For the best experience, open
https://m.samyuktakarnataka.in
on your mobile browser.

ನಾಲಗೆಯ ತುದಿಯಲ್ಲಿ ಕನ್ನಡ ನಲಿಯಲಿ

12:30 AM Feb 22, 2024 IST | Samyukta Karnataka
ನಾಲಗೆಯ ತುದಿಯಲ್ಲಿ ಕನ್ನಡ ನಲಿಯಲಿ

`ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ' ಎಂಬ ಅರ್ಥಗರ್ಭಿತ ಸಾಲುಗಳನ್ನು ಕಿತ್ತೆಸೆದ ಸರಕಾರದ ಅಧೀನ ಇಲಾಖೆಯು ವಿದ್ಯಾವ್ಯವಸ್ಥೆಯ ಚಾರಿತ್ರ‍್ಯವನ್ನೇ ಹರಾಜಿಗಿಟ್ಟಿದೆ. ಗುಲಾಮಗಿರಿಯ ಸಂಕೇತವೆಂಬ ಶುದ್ಧ ಅವಿವೇಕದ ನಿರ್ಣಯ ಅಂಗೀಕರಿಸಿದ ಅಧಿಕಾರಿಗಳನ್ನು 'ಧೈರ್ಯವಾಗಿ ಪ್ರಶ್ನಿಸುವ' ಗೋಜಿಗೆ ಹೋಗದ ಸರಕಾರ ಏಕಕಾಲಕ್ಕೆ ಕನ್ನಡ ಭಾಷೆಯ ಉನ್ನತ ಸಂಸ್ಕೃತಿಯನ್ನೂ, ವಿಶಾಲ ಪರಂಪರೆಯನ್ನೂ, ಧೀಮಂತ ಸಾಹಿತಿಗಳ ಉದಾತ್ತ ಕೊಡುಗೆಗಳನ್ನೂ, ಕನ್ನಡಪರ ಮನಸ್ಸುಗಳನ್ನೂ, ವಿದ್ಯಾಮಂದಿರದಲ್ಲಿ ಸಾಕ್ಷಾತ್ ಭಗವಂತನನ್ನೇ ಕಾಣುವ ಎಳೆಯರ ಭಾವನೆಗಳನ್ನೂ ಅವಮಾನಿಸಿದೆ. ಗಾಯದ ಮೇಲೆ ಬರೆಯೆಂಬಂತೆ, ಕನ್ನಡ ನಾಡಿನ ಕೀರ್ತಿಯನ್ನು ಹಾಡಿ ಹೊಗಳುವ ಸರ್ವಶ್ರೇಷ್ಠ ನಾಡಗೀತೆಯ ಗಾಯನಕ್ಕೂ 'ಸೀಮಿತ' ವಿನಾಯತಿ ನೀಡುವ ಅಬದ್ಧತೆಯನ್ನು ಪ್ರದರ್ಶಿಸಿರುವ ಸರಕಾರ ಯಾರನ್ನು ಮೆಚ್ಚಿಸಲು ಹೊರಟಿದೆಯೆಂಬುದು ಬಯಲಲ್ಲಿ ಅಡಗಿರುವ ಸತ್ಯ! ಭಾರತಾಂತರ್ಗತ ಕರ್ನಾಟಕದ ಹಿರಿಮೆಯನ್ನು ಸಾರುವ 'ಜಯಭಾರತ ಜನನಿಯ ತನುಜಾತೆ'ಯನ್ನು ಐಚ್ಛಿಕ ವಿಭಾಗಕ್ಕೆ ಸೇರಿಸಲು ಪ್ರಯತ್ನಿಸುತ್ತಿರುವ ಸರಕಾರದ ಉದ್ದೇಶ ವೋಟಬ್ಯಾಂಕ್ ಭದ್ರತೆಯೆಂಬುದರಲ್ಲಿ ಅನುಮಾನವಿಲ್ಲ. ಆ ಆದೇಶದ ಪ್ರತಿಯನ್ನು ಓದುವ ಹೈಸ್ಕೂಲು ಹೈದನ ಮೂಗಿಗೂ ಸಿದ್ದರಾಮಯ್ಯ-ಶಿವಕುಮಾರ್ ನೇತೃತ್ವದ ರಾಜ್ಯ ಸರಕಾರದ ತುಷ್ಟೀಕರಣದ ವಾಸನೆ ಬಡಿಯದಿರದು. ಆದರೆ ಸಿದ್ದರಾಮಯ್ಯರ ಓಲೈಕೆ ರಾಜಕಾರಣಕ್ಕೆ ಬಲಿಯಾಗುತ್ತಿರುವುದು ಮಾತ್ರ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರ ಅನನ್ಯ ನಾಡಪ್ರೇಮ, ಅಸ್ಖಲಿತ ರಾಜ್ಯನಿಷ್ಠೆ ಮತ್ತು ಅವರ್ಣನೀಯ ಭಾರತಭಕ್ತಿ.
ನಮ್ಮ ಸರಕಾರದ ಎಡಬಿಡಂಗಿತನವನ್ನೂ, ಅಧಿಕಾರಿಗಳ ಅವಿವೇಕವನ್ನೂ, ಮಂತ್ರಿ - ಶಾಸಕರ ಲಾಲಸೆಯನ್ನೂ ಕಂಡಾಗ ಕಣ್ಮುಂದೆ ಹಾದುಹೋಗುವ ಮಹಾಪ್ರತಿಭೆಯೇ ಪಂಜೆ ಮಂಗೇಶರಾಯರು. 'ಭಗವಂತನ ನಾಮಸ್ಮರಣೆಯನ್ನು ಸದಾಕಾಲ ಮಾಡುವ ಆಸ್ತಿಕರ ಬಾಯಲ್ಲಿ ದೇವರ ಹೆಸರು ತಪ್ಪದು. ನನ್ನ ಬದುಕಿನ ಕೊನೆಗಾಲದಲ್ಲಿ ನಾಲಗೆಯು ಕೃಷ್ಣಾ ಕೃಷ್ಣಾ ಎಂದು ಕನವರಿಸುವಂತೆಯೇ ಕನ್ನಡ ಕನ್ನಡ ಎಂದು ನುಡಿಯಲಿ. ಭಾವನೆಗಳನ್ನು ಬೆಸೆದು ಮನಸ್ಸುಗಳನ್ನು ಒಗ್ಗೂಡಿಸಿ ಸಮರಸತೆಯ ಆನಂದವನ್ನು ಉಣಬಡಿಸುವ ಸಾಮರ್ಥ್ಯವಿರುವ ಕನ್ನಡವನ್ನು, ಮಣ್ಣಿನ ಸಂಸ್ಕೃತಿಯನ್ನು ನಾವೇ ದೂರೀಕರಿಸಿದರೆ ಹೇಗೆ. ರಾಜಮಹಾರಾಜರ ಕಾಲದಿಂದಲೂ ವೈಭವದಿಂದ ಮೆರೆದಾಡಿದ ಕನ್ನಡನಾಡಿನಲ್ಲಿ ಕನ್ನಡಕ್ಕೇ ಪ್ರಥಮ ಪ್ರಾಶಸ್ತ್ಯವೆಂಬುದು ಅಹಂಕಾರದ ಮಾತಲ್ಲ, ಅದು ಸ್ವಾಭಿಮಾನದ ಕೂಗು. ವಿದೇಶೀ ಆಳ್ವಿಕೆಯಡಿ ಇದ್ದೇವೆಂಬ ಮಾತ್ರಕ್ಕೆ ಮಾನಸಿಕವಾಗಿ ಆಂಗ್ಲರಾಗಬೇಕಿಲ್ಲ' ಎಂಬ ಮಾತಿನಿಂದ ಸುಪ್ತ ಭಾಷಾಪ್ರೇಮವನ್ನು ಬಡಿದೆಚ್ಚರಿಸಿದ ಮಂಗೇಶರಾಯರು, 'ಕನ್ನಡ ಸಾಹಿತ್ಯದ ಶಿಶುಗೀತೆಗಳ ಜನಕ'ರೆಂದೇ ಸುಪ್ರಸಿದ್ಧರು. ದಕ್ಷಿಣ ಕನ್ನಡದ ಬಂಟ್ವಾಳದ ರಾಮಪ್ಪಯ್ಯ - ಶಾಂತಾದುರ್ಗಾ ದಂಪತಿಗಳಿಗೆ ೧೮೭೪ರ ಫೆಬ್ರವರಿ ಇಪ್ಪತ್ತೆರಡರಂದು ಜನಿಸಿದ ಮಂಗೇಶರಾಯರು ಪದವಿ ಶಿಕ್ಷಣದ ಬಳಿಕ ಮಂಗಳೂರಿನಲ್ಲಿ ಕನ್ನಡ ಪಂಡಿತರಾಗಿ ಅಧ್ಯಾಪಕ ಜೀವನ ಆರಂಭಿಸಿದರು. ಅಚ್ಚುಕಟ್ಟಾದ ಬೋಧನಾ ಶೈಲಿ, ವಿದ್ಯಾರ್ಥಿಗಳೊಡನೆ ಬೆರೆತು