ನಿಮಗೆ ಬಿದ್ದ ಓಟಿಗೆ ನೀವು ಮಾಡಿದ ಅವಮಾನ ಅಲ್ಲವೇ?
ಬೆಂಗಳೂರು: ಜಿಲ್ಲೆಯ ಅಭಿವೃದ್ಧಿ ಪರವಾಗಿಯೂ ಬಾಯಿ ಬಿಡಲಿಲ್ಲ. ಇದು ನಿಮಗೆ ಬಿದ್ದ ಓಟಿಗೆ ನೀವು ಮಾಡಿದ ಅವಮಾನ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರ ಪರ ಪ್ರಚಾರದ ಅಂಗವಾಗಿ ಆಯೋಜಿಸಿದ್ದ "ಪ್ರಜಾಧ್ವನಿ- ಜನ ಸಮಾವೇಶ"ವನ್ನು ಉದ್ಘಾಟಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಗದ್ದಿಗೌಡರೇ ಇಷ್ಟು ವರ್ಷ ನೀವು ಪಾರ್ಲಿಮೆಂಟಿನಲ್ಲಿ ರಾಜ್ಯದ ಪರವಾಗಿ ಬಾಯಿಯನ್ನೇ ಬಿಟ್ಟಿಲ್ಲ. ರಾಜ್ಯಕ್ಕೆ ಬರ ಬಂದಾಗಲೂ ಬಾಯಿ ಬಿಡಲಿಲ್ಲ, ಪ್ರವಾಹ ಬಂದಾಗಲೂ ಬಾಯಿ ಬಿಡಲಿಲ್ಲ. ಬಾಗಲಕೋಟೆ ಜಿಲ್ಲೆಯ ಜನರ ಪರವಾಗಿ, ಜಿಲ್ಲೆಯ ಅಭಿವೃದ್ಧಿ ಪರವಾಗಿಯೂ ಬಾಯಿ ಬಿಡಲಿಲ್ಲ. ಇದು ನಿಮಗೆ ಬಿದ್ದ ಓಟಿಗೆ ನೀವು ಮಾಡಿದ ಅವಮಾನ ಅಲ್ಲವೇ?
20 ವರ್ಷ ನಿಮ್ಮ ಪರವಾಗಿ ಒಂದೂ ಮಾತನಾಡದ ಗದ್ದಿಗೌಡರನ್ನು ಮನೆಗೆ ಕಳುಹಿಸಿ. ಅವರು ಸ್ವಲ್ಪ ವಿಶ್ರಾಂತಿ ಪಡೆಯಲಿ. ಈ ಬಾರಿ ಸಂಯುಕ್ತ ಪಾಟೀಲ್ ಅವರನ್ನು ಗೆಲ್ಲಿಸಿಕೊಂಡು ಬನ್ನಿ. ಸಂಯುಕ್ತ ಪಾಟೀಲ್ ಸಂಸತ್ತಿನಲ್ಲಿ ಬಾಗಲಕೋಟೆ ಜನರ ಧ್ವನಿ ಆಗಿರ್ತಾರೆ, ರಾಜ್ಯದ ಜನರ ಧ್ವನಿ ಆಗಿರ್ತಾರೆ. ರಾಜ್ಯಕ್ಕೆ ಭೀಕರ ಬರಗಾಲ ಬಂದಿದೆ. ರಾಜ್ಯದ ಪಾಲಿನ ಬರಪರಿಹಾರ ಕೊಡಿ ಕೊಡಿ ಎಂದು ಕೇಳಿ ಕೇಳಿ ಸಾಕಾಯ್ತು. ದೆಹಲಿಗೆ ಬಂದು ಪ್ರತಿಭಟನೆ ಮಾಡಿದ್ವಿ. ಆದ್ರೂ ರಾಜ್ಯದ ಪಾಲಿನ ಹಣ ಕೊಡಲಿಲ್ಲ. ನಾವು ಕಾನೂನು ಹೋರಾಟ ಶುರು ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆವು. ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ ಕೊಡುವವರೆಗೂ ಏಕೆ ರಾಜ್ಯಕ್ಕೆ ಒಂದು ಪೈಸೆಯನ್ನೂ ಕೊಡಲಿಲ್ಲ ನರೇಂದ್ರ ಮೋದಿ ಅವರೇ? ಇಂಥಾ ದ್ರೋಹ ಏಕೆ ಮಾಡಿದ್ರಿ? ನಾವು ದುಡ್ಡು ಕೊಡ್ತೀವಿ ಅಂದ್ರೂ ರಾಜ್ಯದ ಜನರಿಗೆ ಅಕ್ಕಿ ಕೊಡಲಿಲ್ಲವಲ್ಲಾ? ಇದು ನನ್ನ ಜನರ ಹೊಟ್ಟೆ ಮೇಲೆ ಹೊಡೆದ ಹಾಗಲ್ವಾ ಮಿಸ್ಟರ್ ಮೋದಿ ಅವರೇ? ನಾವು ನಿಮಗಾಗಿ ಕೆಲಸ ಮಾಡಿದ್ದೇವೆ. ನಮಗೆ ಕೂಲಿ ಕೊಡಿ. ದಯಮಾಡಿ ಸಂಯುಕ್ತ ಪಾಟೀಲ್ ಗೆಲ್ಲಿಸಿ. ಇವರು ನಿಮ್ಮ ಕಷ್ಟಕಾಲದಲ್ಲಿ ನೆರವಾಗುತ್ತಾರೆ ಎಂದಿದ್ದಾರೆ.