ನಿಮ್ಮನ್ನೇ ಯಾಕೆ ನಿಯೋಜಿಸಿಕೊಳ್ಳಬೇಕು?
ಕೆಲವು ತಿಂಗಳುಗಳ ಹಿಂದೆ ನನ್ನ ಪರಿಚಯದವರೊಬ್ಬರು ಅವರ ಸ್ನೇಹಿತನ ಮಗನಿಗೆ ಕೆಲಸ ಕೊಡಿಸಲು ಆಗುತ್ತಾ ಅಂತ ನನ್ನನ್ನು ಕೇಳಿದರು. ನನಗೆ ಆ ತರಹದ ಪ್ರಭಾವಿಗಳ, ದೊಡ್ಡವರ ಪರಿಚಯವಿಲ್ಲ, ಖಾಸಗಿ ಸಂಸ್ಥೆಗಳಲ್ಲಿ ಪರಿಚಯವಿರುವವರ ಬಳಿ ಒಂದು ಮಾತು ಹೇಳಲು ಆಗುತ್ತಾ? ಏಕೆಂದರೆ ಹುಡುಗ ತುಂಬಾ ಸಭ್ಯಸ್ಥ, ಹೇಳಿದ ಮಾತನ್ನು ತಳ್ಳಿ ಹಾಕುವುದಿಲ್ಲ, ದಯವಿಟ್ಟು ಒಂದು ಸಹಾಯ ಮಾಡಿ'' ಎಂದಾಗ
ಆಯಿತು, ಅವನಿಗೆ ನನ್ನನ್ನು ಭೇಟಿ ಮಾಡಲು ಹೇಳಿ'' ಅಂತ ಹೇಳಿದೆ.
ಅವತ್ತೇ ಸಾಯಂಕಾಲ ಆ ಹುಡುಗ ಬಂದ. ನನ್ನ ಪರಿಚಯದವರು ಕನ್ನಡಿಗರಾದರೂ ಇವನು ಕನ್ನಡದವನಲ್ಲ, ದೂರದ ಜಾರ್ಖಂಡ್‌ನವನು. ಕೆಂಪು ಬಣ್ಣದ ದೊಗಳೆ ಟಿ ಶರ್ಟ್ ಧರಿಸಿ ಹರಕಲು ಜೀನ್ಸ್ ಹಾಕಿಕೊಂಡು ಬಂದಿದ್ದ. ತಲೆಕೂದಲು ಎಣ್ಣೆ ಕಾಣದೇ ಒಂದು ಅರ್ಧ ದಶಕವಾದರೂ ಆಗಿರಬೇಕು, ಅವನ ಕಣ್ಣುಗಳಲ್ಲಿ ಜೀವ ಇದ್ದ ಹಾಗೆ ನನಗೆ ಕಾಣಲಿಲ್ಲ. ನನ್ನ ಪರಿಚಯದವರು ಹೇಳಿದ ಸಭ್ಯಸ್ಥನ ಯಾವ ಲಕ್ಷಣಗಳೂ ಅವನಲ್ಲಿ ನನಗೆ ಕಾಣಲಿಲ್ಲ. ಸರ್, ನಾನು ಮೂಲತಃ ಜಾರ್ಖಂಡ್‌ನವನು. ನನ್ನ ಅಪ್ಪ, ಅಮ್ಮ ಮತ್ತು ಅಣ್ಣ ಬೆಂಗಳೂರಿಗೆ ಬಂದು ಸೆಟ್ಲ್ ಆಗಿದೀವಿ, ಹತ್ತು ವರ್ಷಗಳ ಮುಂಚೆ. ಆಗ ನಾನು ಆರನೇ ತರಗತಿಯಲ್ಲಿ ಓದುತ್ತಿದ್ದೆ, ನನ್ನ ಅಣ್ಣ ಬಿ.ಕಾಮ್ ಮಾಡಿಕೊಂಡು ಕೆಲ್ಸದಲ್ಲಿ ಇದ್ದಾನೆ, ನಾನು ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ಮಾಡಿಕೊಂಡಿದ್ದೇನೆ, ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ. ೨೦೨೩ ರಲ್ಲಿ ಡಿಪ್ಲೊಮಾ ಆದರೂ ಎಲ್ಲೂ ಕೆಲಸ ಆಗಲಿಲ್ಲ.
``ಮತ್ತೆ ನಿನ್ನ ಬಗ್ಗೆ ಏನನ್ನು ಹೇಳ ಬಯಸುತ್ತೀಯಾ?''