ಜ್ಞಾನ ಹಂಚುವ ರೀತಿಯಿಂದ ಅತ್ಯಲ್ಪ ಕಾಲದಲ್ಲೇ ಶಿಷ್ಯಪ್ರಿಯ ಗುರುಗಳಾದ ಪಂಜೆಯವರು, ಶಿಕ್ಷಣ ಇಲಾಖೆಯಲ್ಲಿ ಹಂತಹಂತವಾಗಿ ಉನ್ನತ ಹುದ್ದೆಗಳನ್ನೇರಿದರು. ಬ್ರಿಟಿಷರ ಕಬಂಧಬಾಹುಗಳ ನಡುವೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಭಾರತೀಯತೆಯ ಸತ್ವ ರೂಪಿಸಲು ಕರೆಯಿತ್ತ ಪಂಜೆಯವರ ದೇಸೀ ಶೈಲಿಯ ಉಡುಪು, ಸ್ವಚ್ಛ ಕನ್ನಡದ ಮಾತು ನಮ್ಮವರದೇ ಅನಾದರಕ್ಕೆ ಪಾತ್ರವಾದರೂ ಬೇಸರಿಸದೆ ಮುನ್ನಡೆದ ಅವರು ಎರಡು ದಶಕಗಳ ಸಾರ್ಥಕ ಸೇವೆ ಸಲ್ಲಿಸಿದರು. ವಿದ್ಯಾರ್ಥಿ ಸಮುದಾಯವನ್ನು ಅಂಕ ಆಧಾರಿತ ವ್ಯವಸ್ಥೆಯೊಳಗೆ ಬಂಧಿಯಾಗಿಸಲು ಒಪ್ಪದ ಅವರು ಪ್ರಕೃತಿ ವಿಶ್ವವಿದ್ಯಾಲಯದ ಕಾಯಂ ಶಿಕ್ಷಾರ್ಥಿಗಳಾಗುವಂತೆ ಪ್ರೇರೇಪಿಸಿದರು. ಶಾಲಾ ಪರಿವೀಕ್ಷಣಾಧಿಕಾರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಅಧಿಕಾರವನ್ನು ಸದುಪಯೋಗಪಡಿಸಿ ಶಾಲೆಗಳಿಂದ ದೂರವೇ ಉಳಿದಿದ್ದ ಉಪೇಕ್ಷಿತ ವರ್ಗದ ಮಕ್ಕಳಿಗೆ ವಿದ್ಯಾಭಾಗ್ಯ ನೀಡಲು ಶ್ರಮಿಸಿದರು. ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕೆಂದು ಬಾಯಲ್ಲಷ್ಟೇ ಸಾರದೆ ನೂರು ವರ್ಷಗಳ ಹಿಂದೆಯೇ ಅದನ್ನು ಕಾರ್ಯರೂಪಕ್ಕೆ ತಂದ ಪಂಜೆಯವರನ್ನು ನೆನೆಯದಿದ್ದರೆ ಅದು ಕೃತಘ್ನತೆಯ ಪರಮಾವಧಿ ಆದೀತು. ಕಡ್ಡಾಯ ಶಿಕ್ಷಣದ ಹಕ್ಕನ್ನು ಸಂವಿಧಾನ ಘೋಷಿಸುವ ದಶಕಗಳ ಮೊದಲೇ ಅದನ್ನು ಆಚರಣೆಗೆ ತಂದು ದೀನದಲಿತರ ಮನೆಯಲ್ಲೂ ವಿದ್ಯಾಸರಸ್ವತಿಯನ್ನು