾಗಿದೆ. ದೇಶದ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಧ್ವನಿಗೆ ಮಹತ್ವ ಬರಬೇಕಿದೆ. ಈ ಮಧ್ಯೆ ಈಗ ಅಂಗೀಕಾರಗೊಂಡರೂ ೨೦೨೬ರ ನಂತರವೇ ಅದು ಅನುಷ್ಠಾನಗೊಳ್ಳುತ್ತದೆ ಎನ್ನುವುದನ್ನು ಸರ್ಕಾರ ಹೇಳಿದೆ. ಇದಕ್ಕೆ ತಾಂತ್ರಿಕವಾಗಿ ಕಾರಣ ನೀಡಿದ್ದರೂ, ಅದರ ಹಿಂದಿನ ಮರ್ಮ ಮಾತ್ರ ಇನ್ನೂ ಸ್ಪಷ್ಟವಾಗಬೇಕಿದೆ.
ತಂತ್ರಜ್ಞಾನ, ಅಂಕಿಸಂಖ್ಯೆ, ಇಷ್ಟೆಲ್ಲ ವ್ಯವಸ್ಥೆಗಳು ಇರುವಾಗಲೂ ಇದೇ ವರ್ಷದಿಂದ ಜಾರಿಗೊಳಿಸದಿರಲು ತಾಂತ್ರಿಕ ಅಂಶ ಸಬೂಬು ಆಗಿರಲಿಕ್ಕಿಲ್ಲವೇ?
ಜನಗಣತಿ, ಅದರೊಟ್ಟಿಗೆ ಜಾತಿ ಗಣತಿ, ಒಳಮೀಸಲಾತಿ ಇತ್ಯಾದಿಗಳ ಸುಳಿಯಲ್ಲಿ ಈ ಮಹಿಳಾ ಮೀಸಲು ವಿಧೇಯಕ ಅಥವಾ ನಾರಿಶಕ್ತಿ ಒದ್ದಾಡದಿರಲಿ, ಅವರ ಆಶಯಕ್ಕೆ ಭಂಗ ತರುವ ರಾಜಕಾರಣ ಮುಂದಿನ ದಿನಗಳಲ್ಲಿ ನಡೆಯದಿರಲಿ ಎನ್ನುವುದು ಜನಾಶಯ.