For the best experience, open
https://m.samyuktakarnataka.in
on your mobile browser.

ನಾಳೆ ಚಿಂತನ ಮಂಥನ ಸಭೆ ಏರ್ಪಡಿಸಿರುವ ದಿಂಗಾಲೇಶ್ವರ ಶ್ರೀ

02:09 PM Mar 26, 2024 IST | Samyukta Karnataka
ನಾಳೆ ಚಿಂತನ ಮಂಥನ ಸಭೆ ಏರ್ಪಡಿಸಿರುವ ದಿಂಗಾಲೇಶ್ವರ ಶ್ರೀ

ಹುಬ್ಬಳ್ಳಿ: ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ವರ್ತಮಾನದ ಸಮಸ್ಯೆಗಳ ಕುರಿತು ಚರ್ಚಿಸಲು ಮೂರುಸಾವಿರ ಮಠದ ಶಿವಾನುಭವ ಮಂಟಪದಲ್ಲಿ ಮಾ.೨೭ ರಂದು ಬೆಳಗ್ಗೆ ೯.೩೦ಕ್ಕೆ ನಾಡಿವ ವಿವಿಧ ಮಠಾಧೀಶರ ಚಿಂತನ ಮಂಥನ ಸಭೆ ಆಯೋಜಿಸಲಾಗಿದೆ ಎಂದು ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಫರ್ಧೆ ಮಾಡುವಂತೆ ಸಾಕಷ್ಟು ಭಕ್ತರು ಒತ್ತಾಯ ಮಾಡಿದ್ದರು. ಆದರೆ, ವೈಯಕ್ತಿಕವಾಗಿ ತೀರ್ಮಾನ ಕೈಗೊಳ್ಳುವ ಸ್ವಾತಂತ್ರö್ಯ ಮಠಾಧಿಪತಿಗಳಿಗಿಲ್ಲ. ಹೀಗಾಗಿ ಮಾ.೨೭ ರಂದು ನಡೆಯುವ ಮಠಾಧೀಶರ ಚಿಂತನ ಮಂಥನ ಸಭೆಯಲ್ಲಿ ಈ ವಿಷಯವೂ ಚರ್ಚೆಗೆ ಬರಬಹುದು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಣಯ ಪ್ರಕಟಿಸುವುದಾಗಿ ಶ್ರೀಗಳು ಹೇಳೀದರು.
ಮಠಾಧಿಪತಿ ಆದವರು ಕೇವಲ ಒಂದೇ ಜಾತಿ, ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ಹೀಗಾಗಿ ನಾಡಿನ ಎಲ್ಲ ಸ್ವಾಮೀಜಿಗಳಿಗೂ ಆಹ್ವಾನ ನೀಡಿದ್ದೇನೆ. ಸಭೆಯಲ್ಲಿ ಕೇವಲ ರಾಜಕೀಯವಾಗಿ ಚರ್ಚೆ ಆಗದೇ, ಸಾಮಾಜಿಕ ಹಾಗೂ ಧಾರ್ಮಿಕ ವಿಷಯಗಳ ಬಗ್ಗೆಯೂ ಚರ್ಚೆಗಳು ನಡೆಯಲಿವೆ. ರಾಜ ಮಹಾರಾಜರ ಕಾಲದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಾಗ ಅನೇಕ ಸ್ವಾಮಿಗಳು, ಮಠಾಧೀಶರು ರಾಜನ ಕಿವಿ ಹಿಂಡಿ ಸರಿ ದಾರಿಗೆ ತಂದ ಉದಾಹರಣೆಗಳಿವೆ ಎಂದು ಉದಾಹರಣೆ ಕೊಡುವ ಮೂಲಕ ಪರೋಕ್ಷವಾಗಿ ಲೋಕಸಭೆ ಚುನಾವಣೆಯ ಸ್ಫರ್ಧೆಯ ಬಗ್ಗೆ ಶ್ರೀಗಳು ಇಂಗಿತ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈ ಹಿಂದೆ ಅನ್ಯಾಯ ನಡೆದಾಗ ನಾಡಿನ ಸ್ವಾಮಿಗಳು ಒಟ್ಟಾಗಿ ಪರಿಹಾರ ಸೂಚಿಸಿದ್ದರು. ಅದೇ ತರನಾಗಿ ವೀರಶೈವ ಲಿಂಗಾಯತ ಹೋರಾಟ ವಿಚಾರದಲ್ಲಿ, ಕಳಸಾ ಬಂಡೂರಿ ಹೋರಾಟದಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ಸಂದರ್ಭದಲ್ಲೂ ಅನೇಕ ಮಠಾಧೀಶರು ಚಿಂತನ ಮಂಥನ ಸಭೆ ನಡೆಸಿ ಒಳ್ಳೆಯ ಸಂದೇಶ ರವಾನಿಸಿದ್ದರು. ಅದರಂತೆಯೇ ನಾಡು, ಸಮಾಜದ ಮೇಲೆ ಕಾಳಜಿಯುಳ್ಳ ಅನೇಕ ಮಠಾಧೀಶರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಧಿಕಾರ, ಹಣ ಮತ್ತು ಹೊಗಳಿಕೆಯ ಮದ ಏರಿದ ಕೆಲವರಿಗೆ ಚಾಟಿ ಬೀಡಬೇಕು. ಸಮಾಜದಕ್ಕೆ ಸಮಸ್ಯೆಗಳು ಎದುರಾದಾಗ ಮಠಾಧೀಶರು, ಸನ್ಯಾಸಿಗಳು ಧ್ವನಿ ಎತ್ತಿದ್ದಾರೆ. ಅದೇ ರೀತಿ ವರ್ತಮಾನದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಮೂರು ಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಭೆ ಆಯೋಜನೆ ಮಾಡಲಾಗಿದೆ. ಸಭೆಯ ನಂತರದಲ್ಲಿ ಮಹತ್ವದ ನಿರ್ಧಾರ ಘೋಷಣೆ ಆಗಲಿದೆ ಎಂದರು.
ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸವಣೂರು ಕಲ್ಮಠದ ಚನ್ನಬಸವ ಸ್ವಾಮೀಜಿ, ಮಂಟೂರಿನ ಶಿವಲಿಂಗೇಶ್ವರ ಸ್ವಾಮೀಜಿ, ಸದಾಶಿವ ಪೇಟೆಯ ಗದಿಗೇಶ್ವರ ಸ್ವಾಮೀಜಿ, ವಿಜಯಪುರದ ಸಿದ್ಧಲಿಂಗ ದೇವರು, ಬೊಮ್ಮನಳ್ಳಿಯ ಶಿವಯೋಗೇಶ್ವರ ಸ್ವಾಮೀಜಿ ಹಾಗೂ ವಿರೇಶ ಸೊಬರದಮಠ ಇದ್ದರು.