ಪ್ರತಿಷ್ಠಾಪಿಸಿ ಸಾಮಾಜಿಕ ಬದಲಾವಣೆಯ ಕಹಳೆಯೂದಿದ ಪಂಜೆಯವರ ದೂರದೃಷ್ಟಿ ವಿಶಿಷ್ಟ. ವಿವಿಧ ವರ್ಗಗಳ ಚಿಣ್ಣರೊಂದಿಗೆ ಸಹಭೋಜನವನ್ನೂ ನಡೆಸಿ ವಿಶ್ವಾಸ ಗಳಿಸಿದ ಅವರು, 'ಮಕ್ಕಳು ಶಾಲೆಗೆ ಬರದಿದ್ದರೆ ಶಾಲೆಯೇ ಮಕ್ಕಳಿದ್ದಲ್ಲಿ ಹೋಗಲಿ' ಎಂದು ಕರೆಯಿತ್ತ ಮಹಾನುಭಾವ. ವಿರೋಧಗಳನ್ನು, ಅಡ್ಡಮಾತುಗಳನ್ನು ಕೊಂಚವೂ ಲೆಕ್ಕಿಸದೆ ಶಾಲೆಯನ್ನು ಸಾಮಾಜಿಕ ಸಮರಸತೆಯ ತಾಣವಾಗಿಸಿದ ನಿಲುವು ಸ್ತುತ್ಯರ್ಹ.
ಸಾಹಿತ್ಯಕ್ಷೇತ್ರಕ್ಕೆ ಪಂಜೆಯವರಿತ್ತ ಕೊಡುಗೆಯಂತೂ ಅನನ್ಯ. ವೃತ್ತಿಜೀವನದ, ಪ್ರವಾಸದ ಅನುಭವಗಳನ್ನೆಲ್ಲ ಧಾರೆಯೆರೆದು ಸಾಹಿತ್ಯಲೋಕಕ್ಕೆ ಸಮರ್ಪಿಸಿದ ಅವರ ಬರಹ ಮತ್ತು ಬದುಕು ಸದಾ ಪ್ರೇರಣಾದಾಯಿ. ಆಂಗ್ಲಭಾಷೆಯಲ್ಲಿ ಪ್ರಕಾಂಡ ಪಾಂಡಿತ್ಯವಿದ್ದರೂ, ಬರೆಯಬಲ್ಲ ಅವಕಾಶಗಳಿದ್ದರೂ ಅವರ ಲೇಖನಿಯಿಂದ ಹೊರಹೊಮ್ಮಿದ್ದು ಅಕ್ಷರ ಜ್ಞಾನವೇ ಇಲ್ಲದಿದ್ದವನ ಎದೆಯಲ್ಲಿ ಕನ್ನಡತನದ ಭಾವ ಸ್ಫುರಿಸುವ ಸಾಹಿತ್ಯ. 'ನಾಗರ ಹಾವೆ ಹಾವೊಳು ಹೂವೆ', 'ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೊ' ಇತ್ಯಾದಿ ಮನಮೋಹಕ ಭಾವಪೂರ್ಣ ಕವನಗಳನ್ನು ಕನ್ನಡ ಸಾಹಿತ್ಯದೇವಿಯ ಪಾದಕಮಲಗಳಿಗೆ ಸಮರ್ಪಿಸಿದ ಮಂಗೇಶರಾಯರು ಶಿಶುಸಾಹಿತ್ಯಕ್ಕೆ ಭದ್ರ ತಳಪಾಯ
