For the best experience, open
https://m.samyuktakarnataka.in
on your mobile browser.

ನಾವು ಬದಲಾದರೆ ಮಾತ್ರ…….!

04:50 AM Sep 20, 2024 IST | Samyukta Karnataka
ನಾವು ಬದಲಾದರೆ ಮಾತ್ರ……

ನಗರಗಳನ್ನು ನಿರ್ಮಿಸಲಾಗದು. ಜನರು ಒಂದೆಡೆ ವಾಸಿಸುತ್ತ, ವಾಸಿಸುತ್ತ ನಗರವನ್ನಾಗಿ ಮಾಡುತ್ತಾರೆ. ಅವರೇ ಆ ನಗರಗಳ ನಾಗರಿಕರಾಗುತ್ತಾರೆ. ಒಂದು ಸಮಾಜ, ನಗರ, ದೇಶ, ರೂಪಗೊಂಡಾಗ ಅವುಗಳನ್ನು ನಿಯಂತ್ರಿಸಲು ನಿಸರ್ಗದ ನಿಯಮಗಳಿರುತ್ತವೆ. ನಗರಗಳು ಗಲಭೆ, ಹಿಂಸೆ ಮುಂತಾದವುಗಳಿಂದ ಪೀಡಿತವಾಗಿ ನಿಸರ್ಗದ ನಿಯಮಗಳನ್ನು ಉಲ್ಲಂಘಿಸಿದಾಗ ಅವುಗಳು ನೋವಿನ ನಗರಗಳಾಗುತ್ತವೆ.
ಒಂದು ನಗರ ರೂಪಗೊಳ್ಳುತ್ತಿದೆ ಅಂದರೆ ಒಂದು ಸುಂದರ ಉದ್ಯಾನವನ ರೂಪಗೊಂಡಂತೆ. ಅಲ್ಲಿರುವ ನಾಗರಿಕರು ಹೇಗೆ ಅದನ್ನು ಬಿತ್ತುವರೋ ಅಂತಹ ಉದ್ಯಾನವನ್ನು ಪಡೆಯುತ್ತಾರೆ. ನಗರ, ದೇಶಗಳು ನಳನಳಿಸಬೇಕಾದರೆ ಅದರ ನಿರ್ಮಾಣ ಉದಾತ್ತವಾಗಿರಬೇಕು. ಪರಸ್ಪರ ಭಾವನೆಗಳಿಂದ ಬೆಳೆಯಬೇಕು.
ಕುರಾನಿನ ಅಧ್ಯಾಯ ಅಲ್ ಅನಫಾದ ಒಂದು ವಚನ (೮:೫೩)ವನ್ನು ಗಮನಿಸಬಹುದು. ಒಂದು ಜನಾಂಗ ತಾನೇ ತನ್ನ ಅಂತರಂಗವನ್ನು ಬದಲಿಸುವ ತನಕ ಅಲ್ಲಾಹನು ಆಜನರಿಗೆ ನೀಡಿರುವ ಅನುಗ್ರಹವನ್ನು ಬದಲಿಸುವದಿಲ್ಲ.' ಈ ನಿಯಮವನ್ನು ಕುರಾನಿನ ಇನ್ನೊಂದು ಅಧ್ಯಾಯ ಅರ್ರ ಅದ್ದಲ್ಲಿಯ ವಚನ(೧೧)ದಲ್ಲಿ ಒಂದು ಸಮುದಾಯವು ಸ್ವಂತ ತನ್ನ ಸ್ಥಿತಿಯನ್ನು ಬದಲಿಸುವ ತನಕ ಅಲ್ಲಾಹನು ಅವರ ಸ್ಥಿತಿಯನ್ನು ಖಂಡಿತ ಬದಲಾಯಿಸುವುದಿಲ್ಲ' ಎಂದಿದೆ. ಜನರು ತಮ್ಮ ಸ್ಥಿತಿಗಳನ್ನು ಒಳ್ಳೆಯ ಪರಿಸರಕ್ಕೆ ಬದಲಾಯಿಸಬೇಕು. ಸಮುದಾಯ ವೆಂದರೆ ಜನರು. ಕುರಾನಿನ ಪ್ರಕಾರ ಒಂದು ನಗರ ದೇಶ ಒಂದು ಸಮಾಜ. ಈ ನಗರ ದೇಶಗಳ ಏಳು ಬೀಳುಗಳು ಅಲ್ಲಿಯ ನಾಗರಿಕರ ನಿರ್ದಿಷ್ಟವಾದ ಸ್ಥಾನಮಾನಗಳನ್ನು ಅವಲಂಬಿಸಿರುತ್ತವೆ. ಪ್ರತಿಯೊಬ್ಬ ವ್ಯಕ್ತಿ ತಾನು ವಾಸಿಸುತ್ತಿರುವ ನಗರ ದೇಶದ ಏಳುಬೀಳುಗಳಿಗೆ ಹೊಣೆಗಾರನಾಗಿರುತ್ತಾನೆ. ವ್ಯಕ್ತಿಯೇ ನಗರ ದೇಶಗಳ ನೋವು ನಲಿವುಗಳಿಗೆ ಕಾರಣನಾಗುತ್ತಾನೆ. ವ್ಯಕ್ತಿ ಕ್ರೂರಿ, ಭ್ರಷ್ಟ, ಹಿಂಸಾವಾದಿಯಾದರೆ ಆತ ವಾಸಿಸುವ ನಗರ ನೋವಿನ ನಗರವಾಗುತ್ತದೆ. ಶಾಂತಿಯುತ ಜೀವನ ನಗರದ ಚಟುವಟಿಕೆಗಳಲ್ಲಿ ತುಂಬಿರಬೇಕು. ಭಿನ್ನಾಭಿಪ್ರಾಯಗಳಿಗೆ ಬೆಲೆ ಕೊಟ್ಟು ಪರಸ್ಪರ ವಿಚಾರ ವಿನಿಮಯ ಮಾಡಿದಾಗ ಶಾಂತಿ ಉಂಟಾಗುತ್ತದೆ. ಕುರಾನಿನ ಈ ವಚನ (ಅಧ್ಯಾಯ ಅನಫಾಲ ೮:೬೧,೬೨)ನಿಮ್ಮ ಎದುರಿನವನು ಒಲವು ತೋರಿಸಿದರೆ ನೀವೂ ಹಾಗೆ ಮಾಡಿದ್ದರೆ ಅಲ್ಲಾಹನು ನಿಮ್ಮ ನೆರವಿಗೆ ಬರುವನು'
ವ್ಯಕ್ತಿಗಳು ಸಮುದಾಯದಲ್ಲಿದ್ದವರರೊಡನೆ ಒಬ್ಬರು ಇನ್ನೊಬ್ಬರಿಗಾಗಿ ಬದುಕಿದಾಗ ಆಗುವ ಬದಲಾವಣೆ ನಗರವಾಸಿಗಳಿಗೆ ಶಾಂತಿ ನೆಮ್ಮದಿಯನ್ನುಂಟು ಮಾಡಲು ಸಾಧ್ಯ. ಈ ಪ್ರಯತ್ನ ನಡೆದಾಗ ಮಾತ್ರ ಬಹು ಸಂಸ್ಕೃತಿ, ವಿವಿಧ ಭಾಷೆ, ಧರ್ಮಗಳ ದೇಶದ ನಗರಗಳು ಗಲಭೆ ಅಶಾಂತಿ ಹಿಂಸೆಗಳಿಂದ ಮುಕ್ತವಾಗಿ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಇಡೀ ದೇಶವನ್ನು ಬದಲಿಸಬಹುದು ಅಲ್ಲಾಹನು ಇಂತಹ ಬದಲಾವಣೆಗೆ ಖಂಡಿತವಾಗಿ ವ್ಯಕ್ತಿಗಳನ್ನು ಶಾಂತಿನಗರದ ನಾಗರಿಕರನ್ನಾಗಿ ಬದಲಿಸಬಲ್ಲ.