For the best experience, open
https://m.samyuktakarnataka.in
on your mobile browser.

ನಿದ್ದೆ ಇಲ್ಲದೆ ಪ್ರಜ್ವಲ್ ಜೈಲಿನಲ್ಲಿ ಪರದಾಟ

11:41 PM Jun 11, 2024 IST | Samyukta Karnataka
ನಿದ್ದೆ ಇಲ್ಲದೆ ಪ್ರಜ್ವಲ್ ಜೈಲಿನಲ್ಲಿ ಪರದಾಟ

ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ೧೪ ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ನಿದ್ದೆ ಇಲ್ಲದೆ ಕಳೆದಿದ್ದಾರೆ. ಕೇಂದ್ರ ಕಾರಾಗೃಹದಲ್ಲಿ ಸೋಮವಾರ ರಾತ್ರಿ ಇಡೀ ನಿದ್ರೆ ಇಲ್ಲದೆ ಪರದಾಡಿದ್ದಾರೆ. ಈ ಪ್ರಕರಣದಿಂದ ಕುಟುಂಬದ ಜೊತೆಗೆ ತನಗಾದ ಸಮಸ್ಯೆ ಹಾಗೂ ಲೋಕಸಭೆ ಚುನಾವಣೆ ಸೋಲಿನಿಂದ ಹತಾಶೆಗೊಳಗಾಗಿರೋ ಪ್ರಜ್ವಲ್ ಕಂಗೆಟ್ಟಿದ್ದಾರೆ. ತಂದೆ ಎಚ್‌ಡಿ ರೇವಣ್ಣ ಇದ್ದ ಕ್ವಾರಂಟೈನ್ ಸೆಲ್‌ನಲ್ಲೇ ಪ್ರಜ್ವಲ್ ರೇವಣ್ಣ ಇರಿಸಲಾಗಿದೆ. ವಿಚಾರಣಾಧೀನ ಕೈದಿ ನಂಬರ್ ೫೬೬೪ ಅನ್ನು ನೀಡಲಾಗಿದೆ. ರಾತ್ರಿ ಜೈಲೂಟ ಚಪಾತಿ, ಅನ್ನ, ಸಾಂಬರ್ ನೀಡಲಾಗಿತ್ತು. ಆದರೆ, ರಾತ್ರಿ ನಿದ್ರೆ ಇಲ್ಲದೆ ಆರೋಪಿ ಬ್ಯಾರಕ್‌ನಲ್ಲಿ ಓಡಾಟ ನಡೆಸಿದ್ದಾರೆ. ಯಾರೊಬ್ಬ ಜೈಲು ಅಧಿಕಾರಿಗಳ ಜೊತೆಗೆ ಮಾತನಾಡದೆ ಮೌನಕ್ಕೆ ಜಾರಿದ್ದಾರೆನ್ನಲಾಗಿದೆ.
ಪ್ರಕರಣದಲ್ಲಿ ತಮ್ಮ ಕುಟುಂಬಕ್ಕೆ ಮುಜುಗರ ಹಾಗೂ ತಂದೆಯ ಬಂಧನ, ತಾಯಿಯ ವಿಚಾರಣೆ ಹಾಗೂ ತಾನೂ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸುತ್ತಿರುವ ಬಗ್ಗೆ ಪ್ರಜ್ವಲ್ ಮಾನಸಿಕವಾಗಿ ಕುಗ್ಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹಾಸನದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದೂ ಸೋಲಾಗಿದ್ದರಿಂದ ರಾಜಕೀಯ ಭವಿಷ್ಯ ಮತ್ತಷ್ಟು ಚಿಂತೆಗೀಡು ಮಾಡಿದೆ.
ಮತ್ತೆ ಕಸ್ಟಡಿಗೆ ಪಡೆಯುವ ಸಾಧ್ಯತೆ
ಸಂತ್ರಸ್ತ ಮಹಿಳೆಯರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ಎಸ್‌ಐಟಿ ಅಧಿಕಾರಿಗಳು ಎರಡು ವಾರಗಳ ಕಾಲ ಮಾಜಿ ಸಂಸದ ಪ್ರಜ್ವಲ್‌ನನ್ನು ವಿಚಾರಣೆಗೆ ಒಳಪಡಿಸಿತ್ತು. ಸ್ಥಳ ಮಹಜರು ಬಳಿಕ ದೊರೆತ ಸಾಕ್ಷಿ, ಪುರಾವೆಗಳ ಆಧಾರದ ಮೇಲೆ ಕೆಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ ಪ್ರಜ್ವಲ್‌ನನ್ನು ಮತ್ತೆ ಎಸ್‌ಐಟಿ ಕಸ್ಟಡಿಗೆ ಪಡೆಯವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಳೆನರಸೀಪುರ ಠಾಣೆ ಹಾಗೂ ಬೆಂಗಳೂರಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ದೊರತೆ ಕೆಲವು ಪುರಾವೆಗಳ ತನಿಖೆನಡೆಯುತ್ತಿದೆ. ತನಿಖಾಧಿಕಾರಿಗಳಿಗೆ ದಿಕ್ಕುತಪ್ಪಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿರುವುದೇ ಆದಲ್ಲಿ ಪೆನ್‌ಡ್ರೈವ್, ವಿಡಿಯೊ ದೃಶ್ಯಗಳಲ್ಲಿ ತಾನು ಇರುವುದು ಸಾಬೀತಾದರೆ ಇನ್ನಷ್ಟು ದಿನಗಳ ಕಾಲ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪ್ರಜ್ವಲ್ ಬಂಧಿಯಾಗಬೇಕಾಗಿದೆ. ಈಗಾಗಲೇ ಜಾಮೀನಿನ ಮೇಲೆ ತಾಯಿ ಭವಾನಿ ಹಾಗೂ ತಂದೆ ಎಚ್.ಡಿ.ರೇವಣ್ಣ ಹೊರಗಿದ್ದಾರೆ. ದಾಖಲಾಗಿರುವ ಒಟ್ಟು ಮೂರು ಎಫ್‌ಐಆರ್‌ಗಳಲ್ಲಿ ಪ್ರಜ್ವಲ್ ವಿರುದ್ಧ ಆರೋಪ ಸಾಭೀತಾದರೆ ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.