ಹಾಕಿದ ಮಹಾಮಹಿಮ. ತಮ್ಮ ಪ್ರೀತಿಯ ಸಹೋದರನ ಸಾವಿನ ಬೇನೆಯಿಂದ ಹೊರಬರಲು ಚಡಪಡಿಸಿದ ಪಂಜೆಯವರು ಆ ನೋವನ್ನು ಅಕ್ಷರಕ್ಕಿಳಿಸಿ ಕನ್ನಡದಲ್ಲಿ ಮೊದಲಬಾರಿಗೆ ಕಥನಕವನದ ರೂಪವನ್ನು ಪರಿಚಯಿಸಿದರು. ಕವಿಶಿಷ್ಯ, ಹರಟೆ ಮಲ್ಲ ಮೊದಲಾದ ಕಾವ್ಯನಾಮಗಳ ಮೂಲಕ ಕಥೆ, ಪತ್ತೇದಾರಿ ನೀಳ್ಗಥೆ, ಕವನಗಳನ್ನು ಬರೆದ ಅವರ ಪಂಚಕಜ್ಜ, ಐತಿಹಾಸಿಕ ಕಥಾವಳಿ, ಶಬ್ದಮಣಿ ದರ್ಪಣ, ಹುತ್ತರಿ ಹಾಡು ಮುಂತಾದ ಕೃತಿಗಳು ಪ್ರಸಿದ್ಧವಾದುದು. ಮಕ್ಕಳ ಸಂತೋಷಕ್ಕಾಗಿ
ಹಾಡುಗಳನ್ನು ರಚಿಸಿದ ಅವರು ಕನ್ನಡ ಪಠ್ಯಪುಸ್ತಕವನ್ನೂ ಬರೆದ ಪ್ರತಿಭಾಶಾಲಿ.
ಬ್ರಿಟಿಷ್ ಕಾಲಾವಧಿಯಲ್ಲಿ ಕನ್ನಡ ಸಂಸ್ಕೃತಿಯ ವಿಸ್ತಾರಕ್ಕೆ ತೊಡಕಾಗಿದ್ದಾಗ ಮೌನವಾಗಿಯೇ ಅದನ್ನೆದುರಿಸಿ ಗೆದ್ದ ಮೃದುಹೃದಯಿ ಪಂಜೆಯವರಿಗೆ ಮಕ್ಕಳೆಂದರೆ ಅಚ್ಚುಮೆಚ್ಚು. ಮಂಗಳೂರಿನಲ್ಲಿ ಬಾಲಮಂಡಳವನ್ನು ಸ್ಥಾಪಿಸಿ ಮಕ್ಕಳಿಗಾಗಿ ಸಾಹಿತ್ಯಲೋಕವನ್ನೇ ಸೃಷ್ಟಿಸಿ ರಸದೌತಣ ಉಣಬಡಿಸಿದ ಪಂಜೆಯವರ ದೃಷ್ಟಿಯಲ್ಲಿ ಚಿತ್ರ ಕಣ್ಣಿಗೆ ಕಟ್ಟುವುದೇ ನಿಜವಾದ ಕವನ. ಎಳೆಯರಿಗಾಗಿ ಹಾಡು ಬರೆದು, ತಾವು ಹಾಡಿ,
ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಮಂಗೇಶರಾಯರು ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪೀಠವನ್ನಲಂಕರಿಸಿ ಆಡಿದ ಮಾತು ಸದಾ ಸ್ಮರಣೀಯವೆಂಬ ಡಿವಿಜಿ ನುಡಿ ಅಕ್ಷರಶಃ ಸತ್ಯ. ಬದುಕಿನ ಅಂತಿಮ ಕ್ಷಣದಲ್ಲಿ ಕನ್ನಡವೇ ಪ್ರಧಾನವಾಗಲೆಂಬ ಅವರ ಭಾವಪೂರ್ಣ ನುಡಿಗೆ ತುಂಬಿದ ಸಭೆ ಕ್ಷಣಕಾಲ ಸ್ತಬ್ಧವಾಗಿತ್ತಂತೆ. ಕನ್ನಡತನದ ಹಿರಿಮೆಯನ್ನು ಎತ್ತಿ ಹಿಡಿದು ಆಚಾರ್ಯ ಪರಂಪರೆಯ ಅಗ್ರಗಣ್ಯರಾಗಿ ಬಾಳಿದ ಪಂಜೇ ಮಂಗೇಶರಾಯರು ನಾಡಿನ ಹೆಮ್ಮೆ.
