ನಾಳಿನ ಆಶಾಕಿರಣ ಈಗಿನ ಉತ್ಸಾಹದ ಮೂಲ
ಗುರೂಜಿಯವರು(ಪಂ.ರಾಜೀವ ತಾರಾನಾಥ) ಆಸ್ಪತ್ರೆಗೆ ಸೇರಿ ತಿಂಗಳಾಗುತ್ತ ಬಂದಿತ್ತು. ಕೃಷ್ಣಾ ನೋಡಿಕೊಳ್ಳುತ್ತಿದ್ದು, ಮಧ್ಯೆ ಮಧ್ಯೆ ಅವರ ಶಿಷ್ಯಂದಿರು ಬಂದು ಇದ್ದು ಹೋಗುತ್ತಿದ್ದರು. ನಾನೂ ಕೆಲವು ದಿವಸ ಅಲ್ಲೇ ಇದ್ದು, ಅವರನ್ನು ನೋಡಿಕೊಳ್ಳಬೇಕಾಗಿತ್ತು, ಆಗಿರಲಿಲ್ಲ. ಒಂದು ದಿನ ಮೈಸೂರಿಗೆ ಹೋಗಲೇಬೇಕಾದಾಗ ಕೃಷ್ಣಾಗೆ ಕರೆ ಮಾಡಿದೆ. ಅವರಿಗೆ ಸ್ವಲ್ಪ ಸಮಾಧಾನವಾದಂತೆ ಕಂಡಿತು. ಅವತ್ತು ಕೃಷ್ಣ ಅದೇ ಆಸ್ಪತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕಾಗಿತ್ತು. ಗುರೂಜಿಯವರನ್ನು ಬಿಟ್ಟು ಹೋಗುವಂತಿರಲಿಲ್ಲ. ನಾನು ಹೋದದ್ದು ಅವರಿಗೆ ಅನುಕೂಲವಾಯಿತು. ನಾನು ಆಸ್ಪತ್ರೆಯ ಅವರ ರೂಂಗೆ ಪ್ರವೇಶಿಸಿದಾಗ ಕೃಷ್ಣಾ ನಾನು ಬಂದದ್ದನ್ನು ತಿಳಿಸಿದ ಕೂಡಲೇ ನನ್ನನ್ನು ನೋಡಿ ಅವರ ಮುಖ ಎಷ್ಟು ಅರಳಿತೆಂದರೆ, ಆ ಪ್ರಫುಲ್ಲತೆ, ಪ್ರಸನ್ನತೆಯನ್ನು ಮರೆಯಲು ಸಾಧ್ಯವೇ ಇಲ್ಲ. ನಾನಿರುವವರೆಗೂ ಆ ನಗು ನನ್ನೊಂದಿಗಿರುತ್ತದೆ.
ಕೃಷ್ಣಾ ಗುರೂಜಿಯವರನ್ನು ನನ್ನ ವಶಕ್ಕೊಪ್ಪಿಸಿ ಕಾರ್ಯಕ್ರಮಕ್ಕೆ ಹೊರಟರು. ಪ್ರತಿಸಲದಂತೆ ಈ ಸಲವೂ ಕೇಳಿದರು, ಇಲ್ಲೇ ಇರ್ತೀರಲ್ಲ?'' ನಾನು ಯಾವಾಗ ಹೋದರೂ ಒಂದೆರಡು ದಿನವಾದರೂ ಇದ್ದು ಹೋಗಲೇಬೇಕೆಂಬುದು ಅವರ ಆಗ್ರಹವಾಗಿರುತ್ತಿತ್ತು.
ಒಂದೆರಡು ದಿನ ಇದ್ದು, ಹೋಗ್ರಿ, ಖುಷಿಯಾಗ್ತದೆ'' ಅಂದರು. ಈ ಸಲ ಇಲ್ಲ ಗುರೂಜಿ, ಊರಿಂದ ತಂಗಿಯ ಸಂಸಾರ ಬಂದಿದೆ, ಮುಂದಿನ ಸಲ ಬಂದಾಗ ಇರ್ತೀನಿ'' ಅನ್ನುತ್ತ ಹರಟೆಗೆ ತೊಡಗಿದೆ. ಮಾತನಾಡುವುದಕ್ಕೋಸ್ಕರ ಮಾಸ್ಕ್ ತೆಗೆದರೂ ಮೈ ತುಂಬ ಸೂಜಿಗಳು ಶರಶಯ್ಯೆಯಲ್ಲಿ ಮಲಗಿದ ಭೀಷ್ಮನಂತೆ ಕಂಡರು. ಆ ಸೂಜಿಗಳು ನನಗೇ ಚುಚ್ಚಿದಷ್ಟು ಘಾಸಿಯಾಗುತ್ತಿತ್ತು. ತೋರಗೊಡದೆ ಮಾತನಾಡುತ್ತಿದ್ದೆ. ತಾಯಿಯ ನೆನಪು ತೆಗೆದು ಮಾತನಾಡುತ್ತಿರುವಾಗಲೇ ಆಯಾಸವಾದಂತಾಯ್ತು, ಕಣ್ಣು ಮುಚ್ಚಿಕೊಂಡು ನನ್ನನ್ನು ಹತ್ತಿರ ಕರೆದು ತಲೆ ಸವರುವಂತೆ ಹೇಳಿದರು. ಅವರಿಗೆ ನಿದ್ದೆ ಬರುವವರೆಗೂ ತಲೆ ಸವರುತ್ತಲೇ ಇದ್ದೆ. ಮಧ್ಯೆ ಎಚ್ಚರವಾಗಿ ಕೈಸವರುವಂತೆ ಹೇಳಿದರು. ಹಾಗೇ ಮಾಡುತ್ತ ಕುಳಿತೆ. ತುಟಿ ಒಣಗಿದಂತಾಯಿತು. ಒಂದೇ ಒಂದು ಗುಟುಕು ನೀರು ಕುಡಿಸಿದೆ. ಹೆಚ್ಚು ನೀರು ಕೊಡುವಂತಿರಲಿಲ್ಲ. ಅದೇ ರೀತಿ ನಾಲ್ಕೈದು ಸಲ ಕುಡಿಸಿದೆ, ಅಷ್ಟರಲ್ಲಿ ಅವರ ಸಹಪಾಠಿಯೊಬ್ಬರು ತಮ್ಮ ಪತಿಯೊಂದಿಗೆ ಬಂದರು. ಗುರೂಜಿಯವರು ನನ್ನನ್ನು ಅವರಿಗೆ ಪರಿಚಯಿಸಿದರು. ಅವರೊಂದಿಗೆ ಮಾತನಾಡುತ್ತಿರುವಾಗಲೇ, ಯು.ಆರ್.ಅನಂತಮೂರ್ತಿಯವರ ಪತ್ನಿ ಮತ್ತು ಮಗ ಬಂದರು. ಅವರೊಂದಿಗೆ ಮಾತನಾಡುತ್ತಿರುವಾಗಲೇ ನನ್ನ ತಂಗಿ ಬಂದಳು, ನಾನು ಅವಳನ್ನು ಪರಿಚಯಿಸಿದಾಗ ಅವಳು
ಲಗೂ ಆರಾಮಾಗಿ ಮನಿಗೆ ರ‍್ರಿ ಸರ್'' ಅಂದಳು, ನಾನು ಮನಿಗೆ ಬಂದರೆ ಏನು ಕೊಡ್ತೀ? ಎಂದು ತಮಾಷೆ ಮಾಡಿದಾಗ ಅವಳು ರೊಟ್ಟಿ ಎಣ್ಣೆಗಾಯಿ ಪಲ್ಲೆ ಕೊಡ್ತೀನಿ ಸರ್, ಅಂದಾಗ ಎಲ್ಲರೂ ನಕ್ಕೆವು. ನಾನು ಮೈಸೂರಿಗೆ ಹೋದರೆ ಎಣ್ಣೆಗಾಯಿ ಪಲ್ಲೆ, ಆಂಧ್ರ ಶೈಲಿಯ ಆವುಕಾಯಿ ಉಪ್ಪಿನಕಾಯಿ ಮಾಡಿಕೊಂಡು ಹೋಗುತ್ತಿದ್ದೆ. ಅದು ಅವರಿಗೆ ಅತ್ಯಂತ ಪ್ರಿಯವಾದ ಖಾದ್ಯ. ಕೆಲವೊಂದು ಸಲ ಅಲ್ಲೇ ಹೋಗಿ ಮಾಡಿಕೊಟ್ಟಿದ್ದಿದೆ. ಹೀಗೆ ಮಾತನಾಡುವಾಗ ಕಫ ಅವರನ್ನು ಹಣ್ಣುಮಾಡುತ್ತಿತ್ತು. ಲವಲವಿಕೆ ಮಾತ್ರ ಕಡಿಮೆಯಾಗುತ್ತಿರಲಿಲ್ಲ. ಆ ದಿನ ಬೆಂಗಳೂರಿಗೆ ವಾಪಸ್ ಬರಬೇಕಾಯ್ತು. ನಂತರ ಬಿಡುವು ಮಾಡಿಕೊಂಡು ಸ್ವಲ್ಪ ದಿನ ಮೈಸೂರಿಗೆ ಬಂದು ಗುರೂಜಿಯವರನ್ನು ನೋಡಿಕೊಳ್ಳಬೇಕಾಗಿತ್ತು. ನನಗೇ ಜ್ವರ ಕಾಡಿದ್ದರಿಂದ ಹೋಗಲಾಗಲಿಲ್ಲ. ಕೃಷ್ಣಾ ಅವರಿಗೆ ಕರೆ ಮಾಡಿ ವಿಚಾರಿಸುತ್ತಲೇ ಇದ್ದೆ. ಒಂದು ದಿನ ಕೃಷ್ಣಾ ಕಡೆಯಿಂದ ಮೆಸೇಜ್ `ಗುರೂಜಿಯವರ ಸ್ಥಿತಿ ಗಂಭೀರವಾಗಿದೆ' ಎಂದು ನನಗೆ ತಡೆಯಲಾಗದೇ ಹೊರಟೇಬಿಟ್ಟೆ. ಸಾಧ್ಯವಾದರೆ ನಾಲ್ಕೈದು ದಿನ ಇದ್ದು ನೋಡಿಕೊಳ್ಳಲು ಸಿದ್ಧವಾಗೇ ಹೊರಟುಬಿಟ್ಟೆ. ನಾನು ತಲುಪಿದಾಗ ಸುಮಾರು ಐದು ಗಂಟೆ, ನಾನು ಹೋದ ಕೂಡಲೇ ಗುರೂಜಿಯವರನ್ನು ನೋಡಲು ಐಸಿಯೂಗೆ ಕರೆದೊಯ್ದರು.
ಗುರೂಜಿಯವರು ಕಣ್ಣು ತೆರೆದು ನೋಡುವ ಸ್ಥಿತಿಯಲ್ಲಿರಲಿಲ್ಲ. ಆದರೂ ಅಭ್ಯಾಸದಂತೆ ಅವರ ಕೈಸವರುತ್ತ ನಿಂತೆ, ಒಂದು ಬಾರಿ ಅವರ ಮೈ ಕಂಪಿಸಿತೆ? ಭ್ರಮೆಯಾಗಿತ್ತೇ? ತಿಳಿಯಲಿಲ್ಲ. ಸುಮಾರು ಹತ್ತು ನಿಮಿಷ ಹಾಗೇ ನಿಂತೆ, ಒಂದೆರಡು ಬಾರಿ ಜೋರಾಗಿ ಕೆಮ್ಮು ಬಂತು, ಗಂಟಲು ತುಂಬಾ ಕಫ ತುಂಬಿಕೊಂಡಿತ್ತು. ಹೊರಗೆ ಬಂದು ಕೃಷ್ಣಾಗೆ ಹೇಳಿದೆ ಅವರು ಡಾಕ್ಟರಿಗೆ ಹೇಳಿದಾಗ, ಹಾಗೇನು ಇಲ್ಲವಲ್ಲ ಅಂದರಂತೆ, ಮುಂದೆ ಸ್ವಲ್ಪ ಹೊತ್ತಿನಲ್ಲೇ ಗುರೂಜಿ ಇನ್ನಿಲ್ಲವೆಂದು ಘೋಷಿಸಿಬಿಟ್ಟರು. ಸರೋದದ ಒಂದು ತಂತಿ ಫಟ್ಟೆಂದು ಹರಿದಂತೆ ಭಾಸವಾಯಿತು. ನಾದ ತರಂಗ ಸ್ತಬ್ಧವಾಯಿತು.