ಯಾವ ತರಹದ ಕೆಲಸ ಕೊಟ್ಟರೂ ಶ್ರದ್ಧೆಯಿಂದ ಮಾಡುತ್ತೇನೆ. ನಮ್ಮ ಕುಟುಂಬದವರೆಲ್ಲರೂ ಕಷ್ಟಪಟ್ಟು ಮೇಲೆ ಬಂದವರೇ, ಹಾಗಾಗಿ ಕಷ್ಟಗಳು ನನಗೆ ಹೊಸದಲ್ಲ.
ಇರಲಿ, ನಿನ್ನ ಬಯೋಡೇಟಾ ಕೊಡು ನೋಡುತ್ತೇನೆ. ಅವನು ಕೈ ಚೀಲದಲ್ಲಿ ಇಟ್ಟುಕೊಂಡಿದ್ದ ಫೈಲ್‌ನಿಂದ ತೆಗೆದುಕೊಟ್ಟ. ಆ ಹುಡುಗನ ಹೆಸರು ವಿಶಾಲ್ (ಹೆಸರು ಬದಲಾಯಿಸಲಾಗಿದೆ). ನೋಡು ವಿಶಾಲ್, ನಿನಗೆ ಕೆಲಸದ ಅಗತ್ಯ ಇದೆ ಅಂತ ನನಗೆ ಅರ್ಥ ಆಗುತ್ತೆ. ಆದರೆ ಕೆಲಸ ಕೊಡುವವರ ದೃಷ್ಟಿಯಿಂದ ನೋಡುವಾಗ ನಿನಗೆ ಯಾಕೆ ಕೆಲಸ ಕೊಡಬೇಕೆಂದು ನನಗೆ ತಿಳಿಯುತ್ತಿಲ್ಲ, ನೀನೇ ಹೇಳಿದ ಹಾಗೆ ನೀನು ಓದಿರುವ ಡಿಪ್ಲೊಮಾ, ನೀನೇ ಇಷ್ಟಪಟ್ಟು ಆರಿಸಿಕೊಂಡಿದ್ದು. ನೀನು ಇಷ್ಟಪಟ್ಟ ವಿಷಯದಲ್ಲೇ ನಿನಗೆ ಶ್ರದ್ಧೆ ಇದ್ದ ಹಾಗೆ ಕಾಣುವುದಿಲ್ಲ, ಏಕೆಂದರೆ ನೀನು ತೆಗೆದುಕೊಂಡಿರುವುದು ಶೇಕಡ ೫೮ ಅಂಕಗಳನ್ನು ಮಾತ್ರ, ಕೇವಲ ಅಂಕಗಳು ವ್ಯಕ್ತಿಯ ಮುಂದಿನ ವೃತ್ತಿಪರತೆಯನ್ನು ಅಳೆಯುವುದಿಲ್ಲ ಅಂತ ನನಗೆ ಗೊತ್ತು, ಆದರೆ ಅದು ವ್ಯಕ್ತಿಯ ಶ್ರದ್ಧೆಯ ಬಗ್ಗೆ ಸ್ವಲ್ಪವಾದರೂ ಹೇಳುತ್ತೆ.
ಬಹುಶಃ ನಿನ್ನ ತರಗತಿಯಲ್ಲಿ ೯೦ಕ್ಕಿಂತಲೂ ಅಧಿಕ ಅಂಕ ಪಡೆದವರು ತುಂಬಾ ವಿದ್ಯಾರ್ಥಿಗಳಿರಬೇಕು. ಅಷ್ಟು ಅಂಕ ಗಳಿಸಬೇಕಾದರೆ ಶ್ರದ್ಧೆ, ಕಷ್ಟ ಪಟ್ಟಿರಬೇಕಾಗುತ್ತದೆ ಅಲ್ಲವಾ. ನೀನೇ ಹೇಳಿದ ಹಾಗೆ ನೀನು ಕಷ್ಟಪಟ್ಟು ಕೆಲಸ ಮಾಡುತ್ತೀಯಾ ಅಂತ, ಆದರೆ ನೀನು ಓದುವಾಗ ಯಾಕೆ ಕಷ್ಟಪಡಲಿಲ್ಲ, ಓದಿನಲ್ಲಿ ಯಾಕೆ ಶ್ರದ್ಧೆ ಇರಲಿಲ್ಲ, ಈ ಬಯೋಡಾಟಾವನ್ನು ತುಂಬಲು ಕೂಡ ನೀನು ಕಷ್ಟಪಟ್ಟ ಹಾಗೆ ಕಾಣುವುದಿಲ್ಲ, ಇದು ಯಾರದೋ ಬಯೋಡೇಟಾದ ನಕಲು ಅಂತ ನನಗೆ ಅನಿಸುತ್ತೆ, ನೀನೇ ಯೋಚಿಸಿ ನೋಡು, ನಿನಗೆ ನಿನ್ನ ಬಯೋಡೇಟಾ ಬರೆಯಲು ಇಲ್ಲದ ಶ್ರದ್ಧೆ, ನಿನಗೆ ನೀನು ಗಳಿಸಿದ ಡಿಪ್ಲೊಮಾ ಓದಿನ ಮೇಲೆ ಇಲ್ಲದ ಶ್ರದ್ಧೆ, ಪರಿಶ್ರಮ, ಈಗ ಬರುತ್ತೆ ಅಂತ ಹೇಗೆ ನಂಬುವುದು. ಹಾಗಂತ ಇದರಲ್ಲಿ ನೀನು ಬರೆದಿರುವುದು ಸುಳ್ಳು ಅಂತ ಹೇಳುವುದಿಲ್ಲ, ನೀನು ಹೇಳಿರುವ ಅಂಶಗಳು ನೀನೇ ದೃಢೀಕರಿಸಿದ ಹಾಗೆ ಒಂದಕ್ಕೊಂದು ತಾಳೆಯಾಗುವುದಿಲ್ಲ, ತಾಳೆಯಾಗದ ಅಂಶಗಳನ್ನು ಭಾವನಾತ್ಮಕವಾಗಿ ನಂಬಿಸಬಹುದಾದರೂ ತಾರ್ಕಿಕವಾಗಿ ಒಪ್ಪಿಸಲಾಗುವುದಿಲ್ಲ. ಭಾವನೆಗಳ ಮೇಲೆ ಯಾರೂ ಕೆಲಸ ಕೊಡುವುದಿಲ್ಲ, ಅದೆಲ್ಲ ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ನಡೆಯುತ್ತೆ. ಇದರ ಜೊತೆಗೆ ನಿನಗೆ ನಿನ್ನ ಕ್ಷೇತ್ರದಲ್ಲಿ ಇರುವ ಕೌಶಲ್ಯವೂ ಕಡಿಮೆ, ಜ್ಞಾನ, ಕೌಶಲ್ಯಗಳು ಮತ್ತು ಮೌಲ್ಯಗಳು ವ್ಯಕ್ತಿಯ ವೃತ್ತಿಪರತೆಯನ್ನು ತೋರಿಸುತ್ತವೆ. ನಿನ್ನ ಬಯೋಡೇಟಾ ಮತ್ತು ನೀನು ಇದುವರೆಗೆ ಹೇಳಿದ ಅಂಶಗಳು ಎಲ್ಲದರಲ್ಲೂ ಕೂಡ ನೀನು ಉತ್ತೀರ್ಣನಾಗಿಲ್ಲ, ಈ ಕಾರಣಗಳಿಗೋಸ್ಕರವಾಗಿಯೇ ನಿನಗೆ ಬಹುಶಃ ಯಾರೂ ಕೆಲಸ ಕೊಡಲು ಮುಂದೆ ಬರಲಿಲ್ಲ ಅಂತ ಕಾಣುತ್ತೆ ಅಂತ ಹೇಳಿ ಅವನಿಗೆ ಯೋಚಿಸಲು ಬಿಟ್ಟೆ.
ಎಷ್ಟೋ ಹೊತ್ತು ವಿಶಾಲ್ ಹಾಗೆಯೇ ಕುಳಿತುಕೊಂಡಿದ್ದ, ಅವನ ಕಣ್ಣಂಚು ತುಂಬಿತ್ತು. ಕೊನೆಗೆ ನಾನೇ ಮೌನ ಮುರಿದೆ: ಒಂದು ಕೆಲಸ ಮಾಡು, ನನಗೆ ಗೊತ್ತಿರುವ ಒಂದು ಸಂಸ್ಥೆಯಲ್ಲಿ ಆರು ತಿಂಗಳು ಇಂಟರ್ನ್ಶಿಪ್ ಮಾಡು, ಅದಕ್ಕೆ ಅವರು ನಿನಗೆ ಸಂಬಳ ಕೊಡುವುದಿಲ್ಲ, ಅಲ್ಲಿ ನೀನು ಕೆಲಸ ಕಲಿಯುತ್ತೀಯ, ಆ ಕಲಿಕೆಯ, ಕೌಶಲ್ಯದ ಆಧಾರದ ಮೇಲೆ ಬೇರೆ ಕೆಲಸ ಸುಲಭವಾಗಿ ಸಿಗುತ್ತದೆ, ಆದರೆ ಆರು ತಿಂಗಳು ನೀನು ಪರಿಶ್ರಮ ಪಡಲೇಬೇಕು ಎಂದು ಹೇಳಿ ಕಳಿಸಿದೆ.