ಕನ್ನಡಕ್ಕೆ ಸಾಕ್ಷಾತ್ ಭಗವಂತನ ಸ್ಥಾನವನ್ನಿತ್ತ ಆ ಪುಣ್ಯಾತ್ಮನ ಜನ್ಮಸ್ಥಾನವನ್ನು ಸಾಹಿತ್ಯ ಪಾರಂಪರಿಕ ತಾಣವನ್ನಾಗಿ ಸಮೃದ್ಧಗೊಳಿಸುವ ಯೋಗ್ಯತೆಯಿಲ್ಲದ ಸರಕಾರ ಕನ್ನಡದ ಸಾಂಸ್ಕೃತಿಕ ಸೊಬಗಿನ ಮೇಲೆ ಸವಾರಿ ನಡೆಸುತ್ತಿದೆ.
ಪಂಜೆಯವರ ಕನ್ನಡಪ್ರೇಮದ ಅಂತರಂಗವನ್ನು ಅರಿತು ನಡೆಯುವ ಬುದ್ಧಿವಂತಿಕೆ, ವಿನಯವಂತಿಕೆಯಂತೂ ಮೊದಲೇ ಇಲ್ಲ. ಕನಿಷ್ಠಪಕ್ಷ ಮಂಗೇಶರಾಯರ ನೂರನಲ್ವತ್ತನೆಯ ಜನ್ಮದಿನದ ಸಂಭ್ರಮದ ನೆಪದಲ್ಲಾದರೂ, ಕನ್ನಡಕ್ಕೆ ಅಪಚಾರ ಬಗೆಯುವುದಿಲ್ಲವೆಂಬ ನಿಲುವು ಸ್ವೀಕರಿಸಿದರೂ ಸಾಕು, ಆಡಳಿತ ವ್ಯವಸ್ಥೆಗೆ ಕನ್ನಡಿಗ
ಸದಾ ಕೃತಜ್ಞ. ಭಗವತ್ಸ್ವರೂಪಿ ಮಕ್ಕಳ ಮನದಲ್ಲಿ ವಿಷಬೀಜ ಬಿತ್ತಿ ರಾಜಕೀಯದ ಬೇಳೆ ಬೇಯಿಸಲು ಹೊರಟಿರುವ ಪ್ರತಿಯೊಬ್ಬರೂ ಒಂದೇ ಒಂದು ಬಾರಿ ಪಂಜೆಯವರ
ದೈವೀಕನ್ನಡದ ಭಾವನೆಯನ್ನು ಅರ್ಥೈಸಿಕೊಳ್ಳಲೆಂಬುದೇ ನಮ್ಮ ಅಪೇಕ್ಷೆ. ಓ ಆಳುವ ಮಹಾನುಭಾವರೇ, ಅಧಿಕಾರ, ಸಂಪತ್ತು, ದೌಲತ್ತು ಶಾಶ್ವತವಲ್ಲ.
ಆದರೆ ವಿಶ್ವದ ಮೂಲೆಮೂಲೆಗಳಿಂದ ಕನ್ನಡದ ಮಣ್ಣಿಗೆ ಕಾಲಿಡುವ ಯಾತ್ರಿಕರು ಇಲ್ಲಿ ಕಾಣುವ ಕನ್ನಡತನದ ದೇವಭಾವಕ್ಕೆ ಅಪಚಾರ ಬಗೆಯದಿರಿ. ನಿಮ್ಮಗಳ ಸ್ವಾರ್ಥಕ್ಕೆ ಪಂಜೆ, ಆಲೂರು, ಕುವೆಂಪು ಮೊದಲಾದ ಋಷಿತುಲ್ಯರು ಕಂಡ ಭಾರತಮಾತೆಯ ತನುಜಾತೆ ಭುವನೇಶ್ವರಿಯನ್ನು ಅವಮಾನಿಸದಿರಿ. ಮಂಗೇಶರಾಯರಂತಹ ಕನ್ನಡಭಕ್ತನ ಜನ್ಮೋತ್ಸವದ ಹಿನ್ನೆಲೆಯಲ್ಲಾದರೂ ಕೊಂಚ ಬದಲಾಗಿ.