ಅವರೊಂದಿಗೆ ಕಳೆದ ಒಂದೊಂದು ಕ್ಷಣವೂ ಮರುಕಳಿಸತೊಡಗಿತು. ಕಾಲು ಶತಮಾನಗಳ ಒಡನಾಟ ಧಾರವಾಡದಿಂದ ಮೈಸೂರಿಗೆ ಬಂದರೆ ಅವರ ಮನೆಯಲ್ಲೇ ಉಳಿಯಬೇಕು. ಆ ಮೇರು ವ್ಯಕ್ತಿತ್ವದ ಮುಂದೆ ನಾನು ಅತ್ಯಂತ ಚಿಕ್ಕವಳಾದರೂ ಬಹುವಚನದಲ್ಲೇ ಕರೆಯುತ್ತಿದ್ದದ್ದು, ನನ್ನ ಮೇಲೆ ಪ್ರೀತಿ-ವಾತ್ಸಲ್ಯದ ಧಾರೆಯನ್ನೇ ಎರೆದಿದ್ದಾರೆ. ನೀವು ಬರಿಬೇಕು, ನೀವು ಬರೀಬೇಕು ಎಂದು ಒತ್ತಾಯಿಸುತ್ತಲೇ ಇರುತ್ತಿದ್ದರು. ನಾನು ಉದಾಸೀನದಿಂದ ಮಾತನಾಡಿದರೆ, ನಿರುತ್ಸಾಹ ತೋರಿದರೆ ಅವರು ಹೇಳುತ್ತಿದ್ದ ಮಾತು ನಾಳೆ ನಾವು ಮಾಡಬೇಕಾದ ಕೆಲಸ ಇನ್ನೂ ಇದೆ ಎಂದುಕೊಂಡರೆ ನಾಳೆಯೂ ಬದುಕುವ ಉತ್ಸಾಹವಿರುತ್ತದೆ'' ಎಂದು ನನ್ನನ್ನು ಎಚ್ಚರಿಸುತ್ತಿದ್ದರು. ಹಾಗೇ ತಮ್ಮ ಸಂಗೀತದ ಬಗ್ಗೆಯೂ ಹೇಳೋರು,
ನಾನು ಇವತ್ತು ಬಾರಿಸಿದಾಗ ನಾಳೆ ಬಾರಿಸೋದಿಲ್ಲ, ಅದು ಬೇರೇನೇ ಆಗಿರಬೇಕು. ಅಂದರೆ ಬೆಳೆದಿರಬೇಕು ಅಂದರೆ ನಾಳೆಯೂ ಏನು ಬಾರಿಸ್ತೀನಿ ನೋಡೋಣ ಅನ್ನೋ ಕುತೂಹಲ. ನನ್ನನ್ನ ಉಳಿಸ್ತದ ಬೆಳೆಸ್ತದ'' ಮಾತು ಅವರ ಗುರುಗಳತ್ತ ಹೊರಳುವುದು. ಹಾಗೇ ಅವರ ಗುರು ಬಂಧುಗಳೂ ಸ್ನೇಹಿತರು ಇತ್ಯಾದಿ ಅವರಿಗೆ ಮಾತೃಪ್ರೇಮವನ್ನು ಧಾರೆಯೆರೆದ ಅನ್ನಪೂರ್ಣ ದೇವಿಯವರನ್ನು ನೆನೆಸದ ದಿನವಿಲ್ಲ.
ವಯಸ್ಸು ತೊಂಭತ್ತೊಂದಾದರೂ ಮನಸ್ಸು ತನ್ನ ಯೌವ್ವನವನ್ನು ಬಿಟ್ಟುಕೊಟ್ಟಿರಲಿಲ್ಲ. ಸರೋದ್ ಕೈಗೆ ಸಿಕ್ಕರೆ ಸಮಯಪ್ರಜ್ಞೆಯೇ ಇರುತ್ತಿರಲಿಲ್ಲ. ಆದರೆ ಬರಬರುತ್ತ ತೀರ ಕೊನೆ ಕೊನೆಗೆ ಅರ್ಧ ಗಂಟೆಯೂ ಕುಳಿತುಕೊಳ್ಳಲಾಗಲಿಲ್ಲ. ಎಷ್ಟೋ ಸಲ ಆಸ್ಪತ್ರೆಯಲ್ಲಿ ದಾಖಲಾಗಿ ಮತ್ತೆ ಮನೆಗೆ ಆರಾಮವಾಗಿ ಮರಳುತ್ತಿದ್ದರಿಂದ ಈ ಸಲವೂ ಹಾಗೇ ಆಗಬಹುದೆಂದುಕೊಂಡರೆ ಹಾಗಾಗಲಿಲ್ಲ. ಅವರ ಪ್ರತಿ ಜನ್ಮ ದಿನಕ್ಕೂ ನಾನೇ ಅಂಗಿ ತರಬೇಕೆಂದು ಹೇಳಿದ್ದರು. ಹಾಗೇ ಮಾಡುತ್ತಿದ್ದೆ. ಅವರ ತೊಂಭತ್ತೆರಡನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ.
- ಸುಕನ್ಯಾ ಮಾರುತಿ